ಮಾತಿನಿಂದ ಮೌನಕ್ಕೆ

ಮಾತಿನಿಂದ ಮೌನಕ್ಕೆ – ಪುಸ್ತಕ ಪರಿಚಯ

ಡಾ. ಶಶಿಕಾಂತ ಪಟ್ಟಣ ಅವರು ವೃತ್ತಿಯಿಂದ ಔಷಧ ವಿಜ್ಙಾನಿಯಾದರು ಪ್ರವೃತ್ತಿಯಿಂದ ಲೇಖಕರಾಗಿ; ಭಾಷಣಕಾರರಾಗಿ; ವಚನ ಸಾಹಿತ್ಯದ ಚಿಂತಕರಾಗಿ; ಕವಿಯಾಗಿ; ಸೃಜನಶೀಲ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಮಾತಿನಿಂದ ಮೌನಕ್ಕೆ ಡಾ. ಶಶಿಕಾಂತ ಪಟ್ಟಣ ಅವರ ೬ನೇ ಕವನ ಸಂಕಲನ. ೭೩ ಕವನಗಳನ್ನು ಒಳಗೊಂಡ ಕವನ ಸಂಕಲನದಲ್ಲಿಯ ಕವನಗಳು ವಿಭಿನ್ನ ನೆಲೆಯ ೨ ವಿಷಯಗಳ ಮೇಲೆ ಕೇಂದ್ರೀಕೃತವಾಗಿವೆ. ಅದೇ ಪ್ರಣಯ ಮತ್ತು ಬಂಡಾಯ. ಪ್ರಗತಿಶೀಲ ತಾತ್ವಿಕ ಹಿನ್ನಲೆಯ ಕವಿಯಾಗಿ ಸಮಾಜದ ಆಗುಹೋಗುಗಳಿಗೆ ಪ್ರತಿಸ್ಪಂದಿಸುವ ಕವಿಯ ಭಾವಗಳು ವ್ಯಂಗ್ಯ ವಿಡಂಬನೆ, ಬಂಡಾಯದ ಧ್ವನಿಯಾಗಿ ಕಾವ್ಯದ ಮೂಲಕ ಪ್ರತಿಧ್ವನಿಸುತ್ತವೆ.

ಪ್ರಕೃತಿಯ ಚಲುವು, ಹಕ್ಕಿ ಇಂಚರ. ಹೂವಿನ ಪರಿಮಳ ಹೀಗೆ ಸುತ್ತಲಿನ ಪ್ರಕೃತಿಕ ಪರಿಸರವು ಕವಿಯನ್ನು ಭಾವುಕನನ್ನಾಗಿ ಮಾಡಿ ಪ್ರಣಯಕಾವ್ಯಗಳ ಹುಟ್ಟಿಗೆ ಕಾರಣವಾಗುತ್ತವೆ. ಸ್ನೇಹ ಪ್ರೀತಿ ಪ್ರೇಮ ಮುಂತಾದ ಭಾವಗಳು ಭಾವನಾತ್ಮಕ ಸಂಬಂಧಗಳ ಬುನಾದಿಯಾಗಿ ಕವಿಗೆ ಪ್ರೇರಣೆಯನ್ನು ನೀಡುತ್ತವೆ. ಇಂಗ್ಲೀಷ್ ಕವಿಗಳ ರೊಮ್ಯಾಂಟಿಸಂ ಪದ್ಯಗಳಿಂದ ಪ್ರಭಾವಿತವಾದ ಕಾವ್ಯ ಶೈಲಿ ಕವನದ ಮೆರಗನ್ನು ಹೆಚ್ಚಿಸಿವೆ.
ಕಳೆದು ಶ್ರಾವಣ : ಕವನದಲ್ಲಿ ಹಬ್ಬ ಹುಣ್ಣಿಮೆಗಳ ಹೆಸರಿನಲ್ಲಿ ಮುಗ್ದರ ಶೋಷಣೆ ಹೇಗೆ ನಡೆಯುತ್ತದೆ. ಎನ್ನುವುದನ್ನು ಚಿತ್ರಿಸಿದ್ದಾರೆ.
