ಅಕ್ಕ
ಶರಣ ಕುಲದ ಚೇತನ
ನಡೆದ ದಾರಿ ದುರ್ಗಮ
ನುಡಿದಂತೆ ನಡೆದ ಶರಣೆ,
ಭಾವ ದೀವಿಗೆಯ ಅನುಭಾವಿ||
ಅಕ್ಕನಾ ಜನನಾ
ದಿನವಿಂದು ಪಾವನಾ
ಸಾವಿಲ್ಲದವಗೆ ಒಲಿದಾಕೆ
ಭವಿ ಅಲ್ಲ ಅಕ್ಕ ಜಗನ್ಮಾತೆ
ವ್ಯಾಮೋಹ ತೊರೆದು
ವೈರಾಗ್ಯ ಬಯಸಿ
ವಸ್ತ್ರ ಕಳಚಿ
ಕೇಶಧೊದಿಕೆ ಹೊತ್ತು,
ನಡೆದಳು ಕಲ್ಯಾಣ ಮಾರ್ಗವರಸಿ
ಮಾನಾಪಮಾನಗಳ ಮೆಟ್ಟಿ
ನೂರು ಪ್ರಶ್ನೆಗಳಿಗೆ ಉತ್ತರಿಸಿ
ನಂಬಿದ ದೇವನರಸಿ
ನಡೆದು ಬಂದಳು
ಕದಳಿಬನಕೆ
ಭವಹರನ ಕಂಡು
ಬೆರೆತು ಒಂದಾದ ಐಕ್ಯತೆ.
– ಮಂಜುಶ್ರೀ ಬಸವರಾಜ ಹಾವಣ್ಣವರ