ಅಲ್ಲಮ ಪ್ರಭುವಿನ ವಚನಗಳಲ್ಲಿ ಭೃತ್ಯಾಚಾರ
ಅಲ್ಲಮಪ್ರಭುಗಳು ವಚನ ಸಾಹಿತ್ಯದ ಸಾರ್ವಕಾಲಿಕ ಎಚ್ಚರದ ಪ್ರತೀಕ. ಅಲ್ಲಮರಿಗೆ ಇರಬಹುದಾದ ಮೂಲ ಮಾತೃಕೆ ಯಾವುದೆಂದರೆ ತಾತ್ವಿಕ ವಾಗ್ವಾದಕ್ಕೆ ಆಸ್ಪದ ನೀಡುವಂತಾದ್ದು. ಕನ್ನಡದ ಆದ್ಯಾತ್ಮಿಕತೆಯನ್ನು ರೂಪಿಸುವಲ್ಲಿ ವಚನ ಸಾಹಿತ್ಯ ಪರಂಪರೆಯ ಕೊಡುಗೆ ನಿಸ್ಸಂಶಯವಾಗಿ ಘನವಾದದ್ದು. ಕನ್ನಡ ಮನಸ್ಸನ್ನು ಎಚ್ಚರಿಸುವ ಎತ್ತರವನ್ನು ವಚನಗಳು ಸೂಚಿಸುತ್ತವೆ . ಅಲ್ಲಮಪ್ರಭುವಿನ ದರ್ಶನವು ಕನ್ನಡವನ್ನು ವಿಶ್ವದ ಯಾವುದೇ ಭಾಷೆಯ ಜೊತೆಗಿಡಲು ಸಾದ್ಯವಾಗುವಂತೆ ಮಾಡಿವೆ.
ಅಲ್ಲಮಪ್ರಭುವಿನ ವಚನಗಳ ಪಾಂಥಿಕ ವ್ಯಾಖ್ಯಾನಕ್ಕೆ ಕೂಡ ಸಾದ್ಯತೆಗಳಿವೆ. ವಚನಗಳಾಗಲಿ, ಜನಪದ ಕಾವ್ಯಗಳಾಗಲಿ, ತತ್ವಪದಗಳಾಗಲಿ ಕಾವ್ಯವೆಂದು ಪರಿಗಣಿತವಾಗಲಿಲ್ಲ. ಕನ್ನಡ ಮೀಮಾಂಸೆಯು ಇದಕ್ಕೆ ಹೊರತಲ್ಲ. ಶರಣರ ಕಾಲ ಸಂಕೀರ್ಣವಾದ ರಾಜಕೀಯ, ಸಾಮಾಜಿಕ ಮತ್ತು ಸಂಘಟ್ಟಗಳ ಸಮಯ. ಬೌದ್ಧ, ನಾಥ, ಜೈನ ತಾತ್ವಿಕತೆಗಳ ಎದುರು ವಚನ ಸಾಹಿತ್ಯ ತತ್ವ ಭಕ್ತಿಯ ತಾತ್ವಿಕಾವಸ್ಥೆಯ ವಚನಗಳ ಮೂಲಕ ಪ್ರತ್ತ್ಯುತ್ತರ ಕೊಟ್ಟ ಕಾಲ ಶರಣರದಾಗಿತ್ತು.
ಚರಿತ್ರೆಯಲ್ಲಿ ನಡೆದಿರಬಹುದಾದ ಹೋರಾಟ, ಸಂಘರ್ಶಗಳ ಮುಖಾಮುಖಿಯ ಜಗಳವನ್ನು ಗಮನಿಸಿದರೆ ವಚನ ಸಾಹಿತ್ಯದ ಮನಸ್ಸು ಕೇಡನ್ನು ಮುಂದಿಟ್ಟುಕೊಂಡು ಹಿರಿಯ ದರ್ಶನಗಳನ್ನು ನಿರ್ದಾಕ್ಷಿಣ್ಯವಾಗಿ ದಾಟುತ್ತಾ ಬಂದಿದೆ. ಕನ್ನಡ ಜಾಯಮಾನಕ್ಕೆ ವಚನ ಸಂಸ್ಕ್ರತಿಗೆ ಇಂತಹ ಮುಖ್ಯ ಗುಣವಿದೆ. ಈ ವರೆಗೆ ಸಮಗ್ರ ವಚನ ತಾತ್ವಿಕತೆಯನ್ನು ಕಾಶ್ಮೀರದ ಶೈವದ ಮೂಲಕವೋ, ತಮಿಳಿನ ಶೈವ ಸಿದ್ದಾಂತದ ಮೂಲಕವೋ ಸ್ವಾತಂತ್ರ್ಯ ವನ್ನು ಕುರಿತು ಹಾಡಿದರೆ ವಚನಕಾರರು ಅದಕ್ಕೆ ಭಿನ್ನವಾದ ವಿರುದ್ದವಾದ ವಚನ ಮೌಲ್ಯಗಳ ಕುರಿತು ಹಾಡಿದರು. ಸ್ವತಂತ್ರತೆಯ ಸಿದ್ದಾಂತಗಳನ್ನು ಶರಣರು ಅಳವಡಿಸಿಕೊಂಡದ್ದು ವಚನ ಮನೋಭೂಮಿಕೆಯಲ್ಲಿ ದಾಖಲಾರ್ಹ.
