ನಾನು ಅವಿನಾಶಿ

ನಾನು ಅವಿನಾಶಿ

 

ನಾನು ಬರೀ ಹೆಣ್ಣಲ್ಲ
ಅವಿನಾಶಿ ಸಂಜೀವಿನಿ.

ಶತಮಾನಗಳ ದಾಸ್ಯದ
ಗೋಡೆಗಳ ಕೆಡವಿ
ಸಿಡಿದು ಬಂದವಳು
ಹತಗೊಂಡ ಕನಸುಗಳ
ಮತ್ತೆ ಚಿಗುರಿಸಿದವಳು!

ಒರೆಗಳ ಅಗ್ನಿಕುಂಡದಿ
ಎದ್ದು ಬಂದವಳು
ಪಣಕ್ಕಿಟ್ಟು ಆಡಿದವರ
ಹೆಣರಾಶಿ ಒಟ್ಟಿದವಳು!

ದ್ವಂದ್ವಗಳ ನಡುವೆ
ಬದುಕು ಕಟ್ಟುತ
ಸಂಘರ್ಷಗಳ ಜೊತೆಗೆ
ಹೋರಾಡಿ ಗೆಲುವ ಪಡೆದವಳು!

ಉಸಿರು ಒತ್ತೆಯಿಟ್ಟು
ಹರಣ ನೀಡಿ
ಹೊತ್ತು ಹೆತ್ತು ಸಾಕಿ
ಅಮೃತ ಉಣಿಸಿದವಳು!

ಬಡತನದ ಬಂಡಿಗೆ
ಹೆಗಲಾಗಿ
ಮನೆಯೊಡತಿಯೂ ಆಗಿ
ಕಷ್ಟಕೆ ಕಿವಿಯಾಗಿ
ಬತ್ತದ ಚೈತನ್ಯ ತುಂಬಿದವಳು!

ನಾನು ತ್ಯಾಗದ ತೇರು
ಮಮತೆಯ ಮೇರು
ಭಾವಗಳ ಮಹಾಪೂರ
ಬದುಕೆಲ್ಲ ಉರಿದ ಕರ್ಪುರ!

ಇಂದುಮತಿ.ಅಂಗಡಿ ಇಲಕಲ್ಲ

Don`t copy text!