ಹುಟ್ಟು ಸಾವಿನ ನಡುವಿನ ಮದುವೆ: ನನ್ನಿನ್ನ ನಗಿ ನೋಡಿ
ಸಾವು ಎಲ್ಲರಿಗೂ ಅನಿವಾರ್ಯ ಆದರೆ ಯಾರಿಗೂ ಬೇಡ. ಪ್ರತಿಯೊಬ್ಬರೂ ಅಪ್ಪಿ ಒದ್ದಾಡ ಬೇಕಾದ ಸಾವು ಎಲ್ಲರಿಂದಲೂ ಬಹುದೂರ. ಆದರೆ ಸಾವು ನಮ್ಮಿಂದ ಸರಿಯದೇ ನಮ್ಮೊಳಗೆ ಸದಾಕಾಲವೂ ಜೀವಂತ, ಜೀವ ಹೋಗುವ ತನಕ!
ಸಾವು ತನ್ನ ಭೀಕರತೆಯನ್ನು ಆಗಾಗ ನಮಗೆ ಪರಿಚಯಿಸುತ್ತಲೇ ಇರುತ್ತದೆ ಆದರೆ ಅನಿರೀಕ್ಷಿತ ಸಾವುಗಳು ಸಾವಿನ ಅನಿರೀಕ್ಷಿತತೆಯನ್ನು ದೃಢೀಕರಣ ಮಾಡುತ್ತವೆ.
ಎರಡು ದಶಕಗಳ ಗೆಳೆಯ ಡಾ.ನಿಂಗು ಸೊಲಗಿ ರಾಷ್ಟ್ರೀಯ ಪುರಸ್ಕೃತ ಶಿಕ್ಷಕ, ಕವಿ ಮತ್ತು ರಂಗತಜ್ಞ. ಅವರ ಶ್ರೀಮತಿ ಕಲಾವತಿ ಸೊಲಗಿ ಕೂಡ ಶಿಕ್ಷಕಿ ಮತ್ತು ಸಾಹಿತಿ. ಇವರ ದಾಂಪತ್ಯ ಇಡೀ ರಾಜ್ಯಕ್ಕೆ ಮಾದರಿಯಾಗಲು ಇವರ ಕೂಡು ಕುಟುಂಬದ ಪ್ರೇಮವೂ ಕಾರಣ. ಗ್ರಾಮೀಣ ಸೊಗಡಿನ ದಂಪತಿಗಳು, ತಮ್ಮ ನಂತರದ ಬಂಧುಗಳ ಯುವಕರಿಗೆ ಅಕ್ಷರದ ಅರಿವು ಮೂಡಿಸಿದರು. ಇಡೀ ಕುಟುಂಬಕ್ಕೆ ಶಿಕ್ಷಣ ನೀಡಿದ ಕಾರಣದಿಂದ ‘ನಿಂಗು’ ಸಾಲಿ ಅಣ್ಣನಾದದ್ದು ವಿಶೇಷ. ಮೂರು ದಶಕದ ಸುಂದರ ದಾಂಪತ್ಯದ ಕುಡಿಗಳಾದ ಚೇತನ್ ಮತ್ತು ವಿಶ್ವಾಸ್ ಈಗ ಅವರ ಪಾಲಕರಂತೆ ಬಹುದೊಡ್ಡ ಸೆಲೆಬ್ರಿಟಿಗಳು.
ಜೀ ವಾಹಿನಿಯ ಕಲಾವಿದ ಜರ್ನಲಿಸಂ ಹಿನ್ನೆಲೆಯ ಚೇತನ್ ಬಹುಬೇಡಿಕೆಯ ವಾಯ್ಸ್ ಓವರ್ ಕಲಾವಿದ ಮತ್ತು ತಂತ್ರಜ್ಞ. ವಿಶ್ವಾಸ್ ಕೂಡ ಶಿಕ್ಷಣ ಕ್ಷೇತ್ರದ ಸಾಫ್ಟ್‌ವೇರ್ ಉದ್ಯೋಗಿ. ಇನ್ನೇನು ದೊಡ್ಡ ಮಗನ ಮದುವೆ ಹೂಡಿ ಸ್ವರ್ಗಕ್ಕೆ ಕಿಚ್ಚು ಹಚ್ಚಲಿದ್ದ ಡಾ.ನಿಂಗು, ಯಾರೂ ಊಹಿಸದ ರೀತಿಯಲ್ಲಿ ಶ್ರೀಮತಿ ಕಲಾವತಿ ಅವರನ್ನು ಕಳೆದುಕೊಂಡಾಗ ಹೇಗಾಗಿರಬೇಡ?!
