ಅಂತಃಕರಣ
ಮನಮನ ಬೆರೆಸಿದಲ್ಲಿ ತನು ಕರಗದಿದ್ದಡೆ
ಸೋಂಕಿನಲ್ಲಿ ಪುಳಕಂಗಳು ಹೊರಹೊಮ್ಮದಿದ್ದಡೆ
ಕಂಡಾಗಳಶ್ರುಜಲಂಗಳು ಸುರಿಯದಿದ್ದಡೆ
ನುಡಿವಲ್ಲಿ ಗದ್ಗದಂಗಳು ಪೊಣ್ಮದಿದ್ದಡೆ
ಕೂಡಲಸಂಗಮದೇವರ ಭಕ್ತಿಗಿದು ಚಿಹ್ನ?
ಎನ್ನಲ್ಲಿ ಇಲ್ಲವಾಗಿ ಆನು ಡಂಬಕಕಾಣಿರೇ !
-ಬಸವಣ್ಣ
ಅಂತಃಕರಣ
ಮನುಷ್ಯ-ಮನುಷ್ಯರ ನಡುವೆ ಹೊರಹೊಮ್ಮಬೇಕಾದ ಮಾನವೀಯತೆ ಹೃದಯ ವೈಶಾಲ್ಯತೆಯು ಗೈರು ಹಾಜರಾದಾಗ ನಮ್ಮ ಭಕ್ತಿಯು ಅರ್ಥಹೀನವಾಗಿ ನಿಷ್ಪಲಗೊಳ್ಳುತ್ತದೆಂದು ತಿಳಿಸಿ ನಿಜವಾದ ಸದ್ಬಕ್ತಿಯ ಸಾರದ ಅರಿವನ್ನು ಮೂಡಿಸುವ ಸಂದರ್ಭವನ್ನು ಈ ವಚನದಲ್ಲಿ ಕಾಣಬಹುದು.
ಮನಮನ ಬೆರೆಸಿದಲ್ಲಿ ತನು ಕರಗದಿದ್ದಡೆ
ಸಮಾಜದಲ್ಲಿರುವ ಪ್ರತಿಯೊಬ್ಬ ಮನುಷ್ಯನ ಮನಸ್ಸು ಮತ್ತೊಬ್ಬರೊಂದಿಗೆ ಕೂಡಿ ಬೆರೆತಾಗ ಕಲ್ಮಶ ಗೊಂಡಿದ್ದ ದೇಹದಲ್ಲಿ ಕೂಡ ಮಾನವೀಯತೆ ಹೃದಯ ವೈಶಾಲ್ಯತೆಯು ಹೊರಹೊಮ್ಮುತ್ತದೆ ಆತನಲ್ಲಿ ಅಡಗಿದ್ದ ಮನೋಭಾವವು ಅಳಿದು ದೇಹವು ತಾನಾಗಿಯೇ ಕರಗುತ್ತದೆ .ಪರಸ್ಪರ ಸಹಾಯ ಸಹಕಾರದಿಂದ ಒಬ್ಬರನ್ನೊಬ್ಬರು ಅರಿಯದೆ ಬದುಕಿದರೆ ಅಂತಹ ಬದುಕು ಇದ್ದರೂ ಅದು ವ್ಯರ್ಥವಾದಂತೆ ಎಂದಿದ್ದಾರೆ
ಸೊಂಕಿನಲ್ಲಿ ಪುಳಕಂಗಳು ಹೊರಹೊಮ್ಮದಿದ್ದಡೆ
ಸುಂದರತೆಯಿಂದ ಆಕರ್ಷಿತವಾಗಿದ್ದ ಯಾವುದನ್ನೇ ಆಗಲಿ ಸ್ಪರ್ಶಿಸಿದಾಗ ಆ ವ್ಯಕ್ತಿಯಲ್ಲಿ ಸ್ಪರ್ಶ ಜ್ಞಾನವಿಲ್ಲದೇ ಪುಳಕಿತನಾಗದಿದ್ದರೆ ಸೌಂದರ್ಯದ ಪ್ರಜ್ಞಾಹೀನತೆಯಿಂದ ಕೂಡಿದ್ದರೆ ಆತನು ಬದುಕಿದ್ದೂ ವ್ಯರ್ಥವಾದಂತೆ ಎನ್ನಲಾಗಿದೆ .
