ಜಗವ ಸುತ್ತಿಪ್ಪುದು ನಿನ್ನ ಮಾಯೆಯಯ್ಯ
ಜಗವ ಸುತ್ತಿಪ್ಪುದು ನಿನ್ನ ಮಾಯೆಯಯ್ಯ
ನಿನ್ನ ಸುತ್ತಿಪ್ಪುದು ಎನ್ನ ಮನ ನೋಡಯ್ಯ
ಜಗಕೆ ಬಲ್ಲಿದ ನೀನು
ನಿನಗೆ ಬಲ್ಲಿದ ನಾನು ಕಂಡಯ್ಯ
ಜಗವು ನಿನ್ನೊಳಗೆ ನೀನು ನನ್ನೊಳಗೆ
ಕರಿಯು ಕನ್ನಡಿಯೊಳಡಗಿದಂತಯ್ಯ
ನೀನೆನ್ನೊಳಗಿದೆ
ಕೂಡಲಸಂಗಮ ದೇವ
ಈ ವಚನವು ಜಗತ್ತಿನಲ್ಲಿ ಯಾರು ಸಣ್ಣವರಲ್ಲ ದೊಡ್ಡವರಲ್ಲ. ಎನ್ನುವ ಭಾವ. ಭಕ್ತ ದೇವರಿಗಿಂತ ದೊಡ್ಡವ ಎನ್ನುವ ಆಶಯ ಭಾವ . ಒಂದು ದೊಡ್ಡದಾದ ಕಲ್ಲಿನ ಬಂಡೆಯನ್ನು ಒಂದು ಚಿಕ್ಕ ಉಳಿಯು ಒಡೆಯುತ್ತದೆ ಅದಕ್ಕೆ ದೊಡ್ಡದಾದ ಆನೆಯನ್ನು ತಂದು ಅದರ ಮೇಲೆ ನಿಲ್ಹಿಸಿದರೆ ಆ ಬಂಡೆ ಸೀಳಲಾರದು .ಹಾಗೆಯೇ ದೊಡ್ಡದಾದ ಭಾರವೆತ್ತಲು ಒಂದು ಚಿಕ್ಕ ಮರದ ಕೋಲು ಸಹಾಯಕ .ದೊಡ್ಡದಾದ ಮರದ ದಿಮ್ಮಿಯಿಂದ ಅಲ್ಲ.
ಈ ಗಿಡ ಮರ ಬಳ್ಳಿ ಪ್ರಾಣಿ ಪಕ್ಷಿಗಳ ಬದುಕು ದೇವರ ಮಾಯೆ ಆತನೇ ಆಹಾರ ವಿತ್ತು ಸಾಕಿ ಸಲಹುವನು. ಇದೆಲ್ಲ ಆ ಭಗವಂತನ ಮಾಯೆ ಈ ಮಾಯೆಯೇ ನನ್ನಲ್ಲೇ ಅಡಗಿದೆ ಎನ್ನುವ ಭಾವ ಈ ವಚನದಲ್ಲಿ ಮೂಡಿ ಬಂದಿದೆ…
ಜಗವು ಸುತ್ತಿಪುದು ನಿನ್ನ ಮಾಯೆಯಯ್ಯ
ಈ ಜಗತ್ತು ನಿಂತಿರುವುದೇ ಶಿವನ ಮಾಯೆಯಿಂದ ಜಗತ್ತಿನಲ್ಲಿ ಆಗು ಹೋಗುಗಳಿಗೆ ಆತನೇ ಕಾರಣ. ನಾವು ಕೇವಲ ನಿಮಿತ್ಯ ಮಾತ್ರ.
ನಿನ್ನ ಸುತ್ತಿಪ್ಪುದು ಎನ್ನ ಮನ ನೋಡಯ್ಯ
ಶಿವಶಕ್ತಿಯು ವಿಶ್ವವನ್ನೇ ವ್ಯಾಪಿಸಿಕೊಂಡರೂ ಶಿವನನ್ನೇ ತನ್ನ ಅಂತರಂಗದಲ್ಲಿ ಭಕ್ತನಾದವನು ಅಡಗಿಸಿಕೊಂಡಿರುವನು. ಧ್ಯಾನ ಮತ್ತು ಕೌಶಲದಿಂದ ಇಡೀ ಬ್ರಹ್ಮಾಂಡವು ನಿನ್ನನ್ನೇ ಸುತ್ತುವರೆದಿದೆ ಆದರೆ ಆ ಬ್ರಹ್ಮಾಂಡವೇ ನನ್ನ ಮನವನ್ನು ಸುತ್ತುತ್ತಿದೆ ಎನ್ನುವ ಭಾವ ಬಸವಣ್ಣನವರದು.
ಜಗಕೆ ಬಲ್ಲಿದ ನೀನು
ನಿನಗೆ ಬಲ್ಲಿದ ನಾನು ಕಂಡಯ್ಯ
ಇಡೀ ಜಗತ್ತವು ನೀನು ಏನು ಎನ್ನುವುದನ್ನು ಗುರುತಿಸಿದೆ .ನಿನ್ನ ಮಹಿಮೆಯನ್ನು ನಿನ್ನ ಶಕ್ತಿಯನ್ನು ಆದರೆ ಆ ಮಹಿಮೆ ಆ ಶಕ್ತಿಯನ್ನು ನನ್ನಲ್ಲೇ ಅಡಗಿಸಿಕೊಂಡಿರುವೆನು.
ಹೀಗಾಗಿ ನಿನಗೆ ಬಲ್ಲಿದ ನಾನಾಗಿರುವೆ ಎಂದು ಬಸವಣ್ಣನವರು ಹೇಳುತ್ತಾರೆ.