ವಚನ ಸಂಸ್ಕ್ರತಿಯಲ್ಲಿ ಆಂತರಿಕ ವಿವೇಚನೆಯಲ್ಲಿ ಪಂಚಾಚಾರ, ಸದಾಚಾರ, ಶಿವಾಚಾರ, ಗಣಚಾರ ಮತ್ತು ಭೃತ್ಯಾಚರಗಳು ದಾರ್ಶನಿಕತೆಯ ನೈತಿಕಾರ್ಥಗಳು. ಪಾರಿಭಾಷಿಕ ವಿವರಗಳಲ್ಲಿ ಅಪರಿಮಿತವಾಗಿ ಕಂಡರೂ ಅವುಗಳ ಹಿಂದಿರುವ ಮನೋಧರ್ಮ ವಿಶ್ವ ವ್ಯಾಪಕವಾದದ್ದು. ಸಕಲ ಮಾನವನ ಕಲ್ಯಾಣಕ್ಕೆ ಪ್ರತ್ಯುತ್ತರ ಕೊಡುವುದಾಗಿದೆ.
1. ಲಿಂಗಾಚಾರ – ಅಂಗದ ಶುದ್ದಿ.
2. ಸದಾಚಾರ – ಮನದ ಶುದ್ದಿ
3. ಶಿವಾಚಾರ – ಧನದ ಶುದ್ದಿ
4. ಗಣಾಚಾರ – ನಡೆಯ ಶುದ್ದಿ
5. ಭೃತ್ಯಾಚಾರ – ನುಡಿಯ ಶುದ್ದಿ
ಅಲ್ಲಮಪ್ರಭುವಿನ ವಚನಗಳಲ್ಲಿ ಶರಣ ಮೀಮಾಂಸೆಯ ಪಂಚಾಚಾರಗಳಲ್ಲಿ ಐದನೇ ಆಚಾರ ಭೃತ್ಯಾಚಾರವಾಗಿದೆ. ಭೃತ್ಯಾಚಾರದ ಆಂತರಿಕ ಪರಿಕಲ್ಪನೆ ಮೂಲಕ ಪ್ರವೇಶಿಸುವ ಪ್ರಯತ್ನ ಈ ಲೇಖನದ್ದು.
ಭೃತ್ಯಾಚಾರವು ಶರಣ ದರ್ಶನದ ಆಧ್ಯಾತ್ಮಿಕ ಸಾಧನೆಯ ಆರಂಭವೂ ಹೌದು ಕೊನೆಯೂ ಹೌದು. “ಶಿವಶರಣರೆ ಹಿರಿಯರಾಗಿ ತಾನೆ ಕಿರಿಯನಾಗಿ ಭಯಭಕ್ತಿಯಿಂದ ಆಚರಿಸಿವುದೇ ಭೃತ್ಯಾಚಾರ”. ಶರಣನು ಆದ್ಯಾತ್ಮಿಕ ಯಾತ್ರೆಯಲ್ಲಿ ಮುಂದುವರೆದು ಪ್ರಸಾದಿ, ಪ್ರಾಣಲಿಂಗ ಸ್ಥಲವನ್ನೇರಿ ಶರಣ ಐಕ್ಯಸ್ಥಲಗಳ ನಿಲುವಿಗೆ ಬಂದಾಗ ಈ ಭೃತ್ಯಾಚಾರ ಜೊತೆಯಲ್ಲಿಯೇ ಇರುತ್ತ್ತದೆ. ಅಹಂ ಭಾವವನ್ನು ತೊಡೆದು ಪರಿವರ್ತನಾ ಗೊಳಿಸುತ್ತಾ ತಾನೂ ಬೆಳೆದುಕೊಂಡು ಬರುತ್ತದೆ. ತಾನೇ ಶಿವಸ್ವರೂಪವೆಂದು ಅಹಂ ಅಳಿದು ಸೋಹಂ ತಲೆದೋರಬೇಕು. ಶಿವಸ್ವರೂಪವಾದ ಪ್ರಪಂಚಕ್ಕೆ ತನ್ನನ್ನು ಅರ್ಪಿಸಿಕೊಂಡು ಸಮಷ್ಠಿಹಿತ ಸಾಧನೆಗೆ ದಾಸೋಹಂ ಭಾವನೆಯಿಂದ ಕರ್ತವ್ಯ ಮುಖಿಯಾಗಬೇಕು.
