ಸಕಲವನರಿತು ಮರೆದಲ್ಲಿ

ಸಕಲವನರಿತು ಮರೆದಲ್ಲಿ

ಭ್ರಾಂತವಳಿದು ನಿಂದಲ್ಲಿ ಅರ್ಚನೆ
ವಿಕಾರವಳಿದಲ್ಲಿ ಪೂಜೆ
ಸಮತೆ ನಿಂದಲ್ಲಿ ನೈವೇದ್ಯ
ಸಕಲವನರಿತು ಮರೆದಲ್ಲಿ ಪರಿಪೂರ್ಣ
ಏಣಾಂಕಧರ ಸೋಮೇಶ್ವರ ಲಿಂಗದಲ್ಲಿ
                                             -ಬಿಬ್ಬಿ ಬಾಚಯ್ಯ

ಬಿಬ್ಬಿ ಬಾಚಯ್ಯ ಹನ್ನೆರಡನೆಯ ಶತಮಾನದ ಬಸವಕಾಲಿನ ಶ್ರೇಷ್ಟ ವಚನಕಾರ ಶರಣ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗೊಬ್ಬೂರು ಈತನ ಸ್ಥಳ. ಇಲ್ಲಿ ‘ಅರ್ಪಣದ ಕಟ್ಟೆ’ ಎಂಬುದಿದ್ದು, ಇದು ಬಾಚಯ್ಯನ ಗದ್ದುಗೆಯಾಗಿರಬೇಕೆಂದು ಊಹಿಸಲಾಗಿದೆ.

ಭ್ರಾಂತವಳಿದು ನಿಂದಲ್ಲಿ ಅರ್ಚನೆ

ಮನುಷ್ಯನ ಭ್ರಾಂತಿ ಭ್ರಮೆ ವ್ಯಕ್ತಿಯ ಚಿತ್ತವನ್ನು ಹಾಳು ಮಾಡುತ್ತವೆ. ಮನಸ್ಸನ್ನು ದುರ್ಬಲ ಮತ್ತು ಖಿನ್ನತೆಗೆ ಒಳಪಡಿಸುವ ಭ್ರಾಂತಿ ಅಳಿಯದೆ ಅರ್ಚನೆ ಸಾಧ್ಯವಿಲ್ಲ
ಕೇವಲ ಭೌತಿಕ ಅರ್ಚನೆ ಒಂದು ಆಡಂಬರ ಅಷ್ಟೇ
ಮನಸ್ಸಿನ ಕಲ್ಮಶ ಕಳೆಯಬೇಕು
ಎಂಬುದು ಬಿಬ್ಬಿ ಬಾಚಯ್ಯ
ಅವರ ಆಶಯ.

ವಿಕಾರವಳಿದಲ್ಲಿ ಪೂಜೆ
ಮನೋ ವಿಕಾರ ದೇಹ ಚಪಲತೆ
ಇಂದ್ರಿಯ ಬಯಕೆ ಸಂಪೂರ್ಣವಾಗಿ ಅಳಿದಲ್ಲಿ ಭಕ್ತ ತನ್ನನ್ನು ಪೂಜೆಗೆ ಅರ್ಹತೆ ಗಳಿಸಿ ಸಾಧಕನಾಗುವ. ಇಲ್ಲೂ ಕೂಡ ಭೌತಿಕ ಬಾಹ್ಯ ಆಡಂಬರ ಪೂಜೆಯನ್ನು ಧಿಕ್ಕರಿಸಿದ ವಚನಕಾರ ಮನೋವಿಕರ ಇತರ ದೌರ್ಬಲ್ಯ ಇವುಗಳಿಂದ ಮುಕ್ತಿ ಹೊಂದದೆ ಬಾಹ್ಯ ಪೂಜೆಗೆ ಅರ್ಥವಿಲ್ಲ.