ಜಗವು ನಿನ್ನೊಳಗೆ ನೀನು ನನ್ನೊಳಗೆ ಕರಿಯು ಕನ್ನಡಿಯೊಳಡಗಿದಂತಯ್ಯ
ಇದನ್ನು ಕುರಿತು ಕ್ಷಣ ಮಾತ್ರ ವಾದರೂ ಸರಿಯೇ ಆಲೋಚಿಸಿದವರಿಗೆ ಅಚ್ಚರಿ ಎನಿಸದಿರದು .ಶಾಂತವು ಅನಂತದಲ್ಲಿ ಅಡಗುವುದೇನೂ ಅದ್ಭುತವಲ್ಲ. ಆದರೆ ಶಾಂತವು
ಅನಂತವನ್ನು ತನ್ನಲ್ಲಿ ಅಡಗಿಸಿಕೊಳ್ಳುವುದು ಇದೆಯಲ್ಲಾ ಅದು ಮಹಾನ್ನ ಅದ್ಭುತ !ಶಾಂತನಾದ ಜೀವನಿಗೆ ಈ ಮಹದದ್ಭುತ ಸಾಮರ್ಥ್ಯ ಸಾಧ್ಯವಾದದು ಆ ಶಿವ ಧ್ಯಾನದಿಂದಲೇ ಎಂದು ಹೇಳುವರು ಬಸವಣ್ಣನವರು.
ಹಾಗೆ ಹೇಳುವಲ್ಲಿ ಅವರು ತಮಗೆ ಸಹಜವಾದ ವೀರ ಶೈಲಿಯಲ್ಲಿ “ದೇವರೇ ನೀನು ಜಗದ್ವ್ಯಾಪಿ ಇರಬಹುದು ನಾನು ನಿನಗಿಂತಲೂ ವ್ಯಾಪಕ .ನಿನ್ನನ್ನೇ ನನ್ನ ಹೃದಯ ಕಮಲದಲ್ಲಿ ಸೆರೆಹಿಡಿದಿರುವೆನಲ್ಲಾ ” ಎಂದು ಹೇಳಿಬರುವರು
ಆನೆಯ ಬಿಂಬ ಎಷ್ಟೇ ದೊಡ್ಡದಾದರೂ ಅದನ್ನು ಪ್ರತಿಬಿಂಬ ಸೂತ್ತದಿಂದ ಗ್ರಹಿಸುವ ಕನ್ನಡಿಯ
ಪ್ರತಿಭೆಯ ನಿದರ್ಶನವನ್ನು ಕೊಟ್ಟಿರುವರು. ಅಂದರೆ ದೇವರು ದೊಡ್ಡವನಿದ್ದರೂ ಶರಣ ಕುಬ್ಜನಲ್ಲ ಎಂಬುದನ್ನಿಲ್ಲಿ ವಿಷದಪಡಿಸಿದ್ದಾರೆ.
ನೀನೆನ್ನೊಳಗಿದೆ ಕೂಡಲ ಸಂಗಮ ದೇವಾ
ಅಖಂಡ ಕೋಟಿ ಜೀವರಾಶಿ ಬ್ರಹ್ಮಾಂಡಕ್ಕೆ ಒಡೆಯನಾದ ಶಿವನನ್ನೇ ನನ್ನ ಕರಸ್ಸಲದಲ್ಲಿ ಇಟ್ಟುಕೊಂಡಿರುವೆ .ಆ ಭಗವಂತ ಇಡೀ ಜೀವರಾಶಿಯೊಳಗೆ ಇದ್ದರೂ ಕೂಡಾ ಅಂತಹ ಭಗವಂತ ನನ್ನಲ್ಲೇ ಅವ್ಯಕ್ತನಾಗಿರುವನು. ಹೊರಗಿನ ಜಗತ್ತಿಗೆ ಆ ಭಗವಂತನೇ ಆಧಾರ ದಿಕ್ಕು ಇಂಥಹ ಭಗವಂತ ನನ್ನಲ್ಲಿ ನನ್ನ ಮನದಲ್ಲಿ ನನ್ನ ಚಿಕ್ಕ ಹೃದಯದಲ್ಲಿ ಐಕ್ಯವಾಗಿರುವನು. ಎನ್ನುವ ಭಾವವನ್ನು ಬಸವಣ್ಣನವರು ವ್ಯಕ್ತಪಡಿಸಿರುವರು..
ಇಂಥಹ ಭಗವಂತನ ಶಕ್ತಿ ಚೈತನ್ಯ ಎಲ್ಲವೂ ನಮ್ಮ ನಮ್ಮ ಮನಸ್ಸಿನಲ್ಲಿಯೇ ಇದೆ ನಮ್ಮ ನಮ್ಮ ಹೃದಯದಲ್ಲಿಯೇ ಇದೆ ಇಲ್ಲಿ ಯಾರೂ ದೊಡ್ಡವರಲ್ಲ ಮತ್ತು ಚಿಕ್ಕ ವರಲ್ಲ .
ಹೀಗಾಗಿ ಬಸವಣ್ಣನವರು ಎಲ್ಲವನ್ನು ಸಮಾನವಾಗಿ ಕಂಡ ಆಶಯ ಭಾವ ಈ ಒಂದು ವಚನದಲ್ಲಿ ಕಂಡು ಬರುತ್ತದೆ.
–ಸಾವಿತ್ರಿ ಕಮಲಾಪೂರ ಮೂಡಲಗಿ