ಗುರು-ಲಿಂಗ-ಜಂಗಮರನ್ನು ಹೇಗೆ ಆದರದಿಂದ ಪೂಜಿಸಲಾಗುವುದೊ ಹಾಗೆಯೆ ಶಿವಯೋಗಿಯನ್ನು ಸಹಿತ ಸಾಕ್ಷಾತ್ ಶಿವನೆಂದು ಭಾವಿಸಿ ಪೂಜಿಸುವುದೇ ಭೃತ್ಯಾಚಾರ. ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂದು ಬಸವಣ್ಣನವರು ಹೇಳುತ್ತಾರೆ.
ಅಲ್ಲಮ ಪ್ರಭುವಿನ ಈ ವಚನ
ತನ್ನ ಮುಟ್ಟಿ | ನೀಡಿದುದೆ ಪ್ರಸಾದ ||
ತನ್ನ ಮುಟ್ಟದೆ | ನೀಡಿದುದೇ ಓಗರ ||
ಲಿಂಗಕ್ಕೆ ಕೊಟ್ಟು | ಕೊಂಡಡೆ ಪ್ರಸಾದ ||
ಇದು ಕಾರಣ | ಇಂತಪ್ಪ ಭೃತ್ಯಾಚಾರಿಗಳಲ್ಲದೆ ||
ಪ್ರಸಾದವಿಲ್ಲ | ಗುಹೇಶ್ವರ ||
ಆತ್ಮಾಭಿಮಾನಿಯಾದ ಸಾಧಕನು ತನ್ನ ಅಂತಃಕರಣ ಪ್ರಸಾದವನ್ನು ಗುಹೇಶ್ವರನೆಂಬ ಲಿಂಗಕ್ಕೆ ಅರ್ಪಿತವಾಗಬೇಕು. ಇದು ಅಲ್ಲಮನ ಆಂತರಿಕ ದಾವಂತ. ಈ ಮನ ಅನೇಕ ಕಲ್ಮಷಗಳಿಂದ ತುಂಬಿದೆ. ಭೃತ್ಯಾಚಾರಿಯಾದವನಿಗೆ ಶಿವತ್ವವೆಂಬ ಸ್ಪಟಿಕದ ಪ್ರಸಾದ ಬೇಕೆನ್ನುತ್ತಾನೆ. ಅಲ್ಲಮನಿಗೆ ಭಕ್ತಿ ಎಂಬುದು ಆದ್ಯಾತ್ಮಿಕ ಸಾಧನೆಯ ಸಾಮಾಜಿಕ ಮಾರ್ಗ. “ದಾಸತ್ವ ವೀರದಾಸತ್ವ” ಗಳಲ್ಲಿ ವೈಯಕ್ತಿಕ ವಿಚಾರ ದಾರೆಗಳನ್ನು ಕಂಡವನು ಅಲ್ಲಮನಾಗಿದ್ದ. ಅಂದು ವಚನ ಸಾಹಿತ್ಯದಲ್ಲಿ ಸಾಧಕನನ್ನು ಸೃಷ್ಟಿಸಿತು. ಆತನೆ ಶರಣ. ಆತನ ವೈಯಕ್ತಿಕ ಸಂಕೇತ ಇಷ್ಟ ಲಿಂಗ ಚಿಂತನೆ ಮತ್ತು ಕ್ರಿಯೆ. ಪ್ರಭು ಶರಣ ಸಿದ್ದಾಂತ ಒಪ್ಪಲಿಲ್ಲ ಎಂಬ ಮಾತ್ರಕ್ಕೆ ಗುರು ಲಿಂಗ ಜಂಗಮಕ್ಕೆ ತನ್ನದೇ ಆದ ವಿಶಿಷ್ಟ ಅರ್ಥವನ್ನು ಕೊಡುತ್ತಾನೆ. ತನ್ನ ಕಲ್ಪನೆಯ ಭೃತ್ಯಾಚಾರಿಯ ಶರಣನನ್ನು ವಿಸ್ತರಿಸುತ್ತಾನೆ.
ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವೆ ಅಲ್ಲಮನ ಜನ್ಮಸ್ಥಳ. ತಂದೆಯ ಹೆಸರು ನಿರಹಂಕಾರಿ, ತಾಯಿ ಸುಜ್ಞಾನಿ. ಪ್ರಭುದೇವರ ತಂದೆ ನಾಗವಾಸಾಧಿಪತಿಯಾಗಿದ್ದನೆಂಬ ಮಾತು ಬರುತ್ತದೆ. ಅಲ್ಲಮನ ಜೀವನದಲ್ಲಿ ಒಂದು ಪರಿವರ್ತನೆಯ ಘಟ್ಟ. ಹರಿಹರ ಹೇಳುವಂತೆ ಬಳ್ಳಿಗಾವೆಯ ಕಾಮಲತೆಯಿಂದ, ಚಾಮರಸನ ಮಾಯಾದೇವಿಯಿಂದ. ಸಂಸಾರದ ಸಹಜ ಸ್ವರೂಪಕ್ಕೆ ಹಂಬಲಿಸಿದ ಮನ ಸಂಸಾರದ ವಿಷಯ ಸುಖಗಳಲ್ಲಿ ಆನಂದವನ್ನು ಪಡೆಯಲಾರದೆ ಹೋಯಿತು. ಆದುದರಿಂದ ಇದನ್ನು ತ್ಯಜಿಸಿ ಈತ ಅಗಾಧವಾದ ಸಾಧನೆಯನ್ನು ಕೈಗೊಂಡಂತೆ ತೋರುತ್ತದೆ. ಪ್ರಭುವಿನಲ್ಲಿ ಕಾಣುವ ಯೋಗ ಸಮನ್ವಯ ಸಿದ್ದಿ ಆಶ್ಚರ್ಯಕರವಾಗಿದ್ದು ಹಠಯೋಗ ರಾಜಯೋಗ ಮೊದಲಾದ ಯೋಗಗಳಲ್ಲಿ ಈತ ನಡೆದು ಅವುಗಳ ಆಚೆಗೆ ಶಿವಯೋಗದತ್ತ ಮರಳಿದ್ದು ತಿಳಿಸಿ ಕೊಡುತ್ತದೆ.
ಅಲ್ಲಮನ ಪ್ರಕಾರ ಭೃತ್ಯಾಚಾರದ ಅನುಸಂಧಾನವೆಂದರೆ “ಹಿರಿಯರೆನ್ನದೆ ಕಿರಿಯರೆನ್ನದೆ ಸದಾ ವಿನಯದಿಂದ ಸೇವಾ ಮನೋಭಾವವಿರಬೇಕು. ಹೀಗಿರುವುದರಿಂದ ಅಹಂಕಾರ ನಿರಸ ವಾಗುತ್ತದೆ. “ಭೃತ್ಯಾಚಾರಿ ಹೇಗಿರಬೇಕೆಂಬ ಜೀವ ತುಂಬುವ ಈ ವಚನ ಇತ್ತ ಬಾರದಯ್ಯ ಬಾರಯ್ಯವೆಂದು ಭಕ್ತರೆಲ್ಲರೂ ಕೂರ್ತು ಹತ್ತೆ ಕರಿಯುತ್ತಿರಲು” ಬಾಹ್ಯ ಸಾಮಾನ್ಯತೆಯಲ್ಲಿ ತಾನು ಸಮಾಜದ “ಸೇವಕ ತನು ಮನ ಧನಗಳೆಲ್ಲ್ಲಾ ಸಮಾಜ ಸೇವೆಗೆ ಅರ್ಪಣೆ. ಸಮೂಹ ತನ್ನನ್ನು ಐಕ್ಯಗೊಳಿಸುವುದೇ ಭೃತ್ಯಾಚಾರದ ಪರಮ ದ್ಯೇಯ. ಅಲ್ಲಮಪ್ರಭು ಭೃತ್ಯಾಚಾರ ರೂಪವಾಗಿ ವ್ಯಕ್ತಿಯ ಆಚರಣೆಗೆ ಒಳಗಾದುದೆ ನಿಜವಾದ ಭಕ್ತನ ಲಕ್ಷಣ ವೆಂದು ಈ ಕೆಳಗಿನ ವಚನದಲ್ಲಿ ಕಾಣಬಹುದು.
ಭೃತ್ಯ ರೂಪಾಗಿ | ಪಾದಾರ್ಚನೆಯ ಮಾಡಬೇಕು ||
ಭಕ್ತನ ಭೃತ್ಯರೂಪವಹ | ವಿವರವೆಂತೆಂದೊಡೆ ||
ಮಾತಿನಲ್ಲಿ ನಾನು | ಭೃತ್ಯರೂಪವೆಂದೊಡೆ ||
ಹರಿಯದು ತನು | ಮನತ್ರಯಗಳ ಜೀವನ ||
ಗುಣಕ್ಕಿದೆ ಗುರು ಲಿಂಗ| ಜಂಗಮಕ್ಕೆ ಸಂದಳಿಯದ ||
ದಾಸೋಹವ | ಮಾಡುವುದೀಗ ಭಕ್ತಂಗೆ ಲಕ್ಷಣ ||
ಈ ನಿಲುವಿಂಗೆ | ಭವನಮ್ ಆಸ್ತಿ ||
ಕೇವಲ ಮಾತಿನ ರೂಪದಲ್ಲಿ ಭೃತ್ಯ ರೂಪವೆಂದರೆ ಸಾಲದು ಅದನ್ನು ಕಾರ್ಯ ರೂಪಕ್ಕೆ ತರಬೇಕು. ತನು ಮನ ಧನ ಜಂಗಮಕ್ಕರ್ಪಿಸಬೇಕು. ಅಲ್ಲಮನ ಪ್ರಕಾರ ಮನ ಇಂದ್ರಿಯಗಳ ಮೂಲಕ ಬಂದ ಬಾಹ್ಯ ಪ್ರಪಂಚದ ಸಂವೇದನೆಗಳನ್ನು ಹಂಚುತ್ತದೆ. ತನು ಮನ ಧನಗಳು ವ್ಯಕ್ತಿಯ ಆಧೀನತೆಗಳು. ಭೃತ್ಯಾರದ ಯಶಸ್ವಿ ಅನುಸಂದಾನಗಳು.
ಅಲ್ಲಮನ ಈ ವಚನ | ತನುವ ತಾಗದ ಮುನ್ನ ||
ಮನವ ತಾಗದ ಮುನ್ನ | ಅಪ್ಯಾಯನ ಬಂದು ||
ಎಡಗೊಳ್ಳದ ಮುನ್ನ | ಅರ್ಪಿತವ ಮಾಡಬೇಕು ||
ಗುರುವಿನ ಕೈಯಲ್ಲಿ | ಎಳತಟವಾಗದ ಮುನ್ನ ||
ಅರ್ಪಿತವ | ಮಾಡಬೇಕು ||
ಕಾಯಗುಣ ಸಿದ್ದಾಂತಕ್ಕೆ ಮನೋನ್ಮನಿಯ ಮೌಲ್ಯಮಾಪನದ ಎಚ್ಚರಿಕೆ ಕೊಡುತ್ತಾನೆ. ಭಕ್ತಿಯೋಗದ ಸಮಾಧಿಯಿಂದ ಗುರುಭಾವದ ಆಂತರಿಕತೆಯಲ್ಲಿ ಗುರುವಿಗೆ ನೀನು ಕರುವಾಗದಿರು. “ಗು” ಎಂದರೆ ಮಾಯೆ “ರು” ಎಂದರೆ ನಿರೋಧಿಸುವುದು.
ಅಲ್ಲಮನ ವಚನಗಳು ಬೆಡಗಿನ ವ್ಯಾಖ್ಯಾನ ಗಳಿಲ್ಲದೆ ಅರ್ಥವಾಗುವುದಿಲ್ಲ. ಒಮ್ಮೊಮ್ಮೆ ಸಹಾಯಕ್ಕೆ ಒದಗಿ ಬರದ ನಿಘೂಡ ರಚನೆ ಗಳೆಂದು ಡಾ. ಎಮ್. ಚಿದಾಂದ ಮೂರ್ತಿಯವರು ಅಭಿಪ್ರಾಯ ಪಟ್ಟಿದ್ದರು.
ಅಲ್ಲಮನ ಬೆಡಗಿನ ವಚನ ಸ್ವರೂಪ ಸ್ವಭಾವಗಳನ್ನು ಕುರಿತು ಪುನರ್ ಮೌಲ್ವೀಕರಣಗೊಂಡಿರುವ ಬಂಡಾಯದ ಪ್ರತಿಭಟನೆಯ ವಚನಗಳಾಗಿವೆ. ಬೆಡಗೆಂದರೆ ಚೆಲುವು, ಚಮತ್ಕಾರ, ಸುಂದರತೆ ಎಂದಾಗುತ್ತದೆ. ಜನಪದರಲ್ಲಿ ಒಗಟಾಗಿ ಅನುಭಾವದ ಎಚ್ಚರಿಕೆಯನ್ನು ಕೊಡುತ್ತದೆ. ಬೆಡಗಿಗೆ ಸಂಧಾಭಾಷೆ ಎಂಬ ಎಚ್ಚರಿಕೆ ಇದೆ. ಬೆಡಗೆಂಬುದನ್ನು ಸ್ವತಃ ಅಲ್ಲಮ ವಚನಗಳಲ್ಲಿ ತಿಳಿಯಲು ಸಾದ್ಯ.
