ಅಕ್ಕಮಹಾದೇವಿ

ಅಕ್ಕಮಹಾದೇವಿ

ಅಕ್ಕಮಹಾದೇವಿ 12ನೇ ಶತಮಾನದ ಪ್ರಸಿದ್ಧ ವಚನಕಾರ್ತಿ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಉಡುತಡಿ ಯವಳು ಅಕ್ಕಮಹಾದೇವಿಯ ತಂದೆ ಓಂಕಾರ ಶೆಟ್ಟಿ. (ನಿರ್ಮಲಶೆಟ್ಸಿ) ತಾಯಿ- ಲಿಂಗಮ್ಮ (ಸುಮತಿ) ಬಾಲ್ಯದಿಂದಲೇ ಶಿವನಲ್ಲಿ ಅಪಾರವಾದ ಭಕ್ತಿಯಿದ್ದ ಇಕೆಗೆ ಕೌಶಿಕ ನೆಂಬ ರಾಜನೊಡನೆ ಬಲವಂತದ ವಿವಾಹವಾಗುತ್ತದೆ. ಶಿವಭಕ್ತಿಗೆ ಅಡ್ಡಿಪಡಿಸಿದ ಕೌಶಿಕನನ್ನು ತೊರೆದು ಕಲ್ಯಾಣಕ್ಕೆ ಸಾಗುತ್ತಾಳೆ. ಕಲ್ಯಾಣದಲ್ಲಿ ಪ್ರಭುದೇವನೊಡ್ಡುವ ಅಗ್ನಿಪರೀಕ್ಷೆಗೆ ಒಳಗಾಗಿ ಅಲ್ಲಿ ಅಕ್ಕ ಕೆಲ ಕಾಲ ತಂಗಿ ನಂತರ ಪ್ರಭುವಿನ ಅಪ್ಪಣೆಯಂತೆ ಅಕ್ಕ ಶ್ರೀಶೈಲಕ್ಕೆ ತೆರಳಿದಳೆಂದೂ ಅಲ್ಲಿ ತಪಗೈದು ನಂತರ ಶ್ರೀಶೈಲದ ಕದಳಿವನದಲ್ಲಿ ಐಕ್ಯಳಾದಳೆಂದು ಪ್ರತೀತಿ .
ಇದುವರೆಗೆ ಅಕ್ಕಳ 350 ವಚನಗಳು ಲಭ್ಯ ಇವೆ.ಅಕ್ಕನ ವಚನಗಳನ್ನಲ್ಲದೇ ಸ್ವರ ವಚನಗಳನ್ನೂ ರಚಿಸಿದ್ದಾಳೆ.ಅವಳ ಈ ವಚನ ಸ್ವರ ವಚನಗಳೆಲ್ಲ ‘ಚೆನ್ನಮಲ್ಲಿಕಾರ್ಜುನ’ ಅಂಕಿತದಲ್ಲಿವೆ.”ಯೋಗಾಂಗ ತ್ರಿವಿಧಿ” “ವಚನಗಳು”,”ಸೃಷ್ಟಿಯ ವಚನ”,ಅಕ್ಕ ಳ ಪೀಠಿಕೆ,”ಅಕ್ಕ ಳ ಹಾಡುಗಳು ” ಇವು ಅಕ್ಕ ಮಹಾದೇವಿಯ ಕೃತಿಗಳು.

