ಪ್ರಾರ್ಥನೆ

ಪ್ರಾರ್ಥನೆ

ನಿನ್ನ ಗಮ್ಯದ ಮರ್ಮವ
ಎನಗೊಮ್ಮೆ ಅರುಹು ಗುರುವೇ….
ಈ ಜಂಜಡದ ಏದುಸಿರನಳಿಯುವ
ನಿನ್ನ ಬೆಳಕಿನ ದಿವ್ಯೌಷಧವನಿತ್ತು
ಎನ್ನ ಬಾಳಿನ ಪ್ರಾಣವನು
ಉಳಿಸು ಗುರುವೇ……

ಈ ಊರಲಿ, ಮನೆಯಲಿ
ನನ್ನ ಪಾಡಿಗೆ ನಾನು ಇರಬೇಕೆಂದರೂ
ಅಡಿಗಡಿಗೂ ನೂರು ಗಡಿಗಳ
ದಿಗ್ಬಂಧನ,
ಆಳುವವರು ಏಸುಬಾರಿ
ಗಡಿಪಾರು ಮಾಡಿದರೇನು
ಅಳಿಯಲಾರದು ಎಂದಿಗೂ
ಈ ಬಂಧನ.

ಆ ಗಮ್ಯವನು ಅರಸುತ್ತ
ಎಷ್ಟೊಂದು ದೂರ,ಎಷ್ಟೊಂದು ಕಾಲ
ತಲೆಮಾರುಗಳ ಬದುಕು
ಹೀಗೇ ಸುತ್ತಿದ್ದಾಯ್ತು
ಅದೋ…
ಅಲ್ಲಿ ಆಕಾಶ
ನೆಲವ ಮುಟ್ಟಿದಂತೆ
ಕಂಡದ್ದೇ ಆಯ್ತು…
ದೂರ ತೀರಲಿಲ್ಲ,
ಕಾಲವೂ ಮುಗಿಯಲಿಲ್ಲ.

ಆದರೆ ನೀನು…..
ಗಮ್ಯವ ಸೇರುವದಲ್ಲ
ಗಮ್ಯವೇ ಆದ ಪರಿ
ಕಾಲಕ್ಕೇ ಆದ ಬೆರಗು…..
ಅದೆಷ್ಟೋ ಕಾಲದಿಂದ
ಆರೂ ನಿನ್ನಂತಾಗದೇ
ಕಾಲನಲ್ಲೇ ಕರಗಿ
ಹೋದದ್ದು ಇನ್ನೂ ಬೆರಗು……

ಈಗಲಾದರೂ ಎನಗೆ
ಅರುಹು……
ಆ ಬ್ರಹ್ಮಜ್ಞಾನದ
ಕುರುಹು….
ನಿನ್ನ ನೆರಳ್ಹಿಡಿದೇ
ಸುಳಿದಾಡುವ
ನನಗೆ ಬೇಕು ನಿನ್ನ ಆ
ಬ್ರಹ್ಮಾನಂದದ
ರುಚಿಯು.

ಎಷ್ಟೆಂದು ನಡೆಯಲಿ ಹೇಳು
ಹೀಗೇ ಎದ್ದು ಬಿದ್ದು
ಒರಲುತ್ತ, ನರಳುತ್ತ
ಬುದ್ಧ…..ಬುದ್ಧ ಎಂದು
ಅರಸುತ್ತ…….
ಈಗಲಾದರೂ ಈ
ಗಡಿಯ ಬಂಧನವ ಬಿಡಿಸು,
ಪ್ರೀತಿಯ ಬಂಧದಲಿರಿಸು
ಮೋಹ ದಾಹಗಳನಳಿಸಿ
ಧಮ್ಮದ ಪದದಲಿ ನಿಲಿಸು.

-ಕೆ.ಶಶಿಕಾಂತ
ಲಿಂಗಸೂಗೂರ.

Don`t copy text!