ಅರ್ಥರೇಖೆಯಿದ್ದಲ್ಲಿ ಫಲವೇನು, ಆಯುಷ್ಯ ರೇಖೆ ಇಲ್ಲದ ನ್ನಕ್ಕರ

ಅರ್ಥರೇಖೆಯಿದ್ದಲ್ಲಿ ಫಲವೇನು, ಆಯುಷ್ಯ ರೇಖೆ ಇಲ್ಲದ ನ್ನಕ್ಕರ ಹಂದೆಯ ಕೈಯಲ್ಲಿ ಚಂದ್ರಾಯುಧವಿದ್ದಲ್ಲಿ ಫಲವೇನು ? ಅಂದಕನ ಕೈಯಲ್ಲಿ ದರ್ಪಣ ವಿದ್ದು ಫಲವೇನು ?
ಮರ್ಕಟನ ಕೈಯಲ್ಲಿ ಮಾಣಿಕ್ಯ ವಿದ್ದು ಫಲವೇನು?
ನಮ್ಮ ಕೂಡಲಸಂಗನ ಶರಣರಿಯದವರ ಕೈಯಲ್ಲಿ ಲಿಂಗವಿದ್ದು ಫಲವೇನು?
ಶಿವ ಪಥವನರಿಯದನ್ನಕ್ಕ
                                    – ಬಸವಣ್ಣ

ಪ್ರತಿಯೊಬ್ಬ ವ್ಯಕ್ತಿಯ ಜೀವನ ಎಂಬುದು ಅತ್ಯಮೂಲ್ಯವಾದು ದಾಗಿದೆ .ಶಿವಜ್ಞಾನದ ಅರಿವಿಲ್ಲದೆ ಇಂದ್ರೀಯಗಳ ಸುಖದಲ್ಲಿ ಮೈಮರೆತು ಡಾಂಭಿಕ ಭಕ್ತಿಯಿಂದ ಕೂಡಿದ್ದರೆ ಆಧ್ಯಾತ್ಮಿಕ ಜ್ಞಾನ ಲಭಿಸದೆ ಭಕ್ತಿಯು ವ್ಯರ್ಥವಾಗಿ ಬದುಕನ್ನು ಹಾಳು ಮಾಡಿಕೊಳ್ಳುವುದರ ಜೊತೆಗೆ ಮುಕ್ತಿಪಡೆಯಲು ಸಾಧ್ಯವಿಲ್ಲವೆಂದು ಪ್ರತಿಯೊಬ್ಬರಲ್ಲೂ ಅರಿವನ್ನು ಮೂಡಿಸುವ ಸಂದರ್ಭದಲ್ಲಿ ಈ ವಚನವು ಮೂಡಿಬಂದಿದೆ.

ಅರ್ಥ ರೇಖೆಯಿದ್ದಲ್ಲಿ ಫಲವೇನು ಆಯುಷ್ಯ ರೇಖೆ ಇಲ್ಲದನ್ನಕ್ಕರ

ಬದುಕಿನಲ್ಲಿ ಆಯುಷ್ಯ ರೇಖೆ ಇದ್ದರೆ ಮಾತ್ರ ಸುಖವನ್ನು ಅನುಭವಿಸಲು ಸಾಧ್ಯವಾಗುತ್ತದೆ .ಆದರೆ ಆಯುಷ್ಯ ರೇಖೆಯೇ ಆತನಲ್ಲಿ ಇಲ್ಲದಿರುವಾಗ ಹಣದ ರೇಖೆಯು ಎಷ್ಟೇ ಪ್ರಬಲವಾಗಿದ್ದರೂ ಯಾವ ಸುಖವನ್ನು ಕಾಣಲು ಸಾಧ್ಯವಿದೆ. ಅಂದರೆ ಮೃತ್ಯುದೇವತೆಯ ಸಮೀಪಿಸುತ್ತಿರುವಾಗ ಧನ ರೇಖೆಯು ಬಂದು ಅಭಯ ನೀಡಿದರೆ ನಮಗೆ ಸುಖ ಪ್ರಾಪ್ತಿಯ ಲಭಿಸಿ ಬದುಕಲು ಸಾಧ್ಯವಾಗುವುದಿಲ್ಲ .

ಹಂದೆಯ ಕೈಯಲ್ಲಿ ಚಂದ್ರಾಯುಧವಿದ್ದಲ್ಲಿ ಫಲವೇನು ?

ಅದೇ ರೀತಿಯಾಗಿ ವೀರನ ಕೈಯಲ್ಲಿ ಸುಂದರವಾಗಿ ಶೋಭಿಸುವ ಚಂದ್ರಾಯುಧ ಇದ್ದರೆ ಆತನು ಶತ್ರುಗಳನ್ನು ಎದುರಿಸಿ ಪರಾಕ್ರಮದಿಂದ ಹೋರಾಡಿ ಹೊಡೆದೋಡಿಸುವನು ಆದರೆ ಅದೇ
ಚಂದ್ರಾಯುಧವು ಹೇಡಿಯ ಕೈಯಲ್ಲಿದ್ದರೆ ಯಾವುದೇ

ಪ್ರಯೋಜನವಾಗದೇ ಸಾವನ್ನು ತಂದುಕೊಂಡಂತಾಗುತ್ತದೆ.

ಅಂಧಕನ ಕೈಯಲ್ಲಿ ದರ್ಪಣ ವಿದ್ದು ಫಲವೇನು ?