ಸಾವಿನ ಬಗ್ಗೆ ನನಗೆ ಅದೇನೋ ವ್ಯಾಮೋಹ ಹುಟ್ಟಿದ ಹೊತ್ತಿನಲ್ಲಿ ಸೊಲಗಿ ಅವರ ಶ್ರೀಮತಿ ಹೋದ ಸುದ್ದಿ ತಿಳಿದು ಅಕ್ಷರಶಃ ನಲುಗಿ ಹೋದೆ. ಒಂದು ವಾರ ಅದೇ ಗುಂಗಿನಲ್ಲಿ ತಲ್ಲಣಿಸಿದೆ. ಅಂದು ನಿಂಗು ಅವರ ಸ್ಥಿತಿ ನೋಡಿ ಮನಸು ಕುದ್ದು ಹೋಗಿತ್ತು.
ಎಲ್ಲಾ ನೋವುಗಳ ಉಡಿಯಲ್ಲಿ ತುಂಬಿಕೊಂಡು ಗೆಳೆಯ ಡಾ.ನಿಂಗು ಸೊಲಗಿ ‘ ನನ್ನಿನ್ನ ನಗಿ ನೋಡಿ’ ಎಂಬ ವಿಶಿಷ್ಟ ಪುಸ್ತಿಕೆಯನ್ನು ಮಗ ಚೇತನ್ ಮದುವೆಯ ತಾಂಬೂಲದ ಉಡುಗೊರೆಯಾಗಿ ನೀಡಿದ್ದಾರೆ. ಹೆಂಡತಿಯನ್ನು ಕಳೆದುಕೊಂಡ ಕೆಲವೇ ದಿನಗಳಲ್ಲಿ ಅನಿವಾರ್ಯವಾಗಿ, ಶ್ರೀಮತಿ ಕಲಾವತಿ ಅವರ ಇಚ್ಚೆಯಂತೆ ಮದುವೆ ಮಾಡುವಾಗಲೂ ತಮ್ಮ ಸೃಜನಶೀಲತೆಯ ಆದರ್ಶ ತೋರಿದ್ದಾರೆ. ಮಂತ್ರ ಘೋಷಗಳ ಹಂಗ ಹರಿದು, ಪ್ರಮಾಣ ವಚನ ಮತ್ತು ವಚನ ಸಂಗೀತದಲಿ ಜೋಡಿಯಾಗಿಸಿದ್ದಾರೆ. ಮದುವೆ ಮುಗಿಸಿ ಬಂದ ಕೂಡಲೇ ಒಂದೇ ಓದಿಗೆ ಪುಸ್ತಕ ಮುಗಿಸಿ ಕೆಲ ಕ್ಷಣ ಮೌನವಾದೆ.
ವಿಧಿಯಾಟವೇ ವಿಚಿತ್ರ, ಮದುವೆ ಸಂದರ್ಭದಲ್ಲಿ, ನಿಂಗು, ಕಲಾವತಿ ಅವರಿಗೆ ಬರೆದ ಪ್ರೇಮ ಪತ್ರಗಳ ಸಂಗ್ರಹದ ಪುಸ್ತಕ ಕೊಡಬೇಕೆಂದು ಇಡೀ ಪರಿವಾರ ಯೋಚನೆ ಮಾಡಿದೆ. ಆದರೆ ಪುಸ್ತಕ ಮುಗಿಯುವ ಮೊದಲೇ ಪ್ರೇಮ ಪತ್ರಗಳ ಬರೆಸಿಕೊಂಡ ನಾಯಕಿಯ ದಾರುಣ ಅಂತ್ಯ ಕರುಳು ಕಿವುಚುತ್ತದೆ. ಪ್ರೇಮ ಪತ್ರಗಳಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಕೌಟುಂಬಿಕ ಸೂಕ್ಷ್ಮ ವಿಷಯಗಳ ಸುದೀರ್ಘ ಚರ್ಚೆ ಇರುವುದು ನಿಂಗು ಅವರ ಸಾಮಾಜಿಕ ಕಳಕಳಿಗೆ ಸಾಕ್ಷಿ.