ಕಂಡಾಗಳಶ್ರುಜಲಂಗಳು ಸುರಿಯದಿದ್ದಡೆ
ಯಾವುದೇ ಸಂತೋಷ ದ ವಿಷಯವನ್ನಾಗಲೀ ಇಲ್ಲವೇ ದುಃಖದ ಘಟನೆಗಳನ್ಳಾಗಲೀ ಕೇಳಿದಾಗ ಅಥವಾ ನೋಡಿದಾಗ ಆತನಲ್ಲಿವಿಶಾಲಹೃದಯವಂತಿಕೆಯ ಮನೋಭಾವ ಬೆಳೆಯದೇ ಕರುಣೆ ಯುಂಟಾಗದೇ ಕಣ್ಣೀರನ್ನು ಸುರಿಸದಿದ್ದರೆ ಆತನು ಬದುಕಿದ್ದೂ ಕೂಡಾ ವ್ಯರ್ಥವೆಂದು ಹೇಳಲಾಗಿದೆ.
ನುಡಿವಲ್ಲಿ ಗದ್ಗದಂಗಳು ಪೊಣ್ಮದಿದ್ದಡೆ
ದುಃಖದ ಸಂಗತಿಗಳನ್ನು ಮಾತನಾಡುತ್ತಿರುವಾಗ ನಮ್ಮ ಗಂಟಲು ನೆನೆಯದೇ ಗದ್ಗದಿತ ಕಂಠನಾಗಿ ಕೂಡಿರದಿದ್ದರೆ ಅಂಥವರ ಬದುಕೂ ಕೂಡಾ ವ್ಯರ್ಥವೆಂದು ಹೇಳಲಾಗಿದೆ.
ಕೂಡಲಸಂಗಮದೇವರ ಭಕ್ತಿಗಿದು ಚಿಹ್ನ ?
ಕೂಡಲಸಂಗಮದೇವನನ್ನು ಸದ್ಭಕ್ತಿಯಿಂದ ಪೂಜಿಸಬೇಕಾದರೆ ಪರಿಶುದ್ಧವಾದ ಮನಸ್ಸು .ಸ್ಪರ್ಶ ಜ್ಞಾನದ ಅರಿವು, ಕರುಣೆಯ ಭಾವನೆಗಳನ್ನು ನಾವು ಮೈಗೂಡಿಸಿಕೊಳ್ಳಬೇಕು. ಭಕ್ತಿಯಿಂದ ಆ ಕೂಡಲಸಂಗಮದೇವನನ್ನು ಪೂಜಿಸಲು ಇವೆಲ್ಲವುಗಳೂ ನಮಗೆ ಸಂಕೇತಗಳಿದ್ದಂತೆ ಎಂಬ ಅರಿವನ್ನು ಮೂಡಿಸುತ್ತಿದ್ದಾರೆ
ಎನ್ನಲ್ಲಿ ಇವಿಲ್ಲಾಗಿ ,ಆನು ಡಂಬಕ ಕಾಣಿರೇ ?
.ಇಂಥಹ ಗುಣಗಳನ್ನು ಮೈಗೂಡಿಸಿಕೊಳ್ಳದವನ ಭಕ್ತಿ ಡಾಂಭಿಕತನವಾದಂತಾಗಿ ಆತನ ಭಕ್ತಿಯು ವ್ಯರ್ಥವಾಗುವುದಲ್ಲದೇ ಆ ದೇವರ ಪ್ರೀತಿಗೆ ಪಾತ್ರರಾಗದೇ ಮುಕ್ತಿಯನ್ನು ಹೊಂದಲು ಸಾಧ್ಯವಿಲ್ಲವೆಂದು ಬಸವಣ್ಣನವರು ಭಕ್ತಿ ಮಹಿಮೆಯ ಅರಿವಿನ ಮಹತ್ವವನ್ನು ಇಲ್ಲಿ ಸಾರಿದ್ದಾರೆ.
ಪ್ರೊ -ಸಾವಿತ್ರಿ ಮಹದೇವಪ್ಪ ಕಮಲಾಪೂರ ಮೂಡಲಗಿ