ಕೊರೊನಾ ಕನಸು ಮತ್ತು ಅಂಬೇಡ್ಕರ್!!!
(ಅನುಭವ ಕಥನ)
“ಡಾಕ್ಟರ್ ಐ.ಸಿ.ಯು. ವಾರ್ಡ್ ಗೆ ವಿಜಿ಼ಟ್ ಗಾಗಿ ಬರುತ್ತಿದ್ದಾರೆ ” ಎಂದು ಆಗುಂತಕ ಕೂಗೊಂದು ಬಾಗಿಲಿನಾಚೆಯಿಂದ ಬಂದಪ್ಪಳಿಸಿತು. ಸನಾ ಅರೇ ಪ್ರಜ್ಞಾವಸ್ಥೆಯಲ್ಲಿದ್ದಳು. ಇದನ್ನು ಕೇಳಿಸಿಕೊಂಡಾಕ್ಷಣ ಸ್ವಲ್ಪ ಸುಧಾರಿಸಿಕೊಂಡು ಕುಳಿತಳು. ಶತ್ರು ಪಕ್ಷದ ಕಿತಾಪತಿಯಿಂದ ಸಾಮ್ರಾಜ್ಯಕ್ಕೇನಾದರೂ ಅನಾಹುತವಾಗುವಂತಿದ್ದಾಗ ಹಿರಿಯ ಮಂತ್ರಿಯೊಂದಿಗೆ ಸಿಪಾಯಿಗಳು ದೌಡಾಯಿಸಿ ಬರುವಂತೆ ಹಿರಿಯ ಡಾಕ್ಟರ್ ಹಾಗೂ ಅವರ ಸಹಚರರ ಗುಂಪು ರೂಮಿನೊಳಗೆ ನುಗ್ಗಿತು. ಅವರು ಬರುವ ರಭಸಕ್ಕೆ ಸನಾಳ ಎದೆಬಡಿತ, ಆಕ್ಸಿಜನ್ ರೀಡಿಂಗ್ ಸ್ಕ್ರೀನಿನ ಮೇಲೆ ರೆಡ್ ಲೈಟ್ ಮಿಟುಕುವ ಗತಿ, ಸ್ಯಾಚುರೇಷನ್ ಲೆವೆಲ್ ಹಾಗೂ ಟಿನ್ ಟಿನ್ ಶಬ್ದ ಒಂದೇ ಸಮನೆ ಹೆಚ್ಚಾಗತೊಡಗಿತು. ರೂಮಿನೊಳಗೆ ಬಂದ ಆ ಗುಂಪು ಅಕ್ಕ ಪಕ್ಕದ ಪೇಷಂಟ್ ಗಳ ಆರೋಗ್ಯದ ಸ್ಥಿತಿಗತಿಯನ್ನು ವಿಚಾರಿಸಲಾರಂಭಿಸಿತು. ಸನಾಳ ಪಕ್ಕದಲ್ಲೊಬ್ಬ ಅಜ್ಜಿ ಇದ್ದರು. ಆ ಗುಂಪು ಅವರತ್ತ ಬಂದೊಡನೇ “ ವಸಂತ ಕುಮಾರಿ ಕಣ್ಣು ತೆರೆಯಿರಿ’ ವಸಂತ ಕುಮಾರಿ ಕಣ್ಣು ತೆರೆಯಿರಿ’ ಮಾತನಾಡಿ ನಾವೆಲ್ಲಾ ನಿಮ್ಮನ್ನು ನೋಡಲು ಬಂದಿದ್ದೇವೆ” ಎಂದು ಚೀರಿ ಚೀರಿ ಬೆಡ್ ಮೇಲೆ ಹೊಡೆಯುತ್ತಿದ್ದರೆ, ಆ ಕೂಗಾಟ ಮತ್ತು ಹೊಡೆತಕ್ಕೆ ಗಾಬರಿಕೊಳ್ಳುತ್ತಿದ್ದ ಸನಾಳಿಗೆ ಸ್ಮಶಾನ ಯಾತ್ರೆ ನಿಶ್ಚಿತ ಎಂಬಂತೆ ಭಾಸವಾಗುತ್ತಿತ್ತು. ಅಷ್ಟಾದರೂ ಸನಾ ಕಷ್ಟ ಪಟ್ಟು ತೂರುನಳಿಗೆಗಳ ಸೂಜಿ ಚುಚ್ಚಿ ಚುಚ್ಚಿ ಆದ ಗಾಯಭರಿತ ಕೈಗಳನ್ನು ಎತ್ತಿ ಕಣ್ ಒರೆಸಿಕೊಂಡು ಕೂತಳು. ಹಿರಿಯ ಡಾಕ್ಟರ್ ಎದುರಿಗೆ ಬಂದು ನಿಂತರು “ ಈಗ ಹೇಗಿದ್ದೀರಮ್ಮ?? ತುಂಬಾ ಸೊರಗಿದ್ದೀರಿ ಆ ತುಟಿಗಳೇಕೆ ಹಾಗಾಗಿದ್ದಾವೆ? ಏನು ತೊಂದರೆ” ಎಂದು ಕೇಳಿದರು. ಸನಾ ವಾಯುವಾತ ಮಾಸ್ಕ್ ಒಳಗಿನಿಂದ ಏನೋ ಹೇಳಲು ಪ್ರಯತ್ನಿಸುತ್ತಿದ್ದಂತೆಯೇ ಡಾಕ್ಟರ್ ಹಾಗೂ ಅವರೊಟ್ಟಿಗಿದ್ದ ಗುಂಪು ಸ್ವಲ್ಪ ದೂರ ಸರಿದು, “ಈ ಪೇಷಂಟ್ ಉಳಿಯುವ ಭರವಸೆ ಕಾಣುತ್ತಿಲ್ಲ, ಆರೋಗ್ಯದಲ್ಲಿ ಯಾವ ಸುಧಾರಣೆಯೂ ಆಗುತ್ತಿಲ್ಲ, ಇವರಿಗೆ ಇಟ್ಟುಕೊಳ್ಳುವುದೂ ಒಂದೇ ಬೇರೆಡೆಗೆ ಕಳುಹಿಸುವುದೂ ಒಂದೇ” ಎಂದು ಅವರೆಲ್ಲಾ ಮಾತಾಡುತ್ತಿದ್ದರು. ಅಷ್ಟರಲ್ಲಿ ಡಾಕ್ಟರ್ “ಈಗ ಏನಾದರೂ ಸಮಸ್ಯೆ ಇದೆಯೇ” ಎಂದು ಸನಾಳ ಹತ್ತಿರ ಬಂದು ಕೇಳಿದರು. ಆಗ ಸನಾ ಕೈ ಸನ್ನೆಯಿಂದಲೇ ಏನೋ ಹೇಳಲು ಪ್ರಯತ್ನಿಸಿದಳು. ಆದರೆ ಡಾಕ್ಟರ್ ಮಾತ್ರ ತಲೆ ಅಲ್ಲಾಡಿಸಿ “ನೋಡಿ ಸನಾ ನೀವು ತುಂಬಾ ಸಂಘರ್ಷ ಮಾಡುತ್ತಿದ್ದೀರಿ, ಈಗ ನೀವು ಇನ್ನೂ ಸ್ವಲ್ಪ ಸಂಘರ್ಷ ಮಾಡಲೇಬೇಕು, ಆಗ ಮಾತ್ರ ಏನಾದರೂ ಫಲ ಸಿಗುವುದು, ನಿಮ್ಮ ಮನೆಯವರ್ಯಾರಾದರೂ ಬಂದು ನಿಮಗೆ ಬೇರೆಡೆ ಕರೆದುಕೊಂಡು ಹೋಗುವಂತಿದ್ದರೆ ಹೋಗಿ ಬಿಡಿ, ನಮ್ಮಿಂದಾಗುವ ಎಲ್ಲಾ ಪ್ರಯತ್ನ ನಾವು ಮಾಡುತ್ತಿದ್ದೇವೆ” ಎಂದರು. ಸನಾಳಿಗೆ ಇವೆಲ್ಲಾ ಏನು ಅರಿವಾಗಲಿಲ್ಲ. ಅವಳ ಪರಿಸ್ಥಿತಿ ನೋಡಿಯೂ ಸುಧಾರಿಸಿಕೊಳ್ಳದ ಕಾಯದ ಕರ್ಣಗಳಲ್ಲಿ “ಈಗ ನೀವು ಇನ್ನೂ ಸಂಘರ್ಷ ಮಾಡಲೇಬೇಕು” ಎಂಬ ವಾಕ್ಯ ಮಾತ್ರ ಪ್ರತಿಧ್ವನಿಸುತ್ತಿತ್ತು. ಎಲ್ಲರೂ ರೂಮಿನಿಂದ ಹೊರಕ್ಕೆ ಹೋದರು. ಅಲ್ಲಿ ಕುಳಿತಿದ್ದ ನರ್ಸ್ “ಅಯ್ಯೋ ಈ ಬಾರಿ ಬಂದ ಪೇಷಂಟ್ ಗಳ ಗೋಳು ಬೇರೆಯೇ ಆರೋಗ್ಯ ಸುಧಾರಿಸಿಕೊಂಡು ಮನೆಗೆ ಹೋಗುವ ಭಾಗ್ಯವೇ ಇಲ್ಲ. ತಿಂದು ಇಲ್ಲಿಂದಲೇ ಮೇಲಕ್ಕೆ ಹೋಗುತ್ತಿದ್ದಾರೆ” ಎಂದು ಗೊಣಗಿಕೊಂಡಳು. ಇದನ್ನು ಕೇಳಿಸಿಕೊಂಡ ಸನಾಳಿಗೆ ಮತ್ತಷ್ಟು ದುಃಖ ಉಕ್ಕಿ ಬಂದಿತು. ತನ್ನ ದೇಹದೊಳಗೆ ಔಷಧಿಗಳು ಸರಿಯಾಗಿ ವರ್ತಿಸದೇ ರೋಗಾಣುಗಳು ಶ್ವಾಸಕೋಶಗಳನ್ನು ನಿತ್ಯ ಹಾನಿಮಾಡುತ್ತಿರುವುದು, ದಿನ ದಿಂದ ದಿನಕ್ಕೆ ಆರೋಗ್ಯ ಹದಗೆಡುತ್ತಿರುವುದು, ಇದರಲ್ಲಿ ತನ್ನ ತಪ್ಪಾದರೂ ಏನಿದೆ? ಆ ಭಗವಂತನಲ್ಲಿ ತನ್ನ ಆರೋಗ್ಯವನ್ನು ಹಿಂದಿರುಗಿಸಿ ಬಿಡು ಎಂದು ಮನದಾಳದಿಂದ ಪ್ರಾರ್ಥಿಸಲಾರಂಭಿಸಿದಳು. ರಾತ್ರಿ ಊಟದ ಸಮಯವಾಯಿತು. ಐ.ಸಿ.ಯುನಲ್ಲೇನು ಡಿನ್ನರ್? ಅದೇ ಜ್ಯೂಸ್ ಅಥವಾ ತಿಳಿ ಗಂಜಿ. ಟೇಬಲ್ ಮೇಲೆ ಇಟ್ಟುಹೋಗಿದ್ದ ಜ್ಯೂಸ್ ಬಾಟಲನ್ನು ತನ್ನ ಕೈಯಿಂದ ಹಿಡಿದು ಕುಡಿಯಲೂ ಶಕ್ತಿ ಇಲ್ಲದ ಪರಾವಲಂಬಿ ಅವಸ್ಥೆಗೆ ಹಸಿವಾದರೂ ಏಕಾಗುತ್ತದೆ ಎಂಬ ನೋವು ಸನಾಳದ್ದು. ಇಂಥ ಅಸಹಾಯಕತೆ ಒಂದೆಡೆ ಆದರೆ ಅದರಿಂದ ಹೊರಬರಲಾಗದೇ ಇರುವ ಪರಿಸ್ಥಿತಿ ಮನುಷ್ಯನನ್ನು ಸಾವಿಗಿಂತ ಮೊದಲೇ ಕೊಂದು ಬಿಡುತ್ತವೆ. ಆದರೂ ಸನಾ ಧೈರ್ಯ ಮಾಡಲೇಬೇಕು ಹೇಗಾದರೂ ಮಾಡಿ ಈ ತೊಂದರೆಯಿಂದ ತಾನು ಹೊರಬರಲೇ ಬೇಕು ಎಂದು ಚಿಂತಿಸುತ್ತಾ ಮಲಗಲು ಹರಸಾಹಸ ಮಾಡುತ್ತಿದ್ದಳು. ಅಷ್ಟರಲ್ಲಿ ಸನಾಳಿಗೆ ಎದೆ ನೋವು ಆರಂಭ ವಾಯಿತು. ಸಿಸ್ಟರ್ ರನ್ನು ಕರೆಯಲು ತನ್ನ ಬೆರಳಿಗೆ ಹಾಕಿದ್ದ ಸ್ಯಾಚುರೇಷನ್ ರೀಡರ್ ಪಟ್ಟಿಯನ್ನು ಒಂದೇ ಸಮನೆ ಬೆಡ್ಡಿಗೆ ಹೊಡೆದು ಸದ್ದು ಮಾಡಲಾರಂಭಿಸಿದಳು. ಈಗ ಸತ್ತೇ ಹೋಗುವಳು ಎಂಬಂಥ ಸ್ಥಿತಿಗೆ ಸನಾ ಬಂದು ತಲುಪಿ ಬಿಟ್ಟಿದ್ದಳು. ಸಿಸ್ಟರ್‌ಗಳೆಲ್ಲಾ ಸನಾಳ ಸುತ್ತ ನಿಂತು ಚೆಕ್ಅಪ್ ಮಾಡಿದರೆ ಶುಗರ್ ತುಂಬಾ ಡೌನ್. ಬಿಪಿ ಚೆಕ್ ಮಾಡಲು ನರಗಳೇ ಸಿಗುತ್ತಿಲ್ಲ. ಸಿಸ್ಟರ್ ಗಳೆಲ್ಲಾ ಗಾಬರಿಯಾಗಿಬಿಟ್ಟರು ಪ್ರೋನಿಂಗ್ ಸ್ಥಿತಿಯಲ್ಲಿದ್ದ ಸನಾಳನ್ನು ಸೀದಾ ಮಾಡಿದರು. ದೇಹ ಅಲುಗಾಡುತ್ತಿದ್ದಂತೆಯೇ ಸ್ಯಾಚುರೇಷನ್ ಮತ್ತಷ್ಟು ಪಾತಾಳಕ್ಕಿಳಿಯಿತು. ಅಯ್ಯೋ ಈಕೆ ಸತ್ತೇ ಹೋಗುತ್ತಾಳೆ ಬೆನ್ನಿಗೆ ಬಡೆಯಿರಿ ಇವಳ ಕೆಮ್ಮು ನಿಲ್ಲುತ್ತದೆ ಆಗ ಉಸಿರಾಟ ಬರುತ್ತದೆ ಎಂದು ಕೈ ಕಾಲು ಉಜ್ಜುತ್ತಿರುವವರು ಬೆನ್ನಿಗೆ ಬಂದು “ ಸನಾ ನಿನಗೆ ಏನೂ ಆಗಲ್ಲ, ಸಮಾಧಾನವಾಗಿರು, ಭಯಪಡಬೇಡ ಎಂದು ಒಂದೇ ಸಮನೆ ಬಡಿಯಲಾರಂಭಿಸಿದರು. 15-20 ನಿಮಿಷಗಳಲ್ಲಿ ಬಾಯಿಗೆ ಬಂದ ಸಾವು ಮತ್ತೇ ಹಿಂದಿರುಗಿತು. ಸನಾಳಿಗೆ ಪ್ರಜ್ಞೆ ಬಂತು. “ ನನಗೆ ಒಂಥರಾ ಆಗುತ್ತಿದೆ ದಯವಿಟ್ಟು ನನ್ನ ಫ್ಯಾಮಿಲಿಗೆ ಕಾಲ್ ಮಾಡಿಬಿಡಿ, ಕೊನೇ ಬಾರಿಯಾದರೂ ಮನೆಯವರನ್ನು ನೋಡುವೆ” ಇಲ್ಲವೆಂದರೆ ಏನಾದರೂ ಕುಡಿಸಿ ನನಗೆ ತುಂಬಾ ನಿಶಕ್ತಿ ಅನಿಸುತ್ತಿದೆ” ಎಂದು ತನ್ನ ಪರಿಸ್ಥಿತಿಗೆ ಶರಣಾಗಿ ಸನಾ ಹೇಳಿಕೊಂಡಳು. ಆಗ ಓ.