ಅಕ್ಕಳ ವಚನಗಳ ತಿರುಳು
ಅಕ್ಕಳ ಬಹಳಷ್ಟು ವಚನಗಳಲ್ಲಿ ಶರಣಸತಿ ಲಿಂಗಪತಿ ಭಾವ ಪ್ರಧಾನವಾಗಿದೆ. ಅಕ್ಕಳ ವಚನಳಲ್ಲಿ ಸಮಾಜ ವಿಮರ್ಶೆಗಿಂತ ಸ್ವವಿಮರ್ಶೆಯೇ ಹೆಚ್ಚು.
ಲೋಕದ ಪುರುಷರು ಅವಳ ದ ದೃಷ್ಟಿಯಲ್ಲಿ ಸಾಯುವ ಕೆಡುವ ವರ್ಗಕ್ಕೆ ಸೇರಿದವರು ಇಂಥ ಪುರುಷರನ್ನು ಒಲೆಯಲ್ಲಿ ಅಂತ ಹೇಳಿದ್ದು ಅಕ್ಕನ ಪ್ರತಿಭಟನೆಯ ಕುರುಹು ಹೊಸ ಮಾನವೀಯ ಮೌಲ್ಯಗಳಿಗೆ ಹಾತೊರೆಯುವ ಮನುಷ್ಯನನ್ನು ಮನುಷ್ಯತ್ವದ ಕಡೆಗೆ ಚಲಿಸುವಂತೆ ಮಾಡುವ ಹಾಗೂ ಧರ್ಮದ ಒಡಲಿಗೆ ಎದೆ ಹಾಲನ್ನು ಸುರಿದು ಸಕಲ ಜೀವಗಳ ಬಗೆಗೆ ಪ್ರೀತಿಯನ್ನು ತೋರುವ ಅಕ್ಕನ ರೀತಿ ತುಂಬಾ ಅನನ್ಯವಾದದ್ದು.
ಒಟ್ಟಿನಲ್ಲಿ ಅಕ್ಕಳ ವಚನಗಳಲ್ಲಿ ಜೀವಾತ್ಮ ಪರಮಾತ್ಮನನ್ನು ಸೇರುವ ಆಶಯವಿದೆ ಲಿಂಗಾಂಗ ಸಾಮರಸ್ಯದ ಭಾವವಿದೆ.

ಅಕ್ಕಮಹಾದೇವಿ ಒಂದಷ್ಟು ಮಹತ್ವ ದ ವಚನಗಳ ಅರ್ಥ ವನ್ನು ನೋಡಲಾಗಿ

ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ ನಿಂದೆ ಸಹಜವೆನ್ನುವುದು ಅಕ್ಕನ ನಿಲುವು. ಹೀಗಾಗಿ, ಸ್ತುತಿಗೆ ಹಿಗ್ಗಬೇಕಾಗಿಲ್ಲ; ನಿಂದೆಗೆ ಮರುಗಬೇಕಿಲ್ಲ ಸ್ತುತಿ-ನಿಂದೆಗಳನ್ನು ಸಮನಾಗಿ ತೋರುವುದೇ ವ್ಯಕ್ತಿಯ ವಿಶಿಷ್ಟ ವ್ಯಕ್ತಿತ್ವದ ಪಡಿನೆಳಲು, ಭಕ್ತ ಜೀವಕ್ಕಂತೂ ಇದು ಅತ್ಯಂತ ಸಹಜವಾಗಬೇಕು, ಲೋಕದ ಸ್ತುತಿ-ನಿಂದೆಗಳ ಕಿಂಚಿತ್ ಪರಿಚಯದ ಅಗತ್ಯವೇ ಆತನಿಗೆ ಇರಬಾರದು. ಸ್ತುತಿ-ನಿಂದೆಗಳಿಂದ ಆತ ಯಾವತ್ತೂದೂರ, ಬಹುದೂರ, ಸ್ತುತಿ-ನಿಂದೆಗೆ ಭಕ್ತಬಿದ್ದುದಾದರೆ, ಭಕ್ತಿಸಾಧನೆ ಸಾಧ್ಯವಿಲ್ಲ ಆದ್ದರಿಂದ, ಲೋಕದಲ್ಲಿ ಹುಟ್ಟಿ ಬಂದ ಬಳಿಕ ಸ್ತುತಿ ನಿಂದೆಗಳು ಬಂದರೆ, ಮನದಲ್ಲಿ ಕೋಪ ತಾಳದೆ ಸಮಾಧಾನಿಯಾಗಿರಬೇಕು ಎನ್ನುತ್ತಾಳೆ. ಅಕ್ಕ, ಸ್ತುತಿ ನಿಂದೆಗಳಿಗೆ ಸಮಾಧಾನವೇ ದಿವೌಷಧ ಎಂಬ ಅಕ್ಕನ ಇಲ್ಲಿನ ನಿಲುವು ತುಂಬಾ ಮೆಚ್ಚತಕ್ಕದ್ದು. ಸ್ತುತಿ ನಿಂದೆಗೆ ಒಳಗಾದರೆ, ಸಾಧನೆಯ ಪಥದಿಂದ ಅಧೋಗತಿಗೆ ಜಾರಿದಂತೆಯೇ ಸರಿ ಎನ್ನುವುದು ಅಕ್ಕನ ಅಭಿಮತ, ಏಕೆಂದರೆ, ಸ್ತುತಿ-ನಿಂದೆ ಮನುಷ್ಯ ಸಮಾಜದ ಸಹಜಗುಣ; ಸಹಜ ಲಕ್ಷಣ, ಭಕ್ತಿಯ ಉನ್ನತಿಕೆಯನ್ನರಿಯದ ಜನಕ್ಕೆ ಸ್ತುತಿ ನಿಂದೆಗಳೇ ಮೂಲತವನಿಧಿ; ಆಸ್ತಿ ಇಂಥ ಜನರ ನಡುವೆ ವಾಸಿಸುವುದು ಕ್ರೂರ ಮೃಗಗಳ ನಡುವೆ ವಾಸಿಸಿದಂತೆಯೇ, ಆದರೂ ಅಂಜಬೇಕಾಗಿಲ್ಲ. ಇದು ಸಹಜ.

