ಮುರುಘಾ ಮಠಕ್ಕೆ ಬಸವಾದಿತ್ಯ ಸ್ವಾಮೀಜಿ  ಉತ್ತರಾಧಿಕಾರಿ

ಮುರುಘಾ ಮಠಕ್ಕೆ ಬಸವಾದಿತ್ಯ ಸ್ವಾಮೀಜಿ ಉತ್ತರಾಧಿಕಾರಿ 

ಚಿತ್ರದುರ್ಗ: ಇಲ್ಲಿನ ರಾಜಾಶ್ರಯದ ಐತಿಹಾಸಿಕ ಮುರುಘಾ ಮಠಕ್ಕೆ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಸ್ವಾಮೀಜಿ ಅವರನ್ನು ನೇಮಕ ಮಾಡಲಾಯಿತು.‌ ಶಿವಮೂರ್ತಿ ಮುರುಘಾ ಶರಣರ ಬಳಿಕ ಬಸವಾದಿತ್ಯ ಅವರು ಪಟ್ಟಾಧಿಕಾರ ವಹಿಸಿಕೊಳ್ಳಲಿದ್ದಾರೆ.
ಮಠದ ಈ ತೀರ್ಮಾನವನ್ನು ಎಲ್ಲ ಸಮಾಜದ ಮುಖಂಡರ ಸಮ್ಮುಖದಲ್ಲಿ ಶುಕ್ರವಾರ ಘೋಷಣೆ ಮಾಡಲಾಯಿತು. ಬಹುದಿನಗಳಿಂದ ಮೂಡಿದ್ದ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿತು.

ಚಿತ್ರದುರ್ಗ ತಾಲ್ಲೂಕಿನ ಹುಲ್ಲೂರು ಗ್ರಾಮದ ಚಂದ್ರಕಲಾ ಮತ್ತು ಶಿವಮೂರ್ತಯ್ಯ ದಂಪತಿಯ ಪುತ್ರ ಬಸವಾದಿತ್ಯ. ಎಸ್‌ಜೆಎಂ ಕಾಲೇಜಿನಲ್ಲಿ ಇವರು ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದಾರೆ.

‘ಇದೊಂದು ಭಕ್ತರ ಶ್ರದ್ಧಾಕೇಂದ್ರ. ನಮ್ಮನ್ನು ಸೇರಿ ಈವರೆಗೆ 20 ಯತಿವರ್ಯರು ಮಠವನ್ನು ಮುನ್ನಡೆಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಾನವನ ಬದುಕು ಅಸ್ಥಿರವಾಗಿದೆ. ಅನಿರೀಕ್ಷಿತವಾಗಿ ಸಂಭವಿಸುವ ಅಪಘಾತ, ಹೃದಯಾಘಾತದಲ್ಲಿ ನಿಧನವಾದರೆ ಮನೆಯಲ್ಲಿ ಉಳಿದವರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಆದರೆ, ಮಠ-ಪೀಠಗಳಲ್ಲಿ ಶೂನ್ಯ ನಿರ್ಮಾಣವಾಗಬಾರದು ಎಂಬ ಕಾರಣಕ್ಕೆ ಉತ್ತರಾಧಿಕಾರಿ ನೇಮಕ ಮಾಡಲಾಗಿದೆ’ ಎಂದು ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

‘ಭಕ್ತರ ಹಾಗೂ ಸಮುದಾಯದ ಮುಖಂಡರ ಸಮ್ಮುಖದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಮಕಾಲೀನ ಸಂದರ್ಭದ, ಆಕಸ್ಮಿಕವಾದ ಹಾಗೂ ಅಷ್ಟೇ ಅರ್ಥಪೂರ್ಣವಾದ ನಿರ್ಧಾರವಾಗಿದೆ. ಬಸವಾದಿತ್ಯ ಅವರನ್ನು ಮರಿಯಾಗಿ ಸ್ವೀಕರಿಸಲಾಗಿದೆ. ಅವರಿಗೆ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆ ಬಲ್ಲವರಾಗಿದ್ದಾರೆ. ಉನ್ನತ ವ್ಯಾಸಂಗ ಮಾಡಿಸಿ ಪಟ್ಟಕಟ್ಟಲಾಗುವುದು’ ಎಂದು ಹೇಳಿದರು.

Don`t copy text!