ಶರಣರ ವಚನಗಳಲ್ಲಿ ಆರೋಗ್ಯ

ಶರಣರ ವಚನಗಳಲ್ಲಿ ಆರೋಗ್ಯ

ಶರಣರ ಸಾಮಾಜಿಕ ಧಾರ್ಮಿಕ ಕ್ರಾಂತಿಯಿಂದ ಒಂದು ನಾಗರಿಕ ಸಂಸ್ಕೃತಿ ಸಮಾಜ ನಿರ್ಮಾಣಗೊಂಡಿತು .ಆರೋಗ್ಯಕರ ಸಮಾಜ ನಿರ್ಮಿಸಿದ ಬಸವಾದಿ ಪ್ರಮಥರು
ವ್ಯಕ್ತಿಯ ಸಾಧನೆ ಆತ್ಮೋದ್ಧಾರ ಮಾನಸಿಕ ನೆಮ್ಮದಿ ಶಾಂತಿಯ ನೆಲೆಗಟ್ಟಿನ ಮೇಲೆ ವ್ಯಕ್ತಿಯ ಆರೋಗ್ಯದ ಬಗ್ಗೆಯೂ ಚಿಂತಿಸಿದರು.
ವ್ಯಕ್ತಿ ಕುಟುಂಬ ಗ್ರಾಮ ಪಟ್ಟಣ ನಾಡು ದೇಶದ ಸಮಗ್ರ ಅಭಿವೃದ್ಧಿಯ ಜೊತೆಗೆ ಮನುಷ್ಯನ ಅಂಗಾಂಗ ಶರೀರದ ಸುಚಿತ್ವ ಹಾಗು ಸದ್ರಡ ಕಾಯದ ಬಗ್ಗೆ ಶರಣರು ಹೇಳಿದ್ದಾರೆ.
ದುಡಿಮೆ ಕಾಯಕ ಕಷ್ಟತನ -ಕಾಯ ಕರ್ರನೆ ಕುಂದಿದರೇನು ಮಿರ್ರನೆ ಮಿಂಚಿದರೆನು? ಕಾಯಕದಿ೦ದ ಬಂದ ಕಾರೆಯ ಸೊಪ್ಪಾದರೂ ಲಿಂಗಕ್ಕೆ ಸಮಾಜಕ್ಕೆ ಅರ್ಪಿತ ಇದು ಶರಣರ ಮುಖ್ಯ ಆಶಯ .ವ್ಯಕ್ತಿಯು ತನ್ನನ್ನು ಕಾಯಕ ದಾಸೋಹದ ಜೊತೆಗೆ ತನ್ನ ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಇದು ಶರಣರ ಕನಸು.
ಶರಣರು ಸ್ಥೂಲ ಶರೀರ ಸೂಕ್ಷ್ಮ ಶರೀರ ಎಂದು ವಿಂಗಡಿಸಿದ್ದಾರೆ.ಸ್ಥೂಲ ಶರೀರಕ್ಕೆ ಕಾಯಕ ಪ್ರಾಮಾಣಿಕ ದುಡಿಮೆ ಮತ್ತು ಸೂಕ್ಷ್ಮ ಶರೀರಕ್ಕೆ ಲಿಂಗಪೂಜೆ ಆಧ್ಯಾತ್ಮಿಕ ಅನುಭಾವ ಚಿಂತನೆ ವಚನಗಳ ಸಾರವೇ ಆಹಾರವಾಗಿತ್ತು.
ಚೆನ್ನ ಬಸವಣ್ಣನವರ ಕರಣ ಹಸಿಗೆ ಇಂದಿನ ವೈದ್ಯಕೀಯ ಲೋಕಕ್ಕೂ ಸವಾಲೆಸೆಯುವ ಅದ್ಭುತ ಆರೋಗ್ಯ ಗ್ರಂಥವಾಗಿದೆ ,ವೈದ್ಯ ಸಂಗಣ್ಣ ಅಲ್ಲಮರು ಅಕ್ಕಮ್ಮ ಬಸವಣ್ಣ ಮುಂತಾದ ಅನೇಕರು ಆರೋಗ್ಯ ಬಗ್ಗೆ ಹಲವರು ವಚನಗಳ ಮೂಲಕ ಹೇಳಿದ್ದಾರೆ.