ಸಮತೆ ನಿಂದಲ್ಲಿ ನೈವೇದ್ಯ

ಅಸಮಾನತೆ ವರ್ಗ ವರ್ಣ ಲಿಂಗ ಆಶ್ರಮ ಭೇದವಿರುವ ವ್ಯವಸ್ಥೆಯಲ್ಲಿ ನಾವು ದೈವತ್ವ ಹುಡುಕಲು ಹೇಗೆ ಸಾಧ್ಯ? ಸಮತೆ ನಿಂದಲ್ಲಿ ಅಂದರೆ ಸಮಾಜದಲ್ಲಿ ಸಮಾನತೆ ಮತ್ತು ಜಂಗಮ ಪ್ರಜ್ಞೆ ಪ್ರೀತಿ ಸ್ಥಾಪಿತವಾದಲ್ಲಿ ಮಾತ್ರ ಭಕ್ತ ತನ್ನ ಅಂತರಂಗದ ಚೈತನ್ಯಕ್ಕೆ ತೋರುವ ಎಡೆ ಅಥವಾ ನೈವೇದ್ಯ ಪ್ರಸಾದ ಎಂದು ಅತ್ಯಂತ ಮಾರ್ಮಿಕವಾಗಿ ಹೇಳಿದ್ದಾನೆ.

ಸಕಲವನರಿತು ಮರೆದಲ್ಲಿ ಪರಿಪೂರ್ಣ
ಅರ್ಚನೆ ಪೂಜೆ ಇವು ಬಾಹ್ಯ ಕ್ರಿಯೆಗಳಲ್ಲ. ಅವು ಅಂತರಂಗ ಶುದ್ಧೀಕರಿಸುವ ವಿಧಾನ. ಶರಣರ ಉದಾತ್ತಿಕರಣ ಪರಿಕಲ್ಪನೆ ಅಡಿಯಲ್ಲಿ ವಚನಕಾರ ಚಿಂತಿಸಿದ್ದಾನೆ.
ಎಲ್ಲವನ್ನೂ ಅರಿತು ಅರಿಯದಂತೆ ಇರುವ ಭಾವವೇ
ಪರಿ ಪೂರ್ಣ ಸಮಗ್ರತೆ. ಭಕ್ತ ಎಲ್ಲವನ್ನೂ ಅರಿತು ಅರಿಯದಂತೆ ಮರೆತಂತೆ ಇರಬೇಕು. ಬಸವಣ್ಣನವರು ಹೇಳಿದಂತೆ ಮಾಡುವಂತಿರ ಬೇಕು ಮಾಡದಂತಿರ ಬೇಕು ಮಾಡುವ ಮಾಟದೊಳಗೆ ತಾನಿಲ್ಲದಂತೆ ಕೂಡಲ ಸಂಗನ ನೆನೆಯುತ್ತಾ ನೆನೆಯುತ್ತಾ ನೆನೆಯದಂತಿರಬೇಕು. ಇದು ಕ್ರಿಯೆ ಜ್ಞಾನ ಗಾಳಿ ಬೆಳಕು ಹಾಗಿರಬೇಕು.

ಏಣಾಂಕಧರ ಸೋಮೇಶ್ವರ ಲಿಂಗದಲ್ಲಿ

ಭಕ್ತ ತನ್ನ ಅರಿವು ಆಚಾರಗಳನ್ನು ಗಟ್ಟಿಗೊಳಿಸಿ ಅನುಭವದ ನೆಲೆಯಲ್ಲಿ ತನ್ನ ಸಾಮಾಜಿಕ ರಾಜಕೀಯ ಧಾರ್ಮಿಕ ಅಧ್ಯಾತ್ಮಿಕ ನೈತಿಕ ಆರ್ಥಿಕ ವೈಚಾರಿಕ ಚಿಂತನೆಗಳನ್ನು ಪ್ರಚುರಪಡಿಸಿ
ತಾನೇ ಲಿಂಗವಾಗುವ ಅದ್ಭುತ ಕಾರ್ಯ ಲಿಂಗ ತತ್ವ.
ಏಣಾಂಕಧರ ಸೋಮೇಶ್ವರ ಲಿಂಗದಲ್ಲಿ ತಾನು ಒಂದಾಗುವ ತಾನೇ ಲಿಂಗವಾಗುವ ಸರಳ ಸುಂದರ ವಿಚಾರಗಳನ್ನು ಬಿಬ್ಬಿ ಬಾಚಯ್ಯ ವ್ಯಕ್ತ ಪಡಿಸಿದ್ದಾರೆ.

-ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!