ಜಾತ್ರೆ ಎಂದರೆ ಗೆಳೆಯರೊಡಗೂಡಿ ತೇರು ಎಳೆಯುವ ಸಂಭ್ರಮ…
ಜಾತ್ರೆಯೆಂದರೆ ಜನಜಂಗುಳಿ….
ಜಾತ್ರೆ ಎಂದರೆ ಬೆಂಡು ಬತ್ತಾಸು ,ಮಿಠಾಯಿ, ಕಾರ ಮಿರ್ಚಿ, ಬಣ್ಣದ ತೇರು…. ಹೀಗೆ ನಾನ ನಮೂನೆಯ ನಾನ ರೀತಿಯ ಒಂದೇ ಎರಡೇ ಎಣಿಸಲು ಬಾರದ ತರವೇ ತರಹ ವ್ಯಾಪಾರ ವಹಿವಾಟು, ಅಂದ ಚಂದ ಎಲ್ಲವೂ ಸೇರಿದರೆ ಜಾತ್ರೆ. !
ನಮ್ಮೂರ ಮಸ್ಕಿ ಮಲ್ಲಯ್ಯನ ಜಾತ್ರೆ ವಿಶಿಷ್ಟ. ಪ್ರತಿ ವರ್ಷ ಭಾರತ ಹುಣ್ಣಿಮೆ ದಿವಸ ಜಾತ್ರಮಹೋತ್ಸವ ನಡೆಯುತ್ತದೆ.
ತೇರು ಬೀದಿಯ ತುಂಬ ಮಾರಾಟಕ್ಕಿಟ್ಟ ಹಸಿರು ಬಳೆಗಳ ಅಂಗಡಿ, ಆ ಬಳೆ ಕ್ಲಿಪ್ಪು ಸರಗಳ ಮಧ್ಯೆ ಅದಕ್ಕಿಂತ ಜಾಸ್ತಿ ಹೊಳೆವ ಹೆಣ್ಣುಮಕ್ಕಳು.
ಹುಡುಗಿಯರನ್ನ , ಹೆಣ್ಣು ಮಕ್ಕಳನ್ನು , ನೋಡುವ ತುಂಟ ಹುಡಗರು ಬಳೆ ಅಂಗಡಿ ಮುಂದೆ ಸುತ್ತ ಸುತ್ತುತ್ತ ತಿರುಗುವುದು.
ತರವೇಹರಿ ತಿಂಡಿ ತಿನಿಸು ಮಾರುವ ಅಂಗಡಿಯಲ್ಲಿ ತಮಗೆ ಬೇಕಾದವರಿಗೆ ಬೇಕಾದ ಕೊಡಿಸಿ ಹಿರೋಗಳಾಗುವ ವಯಸ್ಸಿನ ಹುಡಗರು. ಕ್ರಾಪು ಬಾಚಿಕೊಳ್ಳುವ, ಪ್ಯಾಂಟಿನ ಎರಡು ಕಿಸಿಯಲ್ಲಿ ಕೈ ಹಾಕಿಕೊಂಡು ಪೋಜು ಕೊಡುವದು, ಸೆಲ್ಪಿ ತೆಗೆದುಕೊಳ್ಳುವದು ಜಾತ್ರೆಯಲ್ಲಿ ಕಾಮನ್.
ಜಾತ್ರೆಗೆ ಬಂದ ಹೆಣ್ಣು ಮಕ್ಕಳು ದೇವರ ಮೇಲಿನ ಭಯ ಭಕ್ತಿಯಿಂದ ಹಣ್ಣು ಕಾಯಿ, ಎಡೆ ಅರ್ಪಿಸಿ, ವಿಭೂತಿ, ಕುಂಕುಮ, ಅರಿಶಿಣ, ಶಿವದಾರ, ಉಡದಾರ, ಖರೀದಿಸಿದರೆ, ಅದೇ ತಾನೇ ಮದುವೆಯಾದ ಹೊಸ ಜೋಡಿಗಳು ರಥದ ಕಳಸನೋಡಿ, ಯಾರ ಪರಿವೆ ಇಲ್ಲದಂತೆ ಕೈ ಕೈ ಹಿಡಕೊಂಡು ಹೆಂಡತಿ ಕೇಳಿದ್ದನ್ನು ಕೊಡಿಸಿ , ಜೋಡಿ ಪೋಟೋ ಕ್ಲಿಕಿಸಿಕೊಂಡು ಸಿನಿಮಾ ನೋಡಿ ಮನೆ ಸೇರುವಷ್ಟರಲ್ಲಿ ಸಾಕು ಬೇಕಾಗಿ ರಾತ್ರಿ ಖಾಸಗಿ ಕೋಣೆಯಲ್ಲಿ ಜಾತ್ರೆಯ ಅಂದ ಚಂದ ಒಬ್ಬರಿಗೊಬ್ಬರು ವರ್ಣಿಸಿಕೊಳ್ಳುವ ಆನಂದಕ್ಕೆ ಪಾರವೆ ಇಲ್ಲ.
ಕಂಡದ್ದನ್ನೇಲ್ಲ ಕೊಡಿಸು ಎಂದು ಕೇಳುವ ಮಕ್ಕಳು, ಮಕ್ಕಳ ಹಠಕ್ಕೆ ಕೊಡಿಸುವ ಮನಸ್ಸು ಇಲ್ಲದಿದ್ದರೂ ಅನಿವಾರ್ಯ ವಾಗಿ ಕೊಡಿಸುವ ತಾಯಂದಿರು, ಗೆಳೆಯರೊಂದಿಗೆ ಅಲ್ಲಲ್ಲಿ ಗುಂಪುಗೂಡಿ ಜಿಲೇಬಿ, ಮಿರ್ಚಿ, ಚೂರ ಬಜಿ, ಮಂಡಕ್ಕಿಕಾರ ತಿನ್ನುವ ಮದ್ಯವಯಸ್ಸಿನವರು ,
ಹೀಗೆ ಜಾತ್ರೆಯಲ್ಲಿ ಎನೂಂಟು ಎನಿಲ್ಲ. ಎಲ್ಲವೂ ಇದೆ.
ಕಣ್ಣೆತ್ತರಕ್ಕೂ ನಿಲುಕದಷ್ಟು ದೊಡ್ಡ ತೇರು, ಬೀದಿಯಲ್ಲಿ ಚಲಿಸುವಾಗ ಬಾಳೆಹಣ್ಣ, ಉತ್ತುತ್ತಿ ಎಸೆಯುವ ಯುವಕರ ದಂಡು.
ಎಷ್ಟೆಷ್ಟೋ ವರ್ಷಗಳ ನಂತರ ಸಿಕ್ಕು ಮಾತಾಡಿಸಿದ ಪರಿಚಿತರು, ಸಂಬಂಧಿಕರು, ಗೆಳೆಯರು ಭೇಟಿಯಾಗುವದು, ದೂರ ದೂರದಲ್ಲಿರುವ ಬಂಧು ಬಳಗದವರೆಲ್ಲ ಸೇರುವ ಸಂಭ್ರಮ,
ಮನೆಯಲ್ಲಿ ಶೃಂಗಾರದ ಪರಿಮಳ.
ಜಾತ್ರೆ ಎಂದರೆ ಜಾತ್ರೆ.
ಕರೋನಾದಿಂದ ರಾಜ್ಯದಲ್ಲಿ ಜಾತ್ರೆಗಳಿಗೆ ಬ್ರೇಕ್ ಬಿದ್ದಿತ್ತು. ಆದರೆ ಮಸ್ಕಿ ಮಲ್ಲಿಕಾರ್ಜುನ ಜಾತ್ರೆ ಕರೊನಾ ನಿಯಮದಿಂದ ಪಾರು. ಕರೊನಾ ಸಮಯದಲ್ಲಿ ಜಾತ್ರೆಗೆ ಕರೊನಾ ಅಡ್ಡ ಬರಲಿಲ್ಲ….
ಜಾತ್ರೆ ಎಂದರೆ ಕಣ್ಣು ತುಂಬ ರಂಗು ರಂಗಿನ ಬಣ್ಣ ಬಣ್ಣದ ಕನಸು.
–ಸೌವೀ ಮಸ್ಕಿ