ಅದ್ದೂರಿಯಾಗಿ ಜರುಗಿದ ಅಮರೇಶ್ವರ ರಥೋತ್ಸವ.
e-ಸುದ್ದಿ ಲಿಂಗಸುಗೂರು
ತಾಲೂಕಿನ ಐತಿಹಾಸಿಕ ಪ್ರಸಿದ್ಧ ಸುಕ್ಷೇತ್ರ ಗುರುಗುಂಟಾ ಶ್ರೀ ಅಮರೇಶ್ವರ ಮಹಾರಥೋತ್ಸವ ಶುಕ್ರವಾರದಂದು ಸಾಯಂಕಾಲ ಅಮರೇಶ್ವರ ಗುರು ಶ್ರೀ ಅಭಿನವ ಗಜದಂಡ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ಗಣ್ಯರ, ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು.
ಕಳೆದೆರಡು ವರ್ಷಗಳಿಂದ ಕರೋನ ಕಾರಣದಿಂದಾಗಿ ಸರಳವಾಗಿ ಜರುಗಿದ್ದ ಜಾತ್ರಾ ಮಹೋತ್ಸವ ಈ ವರ್ಷ ಅತ್ಯಂತ ವಿಜೃಂಭಣೆಯಿಂದ ಜರುಗಿತು. ರಥಬೀದಿಯಲ್ಲಿ ತೇರು ಸಾಗುವಾಗ ನೇರಿದಿದ್ದ ಅಪಾರ ಭಕ್ತ ಸಮೂಹವು ಉತ್ತುತ್ತಿ, ಬಾಳೆಹಣ್ಣು ,ಕಲ್ಲುಸಕ್ಕರೆ ಎಸೆದು ಅಪಾರ ಭಕ್ತಿ ಮೆರೆದರು.
ಈ ಸಂದರ್ಭದಲ್ಲಿ ಸಂಸದರಾದ ರಾಜಾ ಅಮರೇಶ್ವರ ನಾಯಕ, ಗುರುಗುಂಟಾ ಸಂಸ್ಥಾನಿಕರಾದ ರಾಜಾ ಸೋಮನಾಥ ನಾಯಕ, ಕೊಪ್ಪಳ ಸಂಸದರಾದ ಸಂಗಣ್ಣ ಕರಡಿ, ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ, ಲಿಂಗಸುಗೂರು ಶಾಸಕ ಡಿ.ಎಸ್. ಹೋಲಗೇರಿ, ಹುನುಗುಂದ ಶಾಸಕ ದೋಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ, ಮಸ್ಕಿ ತಾಲೂಕಿನ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್,ಹಟ್ಟಿ ಚಿನ್ನದ ಗಣಿ ಕಂಪನಿಯ ಅಧ್ಯಕ್ಷ ಮಾನಪ್ಪ ವಜ್ಜಲ್, ಸಿದ್ದು.ವೈ ಬಂಡಿ, ಸಹಾಯಕ ಆಯುಕ್ತರಾದ ರಾಹುಲ್ ಸಂಕನೂರ,ತಹಶಿಲ್ದಾರ್ ಬಲರಾಮ ಕಟ್ಟಿಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಲಿಂಗಸುಗೂರು ಡಿ.ವೈ.ಎಸ್ಪಿ ಎಸ್.ಎಸ್.ಹೂಲ್ಲೂರು ನೆತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ದೊಡ್ಡ ಜಾತ್ರೆ ಎನಿಸಿಕೊಂಡಿರುವ ಅಮರೇಶ್ವರ ಜಾತ್ರೆ ರೈತಾಪಿ ವರ್ಗದವರಿಗೆ ತುಂಬಾ ಅನುಕೂಲಕರವಾಗಿದೆ.
ಜಾನುವಾರುಗಳ ಮಾರಾಟ ಮತ್ತು ಖರೀದಿಗೆ ಹೆಸರುವಾಸಿಯಾಗಿದೆ. ಕೃಷಿ ಉಪಕರಣಗಳ ಖರಿದಿ,ಗೃಹೋಪಯೋಗಿ ವಸ್ತುಗಳ ಖರಿದಿಗೂ ತುಂಬಾ ಅನುಕೂಲಕರವಾಗಿದ್ದು ತಿಂಗಳು ಪರಿಯಂತೆ ನಿರಂತರವಾಗಿ ನಡೆಯಲಿದೆ . ಜಾತ್ರೆಯ ಪ್ರಯುಕ್ತವಾಗಿ ವಿವಿಧ ನಾಟಕ ಕಂಪನಿಗಳ ರಂಗಸಜ್ಜಿಕೆಯಲ್ಲಿ ಹಲವಾರು ಸಾಮಾಜಿಕ ನಾಟಕಗಳು ಪ್ರದರ್ಶನಗೊಳ್ಳಲಿದ್ದು ನೋಡುಗರಿಗೆ ಮನರಂಜನೆಯನ್ನು ನಿಡಲಿವೆ.