ಮುಗ್ದ ಭಕ್ತರ, ಶೋಷಣಾ
ಕಾಯಿ ಕರ್ಪೂರ, ಲಕ್ಷದೀಪ
ಕೋಟಿ ಬಿಲ್ವ, ಅರ್ಚನಾ
ಮುಗ್ಧರನ್ನು ಡಂಭಾಚಾರದ ಭಕ್ತಿಗೆ ಗುರಿ ಮಾಡಿ ದೇವರಿಗೆ ವಿವಿಧ ಬಗೆಯ ಸೇವೆ ಸಲ್ಲಿಸಬೇಕೆಂದು ಅಮಾಯಕರನ್ನು ಸುಲಿಗೆ ಮಾಡುತ್ತಾರೆ. ಹಸಿದ ಹೊಟ್ಟಗಳು ಕಣ್ಣ ಮುಂದೆ ಇದ್ದರು ಹಾಲು ತುಪ್ಪವನ್ನು ಕಲ್ಲಿಗೆ ಸುರಿದು ಮೌಢ್ಯ ಮೆರೆಯುತ್ತಿದ್ದೇವೆ. ಅಭಿಷೇಕಕ್ಕೆ ಬಳಸುವ ಹಾಲು ತುಪ್ಪವನ್ನು ಬಡಮಕ್ಕಳಿಗೆ ನೀಡಿದರೆ, ದೇಶದಲ್ಲಿಯ ಅಪೌಷ್ಠಿಕತೆಯನ್ನು ಇಲ್ಲವಾಗಿಸಬಹುದು ಎನ್ನುವ ವಿಡಂಬನೆಯನ್ನು ಮಾಡುತ್ತಾರೆ. ಪುರೋಹಿತ ವರ್ಗ ದೇವರ ಹೆಸರಲ್ಲಿ ಜೋಳಿಗೆ ತುಂಬಿಸಿಕೊಂಡರೆಮ, ಸೇವೆಯ ಹೆಸರಿನಲ್ಲಿ ರೈತ ಕಾರ್ಮಿಕರು ಸಾಯುತ್ತಿದ್ದಾರೆ.
ಬದುಕುತ್ತಿದ್ದೇವೆ ಕವನದಲ್ಲಿ
ಬದುಕುತ್ತಿದ್ದೇವೆ ಬಸವಣ್ಣ
ನಿನ್ನ ಹೆಸರು ಹೇಳಿ
ಮಠ ಆಶ್ರಮ
ಶಾಲೆ ಕಾಲೇಜು
ಐಶಾರಾಮ
ಜೀವನ ಕಟ್ಟಿಕೊಂಡು
ಎನ್ನುವ ಸಾಲುಗಳಲ್ಲಿ ಬಸವಣ್ಣನವರ ತತ್ವ ಆದರ್ಶಗಳನ್ನು ಮರೆತು, ಮಠ ಆಶ್ರಮ ಶಾಲೆ ಕಾಲೇಜುಗಳು ಸಮಾಜಕ್ಕೆ ಒಳಿತು ಮಾಡುವ, ಉದಾತ್ತ ಚಿಂತನೆಗಳ ಚಲನಶೀಲ ಕೇಂದ್ರವಾಗಬೇಕಾಗಿತ್ತು, ಆದರೆ ಮಠ ಆಶ್ರಮಗಳು ಇಂದು ಐಶಾರಾಮಿ ತಾಣಗಳಾಗಿವೆ. ಶಾಲೆ ಕಾಲೇಜುಗಳು ವಿದ್ಯಾಕೇಂದ್ರಗಳಾಗುವುದರ ಬದಲು ಹಣ ಉತ್ಪಾದಿಸುವ ವ್ಯವಹಾರಿಕ ಕೇಂದ್ರಗಳಾಗಿ ಬದಲಾಗಿರುವುದನ್ನು ವ್ಯಂಗ್ಯವಾಗಿ ಪ್ರಶ್ನಿಸುತ್ತಾರೆ.
ಯೋಧರು : ಎನ್ನುವ ಕವನದಲ್ಲಿ
ದೀನ ದಲಿತ ಶ್ರಮಿಕರೆಲ್ಲರು
ಶರಣ ಧರ್ಮದ ಒಡೆಯರು
ಎನ್ನುವ ಸಾಲುಗಳು ಕಾಯಕ ತತ್ವ ಸಾರಿದ ಬಸವಣ್ಣನ ಸಿದ್ಧಾಂತವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡ ಶ್ರಮೀಕರೇ ಶರಣ ಧರ್ಮದ ಒಡೆಯರು ಎನ್ನುವ ಮಾತು ಅತ್ಯಂತ ಮಾರ್ಮಿಕವಾಗಿದೆ. ಕಾಯಕ ನಿಷ್ಠರೆಲ್ಲರು ಶರಣ ಧರ್ಮಕ್ಕೆ ಒಡೆಯರು. ಆದರೆ ಮಠ ಆಶ್ರಮ ಸ್ವಾಮೀಜಿಗಳು ಶರಣ ಧರ್ಮಕ್ಕೆ ತಾವೇ ಒಡೆಯರೆಂದು ಭಾವಿಸಿರುವ ಭ್ರಮೆಯನ್ನು ಕಳಚುತ್ತಾರೆ.