ಕಣ್ಣುಗಳು ಕಾಣಿಸದ ಕುರುಡನು ತನ್ನ ಮುಖದ ಮುಂದೆ ಕನ್ನಡಿಯನ್ನು ಹಿಡಿದುಕೊಂಡು ನಿಂತಾಗ ತನ್ನ ಪ್ರತಿಬಿಂಬ ಕನ್ನಡಿಯಲ್ಲಿ ಬಿದ್ದರೂ ಅದು ಆತನ ಕಣ್ಣುಗಳಿಗೆ ಕಾಣಿಸದಿದ್ದರೆ ಕುರುಡನಾದವನು ಕೈಯಲ್ಲಿ ಕನ್ನಡಿಯನ್ನು ಹಿಡಿದಿದ್ದರೂ ಯಾವುದೇ ಪ್ರಯೋಜನವಿಲ್ಲ.

ಮರ್ಕಟನ ಕೈಯಲ್ಲಿ ಮಾಣಿಕ್ಯವಿದ್ದು ಫಲವೇನು?

ಮಾಣಿಕ್ಯವು ಅತ್ಯಂತ ಅಮೂಲ್ಯವಾದ ಬೆಲೆಯುಳ್ಳದಾಗಿದೆ.ಕೋತಿಯ ಕೈಯಲ್ಲಿ ಮಾಣಿಕ್ಯವನ್ನು ಕೊಟ್ಟರೆ ಅದಕ್ಕೆ ಆ ಮಾಣಿಕ್ಯದ ಬೆಲೆಯನ್ನು ಅರಿಯಲು ಸಾಧ್ಯವಿಲ್ಲ.ಹಾಗೆಯೇ ಮಾನವ ಜನ್ಮದ ಹಿರಿಮೆಯನ್ನು ಅರಿಯದೇ ಇಂದ್ರೀಯಗಳ ಸುಖದಲ್ಲಿ ಕಾಲಹರಣ ಮಾಡಿದರೆ ನಮ್ಮ ಬದುಕು ವ್ಯರ್ಥವಾದಂತಾಗುತ್ತದೆ.
ಕೂಡಲಸಂಗಮದೇವನೇ ಶಿವಶರಣರ ಮಹಿಮೆಯನ್ನು ಅರಿಯದೇ ಬದುಕುವವರ ಕೈಯಲ್ಲಿ ಶಿವಲಿಂಗವಿದ್ದರೆ ಅವರಿಗೆ ಶಿವಶರಣರ ಹಾಗೂ ಶಿವಲಿಂಗಪೂಜೆಯ ಫಲವು ದೊರೆಯಲಾರದೆಂದು ಈ ವಚನದಲ್ಲಿ ಸ್ಪಷ್ಟಪಡಿಸಿದ್ಧಾರೆ.

ಇದಕ್ಕೆ ಸಮಾನ ವಚನ

ಕತ್ತೆಗೇಕಯ್ಯ ಕಡಿವಾಣ ತೊತ್ತಿಗೆ ತೋಳಬಂದಿಯೇಕಯ್ಯಾ
ಶ್ವಾನಂಗೆ ಆನೆಯ ಚೋಹವೇಕಯ್ಯಾ?
ಹಂದೆಗೇಕೆ ಚಂದ್ರಾಯುಧವಯ್ಯ?
ಶಿವನಿಷ್ಠೆಯಿಲ್ಲದವಂಗೆ
ವಿಭೂತಿ,ರುದ್ರಾಕ್ಷಿ,ಶಿವಮಂತ್ರ ಶಿವಲಿಂಗವೆಂಬ ಶಿವಚೋಹವೇತಕಯ್ಯ ಇವರಿಗೆ
ಮಹಾಲಿಂಗ ಗುರು ಶಿವಸಿದ್ದೇಶ್ವರ ಪ್ರಭುವೇ

ಕುದುರೆಗೆ ಹಾಕಬೇಕಾದ ಕಡಿವಾಣವನ್ನು ಕತ್ತೆಗೆ ಹಾಕಿದರೆ
ಒಡತಿ ಧರಿಸಬೇಕಾದ ತೋಳಬಂದಿಯನ್ನು ದಾಸಿ ಧರಿಸಿದರೆ ಆನೆಗೆ ಹೊದಿಸುವ ಆಸನಾದಿಗಳನ್ನು ನಾಯಿಗೆ ಹೊದಿಸಿದರೆ ಹೇಡಿಯ ಕೈಯಲ್ಲಿ ಚಂದ್ರಾಯುಧವನ್ನು ಕೊಟ್ಟರೆ ಶೋಭಾಯಮಾನವಾಗಿ ಕಾಣಲಾರದು.
ಹಾಗೆಯೇ ಶಿವಭಕ್ತಿ
ಶಿವನಿಷ್ಠೆ ಇಲ್ಲದವರು ವಿಭೂತಿ ರುದ್ರಾಕ್ಷಿ ಶಿವಲಿಂಗವನ್ನು ಧರಿಸಿ ಶಿವಮಂತ್ರ ಪಠಿಸುವುದು ಕೂಡಾ ಶೋಭಿಸದು.ಅಷ್ಟೇ ಅಲ್ಲ ಅದು ನಿಷ್ಪಯೋಜನವೆನಿಸುವುದು.ಎಂಬ ಭಾವ

ಪ್ರೊ -ಸಾವಿತ್ರಿ ಮಹದೇವಪ್ಪ ಕಮಲಾಪೂರ ಮೂಡಲಗಿ

Don`t copy text!