ಗುಹೇಶ್ವರ ನಿನ್ನ | ಬೆಡಗಿನ ಬಿನ್ನಾಣವನ ||
ಅರಿಯದೆ ನೋಡಾ | ಮತ್ತೆ ಮುಂದೆ ||
ನಿಜದುಯದ ಬೆಡಗಿನ | ಕೀಲ ಗುಹೇಶ್ವರ ||
ನಿಮ್ಮ ಶರಣರ | ಅನುಭಾವದಲ್ಲಿದ್ದು ಕಂಡೆನಯ್ಯ ||
ಸದ್ವಿನಯವೆ ಶರಣರಿಗೆ ಕಿರಿಯರಾಗಿ ಅನುಭಾವಿಕ ನೆಲೆಯ ಸಂಗದಲ್ಲಿ ಶಿವನ ಒಲುಮೆ ಎಂದು ಭಾವಿಸಬೇಕು. ಸಂಸಾರದ ಗುರಿಯನ್ನು ಕಂಡುಕೊಳುವುದು ಮತ್ತು ಅದರ ಫಲವನ್ನು ಜಗತ್ತಿಗೆ ಕೊಡುವುದು. “ನಿಜದುದಯದ ಬೆಡಗಿನ ಕೀಲ” ಆದ್ಯಾತ್ಮದ ಭಕ್ತಿಯಲ್ಲಿ ಭೌತಿಕ ಸತ್ಯಗಳಾಚೆ ಶಿವ ರಹಸ್ಯವಡಗಿದೆ. ಇದೇ ಬೆಡಗು. ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾ ಬೆರಗಾದೆ. ಇಲ್ಲಿ ಬಸವಣ್ಣ ನವರ ಮಾತನ್ನು ನೆನಪಿಸ ಬೇಕು. “ಮಾವಿನ ಕಾಯೊಳಗೊಂದು ಎಕ್ಕೆಯ ಕಾಯಿ ನಾನು”.
ಈ ವಚನ
ಮನ ಬಸುರಾದರೆ | ಕೈ ಬೆಸಲಾಯಿತ್ತಾಕಂಡ್ಯಾ ||
ಕರ್ಪೂರದ ಕಂಪ ಕಿವಿ | ಕುಡಿಯುತ್ತಾ ಕಂಡ್ಯಾ ||
ಮುತ್ತಿನ ಢಾಳವ | ಮೂಗು ನುಂಗಿತ್ತು ಕಂಡೆ ||
ಕಂಗಳ ಹಸಿದ ವಜ್ರವ | ನುಂಗಿತ್ತು ಕಂಡೆ ||
ಒಂದು ನೀಲದೊಳಗೆ | ಮೂರು ಲೋಕವ ||
ಅಡಗಿತ್ತು ಕಂಡೆ | ಗುಹೇಶ್ವರ ||
ಮನೋಮಧ್ಯದಲ್ಲಿರುವ ಮಹಾಲಿಂಗವು ಗುರುಕಾರುಣ್ಯದ ಅನುಭಾವದ ಸಂಯೋಗದಿಂದ ಅಂತರಂಗದಲ್ಲಿ ಉದಯಿಸಿ ಬಹಿರ್ಗತವಾಗಿ ಇಷ್ಟಲಿಂಗ ರೂಪದಿಂದ ಕರವಶವಾಯಿತು. ಕರ್ಪೂರವೆಂಬ ಸ್ವ-ಅನುಭಾವವು ಸದ್ಭಾವ ಸಂಬಂದದಿಂದ ಭೋಧನೆಯ ರಸವನ್ನು ಕಿವಿಗಳು ಸ್ವೀಕರಿಸಿತು. ಮುತ್ತೆಂಬ ಮುಕ್ತಿಯು ಪರಿಶುಭ್ರ ಪ್ರಭೆಯ ಸ್ವಾನುಭಾವದ ಮೂಲಕ ಜ್ಞಾನದ ಸುಗಂಧ ಗ್ರಹಿಸಿತು. ಪ್ರಜ್ಞಾನದಲ್ಲಿ ಮಹಾಘನ ಅರ್ಥವು ಶಿವ ತತ್ವವನ್ನು ಗ್ರಹಿಸಿತು. ನೀಲವೆಂಬ ಮಾಯೆಯು ತ್ರಿ ಜಗವ ಅಡಗಿತ್ತು. ಭೃತ್ಯಾಚಾರದ ಕಲ್ಪನೆಯಲ್ಲಿ ಅಲ್ಲಮನ ಸೇವಾಭಾವವು ಅತ್ಯಂತ ವಿಸ್ತಾರವಾಗಿ ಶೋಧವಾಗುತ್ತದೆ. ಅಲ್ಲಮನ ಮಾತುಗಳು ಶರಣ ಧರ್ಮದ ಸಮರಶೀಲತೆಯಾಗಿ ಸಾಮಾಜಿಕ ಶಕ್ತಿಯಾಗಿ ಬೆಳೆಯುತ್ತಿರುವುದರ ಸೂಚನೆಯೂ ಹೌದು. ಹೀಗಾಗಿ ಭೃತ್ಯಾಚಾರದ ಸಾಮರಸ್ಯವನ್ನು ಕಾಣಲು “ದಾಸತ್ವ, ಪರದಾಸತ್ವ, ವೀರಭೃತ್ಯ, ಸಜ್ಜನತ್ವ, ಸಕಲಾವಸ್ಥೆಯು ‘ಗುರುಪೂಜತ್ವವು’ ಜಂಗಮ ಆರಾಧತ್ವ, ಲಿಂಗಾರ್ಚಕತ್ವ, ಭಕ್ತಿ ಅಪೇಕ್ಷಿತ್ವ, ಸ್ವಗೃಹ, ಸ್ವಧನ, ಸ್ವದೇಹವು, ಲಿಂಗಜಂಗಮ ಭಕ್ತರಿಗೆ ಸಮರ್ಪಣವೂ, ಇಂತೀ ಭಕ್ತಿ ಮುಖವಾಗಿ, ದೇವ ಭಕ್ತರೇ ಹಿರಿದು, ತಾ ಕಿರಿದಾಗಿ ಭಯ ಭೃತ್ವತ್ವವೇ ಭೃತ್ಯಾಚಾರವು ಎಂಬ ಮಾತಿನಲ್ಲಿ ಭೃತ್ಯಾಚಾರದ ಸಮರ್ಪಣೆ ಭಾವ ಪ್ರಾಮಾಣಿಕೃತ ವಾಗುತ್ತದೆ.
ಲಿಂಗ ಜಂಗಮ ಪೂಜಿಸಿ | ಭಕ್ತನಾದೆನೆಂದರೆ ||
ಭೃತ್ಯಾಚಾರವೆ | ಸದಾಚಾರ ನೋಡಾ ||
ವಿಶ್ವಾಸವುಳ್ಳ | ಭಕ್ತಿಗೆ ಹೊರೆಯಿಲ್ಲ ||
ಅಹಂಕಾರವೆಂಬ | ಅಲಗ ಹಿಡಿದು ||
ಮಾಡುವ ಭಕ್ತಿ | ತನ್ನನ್ನೆ ಇರಿಯುವುದು ||
ಗುಹೇಶ್ವರನೆಂಬ | ಹಗೆ ಗೆಲುವರೆ ||
ಅರಿವೆಂಬ ಅವಧಾನ | ತಪ್ಪದೆ ಹಿಡಿಯಬೇಕು ನೋಡಾ ಬಸವಣ್ಣ ||
ಗುರು ಲಿಂಗ ಜಂಗಮಕ್ಕೆ ಅರ್ಪಿಸುವುದೇ ಭೃತ್ಯಾಚಾರ ಜಂಗಮಕ್ಕೆ ತನು ಮನ ಧನ ಅರ್ಪಿಸಬೇಕು. ಶಿವಕೊಟ್ಟ ಆದ್ಯಾತ್ಮದ ಅನುಭಾವವನ್ನು ಅವನಿಗೇ ಅರ್ಪಿಸಿ ನಿರ್ಲಿಪ್ತರಾಗಬೇಕು. ಅದಕ್ಕೆ ದಾಸೋಹಂ ಎಂಬುದಕ್ಕೆ ಹೆಚ್ಚಿನ ಮಂತ್ರವಿಲ್ಲ. ಸೋಹಂ ಎಂದೊಡೆ ಅಂತರಂಗದ ಗರ್ವ. ಶಿವೋಹಂ ಎಂದಡೆ ಬಹಿರಂಗದ ಅಹಂಕಾರ. ಈ ಉಭಯವನಳಿದು ದಾಸೋಹಂ ಭಾವನೆ ಕರುಣಿಸಿ ಬದುಕಿಸಯ್ಯ..