ಮನುಷ್ಯನ ಆಸೆ ಹಸಿವು ಇವುಗಳನ್ನು ಸುಂಕದ ಬಂಕಣ್ಣ ಈ ರೀತಿ ಹೇಳಿದ್ದಾನೆ.

ಹರಿವ ಮನ ತುರಗ ,ಅಹಂಕಾರ ಗಜ
ಮೂಢ ಚಿತ್ತ ಒಂಟೆಯಾಗಿ ,ಜೀವಗಳು ವ್ಯವಹಾರಿಯಾಗಿ
ಅಂಗವೆಂಬ ಭೂಮಿಯಲ್ಲಿ ಬೆವಹಾರವ ಮಾಡಲಾಗಿ
ಚಿತ್ತವೆಂಬ ಸೂಳುಗಾರ ಒಪ್ಪದ ಚೀಟ ತೋರಿಯೆಂದಲ್ಲಿ ಸಿಕ್ಕಿದ
ಜೀವವೆಂಬ ಸೆಟ್ಟಿ ಭಾವದ ತೆಕ್ಕೆಯ ಸೆರೆ
ಸಾಲಿಯಲ್ಲಿ ಕೆಟ್ಟಿತ್ತು ಸುಂಕ ,
ಬಂಕೆಶ್ವರ ಲಿಂಗಕ್ಕೆ ನಷ್ಟ ಬಂದುದಿಲ್ಲ 

                                  -ಸುಂಕದ ಬಂಕಣ್ಣ

ಶರೀರ ಮನಸ್ಸು ಹಾಗು ವಿಕಾರ ಬೇರೆ ಬೇರೆ ಪ್ರಾಣಿಗೆ ಹೋಲಿಸಿದ ಶರಣ ಈ ಜೀವನ ಯಾತ್ರೆಯಲ್ಲಿ ಸುಂಕ ಕತ್ತಲ್ಲದೆ ಹೋಗಲಾಗದು ಅದು ದೈವಕ್ಕೆ ಆಗುವ ನಷ್ಟ ಅಂತ ಹೇಳಿದ್ದಾನೆ. ಅ೦ದಿನ ಕಾಲದ ಮತ್ತು ಇಂದಿಗೂ ಶ್ರೇಷ್ಠನೆನಿಸುವ ವೈದ್ಯ ಸಂಗಣ್ಣ ನುರಿತ ಡಾಕ್ಟರರರು .
ಅವರ ಒಂದು ವಚನದಲ್ಲಿ ಹೀಗೆ ಹೇಳಿದ್ದಾರೆ.

ಹೊರ ನಾಳ ಎಂಟು ಕೋಟಿ ಒಳನಾಳ ನೂರೆಂಟು
ಹೊರದ್ವಾರ ಒಂಬತ್ತು ಒಳದ್ವಾರ ಸರ್ವಾಂಗಮಯ
ಇಂತಿ ಪಂಚತತ್ವ,ಅಷ್ಟಗುಣಂಗಳು ಕೂಡಿ ,
ಘಟ್ಟಿಗೊ೦ಡ ಶುಕ್ಲ ಶೋಣಿತ ಮಜ್ಜಿ ಮಾ೦ಸ
ಎಲವು ಸರ ಚರ್ಮ ರೋಮ
ಇಂತಿ ಅಷ್ಟಗುಣಂಗಳ ಕಷ್ಟೊತ್ತರದ ಸಿಕ್ಕಿದ ಆತ್ಮಂಗೆ
ಇಂದ್ರಿಯಂಗಳ ರೋಗವಿಡಿದು ಬಂಧ ಮುಕ್ತ ಕರ್ಮಗಳೆಂಬ
ಶೀತ ಜ್ವರ ತಾಪ೦ಗಳಲಿ ವ್ಯವಹರಿಸುವ ಆತ್ಮಂಗೆ ,
ನಾನೊಂದು ನಿಹಿತದ ಮದ್ದು ಕಂಡೆ
ಅದು ಅರೆವಡೆ ಅಸಾಧ್ಯಸುಮ್ಮನೆಮೆಲುವಡೆ ಸವೆಯದು
ದ್ರಷ್ಟಿ ನಟ್ಟು ಮುಚ್ಚಿರಲಿಕ್ಕಾಗಿ ರೋಗ ರುಜಿ ಬಚ್ಚ ಬಯಲು
ಮರುಳ ಶಂಕರಪ್ರಿಯ ಶಿದ್ಧರಾಮೇಶ್ವರಲಿಂಗವನರಿಯಲಾಗಿ                                                         -ವೈದ್ಯ ಸಂಗಣ್ಣ 