ಆರ್. ಎಸ್ ತಂದು ಸನಾಳಿಗೆ ಕುಡಿಸಲಾಯಿತು. ಒಮ್ಮಿಂದೊಮ್ಮೆಲೆ ಪಕ್ಕದ ಬೆಡ್ ನಿಂದ ಏನೋ ಶಬ್ದ ಬಂದಂತಾಯಿತು. ನೋಡು ನೋಡುತ್ತಲೇ ಸನಾಳ ಬೆಡ್ ಸುತ್ತ ಪರದೆಯಿಂದ ಕವರ್ ಮಾಡಿ ಎಲ್ಲಾ ನರ್ಸ್ಗಳು ಪಕ್ಕದ ಬೆಡ್ ಗೆ ದೌಡಾಯಿಸಿದರು. ಅಯ್ಯೋ ಅಂಕಲ್ ಹೋಗಿ ಬಿಟ್ಟ ಎಂದು ಹೇಳುತ್ತಿದ್ದುದು ಕೇಳಿಸುತ್ತಿತ್ತು. “ಅಬ್ಬಾ! ನಿನ್ನೆ ಬಲಭಾಗದವರು ಇಂದು ಎಡಭಾಗದವರು ಹೋಗಿಯೇ ಬಿಟ್ಟರು ನನ್ನವಸ್ಥೆ ಏನಾಗುವುದೋ”? ಎಂದು ಸನಾ ತನಗೆ ತಾನೇ ಧೈರ್ಯ ತುಂಬಿಕೊಂಡು ಸುಮ್ಮನೇ ಮಲಗಿಬಿಟ್ಟಳು.
ಸುತ್ತಲೂ ನೀಲಿ ಬಾವುಟ “ ಹೋರಾಡಿಯೇ ಹೋರಾಡುತ್ತೇವೆ ನಾವು ಸೋಲಲ್ಲ, ಗೆದ್ದೇ ಗೆಲ್ಲುತ್ತೇವೆ ನಾವು ಬಾಗಲ್ಲ” ಎಂಬ ಕೂಗು ಕೇಳಿಸುತ್ತಿತ್ತು. ವೃತ್ತಾಕಾರದ ಕಟ್ಟಡದ ಮಧ್ಯೆ ದೊಡ್ಡ ಮೈದಾನ ಅದೊಂದು ಶಾಲೆಯ ವಾತಾವರಣ ಮಕ್ಕಳು ಕೈ ಕೈ ಹಿಡಿದು ನಿಂತು “ ನಾವು ಇನ್ನೂ ಸಂಘರ್ಷ ಮಾಡುತ್ತೇವೆ” ಎಂದು ನೀಲಿ ಬಾವುಟ ಹಿಡಿದು ಘೋಷಣೆ ಗೂಗಾಡುತ್ತಿದ್ದಾರೆ. ಸುತ್ತಲೂ ಕೊಠಡಿಗಳ ಬಾಗಿಲುಗಳು ಒಂದೊಂದು ಕೊಠಡಿಯಲ್ಲಿಯೂ ಒಂದೊಂದು ಮಾತುಕತೆ ನಡೆಯುತ್ತಿದೆ. ಎಲ್ಲರೂ ಯಾವುದೋ ಹೋರಾಟಕ್ಕೆ ಸಿದ್ಧರಾಗುತ್ತಿದ್ದಾರೆ. ಸನಾ ಮೆಲ್ಲಗೆ ನಡೆಯುತ್ತಾ ಎಲ್ಲವನ್ನೂ ವೀಕ್ಷಿಸುತ್ತಿದ್ದಾಳೆ. ಕೊಠಡಿಯೊಳಗಿದ್ದ ದೊಡ್ಡ ಕಾಯದ ವ್ಯಕ್ತಿ ನೀಲಿ ಸೂಟು ಬೂಟು, ಕಣ್ಣಿಗೆ ಕನ್ನಡ ಧರಿಸಿ ಕೈಯಲ್ಲಿ ಪುಸ್ತಕ ಹಿಡಿದು ಸನಾಳಿಗೆ ಕೈ ಸನ್ನೆ ಮಾಡಿ ಒಳಗೆ ಕರೆದರು. ಆ ವ್ಯಕ್ತಿಯನ್ನು ಎಲ್ಲೋ ನೋಡಿದ ನೆನಪು. ಸನಾ ಬಂದು ಅವರ ಮುಂದೆ ಕುಳಿತುಕೊಂಡಳು. ಆ ವ್ಯಕ್ತಿ ಸನಾಳನ್ನು ನೋಡುತ್ತಾ “ನಾವು ಒಂದೇ ಅಲ್ಲವೇ ಇಷ್ಟು ಬೇಗ ಸೋಲಬೇಡ ನಾವೆಲ್ಲರೂ ಇದ್ದೇವೆ ನಾವು ಗೆಲ್ಲುತ್ತೇವೆ ನೀನೂ ಸಂಘರ್ಷ ಮಾಡುತ್ತಿದ್ದೀಯ ಅಲ್ಲವೇ?? ಸಂಘರ್ಷವೇ ಬದುಕು, ಜೀವನ ಸುಲಭವಲ್ಲ, ಸಾವು ಕ್ಷಣಿಕ ಎಚ್ಚೆತ್ತುಕೊಂಡಿರು ನಿದಿರೆಯ ಸಲುಗೆಯಲ್ಲಿ ಸಾವನ್ನು ಆಹ್ವಾನಿಸದಿರು” ಎಂದು ಹೇಳಿ ಒಮ್ಮಿಂದೊಮ್ಮೆಲೆ ಮಾಯವಾಗಿ ಬಿಟ್ಟರು. ಸನಾ ಕಣ್ ತೆರೆದು ನೋಡುತ್ತಿದ್ದಂತೆಯೇ ಸುತ್ತ ಆಗಸ ನೀಲಿ ಕರ್ಟನ್‌ಗಳು ಅದೇ ಐ.ಸಿ.ಯು ರೂಮು ಏನೂ ಬದಲಾಗಿಲ್ಲ. “ಅಬ್ಬಾ! 15 ದಿನಗಳ ನಂತರ ನನಗೆ ಮೊದಲಬಾರಿಗೆ ನಿದ್ದೆ ಹತ್ತಿತ್ತೇ?” ಎಂದು ಸನಾ ಆಶ್ಚರ್ಯ ಪಟ್ಟಳು. ಅದಿರಲಿ ಅದೇನೋ ಕನಸು ಆ ನೀಲಿ ಸೂಟುಧಾರಿ ವ್ಯಕ್ತಿ ಎಲ್ಲೂ ನೋಡಿದ ಹಾಗಿತ್ತು ಅವರ್ಯಾಕೆ ನನಗೆ ಸಂಘರ್ಷದ ಪಾಠ ಮಾಡಿರಬೇಕು ಎಂದು ಮತ್ತೇ ಮತ್ತೇ ಮೆದುಳಿಗೆ ಒತ್ತು ನೀಡಿ ನೆನಪಿಸಿಕೊಂಡಳು. ಅಷ್ಟರಲ್ಲಿ ಓಹ್! ಅವರು ಅಂಬೇಡ್ಕರ್ ಅಲ್ವಾ!!! ಎಂದು ಸನಾ ವಿಸ್ಮಿತಳಾದಳು. ಆ ಕನಸು ಆ ನೀಲಿ ಬಾವುಟ ಮತ್ತು ತನ್ನ ಸಾವು ಬದುಕಿನ ಕೊರೊನಾದ ಪರದಾಟಕ್ಕೆ ಏನೋ ನಂಟಿದೆ ಎಂದು ಯೋಚಿಸಲಾರಂಭಿಸಿದಳು. ಕೊನೆಗೆ ಬೆಳಗಾಯಿತು. ಸನಾಳಿಗೆ ಇಷ್ಟವಿದ್ದ ಸಿಸ್ಟರ್ ಒಬ್ಬರು ಬಂದು ಸನಾಳನ್ನು ಗುಡ್ ಮಾರ್ನಿಂಗ್ ಎಂದು ಹೇಳಿದಳು. ಸನಾ ತನಗೆ ಬಿದ್ದ ಕನಸನ್ನೆಲ್ಲಾ ನರ್ಸ್ ಗೆ ವಿವರಿಸಿದಳು. ಆಗ ಆ ನರ್ಸ್ “ ಅಯ್ಯೋ!!, ಸನಾ ನಿನ್ನ ಬರ್ತ್ ಡೇಟ್ ಸಹ ಏಪ್ರಿಲ್ 14 ಅಲ್ವಾ? ಅದಕ್ಕಾಗಿ ಅಂಬೇಡ್ಕರ್ ನಿನ್ನ ಕನಸಿನಲ್ಲಿ ಬಂದು ಧೈರ್ಯ ತುಂಬಿ ಹೋಗಿರಬಹುದು” ಎಂದು ನಕ್ಕು ಹೋದಳು.
ಆಗ ಸನಾಳಿಗೂ ಒಂಥರಾ ಧೈರ್ಯ ಬರಲಾರಂಭಿಸಿತು. ಇದೊಂದು ಹೋರಾಟವೇ ಸರಿ ತಾನೂ ಇದರಲ್ಲಿ ಗೆದ್ದೇ ಗೆಲ್ಲುತ್ತೇನೆಂಬ ಭರವಸೆ ಅವಳಲ್ಲಿ ದ್ವಿಗುಣಗೊಳ್ಳತೊಡಗಿತು. ಸುಮಾರು 15 ದಿನಗಳಿಂದ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ ಸನಾಳ ಉಸಿರಾಟದಲ್ಲಿ ಸ್ವಲ್ಪ ಸ್ಥಿರತೆ ಕಾಣಲಾರಂಭಿಸಿತು. ನಂತರ ಸನಾ ಮುಂದಿನ ಮೂರ್ನಾಲ್ಕು ದಿನಗಳಲ್ಲೇ ಐ.ಸಿ.ಯು. ಬಿಟ್ಟು ಜನರಲ್ ವಾರ್ಡ್‌ಗೆ ಶಿಫ್ಟ್ ಆದಳು. ಅವಳಲ್ಲಿ ಅಂಬೇಡ್ಕರ್‌ನ ಕನಸು ಮತ್ತು ಅವರ ಮಾತುಗಳು ಗಾಢ ಪ್ರಭಾವವನ್ನುಂಟು ಮಾಡಿದವು.
ಯಾರೊಂದಿಗೆ ಯಾವ ನಂಟು ಯಾವಾಗ ಬಂದು ಬಿಡುತ್ತದೆಯೋ!! ಕನಸುಗಳೂ ಸಹ ಕೆಲವೊಮ್ಮೆ ಕಲಿಸುವ ಪಾಠಗಳೇ ವಿಭಿನ್ನ ಅನ್ನಿಸಿ ಬಿಡುತ್ತವೆ ಅಲ್ಲವೇ?!!
🖋 ಫರ್ಹಾನಾಜ್ ಮಸ್ಕಿ
ಸಹಾಯಕ ಪ್ರಾಧ್ಯಾಪಕರು
ಬಿ.ಎಮ್.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಹುಳಿಯಾರು.