ಸಿರಿಯನಿತ್ತೋಡೇ ಒಲ್ಲೆ
ಸಿರಿಯನಿತ್ತೋಡೇ ಒಲ್ಲೆ
ಕರಿಯ ನಿತ್ತೋಡೇ ಒಲ್ಲೆ
ಹಿರಿದಪ್ಪ ಮಹಾರಾಜ್ಯವ ಇತ್ತೋಡೆ ಒಲ್ಲೆ
ನಿಮ್ಮ ಶರಣ ಸೂಳ್ನುಡಿಯ ಒಂದರಗಳಿಗೆ ಇತ್ತಡೆ
ನಿಮ್ಮನ್ನೇ ಇತ್ತೇ ಕಾಣ ರಾಮನಾಥ .
-ಜೇಡರ ದಾಸಿಮಯ್ಯನವರ ವಚನ
ಹಣ ಕನಕ ಧನ ರಾಜ್ಯಭಾರ ಮುಂತಾದವುಗಳ ಬೆನ್ನು ಹತ್ತಿದ ಲೌಕಿಕ ಮನಸ್ಸು ಶರಣರ ಸತ್ಯ ದರ್ಶನ ಮುಕ್ತಿಯ ಮಾರ್ಗಕ್ಕೆ ಹಪಹಪಿಸುತ್ತದೆ ಜೀವ .
ಸಿರಿಯನಿತ್ತೋಡೇ ಒಲ್ಲೆ
ಹಣವನ್ನು ಸಹಾಯಕ್ಕಾಗಿ ಕೊಟ್ಟರೆ ನಾನು ಸ್ವೀಕರಿಸುವದಿಲ್ಲ,ಇನೊಬ್ಬರ ಹಂಗಿನ ಗುಲಾಮನಾಗುವ ಅಗತ್ಯವಿಲ್ಲ ಎಂದು ಜೇಡರ ದಾಸಿಮಯ್ಯನವರು ಸ್ಪಷ್ಟವಾಗಿ ಆಶೆ ಆಮಿಷಗಳನ್ನು ತಳ್ಳಿ ಹಾಕಿದ್ದಾರೆ . ಜೇಡರ ದಾಸಿಮಯ್ಯನವರು ಹಿರಿಯ ಅನುಭಾವಿ ವಚನಕಾರ ಕಲ್ಬುರ್ಗಿ ಜಿಲ್ಲೆಯ ಮುದೇನೂರು ಗ್ರಾಮದವರು.ಬಸವಣ್ಣನವರು ಕೊಟ್ಟ ಕಾಯಕ ದಾಸೋಹದಲ್ಲಿ ಅಚಲವಾದ ನಂಬಿಕೆ ಇಟ್ಟ ಶರಣ ಮೇಳ ,ಇನೊಬ್ಬರ ದಾನಕ್ಕೆ ಆಶೆ ಪಡುವವರಲ್ಲ.
ಕರಿಯ ನಿತ್ತೋಡೇ ಒಲ್ಲೆ
ಬಹುಮಾನದ ರೂಪದಲ್ಲಿ ಆನೆಯನ್ನು ಕರಿಯನ್ನು ನೀಡಿದರೆ ಅದನ್ನು ತಿರಸ್ಕರಿಸುವದಾಗಿ ಹೇಳಿದ್ದಾರೆ ದಾಸಿಮಯ್ಯನವರು .ಆನೆಯನ್ನು ತಂದು ಸಲುಹುವ ಕಷ್ಟದ ಕೆಲಸ ಇನ್ನೊಂದಿಲ್ಲ ಅಂತಹ ಆಡಂಭರದ ಬಹುಮಾನ ಮಗೆ ಬೇಡವೆಂದರು ಜೇಡರ ದಾಸಿಮಯ್ಯನವರು .
ಹಿರಿದಪ್ಪ ಮಹಾರಾಜ್ಯವ ಇತ್ತೋಡೆ ಒಲ್ಲೆ
ಹಣ ಕನಕ ವಜ್ರ ವೈಡೂರ್ಯ ಧಾನ್ಯ ದವಸ ಆನೆ ಕುದುರೆ ಒಂಟಿ ಮುಂತಾದ ಪ್ರಾಣಿಗಳನ್ನು ತಿರಸ್ಕರಿಸಿದ ಶರಣರಿಗೆ ಒಂದು ವೇಳೆ ಹಿರಿದಾದ ಮಹಾರಾಜ್ಯವನ್ನೆ ಇತ್ತರೆ,ಅಥವಾ ಭಕ್ಷೀಸು ಬಹುಮಾನರೂಪದಲ್ಲಿ ನೀಡಿದರೆ ಅದನ್ನು ಅಷ್ಟೇ ವಿನಯವಾಗಿ ನಿರಾಕರಿಸುವ ಶರಣರು ಎಂದಿದ್ದಾರೆ ಜೇಡರ ದಾಸಿಮಯ್ಯನವರು . ಖರ್ಚಾಗುವ ಹಣ ಸಿರಿ ಸತ್ತು ಹೋಗುವ ಆನೆ ,ಮಾತು ಬಿದ್ದು ಹೋಗುವ ರಾಜ್ಯಗಳ ಅಗತ್ಯ ತಮಗಿಲ್ಲವೆಂದಿದ್ದಾರೆ ಶರಣರು.
ನಿಮ್ಮ ಶರಣ ಸೂಳ್ನುಡಿಯ ಒಂದರಗಳಿಗೆ ಇತ್ತಡೆ ನಿಮ್ಮನ್ನೇ ಇತ್ತೇ ಕಾಣ ರಾಮನಾಥ .
ಇಂತಹ ಭೌತಿಕ ಪ್ರಪಂಚಕ್ಕೆ ಬೇಕಾದ ಅಗತ್ಯವಾದ ವಸ್ತು ಸಿರಿ ಸಂಪತ್ತನ್ನು ನೀಡಿದರೂ ಒಪ್ಪದ ಸಾತ್ವಿಕ ಮನಸ್ಸು ಬೇಡುವದಾದರೂ ಏನು ಎಂದು ನೋಡೋಣ .?ಕಲ್ಯಾಣ ನಾಡಿನ ಶರಣರ ಅನುಭವದ ಸೂಳ್ನುಡಿ ವಚನಗಳ ಸಾಲಿನ ಅಮೃತವನ್ನು ಒಂದು ಅರ್ಧ ಘಳಿಗೆ ನೀಡಿದರೆ ಸಾಕು ಲೌಕಿಕ ದೇವರೆಂಬ ಮತ್ತು ಅಲೌಕಿಕ ದೈವತ್ವದ ಪ್ರಜ್ಞೆಯನ್ನು ಅಷ್ಟೇ ಅಲ್ಲ ರಾಮನಾಥ ವೆಂಬ ತಮ್ಮ ದೇವರನ್ನು ಸೂಳ್ನುಡಿಯ ಪರವಾಗಿ ಕೊಡುವೆ ಎಂದು ಅಭಿಮಾನದಿಂದ ನುಡಿದಿದ್ದಾರೆ ಜೇಡರ ದಾಸಿಮಯ್ಯನವರು .
ಇದನ್ನೇ ಬಸವಣ್ಣನವರು ಅನ್ನದೊಳಗೊಂದಗುಳ ,ವಸ್ತ್ರದೊಳಗೊಂದೆಳೆಯ ,ಹೊನ್ನಿನೊಂದೊರೆಯ ಇಂದಿಂಗೆ ನಾಳಿಂಗೆ ಬೇಕಂದೇನಾದಡೆ ಆಣೆ ನಿಮ್ಮ ಆಣೆ ಎಂದು ಪರಿತಪಿಸಿದ್ದಾರೆ .
ಜೇಡರ ದಾಸಿಮಯ್ಯ ಮತ್ತು ದೇವರ ದಾಸಿಮಯ್ಯ ಬೇರೆ ಬೇರೆ ಅವರ ಕಾಲ ಘಟ್ಟ ಮತ್ತು ಜೀವಿತ ಕ್ರಮ ಸಿದ್ಧಾಂತಗಳು ಸಂಪ್ಪೂರ್ಣ ವಿಭಿನ್ನವಾಗಿವೆ .
ಡಾ.ಶಶಿಕಾಂತ ಪಟ್ಟಣ ರಾಮದುರ್ಗ 9552002338