ಅಲ್ಲಮನ ಪ್ರಕಾರ ಈ ಜಗತ್ತು ಶಿವಸೃಷ್ಠಿ. ಲೋಕದ ಸಕಲವೆಲ್ಲವೂ ಶಿವಮಯ. ಆಧ್ಯಾತ್ಮದ ಮಾರ್ಗದಲ್ಲಿರುವನೆಂಬುದು ಭೌತಿಕ ಸತ್ಯ. ಆತ ಪ್ರಜ್ಞೆಗೆ ದಕ್ಕುವ ಭಕ್ತಿಗೆ ಸುಲಭವಾಗಿ ಸಿಗುವ ಸರಳ ಸತ್ಯ. ಈ ಭೌತಿಕ ಸತ್ಯಗಳಾಚೆ ಶಿವರಹಸ್ಯವಿದ್ದರೂ ಅದನ್ನು ದಾಟಲು ಭೃತ್ಯಾಚಾರವೆಂಬ ಸೋಪಾನಗಳು ಬೇಕೆಬೇಕು. ಆದರೆ ಪ್ರಭುವಿಗೆ ಶಿವನಾಗಲಿ ಲಿಂಗವಾಗಲಿ ಭೌತಿಕ ಸತ್ಯಗಳೇ ಅಲ್ಲ, ಲಿಂಗವೆಂಬುದು ಇದ್ದರೆ ಮನದಲ್ಲಿರ ಬೇಕು. “ಕೈಯ ಲಿಂಗ ಹೋದಡೆ ಮನದ ಲಿಂಗ ಹೋಹುದೆ” ಎಂಬ ಪ್ರಶ್ನೆಯನ್ನು ಪ್ರಭು ಕೇಳುತ್ತಾನೆ.
ಭೃತ್ಯಾಚಾರ, ದಾಸತ್ವ, ವೀರದಾಸ, ವೀರಭೃತ್ಯತ್ವ ಎಂಬ ನಾಲ್ಕು ಭಾಗಗಳನ್ನು ಮಾಡುವುದುಂಟು. ತ್ರಿವಿಧ ದಾಸೋಹದ ಭಾಗವೆಲ್ಲಾ ದಾಸತ್ವಕ್ಕೆ ಸೇರುತ್ತದೆ. ಇದು ಭಕ್ತನಿಗೆ ಮಾತ್ರವಲ್ಲ ಗುರು ಲಿಂಗ ಜಂಗಮಕ್ಕೂ ಅನ್ವಯಿಸುವುದು.
ಈ ವಚನ
ತನು ಹೊರಗಿರಲು | ಪ್ರಸಾದ ಒಳಗಿರಲು ||
ಏನಯ್ಯಾ ನಿಮ್ಮ | ಮನಕ್ಕೆ ಮನ ನಾಚದು ||
ಪ್ರಾಣಲಿಂಗದಲ್ಲಿ | ಪ್ರಸಾದವ ಕೊಂಡೊಡೆ ||
ವ್ರತಕ್ಕೆ ಭಂಗ | ಗುಹೇಶ್ವರ ||
ತನು ಹೊರಗಿರಲಿ ಎನ್ನುವಲ್ಲಿ ಅಲ್ಲಮನ ಮಾತಿನಂತೆ ಧಾರ್ಮಿಕ ಚಳುವಳಿಗೆ ಸಮಯಾಚಾರ ಬೇಕು. ಅಂದರೆ ಒಂದು ಹೊಸ ಬಗೆಯ ಸಮಷ್ಟಿ ನಿರ್ಮಾಣ ವಾದಾಗಲೇ ಸಮಯಾಚಾರವೆನ್ನುತ್ತಾರೆ. ಪ್ರಸಾದ ಒಳಗಿರಲು ಮನ ನಾಚದು. ಗುಹೇಶ್ವರ ಎಂಬ ಲಿಂಗಕ್ಕೆ ಸಮಷ್ಟಿ ಸೃಷ್ಟಿಯನ್ನು ನಿರ್ಮಾಣ ಮಾಡುವ ಶಕ್ತಿ ಇದೆ.
ಭೃತ್ಯಾಚಾರ ಕಲ್ಪನೆಯಲ್ಲಿ ಶರಣರು ಅಂತರಂಗದ ಕೊಳೆಯನ್ನು ಕಿತ್ತು ಹಾಕಿದರು. ಅದನ್ನು ಶರಣರು ಬಲ್ಲವರಾಗಿದ್ದರು. ಭೃತ್ಯಾಚಾರ ವೈಯಕ್ತಿಕ ಸಾಧನೆಯಾದರ ದಾಸೋಹ ಮಾರ್ಗದ ಭಕ್ತಿಯೆಂಬ ಸಾಧಕನ ವ್ಯಕ್ತಿತ್ವಕ್ಕೆ ಆತ್ಮ ಪರೀಕ್ಷೆ ಯಾಗುತ್ತದೆ. ವ್ಯಕ್ತಿ ಮತ್ತು ಸಮಾಜಗಳೆರಡೂ ಸುಂದರವಾಗಿ ಸಮನ್ವಯಗೊಳಿಸುವ ಪಂಚಾಚಾರಗಳು ಪರಿಭಾವಿಸಿದಷ್ಟು ಹೆಚ್ಚು ಅರ್ಥ ಗರ್ಭಿತವಾಗಿ ಕಾಣುತ್ತದೆ.
ಡಾ. ಸರ್ವಮಂಗಳ ಸಕ್ರಿ
ರಾಯಚೂರು.