ಬೆಟ್ಟದ ಮೇಲೆ ಮನೆಯನ್ನು ಮಾಡಿ ಮೃಗಗಳಿಗೆ ಅಂಜಿದರೆ ಹೇಗೆ? ಸಮುದ್ರದ ತಡಿಯಲ್ಲಿ ಮನೆ ಮಾಡಿ ನೆರೆ ತೊರೆಗಳಿಗೆ ಅಂಜಿದರೆ ಹೇಗೆ? ಸಂತೆಯಲ್ಲಿ ಮನೆ ಮಾಡಿ ಗದ್ದಲಕ್ಕೆ ಅಂಜಿದರೆ ಹೇಗೆ ?ಬೆಟ್ಟದಲ್ಲಿ ಮೃಗಗಳಿರುವುದು, ಸಮುದ್ರದ ತಡಿಯಲ್ಲಿ ನೊರೆತೆರೆಗಳಿರುವುದು, ಸಂತೆಯಲ್ಲಿ ಗದ್ದಲಿರುವುದು ಸಹಜವೇ. ಹಾಗೆಯೇ, ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು ಸಹಜವೇ. ಹೀಗಾಗಿ, ಸ್ತುತಿ ನಿಂದೆಗಳು ಬಂದರೆ, ಮನದಲ್ಲಿ ಕೋಪವನ್ನು ತಾಳದೆ ಸಮಾಧಾನ ಯಾಗಿರಬೇಕು. ಕೋಪ ತಾಳಿದ್ದೇ ಆದರೆ ಇನ್ನಷ್ಟು ಅಪಾಯ ಕಟ್ಟಿಟ್ಟ ಬುತ್ತಿ ಏಕೆ೦ದರೆ ಇನ್ನೊಬ್ಬರನ್ನು ಸ್ತುತಿಸುವ, ನಿಂದಿಸುವ ಜನ ಯಾವುದಕ್ಕೂ ಸಿದ್ಧರಾಗಿ ನಿಂತ ಹೇಸಿಗೆ ನಾಚಿಕೆಯಿಲ್ಲದ ಹೀನ ಜನ! ಇನ್ನೊಬ್ಬರು ಉಪಯೋಗಕ್ಕೆ ಬಂದಾಗ ಸ್ತುತಿಸುವುದು ಉಪಯೋಗಕ್ಕೆ ಬಾರದಿದ್ದಾಗ ನಿಂದಿಸುವುದು ಅವರ ಹುಟ್ಟುಗುಣ! ಹೀಗಿರುವಾಗ, ಇಂಥ ಜನರ ಸ್ತುತಿ-ನಿಂದೆಗಳಿಗೆ ಅಂಜದೆ, ಕೋಪ ತಾಳದೆ ಸಮಾಧಾನದಿಂದಿರುವುದು ಮಿಗಿಲು ಅದೇ ಸರ್ವ ಶ್ರೇಷ್ಠ ಎನ್ನುತ್ತಾಳೆ ಅಕ್ಕಮಹಾದೇವಿ,