‘ರಾಣಿ’ , ‘ಚಿನ್ನಾ’ ಎಂಬ ಆಪ್ತ ಒಲವಧಾರೆ, ಅಲ್ಲಲ್ಲಿ ಇಣುಕುವ ರಸಭರಿತ ಕವಿತೆಗಳು, ಕುಟುಂಬ ವ್ಯವಸ್ಥೆಯ ಸಹಜತೆ, ಕಲಾವತಿ ಅವರ ಮುಗ್ಧತೆ ಕಣ್ಣ ಮುಂದೆ ಹರಿಯುತ್ತದೆ. ಆದರೆ ನಿಂಗು ಕೊನೆಯ ಅಧ್ಯಾಯ ಬರೆಯುವಾಗ ನಲುಗಿ ಹೋಗಿದ್ದಾರೆ, ಸಂಕಟದ ಆರ್ದ್ರ ಭಾವ ಭೋರ್ಗರೆಯುತ್ತದೆ.
ಇಬ್ಬರೂ ಜೊತೆಯಾಗಿ ನಿಂತು ಮದುವೆ ಕಾಣಿಕೆ ನೀಡುವ ಸಂಕಲ್ಪ ಮಾಡಿದ್ದರು, ಆದರೆ ಮದುವೆ ಹೊತ್ತಿಗೆ ದೈಹಿಕವಾಗಿ ಅಗಲಿದ ಕಲಾವತಿ ಅವರು ಅಕ್ಷರದ ಮಹಾರಾಣಿಯಾಗಿ ಅಜರಾಮರವಾಗಿದ್ದಾರೆ.
ಪುಸ್ತಕದ ಶಕ್ತಿಯೇ ಹಾಗೆ ಅಗಲಿದವರನ್ನು ಅಮರಗೊಳಿಸುತ್ತದೆ. ಪ್ರೀತಿ, ವಿಶ್ವಾಸ, ಸ್ನೇಹ, ಮಕ್ಕಳು, ಶಿಕ್ಷಣ, ಸಂಸ್ಕೃತಿ ಮತ್ತು ಕಾವ್ಯಧಾರೆ ಈ ಕೃತಿಯ ಜೀವಾಳ. ಇಬ್ಬರೂ ಒಂದೇ ಕ್ಷೇತ್ರದಲ್ಲಿ ಇದ್ದ ಕಾರಣರಿಂದ, ಪರಸ್ಪರ ಹೊಂದಾಣಿಕೆ ಸಾಧ್ಯವಾಗಿ ಡಾ.ನಿಂಗು ಹೆಚ್ಚು ಕೆಲಸ ಮಾಡಲು ಕಾರಣವಾಯಿತು. ಮಕ್ಕಳು ಕೂಡ ಇವರ ನಿರೀಕ್ಷೆ ಮೀರಿ ಸಾಧನೆ ಮಾಡಿದ್ದಾರೆ ಎಂಬುದಕ್ಕೆ ಇಲ್ಲಿ ದಾಖಲಿಸಿರುವ ಅಕ್ಷರಗಳೇ ಸಾಕ್ಷಿ.
ನುಡಿನಮನ, ಪುಸ್ತಕ ಲೋಕಾರ್ಪಣೆ ಮತ್ತು ದಾಂಪತ್ಯ ಪ್ರಮಾಣ ವಚನ ಬೋಧನೆಯಂತಹ ಸರಳ ಸಮಾರಂಭದಲ್ಲಿ ಸಾವಿರಾರು ಜನರ ಮಧ್ಯೆ ಶ್ರೀಮತಿ ಕಲಾವತಿ ಅವರ ಸೂಕ್ಷ್ಮ ಶರೀರವೂ ಸಾಕ್ಷಿಯಾದಂತೆ ಭಾಸವಾಯಿತು. ಅಮ್ಮನ ಅಗಲಿಕೆಯ ನೋವಿನ ಮಧ್ಯೆ ನೂತನ ಜೋಡಿಗೆ ಹೊಸ ಲೋಕ ಪ್ರವೇಶಿಸುವ ಅನಿವಾರ್ಯತೆ.
‘ಮದುವೆಗೆ ಮಸಣಕೋ ಹೋಗೆಂದ ಕಡೆಗೆ ಓಡು ಮಂಕುತಿಮ್ಮ’ ಎಂಬಂತೆ ಓಡುವಾಗ ನಮಗೂ ಒಂದು ಕ್ಷಣ ಬೇಸರವಾಯಿತು. ತುಂಬಾ ಭಾವಪೂರ್ಣ ಪುಸ್ತಿಕೆಯ ಈ ನುಡಿ ತಾಂಬೂಲ ಓದಿ, ಎದೆಯ ಗೂಡಲಿ ಕಾಪಿಟ್ಟುಕೊಳ್ಳುವಂತಿದೆ.
