ಭಾರತೀಯರನ್ನು ಕರೆತಂದ ಹೆಮ್ಮೆಯ ಕನ್ನಡತಿ ಪೈಲಟ್ ದಿಶಾ ಮಣ್ಣೂರು

ರಷ್ಯಾ- ಉಕ್ರೇನ್ ಯುದ್ಧ

ಭಾರತೀಯರನ್ನು ಕರೆತಂದ ಹೆಮ್ಮೆಯ ಕನ್ನಡತಿ ಪೈಲಟ್ ದಿಶಾ ಮಣ್ಣೂರು

ರಷ್ಯಾ – ಉಕ್ರೇನ್ ಯುದ್ಧದ ಇಂತಹ ಗಂಭೀರ ಪರಿಸ್ಥಿತಿಯ ಮಧ್ಯೆಯೂ ಏರ್ ಇಂಡಿಯಾ ಸಂಸ್ಥೆಯ ಪೈಲಟ್ ಕನ್ನಡತಿ ದಿಶಾ ಆದಿತ್ಯ ಮಣ್ಣೂರು ಇವರು ಅಲ್ಲಿನ ಭೀಕರ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ನೂರಾರು ಭಾರತೀಯರನ್ನು ಸುರಕ್ಷಿತವಾಗಿ ನಮ್ಮ ಭಾರತ ದೇಶಕ್ಕೆ ಹಿಂತಿರುಗಿ ಕರೆತಂದು ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಅನೇಕ ಬಾರಿ ದೂರದಲ್ಲೆಲ್ಲೋ ನಡೆಯುವ ಗಲಾಟೆ ಜಗಳ ಯುದ್ಧಗಳನ್ನು ಟಿ.ವಿಯಲ್ಲಿ,ದಿನಪತ್ರಿಕೆಗಳಲ್ಲಿ ಕಂಡು, ಓದಿ ಬೆಚ್ಚಿ ಬೀಳುವ ನಾವು ಅಂತ ಸಮಯದಲ್ಲಿ ಮನೆಯಿಂದ ಹೊರಗಡೆ ಕಾಲಿಡಲೂ ಕೂಡ ನೂರಾರು ಬಾರಿ ಯೋಚಿಸಿ ಭಯಪಡುತ್ತೇವೆ.ಇಂತ ವಿಷಮ ಪರಿಸ್ಥಿತಿಯಲ್ಲೂ ಧೈರ್ಯಗೆಡದೆ ಕಾಯಕವನ್ನೇ ದೇವರೆಂದು ತಮ್ಮ ಪ್ರಾಣದ ಹಂಗು ತೊರೆದು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಿಮಾನದ ಮೂಲಕ ಸಾಗಿ ಅಲ್ಲಿ ತಮ್ಮ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿ ನೊಂದು ಬೆಂದವರಿಗೆ ಸಾಂತ್ವನ ನೀಡುತ್ತ ಬದುಕಿಗೆ ಭರವಸೆಯ ಬೆಳಕಾಗಿ ಮತ್ತೇ ಅವರನ್ನೆಲ್ಲ ತಮ್ಮ ತಮ್ಮ ತಾಯ್ನೆಲಕ್ಕೆ ತಲುಪಿಸಿ ತಮ್ಮವರನ್ನೆಲ್ಲ ಸೇರುವಂತೆ ಮಾಡುವ ಆ ಕಾರ್ಯ ನಿಜಕ್ಕೂ ಇಡೀ ವಿಶ್ವವೇ ಹೆಮ್ಮೆ ಪಡುವ ಸಂಗತಿ.

ದಿಶಾ ಅವರು 2017 ರಲ್ಲಿ ಏರ್ ಇಂಡಿಯಾ ಸಂಸ್ಥೆಗೆ ಪೈಲಟ್ ಆಗಿ ನೇಮಕಗೊಂಡು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.2011 ನೇ ವರ್ಷದಲ್ಲಿ ನ್ಯೂಜಿಲ್ಯಾಂಡ್ ನ ವೆಲಿ0ಗ್ಟನ್ ಅಲ್ಲಿ ಶೌರ್ಯ, ಸಾಹಸದ ಈ ಪೈಲಟ್ ತರಬೇತಿಯನ್ನು ಪಡೆದುಕೊಂಡು ಜಗತ್ತಿನ ಹಲವಾರು ದೇಶಗಳಿಗೆ ವಿಮಾನ ಹಾರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಅವರ ಧೈರ್ಯ, ಸಾಹಸ ಕಾಯಕ ನಿಷ್ಠೆ ತಾಳ್ಮೆಯ ಗುಣಗಳನ್ನು ನಿಜವಾಗಿಯೂ ಮೆಚ್ಚಲೇಬೇಕು.
ದಿಶಾ ಅವರು ಏರ್ ಇಂಡಿಯಾ
ಲಿಮಿಟೆಡ್ ನ ಡ್ರೀಮ್ ಲೈನರ್ ಬಿ-787 ವಿಮಾನದ ಮುಖಾಂತರ ರಷ್ಯಾ ಮತ್ತು ಉಕ್ರೇನ್ ಸಮರದ ಸುಳಿಯಲ್ಲಿ ಸಿಕ್ಕಿಕೊಂಡಿದ್ದ ಸುಮಾರು 242 ಭಾರತೀಯರನ್ನು ಮರಳಿ ಸ್ವದೇಶಕ್ಕೆ ಕರೆತರಲೆಂದು ಇತರ 4 ಜನ ಪೈಲಟ್ ಗಳೊಂದಿಗೆ 1 ನೇ ಪಾರುಗಾಣಿಕಾ ವಿಮಾನ ಎಐ-1947 ರಲ್ಲಿ ಹೊಸದಿಲ್ಲಿಯಿಂದ ಉಕ್ರೇನ್ ನ ಕೀವ್ ಗೆಂದು ತೆರಳಿ ತಮ್ಮ ಕೆಲಸದಲ್ಲಿ ಯಶಸ್ವಿಯಾಗಿ ತಾಯ್ನಾಡಿಗೆ ವಾಪಸ್ಸಾಗುವ ಮೂಲಕ ಮಹಿಳೆಯೊಬ್ಬಳು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂದು ತೋರಿಸಿಕೊಟ್ಟು ವಿಶ್ವದ ಎಲ್ಲ ಹೆಣ್ಣುಮಕ್ಕಳಿಗೆ ಮಾದರಿಯಾಗಿದ್ದಾರೆ.