ಇಲ್ಲಿ ರಕ್ತ ನಾಳ ಎಂಟು ಕೋಟಿ ಇಲ್ಲಿ ವೈದ್ಯ ಸಂಗಣ್ಣ ಶರೀರ ರಚನೆ ಹಾಗು ಆ ಶರೀರಕ್ಕೆ ತಗಲುವ ರೋಗ ರುಜಿನ ತಾಪ ಶೀತ ಜ್ವರ ಮತ್ತು ಅದಕ್ಕೆ ಸಿದ್ದಪಡಸಿದ ಔಷಧ ಇದನ್ನು ಅತ್ಯಂತ ವಿವರವಾಗಿ ಶರಣರು ಹೇಳಿದ್ದಾರೆ.
ಬಸವಣ್ಣ ಶರೀರವನ್ನೇ ದೇವಾಲಯ ಅಂತ ಕರೆದರು ಕೂಡಲ ಸಂಗನ ಶರಣರ ಕಾಯವೇ ಕೈಲಾಸ ಕಾಣಿರೋ

ಮೌನದಲು೦ಬುವುದು ಆಚಾರವಲ್ಲ
ಲಿಂಗಾರ್ಪಿತವ ಮಾಡಿದ ಬಳಿಕ
ತುತ್ತಿಗೊಮ್ಮೆ ಶಿವಶರಣೆನ್ನುತ್ತಿರಬೆಕು
ಕರಣವ್ರತ್ತಿಗಳಡಗುವವು
ಕೂಡಲ ಸಂಗನ ನೆನೆವುತ್ತ ಉಂಡಡೆ

ಪ್ರಸಾದವು ಬಂದ ಮೇಲೆ ಮೌನದಲ್ಲಿ ಉಣ್ಣುವುದು ಆಚಾರವಲ್ಲ ಲಿಂಗಾರ್ಪಿತವ ಮಾಡಿದ ಬಳಿಕ ಶರಣರನ್ನು ಮತ್ತು ಅವರ ಕಾಯಕವನ್ನು ನೆನೆಯಬೇಕು
ಆಗ ಕರಣ ಇಂದ್ರಿಯ ನಿರ್ನಾಳ ಗ್ರಂಥಿಗಳ ಸರಿಯಾಗಿ ಕೆಲಸ ಮಾಡಬಲ್ಲವು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಅಲ್ಲಮರು ನರವ್ಯೂಹ ಜ್ನಾನೆಂದ್ರಿಯಗಳ ಜೋಡಣೆಯನ್ನು ವಿವರವಾಗಿ ಈ ವಚನದಲ್ಲಿ ಹೇಳಿದ್ದಾರೆ.

ಗುದ ಲಿಂಗ ನಾಭ ಕಮಲದಿಂದ ಮೇಲೆ ಷಡ೦ಗಲವನೊತ್ತಿದಡೆ
ಕಣ್ಣಿಲ್ಲದೆ ಕಾಣಬಹುದು ಲಿಂಗಪ್ರಕಾಶವ
ಕಿವಿಯಿಲ್ಲದೆ ಕೇಳಬಹುದು ಮಹಾನಾದ ಸುನಾದ
ಕಂಡು ಕೇಳಿದ ಬಳಿಕ ಮನ ನ೦ಬದಿದ್ದಡೆ
ಮಕ್ಕಳಾಟಿಕೆ ತಪ್ಪದು ಗುಹೇಶ್ವರ

                                   -ಅಲ್ಲಮ ಪ್ರಭು 

ನರವ್ಯೂಹ ಜ್ಞಾನ ಅರವಲಿಕೆಯನ್ನು ಗುದ ಲಿಂಗ ನಾಭ ಕಮಲದಿಂದ ಮೇಲೆ ಒತ್ತಿದೊಡೆ ಕಣ್ಣಿಲ್ಲದೆ ಕಾಣಬಹುದು ಲಿಂಗಪ್ರಕಾಶವ ಕಿವಿಯಿಲ್ಲದೆ ಕೇಳಬಹುದು ಮಹಾನಾದ ಸುನಾದ ,ಅಂತಹ ಸ್ಪರ್ಶ ಬೆಳಕು ಶಬ್ದ ಗೋಚರಗೊಳ್ಳುವದು. ಇಂತಹ ಅನುಭವ ಬಂದರೂ ಬರದೆ ಇರುವ ಹಾಗೆ ಜನವಿದ್ದರೆ ಅದು ಮಕ್ಕಳ ಆಟ ಅಷ್ಟೆ ಎಂದು ವ್ಯಂಗ್ಯವಾಡಿದ್ದಾರೆ.
ಅದೇ ರೀತಿ ಅಲ್ಲಮರು

ಉದಕಕ್ಕೆ ನೆಲೆಯುಂಟೆ ?ವಾಯುವಿ೦ಗೆ ಶಿರವುಂಟೆ ?
ಶಬ್ಧಕ್ಕೆ ಕಡೆಯುಂಟೆ ? ಗುರುವಿನ ಗುರು ಜಂಗಮಕ್ಕೆ ಮತ್ತೆ ಬೇರೆ ಗುರುವುಂಟೆ ?
ಈ ಶಬ್ಧವ ಕೇಳಿ ನಾನು ಬೆರಗಾದೆ ಗುಹೇಶ್ವರ .

                                                   -ಅಲ್ಲಮ ಪ್ರಭು 

ಇಲ್ಲಿ ನೀರಿಗೆ ಒಂದು ಸ್ಥಾಯಿಯಾದ ನೆಲೆಯಿದೆಯ ಇಲ್ಲ ಅದು ಹರಿಯುವ ದ್ರವ್ಯ ,ವಾಯು ಚಲನಶೀಲ ಆದರೆ ಅದಕ್ಕೆ ಶೀರವುಂಟೆ ?ಶಬ್ಧಕ್ಕೆ ಕಡೆಯುಂಟೆ ಬೇಲಿ ಯುಂಟೆ ? ಎಲ್ಲಾ ನಿರಾಕಾರದ ಮತ್ತು ಅಷ್ಟೆ ಶಕ್ತಿಯುತವಾದ ಚಲನ ಶೀಲದ ಗತಿಯನ್ನು ಜ್ಞಾನಕ್ಕೂ ಅರಿವಿಗೆ ಹೋಲಿಕೆ ಮಾಡಿದ್ದಾರೆ.

ಸಾಧಕ ಒಳ್ಳೆಯ ಆರೋಗ್ಯ ಹೊಂದಿರಬೇಕು ಹಠ ಯೋಗ ಲಯ ಯೋಗ ರಾಜ ಯೋಗ ಹೀಗೆ ಕಠಿಣ ಯೋಗ ಮಾಡುವಾಗ ಆಹಾರ ಮತ್ತು ಜೀರ್ಣ ಪ್ರಕ್ರಿಯೆಗಳು ಸಾಧಕನ ಯೋಗಿಯ ಹತೊಟಿಯಲ್ಲಿರಬೇಕು. ಇದು ಅಲ್ಲಮರು ಯೋಗಿಗಳಿಗೆ ಸಾಧಕರಿಗೆ ಕೊಡುವ ಕಿವಿಮಾತು .