ಪ್ರೇಮ ಪತ್ರಗಳ ಯುಗ ಈಗ ಮುಗಿದು, ಚಾಟಿಂಗ್, ಡೇಟಿಂಗ್ ಫೈಜಿ ಯುಗದ ಯುವಕರಿಗೆ ಇದೊಂದು ಸುಂದರ ಪ್ರೇಮಕಾವ್ಯ. ನನ್ನಂತವರಿಗೆ ಮಧುರ ನೆನಪುಗಳ ಧಾಂಗುಡಿ.
ಜೀ ವಾಹಿನಿಯ ಜಾಹೀರಾತು ಮತ್ತು ಪ್ರೊಮೋಗಾಗಿ ವಿಚಿತ್ರ ಧ್ವನಿ ಹೊಮ್ಮಿದಾಗಲೆಲ್ಲ, ‘ ಅರೆ ಇದು ನಮ್ಮ ಸೊಲಗಿ ಮಗನ ಧ್ವನಿ’ ಎಂದು ಸುತ್ತಲಿದ್ದವರಿಗೆ ಹೇಳಿ ಖುಷಿ ಪಡುತ್ತಿದ್ದೆ. ಒಂದರ್ಥದಲ್ಲಿ ಅಪ್ಪನನ್ನು ಮೀರಿ ಬೆಳೆದ ಮಗ ಎಂಬ ಹೆಮ್ಮೆ. ಪತ್ರಕರ್ತ ಮಿತ್ರ ಶಿವಕುಮಾರ ಕುಷ್ಟಗಿ ವೇದಿಕೆ ಮೇಲೆ ಸಿಕ್ಕಾಗಲೆಲ್ಲ, ಮತ್ತೆ ಮತ್ತೆ ಸೊಲಗಿ ಬಂಧುಗಳ ಪ್ರತಿಭೆಯನ್ನು ಮೆಲುಕು ಹಾಕಿ ಖುಷಿ ಪಡುತ್ತಿದ್ದೆ. ತೀರಾ ಇತ್ತೀಚೆಗೆ ಮುಂಡರಗಿ ತೋಂಟದಾರ್ಯ ಮಠದ ಕಾರ್ಯಕ್ರಮದಲ್ಲಿ ದಂಪತಿಗಳು ಭೇಟಿಯಾಗಿ ಮಗನ ಮದುವೆ ವಿಷಯ ಹಂಚಿಕೊಂಡಿದ್ದರು. ಚೇತನ್ ಬೆಳವಣಿಗೆ ಮತ್ತವನ ಸರಳತೆ ಕುರಿತು ಮಾತನಾಡಿದ್ದೆ.
ಈಗ ಅವರ ಕುಟುಂಬದ ಸದಸ್ಯರು ಕಳೆದುಕೊಂಡ ಮಗಳು, ತಾಯಿ, ತಂಗಿ, ಅತ್ತೆ, ಅಕ್ಕನ ಜೊತೆಗೆ ಕಳೆದ ವಿವಿಧ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಸಿನೆಮಾ ರಂಗದ ಸುದ್ದಿ ಮತ್ತು ಕೃತಿಗಳ ಮೂಲಕ ಹೆಸರು ಮಾಡಿರುವ ಸೃಜನಶೀಲ ಬರಹಗಾರ ಡಾ.ಶರಣು ಹುಲ್ಲೂರ ಕಾಯಕ ಪ್ರಕಾಶನದ ಮೂಲಕ ಪ್ರಕಟಿಸಿದ್ದಾರೆ.
ದಾಂಪತ್ಯಕ್ಕೆ ಕಾಲಿಡುತ್ತಿರುವ ಚೇತನ್ ಮತ್ತು ಗೀತಾ ದಂಪತಿಗಳು ಅಮ್ಮ ನಂಬಿದ್ದ ಮೌಲ್ಯಗಳನ್ನು ಬಿತ್ತಿ ಬೆಳೆಯಲಿ ಎಂದು ಹಾರೈಸುತ್ತೇನೆ.
ಪ್ರೊ.ಸಿದ್ದು ಯಾಪಲಪರವಿ ಕಾರಟಗಿ.
9448358040