ಅಕ್ಕ ಚೆನ್ನಮಲ್ಲಿಕಾರ್ಜುನನನ್ನೇ ತನ್ನ ಪತಿಯನ್ನಾಗಿ ಸ್ವೀಕರಿಸಿದ ವಿಶಿಷ್ಟ ಶಿವಶರ ಲೋಕದ ಗಂಡಸರನ್ನು ಆಕೆ ನಂಬಳು. ಏಕೆಂದರೆ, ಅವರು ಸಾವಿರುವ, ಕೇಡಿರುವ ಸಾಮಾನ್ಯ ಮನುಷ್ಯರು, ಅಕ್ಕನಿಗೆ ಬೇಕಾದುದು ಅಂಥ ಪತಿಯಲ್ಲ. ಆಕೆಗೆ ಬೇಕಾದುದು ಸಾವಿಲ್ಲದ ಕೇಡಿಲ್ಲದ, ರೂಪಿಲ್ಲದ ಚೆಲುವ ಚೆನ್ನಮಲ್ಲಿಕಾರ್ಜುನ !ಅಂತೆಯೇ, ಲೋಕದ ಗಂಡಂದಿರನ್ನು ಆಕೆ ಒಲೆಯೊಳಗೆ ಇಕ್ಕಲು ಹೇಳುತ್ತಾಳೆ, ಶ್ರೀಶೈಲ ಚೆನ್ನಮಲ್ಲಿಕಾರ್ಜುನನ್ನೇ ತನ್ನ ಪತಿಯಾ ಗಿ ಸ್ವೀಕರಿಸಿದ ಅಕ್ಕನಿಗೆ ಆತನನ್ನು ಅರೆಕ್ಷಣವೂ ಬಿಟ್ಟಿರಲಾಗದು, ಒಂದು ಕ್ಷಣ ಆತ ಅಗಲಿದರೆ ಸಾಕು, ವಿರಹವೇದನೆ ಪ್ರಾರಂಭವೇ, ಆಗ ಅಕ್ಕ ಪ್ರಕೃತಿಯ ಪ್ರತಿಯೊಂದು ಜೀವರಾಶಿ ಯಲ್ಲೂ ತನ್ನ ಪತಿಯನ್ನು ಕುರಿತು ಕೇಳುವವಳೇ! ಆಗಿನ ಆಕೆಯ ವಿರಹತಾಪ ಹೇಳತೀರದು.

ಭಕ್ತಿಗೆ ತನು-ಮನ ಪರಿಶುದ್ಧತೆ ಅತ್ಯಗತ್ಯ ಎಂಬುದನ್ನು ಅಷ್ಟೇ ಅರ್ಥವಾಗಿ ರೂಪಿಸುತ್ತಾಳೆ ಅಕ್ಕ, ಪರಮಾತ್ಮ ಒಲಿಯುವುದು ಡಾಂಭಿಕರಿಗಲ್ಲ: ಅರಿವು ಕಣ್ದೆರೆದವರಿಗೆ, ಭಾವ ಶುದ್ಧಿಯುಳ್ಳವರಿಗೆ ಅಕ್ಕ ಹೇಳುವಂತೆ ಆತ ತನು ಕರಗದವರಲ್ಲಿ ಮಜ್ಜನವನ್ನು ಒಲ್ಲ ಮನ ಕರಗದವರಲ್ಲಿ ಹೂವನ್ನು ಒಲ್ಲ: ಅಯೋಗ್ಯರಲ್ಲಿ ಗಂಧಾಕ್ಷತೆಯನ್ನು ಒಲ್ಲ; ಅರಿವು ಕಣ್ದೆರೆಯದವರಲ್ಲಿ ಆರತಿಯನ್ನು ಒಲ್ಲ: ಭಾವ ಶುದ್ಧವಿಲ್ಲದವರಲ್ಲಿ ಧೂಪವನ್ನು ಒಲ್ಲ.

ಶಿವಭಕ್ತರದಲ್ಲದವರಲ್ಲಿ ವೈವೇದ್ಯವನ್ನು ಒಲ್ಲ, ಶ್ರೀಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನ್ನು ಹೃದಯ ಕಮಲ ಅರಳಿದವರಲ್ಲಿ ಇರಲೊಲ್ಲ ಆತನಿಗೆ ತನು-ಮನ ಕರಗಿದವರು, ಯೋಗ್ಯರಾದವರು. ಅರಿವು ಕಣ್ದೆರೆದವರು, ಭಾವ ಶುದ್ಧವಿದ್ದವರು, ಶಿವಭಕ್ತರು, ಶ್ರೀಕರಣ ಶುದ್ದವಿದ್ದವರು, ಹೃದಯ ಕಮಲ ಅರಳಿದವರು ಬೇಕು! ಅಂಥವರಲ್ಲಿ ಮಾತ್ರ ಪರಮಾತ್ಮ ಪೂಜೆಗೊಂಬ!ಮಜ್ಜನ, ಪುಷ್ಪ, ಗಂಧಾಕ್ಷತೆ, ಆರತಿ, ರೂಪ, ನೈವೇದ್ಯ, ತಾಂಬೂಲ ಏನೆಲ್ನವನ್ನೂ ಸ್ವೀಕರಿಸಬಲ್ಲ; ಅಂಥವರಲ್ಲಿ ಇರಲೂಬಲ್ಲ .ಅಕ್ಕನಲ್ಲಿ ಇವೆಲ್ಲ ಸಾತ್ವಿಕ ಗುಣಗಳು ಇದ್ದುದರಿಂದಲೇ ಆ ಪರಮಾತ್ಮ ಚೆನ್ನ ಮಲ್ಲಿಕಾರ್ಜುನ ಆಕೆಯ ಕರಸ್ಥಲದಲ್ಲಿ ಇಂಬು ಗೊಂಡಿದ್ದಾನೆ .ನೆಲೆಸಿದ್ದಾನೆ. ಆದರೂ ತನಗೆ ಇವೆಲ್ಲ ಸಾತ್ವಿಕ ಗುಣಗಳು, ಭಕ್ತಿಸಹಜ ಗುಣಗಳು ಇವೆ ಎಂಬ ಅಭಿಮಾನವಿಲ್ಲ. ಅಕ್ಕನಿಗೆ : ಈ ಅಭಿಮಾನವಿದ್ದರೆ ಅದು ಮಾಯೆಯೇ! ಅಂತೆಯೇ ಅಕ್ಕ ಎನ್ನಲ್ಲಿ ಏನುಂಟೆಂದು ಕರಸ್ಡಲವನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ?’ ಎಂದು ಕೇಳುವುದು ಅರ್ಥಪೂರ್ಣವಾಗಿದೆ. ಅಕ್ಕನ ಇಲ್ಲಿನ ನಿರಂಭಾವ, ಸ್ವವಿಮರ್ಶೆ ಮೆಚ್ಚತಕ್ಕದ್ದು! ಅಕ್ಕ ತನ್ನಲ್ಲಿ ಏನೆಲ್ಲ ಭಕ್ತಿ ಪರಿಕರಗಳಿದ್ದರೂ ಇಲ್ಲ ಎಂಬ ನಿರಾಭಿಮಾನವನ್ನು ತೋರುವುದರ ಮೂಲಕ ತನ್ನ ಸ್ಪವಿಮರ್ಶೆಗೆ ಮುಂದಾಗುತ್ತಾಳೆ, ತನ್ನಲ್ಲಿ ಏನೆಲ್ಲ ಭಕ್ತಿ ಪರೀಕರಗಳಿದ್ದೂ ಇಲ್ಲವೆಂದು ತಿರುತಿರುಗಿ ನೋಡುವುದು ಶರಣತ್ಯದ ವಿಶಿಷ್ಟ ಲಕ್ಷಣ. ಇದು ಆತ್ಮವಿಮರ್ಶೆಯ ಒಂದು ವಿಶಿಷ್ಟ ಬಗೆ, ಅಕ್ಕನಲ್ಲಿ ಈ ಬಗೆ ಹೇರಳವಾಗಿದೆ. ಅಂತೆಯೇ, ಅಕ್ಕನದು ಪುಟಕ್ಕಿಟ್ಟ ಚಿನ್ನದಂಥ ಪರಿಶುದ್ಧ ಭಕ್ತಿ ಇದು ಅಕ್ಕನ “ಅಂತರಂಗದ ಭಕ್ತಿಯ ಪರಿ,