ಪಚನವಾಗಲಿಲ್ಲ: ಎನ್ನುವ ಕವನದಲ್ಲಿ
ಪಚನವಾಗಲಿಲ್ಲ ಬಸವಣ್ಣ
ನಿಮ್ಮ ಶರಣರ ವಚನಗಳು ನಮಗೆ
ಎನ್ನುವ ಕವಿ ಬಸವಣ್ಣನವರು ತತ್ವಸಿದ್ಧಾಂತಗಳನ್ನು ಜನಸಾಮಾನ್ಯರಿಗೆ ತಿಳಿಯುವ ಹಾಗೆ ವಚನಗಳನ್ನು ರಚಿಸಿದರು. ವಿಶಾದದ ಸಂಗತಿಯೆAದರೆ ಅದರ ನಿಜ ತಿರುಳು ತಿಳಿಯದೆ ಅರಗಿಸಿಕೊಳ್ಳಲಾಗದ, ಸಮಾಜದ ನಡೆನುಡಿಗಳು ಭಿನ್ನವಾಗಿವೆ. ಎಂದು ಖೇದ ವ್ಯಕ್ತಪಡಿಸುತ್ತಾರೆ.
ಹುಡುಕುತ್ತಿದ್ದೇವೆ : ಎನ್ನುವ ಕವನದಲ್ಲಿ
ಹುಡುಕುತ್ತಿದ್ದೇವೆ ಬಸವಣ್ಣ ನಿನ್ನ
ಭಾಷಣ ಉಪನ್ಯಾಸ
ಗೋಷ್ಠಿ ಅನುಭಾವ
ನಿನ್ನ ಹೆಸರಲ್ಲಿ
ಬಸವಣ್ಣನ ಹೆಸರಿನಲ್ಲಿ ಇಂಥಹ ಚಟುವಟಿಕೆಗಳು ನಡೆದಿವೆ. ಆದರೆ ಕಾಯಕ ದಾಸೋಹ ತತ್ವಗಳು ಮರೆಯಾಗುತ್ತಿವೆ. ಎನ್ನುವ ಅಳಲು ತೋಡಿಕೊಂಡಿದ್ದಾರೆ.
ಮತ್ತೆ ಬರುವವು ಎನ್ನುವ ಕವನದಲ್ಲಿ ಸಾರ್ವತ್ರಿಕ ಚುನಾವಣೆಯ ಸನ್ನೀವೇಶಗಳ ವಾಸ್ತವ ಚಿತ್ರಣವನ್ನು ಕವನದ ಮೂಲಕ ಬಿಂಬಿಸಿದ್ದಾರೆ.
ಬಳಲಿರುವ ಮತದಾರ
ಹಸಿವು ಬಡತನ ಯಾತನೆ
ಹಣ ಹೆಂಡ; ಒಣ ಭರವಸೆ
ತಾಯಿ ಭಾರತಿ ವೇದನೆ
ಎಂದು ಪ್ರಜಾಪ್ರಭುತ್ವದ ನಿಜ ಆದರ್ಶಗಳು ಆಮಿಷಕ್ಕೆ ಬಲಿಯಾಗುತ್ತಿರುವದನ್ನು ಕಂಡು ವ್ಯತೆ ಪಟ್ಟುಕೊಳ್ಳುತ್ತಾರೆ.
ಮಾತಿನಿಂದ ಮೌನಕ್ಕೆ ಎನ್ನುವ ಕವನದಲ್ಲಿ
ಹಿಂಸೆ ಕೊಲೆ ಹತ್ಯ
ಸತ್ಯ ನಿತ್ಯ ಶಿಲುಬೆಗೆರುತ್ತದೆ.
ಸಮಾಜದಲ್ಲಿ ನಡೆಯುತ್ತಿರುವ ಕೊಲೆ ಹಿಂಸೆ ಅತ್ಯಾಚಾರರ ಡಾಂಭಿಕತನ ಆಶಾಢಭೂತಿತನವನ್ನು ಕಂಡು ಮೌನವಾಗುವುದೇ ಲೇಸೆಂದು ಮೌನಕ್ಕೆ ಜಾರುವ ಕವಿಯ ನಿರ್ಲಿಪ್ತ ಭಾವ ಒಂದಡೆಯಾದರೆ ಕುಸಿಯುತ್ತಿರುವ ಸಾಮಾಜಿಕ ಮೌಲ್ಯಗಳ ಕುರಿತು ಚಿಂತಿಸಲು ಧ್ಯಾನಸ್ಥನಾಗಲು ಮೌನಿಯಾಗುತ್ತಾನೆ ಎನಿಸುತ್ತದೆ.
ಸಮಾಜದ ಆಗುಹೋಗುಗಳನ್ನು ಕಾವ್ಯದ ಧ್ವನಿಯ ಮೂಲಕ ಪ್ರತಿಸ್ಪಂದಿಸುವ ಕವಿ ಒಮ್ಮೆ ಬಂಡಾಯದ ಧ್ವನಿ ಎತ್ತಿದರೆ. ಇನ್ನೊಮ್ಮೆ ತನ್ನ ಭಾವಲಹರಿಯಲ್ಲಿ ಪ್ರಣಯ ಗೀತೆಗಳ ಧ್ವನಿಯಾಗುತ್ತಾನೆ. ಶುದ್ಧಪ್ರಣಯ ಗೀತೆಗಳು ಪ್ರಕೃತಿ ಮತ್ತು ಭಾವ ಪ್ರಜ್ಙೆಯ ಪ್ರೇರಣೆಯಲ್ಲಿ ಪ್ರೇಮಕವನಗಳಾಗಿ ಮೂಡಿಬಂದಿವೆ.
ಹೇಗೆ ಹೇಳಲಿ ಎನ್ನುವ ಕವನವು ಪ್ರೇಮಿಯ ಅಂತರಂಗದ ತುಮಲ ಕಾವ್ಯವಾಗಿ ಮೂಡಿಬಂದಿದೆ.
ಹೇಗೆ ಹೇಳಲಿ
ನನ್ನ ಗೆಳತಿ
ನೀನು ನನ್ನ
ಬಾಳ ಪಣತಿ
ಬದುಕಿಗೆ ಬೆಳಕಾಗುವ ಪ್ರೇಮ ಪಣತೆಯನ್ನು ಜ್ಯೋತಿಯಂತೆ ಗೆಳತಿಯ ಇರುವಿಕೆಯನ್ನು ಹೇಳುತ್ತಾರೆ.
ಏನೊ ಕಾಣೆ : ಎನ್ನುವ ಕವನದಲ್ಲಿ ಪ್ರೇಮ ಭಾವ ಮನದಲ್ಲಿ ಮೂಡಿದರೆ ಹೇಗೆ ಪ್ರಕೃತಿ ಎಲ್ಲವೂ ಸುಂದರವಾಗಿ ಕಾಣುತ್ತದೆಯೋ ಅದೇ ರೀತಿ
ಅರಳಿ ನಿಂತವು
ನಗೆಯ ಮಲ್ಲಿಗೆ
ನನ್ನ ಹೃದಯ
ತೋಟದಲ್ಲಿ
ಎನ್ನುವ ಸಾಲುಗಳಲ್ಲಿ ಪ್ರೇಮವೆನ್ನುವ ಅಮುಲ್ಯವಾದ ಮಾನವೀಯ ಮೌಲ್ಯ ಮಾನವ ಹೃದಯದಲ್ಲಿ ಸ್ಥಾನವನ್ನು ಪಡೆದುಕೊಂಡು ಶಾಶ್ವತವಾದರೆ ಅದು ಮಲ್ಲಿಗೆಯ ಹೂವಿನಂತೆ ಉತ್ತಲಿನ ಪರಿಸರವನ್ನು ಆಲ್ಹಾದಕರವಾಗಿ ಮಾಡುವಂತೆ ಮಾನವ ಸಂಬಂಧಗಳನ್ನು ಅರಳಿಸುತ್ತದೆ. ಎನ್ನುವ ಉದಾತ್ತ ಚಿಂತನೆಯನ್ನು ಈ ಸಾಲುಗಳು ಬಿಂಬಿಸುತ್ತವೆ.