ಜಿಹ್ವೆಯ ಮುಖದಿಂದುಂಡು ಗುಹ್ಯ ದ್ವಾರದಿ೦ ಬಿಡುವವನೆ ಯೋಗಿ?
ಅಲ್ಲ ನಿಲ್ಲು
ಶುಕ್ಲ ಶೋಣಿತ ಮಲ ದೇಹಿಯಲ್ಲ
ಇಬ್ಬಟ್ಟೆಯ೦ ಕಟ್ಟಿದ ಮಹಾಯೋಗಿ !
ಮೆಲಿಪ್ಪ ಕೈಲಾಸವ ಮರ್ತ್ಯಕ್ಕೆ ತಂದು ನಿಲ್ಲಿಸಿದ
ಸರಿಯಿಲ್ಲದ ಪ್ರತಿಯಿಲ್ಲದ ಗುಹೇಶ್ವರ
ಸಿದ್ದರಾಮಯ್ಯರು ತಾನೇ.

                                   -ಅಲ್ಲಮ ಪ್ರಭು

ಮಲ ದೇಹಿ ಶರೀರ ಹೊತ್ತು ತಿನ್ನುವದಕ್ಕೂ ಜೀರ್ಣಿಸುವದಕ್ಕು ತಡಪಡಿಸುವವ ಯೋಗಿಯಲ್ಲ,ಕೈಲಾಸವ ತಂದು ಭೂಮಿಯ ಮೇಲೆ ನಿಲ್ಲಿಸುವವ ಯೋಗಿ ಆ ಸಾಮರ್ಥ್ಯ ಸಿದ್ದರಾಮಯನ್ನಲ್ಲಿ ಕಂಡೆನು ಗುಹೇಶ್ವರ ಅಂತ ಹೇಳಿದ್ದಾರೆ.
ಈ ಯೋಗಕ್ಕೆ ಸ೦ಬ೦ದ ಪಟ್ಟಂತೆ ಶರಣರು ಅನೇಖ ಕಠಿಣ ವ್ರತ ನೇಮಗಳನ್ನು ಮಾಡಿದ್ದಾರೆ ಆ ವ್ರತ ನೆಮಗಳು ವೈಜ್ಞಾನಿಕವಾಗಿದ್ದು ಗೊಡ್ಡು ಸ೦ಪ್ರದಾಯವಲ್ಲ.
ಬಸವಣ್ಣನವರು ಯೋಗ ವಿಜ್ಞಾನದ ಬಗ್ಗೆ ಈ ರೀತಿ ಹೇಳಿದ್ದಾರೆ.

ಪಶ್ಚಿಮ ಪದ್ಮಾಸನದಲ್ಲಿ ಕುಳಿತು ,ನಿಟ್ಟೆಲುವ ಮುರಿದು ,
ತುಟಿ ಮಿಡುಕದೆ ಅಟ್ಟೆಯಾಡಿತಲ್ಲ !
ಬಿಟ್ಟ ಕಣ್ಣು ಬಿಗಿದ ಹುಬ್ಬು ,ಬ್ರಹ್ಮ ರಂದ್ರದಲ್ಲಿ ಕಟ್ಟೆ ಗುಡಿಯ
ಕೂಡಲ ಸಂಗಮದೇವ ಹಿಡಿವೆಡದ

ಇಲ್ಲಿ ಯೋಗ ಶಾಸ್ತ್ರವನ್ನು ಬಸವಣ್ಣನವರು ವಿವರಿಸಿದ್ದಾರೆ. ಪಶ್ಚಿಮ ಪದ್ಮಾಸನದಲ್ಲಿ ಕುಳಿತು ಮೌನವಾಗಿ ಪಕ್ಕೆಲಬು ಹೊರಳಿಸಿ ,ತುಟಿ ಮಿಡಿಕಾಡಿಸದೆ,ನೆಟ್ಟ ನೋಟದಲ್ಲಿ ಹುಬ್ಬು ಹೊರಳಿಸದೆ ಬ್ರಹ್ಮ ರಂದ್ರದಲ್ಲಿ ಕಟ್ಟೆ ಗುಡಿಯಲ್ಲಿ ಧ್ಯಾನಸ್ಥನಾದರೆ ದೈವತ್ವವನ್ನೇ ಕಾಣಬಹುದು .

ಅಕ್ಕ ಈ ಶರೀರವನ್ನು ತೊಗಲಿನ ಗೊ೦ಬೆ ಎಲುವಿನ ತಡಿಕೆ ಚರ್ಮದ ಹೊದಿಕೆ ಮತ್ತು ನಾನಾ ಯೋನಿಗಳಲಿ ಬಂದ ಒಂದು ಜೀವಿ ಅಂತ ಹೇಳುತ್ತಾಳೆ .
ಶರಣರು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನು ತುಂಬಾ ಗ೦ಭೀರವಾಗಿ ಚಿಂತಿಸಿದ್ದಾರೆ.
ಅಂತೆಯೇ ಬಸವಣ್ಣ ಗುರುಪದೇಶ ಮಂತ್ರ ವೈದ್ಯ ಜಂಗಮೊಪದೇಶ ಶಸ್ತ್ರ ವೈದ್ಯ ಅಂತ ಹೇಳಿ ವ್ಯಕ್ತಿಗತವಾದ ಬದುಕಿನಲ್ಲಿ ಅರಿವು ಗುರು ಅದನ್ನು ನಿಯತವಾದ ಮಂತ್ರದಿಂದ ಶುದ್ಧಿಕರಿಸಬಹುದು ಅದು ಮಂತ್ರ ವೈದ್ಯ (Physician ) ಇನ್ನು ಏನಾದರೂ ತಪ್ಪು ಉಂಟಾದಲ್ಲಿ ಅಥವಾ ಏರು ಪೆರಾದಲ್ಲಿ ಆಗ ಜಂಗಮ ವ್ಯವಸ್ಥೆ ಅದನ್ನು ಸರಿಪಡಿಸುವ ಕಾರ್ಯ ಮಾಡಬೇಕು ಅದುವೇ ಶಸ್ತ್ರ ವೈದ್ಯ (surgeon ) .
ಶರಣರ ಆರೋಗ್ಯ ಕಲ್ಪನೆ ಅಪಾರ ಮತ್ತು ಕರಣ ಹಸಿಗೆ ಯಲ್ಲಿ ಚೆನ್ನ ಬಸವಣ್ಣನವರು ಹೇಳಿದ ಭ್ರೂಣ ತಾಯಿಯ ಗರ್ಭದಲ್ಲಿ ಪ್ರತಿ ತಿಂಗಳು ಹೇಗೆ ತಿರುಗುತ್ತದೆ ಬೆಳೆಯುತ್ತದೆ ಅಂತ ವೈದ್ಯಕೀಯ ಲೋಕಕ್ಕೂ ಸವಾಲು ಹಾಕುವ ಆರೋಗ್ಯ ಶಾಸ್ತ್ರವನ್ನು ಶರಣರು ಕಂಡು ಕೊಂಡಿದ್ದರು .ವೈದ್ಯ ಸಂಗಣ್ಣನ ವಚನಗಳಲ್ಲಿ ಆರೋಗ್ಯದ ಜೊತೆಗೆ ಪಾರಮಾರ್ಥಕ ಚಿಂತನೆ ನಡೆಸಿದ್ದಾರೆ.

ಡಾ ಶಶಿಕಾಂತ ಪಟ್ಟಣ -ಪೂನಾ

Don`t copy text!