ಪರಮಾತ್ಮನ ಒಲುಮೆ-ಕರುಣೆಗಳಾದ ಶರಣರಿಗೆ ಕಾಯ ವಿಕಾರವಿಲ್ಲ ಅಥವಾ ಇಂದ್ರಿಯ ವಿಕಾರವಿಲ್ಲ ಎಂಬುದನ್ನು ಸಹಿತ ಅಷ್ಟೇ ಅರ್ಥವಾಗಿ ನಿರೂಪಿಸುತ್ತಾಳೆ ಅಕ್ಕ. ಶರಣನಿಗೆ ಕಾಯ ವಿಕಾರವಿಲ್ಲ, ಇರಬಾರದು ಕಾಯವಿಕಾರವೆಂದರೆ, ಇಂದ್ರಿಯ ವಿಕಾರ ಅಥವಾ ಇಂದ್ರಿಯ ಸುಖಗಳಿಗೆ ಆಕರ್ಷಿತನಾಗುವುದು ಈ ಕಾಯ ವಿಕಾರವೆನ್ನುವುದು ಹಾವಿದ್ದಂತೆ! ಈ ಹಾವಿನ ಹಲ್ಲನ್ನು ಕಳೆದು ಆಡಿಸಬಲ್ಲ ಸಾಮರ್ಥ್ಯಬೇಕು ಶರಣನಿಗೆ. ಅಂದಾಗ ಕಾಯ ವಿಕಾರವನ್ನು ಗೆಲ್ಲಲೂ ಸಾಧ್ಯ, ಕಾಯ ಸಂಗವೂ ಲೇಸು. ಇದನ್ನು ಅಕ್ಕ ಹೇಳುವ ಬಗ್ಗೆ ದೃಷ್ಟಾಂತ ಪೂರ್ಣವಾದುದು. ಕಾಯ ವಿಕಾರವನ್ನು ಹಾವಿಗೆ, ರಕ್ಕಸಿ ತಾಯಿಗೆ ಅಕ್ಕ ಇಲ್ಲಿ ಪ್ರತಿಮೆಯಾಗಿಸಿದ್ದು ತುಂಬಾ ಔಚಿತ್ಯಪೂರ್ಣ; ಧ್ವನಿಪೂರ್ಣ! ‘ಹಾವಿನ ಬಾಯ ಪಲ್ಲಕಳೆದು ಪಾವನಾಡಿಸಬಲ್ಲರ ಹಾವಿನ ಬಾಯ ಹಲ್ಲ ಕಳೆದು ಹಾವನಾಡಿಸಬಲ್ಲಡೆ ಹಾವಿನ ಸಂಗವೇ ಲೇಸು, ಕಾಯದ ಸಂಗವ ವಿವರಿಸಬಲ್ಲಡೆ ಕಾಯದ ಸಂಗವೇ ಲೇಸು ತಾಯಿ ರಕ್ಕಸಿಯಾದಂತೆ ಕಾಯ ವಿಕಾರ!!”, ಹಾವು ಒಂದು ವಿಷಪೂರಿತ ಕ್ರೂರ ಜಂತು. ಆದರೂ ಅದರ ಸಂಗ ಮಾಡಬಹುದು. ಆದರೆ, ಆ ಹಾವಿನ ಬಾಯ ಹಲ್ಲನ್ನು ಕಿತ್ತು ಅದನ್ನು ಆಡಿಸಬಲ್ಲ ಜಾಣತನ , ಸಾಮರ್ಥ್ಯಬೇಕು. ಹಾಗೆಯೇ, ಕಾಯದ ಸಂಗ ಸಹಿತ ಕಾಯದ ಅಥವಾ ಇಂದ್ರಿಯಗಳ ಸಂಗವೂ ಲೇಸೇ ಆದರೆ, ಈ ಕಾಯದ ವಿಕಾರವನ್ನು ಅಥವಾ ಇಂದ್ರಿಯ ಸುಖದ ಆಕರ್ಷಣೆಯನ್ನು ಹಿಡಿದು ಜಂಜಾಡಿಸುವ ಜಾಣತನ, ಸಾಮರ್ಥ್ಯಬೇಕು ಎಂದರೆ, ಇಂದ್ರಿಯಾಸಕ್ತಿಯನ್ನು ಗೆಲ್ಲಬಲ್ಲ ಸಾಮರ್ಥ್ಯ-ಚಾಣತನಗಳಿದ್ದರೆ ಕಾಯ ಸಂಗ ಲೇಸು. ಇಂಥ ಸಂಗ ಕಾಯದ ನಿಸ್ಸಂಗವೇ. ಏಕೆಂದರೆ, ಇಲ್ಲಿ ಕಾಯ ವಿಕಾರವನ್ನು ಗೆಲ್ಲುವ ಬಗೆಯಿದೆ.

ಕಾಯವಿಕಾರ ಗೆದ್ದರೆ ಇದ್ದು ಇಲ್ಲದಂತೆ ಶರಣ ಅಂಥ ಕಾಯ್ದೆ ಸಂಗಿ ಎನ್ನುತ್ತಾಳೆ ಅಕ್ಕ. ಏಕೆಂದರೆ ಪರಮಾತ್ಮನ ಒಲುಮೆ ಕರುಣೆ ಗಳಿಗೆ ಪಾತ್ರನಾದ ಆತ ಕಾಯ ವಿಕಾರವನ್ನು ಗೆದ್ದುನಿಂತ ಕಾಯ ನಿಸ್ಸಂಗಿ ಕಾಯ ವಿಕಾರವೆಂದರೆ ತಾಯಿ ರಕ್ಕಸಿಯಾದಂತೆ ಇಂಥ ರಕ್ಕಸಿಯನ್ನು ಗೆದ್ದವನು ಶರಣ ಅಂತೆಯೇ ಅಕ್ಕ ಮಲ್ಲಿಕಾರ್ಜುನಯ್ಯಾ ನೀನೊಲಿದವರು ಕಾಯಗೊಂಡಿದ್ಡರೆ ಬೇಡ ಎಂದು ಹೇಳುತ್ತಾಳೆ.ಶರಣ ಕಾಯ ವಿದ್ದೂ ಕಾಯವಿಲ್ಲದ ನಿಸ್ಸಂಗಿ ಆತ ರಕ್ಕಸಿ ಕಾಯವಿಕಾರವನ್ನು ಗೆದ್ದವನು .ಇಂದ್ರಿಯ ಸುಖವನ್ನು ಮೆಟ್ಟಿ ನಿಂತವನು .ಚೆನ್ನಮಲ್ಲಿಕಾರ್ಜುನ ಒಲಿದ ಅಂಥವನು ಕಾಯಗೊಂಡವನಲ್ಲ ಎನ್ನುತ್ತಾಳೆ ಅಕ್ಕ….


ಶ್ರೀಮತಿ ಸಾವಿತ್ರಿ ಎಂ
ಕಮಲಾಪೂರ
ಉಪನ್ಯಾಸಕಿಯರು
ಮೂಡಲಗಿ.


Don`t copy text!