ನನ್ನ ಕಾವ್ಯ ಎನ್ನುವ ಕವನವು
ಕಷ್ಟ ಕೋಟಲೆ
ಕರಗಿ ಹೋದವು
ನಿನ್ನ ಪ್ರೇಮದ ಕುಲುಮೆಯಲ್ಲಿ
ಎನ್ನುವ ಕವಿ ಕಾವ್ಯಕ್ಕೆ ಪ್ರೇರಣೆಯಾದ ಪ್ರೇಮ ಭಾವ ಗೆಳತಿಯ ಸಾಮಿಪ್ಯದಿಂದ, ಪ್ರೇಮದ ಕುಲುಮೆಯಲ್ಲಿ ಕಷ್ಟಗಳನ್ನೆಲ್ಲ ಕರಗಿಸುವ ಶಕ್ತಿಯಿದೆ. ಎನ್ನುವ ಕವಿ ಪ್ರತಿಮೆಯ ಮೂಲಕ ಅದ್ಭುತ ಸಾಲುಗಳಲ್ಲಿ ಸೃಷ್ಟಸಿದ್ದಾರೆ.
ಸ್ಪೂರ್ತಿಯು ಎನ್ನವ ಕವನದಲ್ಲಿಯ ಸಾಲುಗಳು
ನಿನ್ನ ಕನಸು
ನಾನು ಕಂಡೆನು
ಬಣ್ಣ ಬಣ್ಣದ ಬುಗುರೆಯು
ಕನಸುಗಳನ್ನು ತಿರುಗುವ ಬಣ್ಣದ ಬುಗುರಿಗೆ ಹೋಲಿಸಿದ್ದಾರೆ. ಬಣ್ಣದ ಬುಗುರಿ ತಿರುಗುವಾಗ ಚಿತ್ತಾಕರ್ಷಕವಾಗಿರುವಂತೆ ಗೆಳತಿಯು ಕೂಡ ಚಿತ್ತಾಕರ್ಷಕವಾದವಳು ಅವಳು ತನ್ನ ಕನಸು ಮನಸ್ಸಿನಲ್ಲಿ ಸುಳಿಯುತ್ತಿದ್ದಾಳೆ ಎನ್ನುತ್ತವೆ.
ಅಣತಿ ಎನ್ನುವ ಕವನದಲ್ಲಿ ಮಾತು ಮಥಿಸಿ ಕವನವಾದರೆ ಶಬ್ಧ ಸೂತಕವಾವರಿಸುತ್ತದೆ.
ಪ್ರೇಮ ಗೆಳತಿ
ಹಸಿರು ಕಾನನ
ಪ್ರೀತಿ ಹೂವು
ಪರಿಮಳ
ಪ್ರೀತಿ ಪ್ರೇಮ, ಸ್ನೇಹ ಎನ್ನುವ ಭಾವನಾತ್ಮಕ ಮೌಲ್ಯಗಳು ಕುಸಿಯದಂತೆ ಸಂಬಂಧವನ್ನು ಕಾದಿಟ್ಟುಕೊಳ್ಳಬೇಕು. ಎನ್ನುವ ಕವಿ ಗೆಳೆತನವನ್ನು ಕಾಡಿಗೆ ಹೋಲಿಸಿದರೆ, ಪ್ರೀತಿ ಎನ್ನುವುದು ಹೂವಿನ ಪರಿಮಳದಂತೆ ಪಸರಿಸಬೇಕೆಂದು ಆಶಿಸುತ್ತಾನೆ.
ಹೀಗೆ ನಿಷ್ಕಲ್ಮಶ ಪ್ರೇಮ ಭಾವವು ಪ್ರಣಯಧಾರೆಯಾಗಿ ಹರಿದು ಬಂದಿದೆ. ಹಸಿರು, ಚಿಗುರು, ಹಕ್ಕಿ, ಹಾಡು, ಮಳೆ, ಮೋಡ, ಬಾನು, ಸೂರ್ಯ ಪ್ರೇಮ ಕಾವ್ಯದ ಪ್ರತಿಮೆಗಳಾಗಿ ಕಾವ್ಯದ ಅಲಂಕಾರವನ್ನು ಹೆಚ್ಚಿಸಿವೆ. ಎರಡು ವಿಭಿನ್ನ ಆಯಾಮಗಳಲ್ಲಿ ಕವಿತೆ ಬರೆಯುವುದನ್ನು ಕರಗತ ಮಾಡಿಕೊಂಡಿರುವ ಕವಿ ಮಾತಿನಿಂದ ಮೌನಕ್ಕೆ ಕವನ ಸಂಕಲನದಲ್ಲಿ ಓದುಗರಿಗೆ ಎರಡು ಭಾವಗಳನ್ನು ಕಟ್ಟಿಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ.

ಡಾ. ನಿರ್ಮಲಾ ಬಟ್ಟಲ.
ಬೆಳಗಾವಿ.

Don`t copy text!