ಜಗಕ್ಕೆ ಒಬ್ಬಳೆ ಅಕ್ಕ
ಕನ್ನಡದ ಕದಳಿ ಅಕ್ಕ
ಅಕ್ಕನಾಗಲೂ ತನುಮನದ
ಭಾವ ಬೆತ್ತಲಾಗಬೇಕು..
ಆಸೆ ಅಳಿದು ಗಾಳಿಯಲ್ಲಿ
ಹರಿದು ತೇಲಿ ಸುಗಂಧವಾಗಬೇಕು.
ಮಾಯೆ ಮಮತೆಗಳು ಮರೆತು
ಮರಣ ಹೊಂದಬೇಕು..
ಕಾಮ ಕ್ರೋಧ ಲೋಭ
ಮೋಹ ಮದ ಮತ್ಸರಗಳು
ಸುಟ್ಟು ಸುಣ್ಣವಾಗಿ ಮಲ್ಲಿಕಾರ್ಜುನ
ಶಿಖರಕ್ಕೆ ಅರ್ಪಿತವಾಗಬೇಕು…
ಅಕ್ಕನಾಗಲು ಸಂತೆಯಲ್ಲಿ
ಧ್ಯಾನಸ್ಥಳಾಗಬೇಕು
ಕಾಡುಬೆಟ್ಟಗಳಲ್ಲಿ ಅಲೆದು
ಗಿಳಿ ಕಾಜಾಣಗಳ ಜೊತೆ
ಭಾಷೆ ಕಲಿಯಬೇಕು..
ನಲ್ಲ ಮಲ್ಲನ ಅರಸುತ್ತಿರುವಾಗ
ನೊರೆ ತೆರೆಗಳನ್ನು ಹಾಯ್ದು
ಮೃಗಗಳನ್ನು ಎದುರಿಸಬೇಕು..
ಅಕ್ಕನಾಗಲು ಭಿಕ್ಷೆ ಬೇಡಬೇಕು
ಹಸಿವಿನ ಹಂಗು ತೊರೆಯಬೇಕು ..
ಬಾಯಾರಿಕೆಗೆ ಕೆರೆ ಬಾವಿಗಳ ನೀರು ಕುಡಿಯಬೇಕು..ಶಯನಕ್ಕೆ
ಹಾಳು ದೇಗುಲಗಳ ಹುಡುಕಬೇಕು ..
ಅಕ್ಕನಾಗಲು ಜಗದ ಗಂಡನ
ತೊರೆದು ಜಗದೊಡೆಯನ
ಪ್ರೇಮ ಕದಳಿಯಲ್ಲಿ ಲೀನವಾಗಬೇಕು..
ಚನ್ನ ಮಲ್ಲಿಕಾರ್ಜುನನಿಗೆ ಒಲಿದು
ಅವನ ಮುಡಿಯೆರಿದ ಮಲ್ಲಿಗೆಯಾಗಬೇಕು..
–ಶಾರದಾ ಅಂಬೇಸಂಗೆ ಮುಂಬಯಿ.