ಮೂಲತಃ ಉತ್ತರ ಕರ್ನಾಟಕದ ಬೆಳಗಾವಿಯವರಾದ ಸದ್ಯ ಮುಂಬಯಿಯಲ್ಲಿ ವಾಸಿಸುತ್ತಿರುವ ಸೂಕ್ಷ್ಮ ಮನಸ್ಸಿನ ಸಹೃದಯಿ ಮತ್ತು ಪ್ರತಿಭಾವಂತ ಹಿರಿಯ ಸಾಹಿತಿ,ಲೇಖಕಿ ಹಾಗೂ ಗೋರೆಗಾ0ವ್ ಕರ್ನಾಟಕ ಸಂಘದ ಸಕ್ರೀಯ ಸದಸ್ಯೆ ಶ್ರೀಮತಿ ಪದ್ಮಜಾ ಪ್ರಹ್ಲಾದ ಮಣ್ಣೂರು ಅವರ ಪುತ್ರ ಆದಿತ್ಯ ಮಣ್ಣೂರ ಅವರ ಹೆಂಡತಿ ನಮ್ಮೀ ಹೆಮ್ಮೆಯ ಕನ್ನಡತಿ ದಿಶಾ ಮಣ್ಣೂರು.ಆದಿತ್ಯ ಮಣ್ಣೂರ ಅವರೂ ಕೂಡ ಏರ್ ಇಂಡಿಯಾದಲ್ಲಿ ಪೈಲಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಮಗ ಮತ್ತು ಸೊಸೆಯ ಬಗ್ಗೆ ಹೆಮ್ಮೆ ಪಡುವ ಪದ್ಮಜಾ ಅವರು ಸೊಸೆ ದಿಶಾಳ ಈ ಸಾಧನೆಗೆ ಅವಳ ಧೈರ್ಯ,ತಾಳ್ಮೆ ಮತ್ತು ಸಾಹಸದ ಗುಣಗಳೇ ಕಾರಣ ಎಂದು ಮುದ್ದಿನ ಸೊಸೆಯನ್ನು ಮನದಾಳದಿಂದ ಅಭಿನಂದಿಸುತ್ತಾರೆ. ಸಧ್ಯ ಹೊಸದಿಲ್ಲಿಯಲ್ಲಿ ವಾಸವಿರುವ ಪುತ್ರ ಆದಿತ್ಯ ಮತ್ತು ಸೊಸೆ ದಿಶಾ ಹಾಗೂ ಮುಂಬೈಯಲ್ಲಿ ನೆಲೆಸಿರುವ ಪದ್ಮಜಾ ಮಣ್ಣೂರು ಅವರ ಕುಟುಂಬ ಸದಸ್ಯರೆಲ್ಲರೂ ಸೇರಿ ತಮ್ಮ ಮೂಲ ಊರಾದ ಬೆಳಗಾವಿಯ ಮನೆಗೆ ಆಗಾಗ ಹೋಗಿ ಬರುವ ಪರಿಪಾಠವನ್ನು ಇರಿಸಿಕೊಂಡಿರುವುದು ಅವರ ಕನ್ನಡಾಭಿಮಾನ ಮತ್ತು ತಾಯ್ನೆಲದ ಬಗ್ಗೆ ಅವರಿಟ್ಟಿರುವ ಪ್ರೀತಿಯನ್ನು ತೋರಿಸುತ್ತದೆ.

ಮತ್ತೊಮ್ಮೆ ದಿಶಾ ಮಣ್ಣೂರು ಅವರಿಗೆ ಮುಂಚಿತವಾಗಿ ವಿಶ್ವ ಜಾಗತಿಕ ಮಹಿಳಾ ದಿನಾಚರಣೆ ಶುಭಾಶಯಗಳು ಮತ್ತು ಹೃತ್ಪೂರ್ವಕ ವಂದನೆಗಳು ಅಭಿನಂದನೆಗಳು.

✍🏼ಸರೋಜಾ ಶ್ರೀಕಾಂತ್ ಅಮಾತಿ ಕಲ್ಯಾಣ್, ಮುಂಬೈ

Don`t copy text!