ಹೃದಯ ಆದ್ರಿಸಿದ ಕವನ
ಕನ್ನಡ ಕವನ ಕಾವ್ಯ ಕೂಟದ ಎಂಬ ಸಾಹಿತ್ಯ ಆಸಕ್ತ ಸಹೃದಯರ
ವಾಟ್ಸಪ್ ಗುಂಪಿನಲ್ಲಿ ಪ್ರಕಟವಾದ ಈ ಕವನ ಎಲ್ಲರ ಮನ ಮುಟ್ಟಿ ಹೃದಯವನ್ನು ಆದ್ರಗೊಳಿಸಿತು.ತಂದೆಯ ಕುರಿತಾಗಿ ಅತ್ಯಂತ ಮಾರ್ಮಿಕವಾಗಿ ಬರೆದ ಕವನ ಅದು.
ಅಪ್ಪನ ಹೆಗಲು
ನಾನು ಎಳೆಯ ಬಾಲಕ
ಅಪ್ಪನ ಹೆಗಲು
ಸಾರೋಟಿಗೆ ನನಗೆ
ಜಾತ್ರೆ ಬೆತ್ತಾಸ ತೇರು
ನಾಟಕ ಗರದೀ ಗಮ್ಮತ್ತು
ಅಲಾವಿ ಕುಣಿತ
ಜಗ್ಗಲಿಗೆ ಜಾತ್ರೆ
ಘಂಟೆಗಟ್ಟಲೆ ಟಿಕೇಟಿಗೆ
ಚಿತ್ರಮಂದಿರ ಮುಂದೆ
ಸರತಿ ಸಾಲು
ದಣಿವಿರಲಿಲ್ಲ ಅಪ್ಪನಿಗೆ
ನನಗೋ ಒಳಗೊಳಗೇ ಖುಷಿ
ನನ್ನ ನಗುವಿನಲ್ಲಿ
ಅಪ್ಪನೂ ನಗುತ್ತಿದ್ದ
ಮೈ ಕೈ ನೋವು ಜ್ವರ
ಹಲ್ಲು ಹೊಡೆತ
ಎತ್ತಿಕೊಂಡವನೆ ಹೆಗಲಲಿ
ಓಡುತ್ತಿದ್ದ ಆಸ್ಪತ್ರೆಗೆ
ಔಷಧಿ ಮಾತ್ರೆ ಉಪಚಾರ
ಗುಡಿ ಮಸಿದೆ ಕಾಲೂರಿ
ಬೇಡಿಕೊಳ್ಳುತ್ತಿದ್ದ ಕಣ್ಣೀರು ಕೋಡಿ
ಅಪ್ಪ ವಯೋವೃದ್ಧ
ಕೈ ಕಾಲು ನಡುಗುತ್ತಿದ್ದವು
ಹೀಗೊಂದು ಮುಂಜಾನೆ
ಸದ್ದಿಲ್ಲದೆ ಅಪ್ಪನ ಯಾತ್ರೆ
ನನ್ನ ಹೆಗಲ ಮೇಲಿನ ಪಲ್ಲಕ್ಕಿ
ಅಪ್ಪನ ನಿರಾಳ ನಗೆ ಕಣ್ಣು ಮುಚ್ಚಿದ್ದ
ನಾನು ಅಪ್ಪನ ನೋಡುತ್ತ ಬಿಕ್ಕುತ್ತಿದ್ದೆ
ಅಪ್ಪನ ಹೆಗಲ ಮೇಲೆ
ನಾನು ನಕ್ಕಿದ್ದೆ ಅವನೂ ನಕ್ಕಿದ್ದ
ನನ್ನ ಹೆಗಲ ಮೇಲೆ
ಅಪ್ಪ ನಕ್ಕ ಮೌನದಲಿ
ನಾನು ನಗಲಿಲ್ಲ
ದಶಕಗಳೇ ಕಳೆದವು
ನಿಲ್ಲಲೊಲ್ಲವು ಕಣ್ಣೀರು ಅಪ್ಪನ ನೆನಪು
–ಡಾ ಶಶಿಕಾಂತ ಪಟ್ಟಣ ರಾಮದುರ್ಗ
ತಾಯಿ ಇದ್ದರೆ ತವರು ಹೆಚ್ಚು, ತಂದಿ ಇದ್ದರ ಬಳಗ ಹೆಚ್ಚು ಅನ್ನುವಮಾತು ನೆನಪಾಯಿತು. ಅದರಲ್ಲಿಯೂ ಈ ಕೆಳಗಿನ ಸಾಲುಗಳು
ವಿಶೇಷವಾಗಿ ನನಗೆ ಕನೆಕ್ಟ್ ಆದವು
ಮೈಕೈ ನೋವು ಜ್ವರ
ಹಲ್ಲು ಹೊಡೆತ
ಎತ್ತಿಕೊಂಡು ಹೆಗಲಲಿ
ಓಡುತ್ತಿದ್ದ ಆಸ್ಪತ್ರೆಗೆ
ಔಷಧಿ ಮಾತ್ರೆ ಉಪಚಾರ
ಗುಡಿ ಮಸಿದೆ ಕಾಲೂರಿ
ಬೇಡಿಕೋಳ್ಳುತ್ತಿದ್ದ
ಕಣ್ಣೀರು ಕೋಡಿ
ಈ ಗುಣ ಎಲ್ಲರ ಅಪ್ಪನಲ್ಲಿಯೂ ಕಾಣುವ common factor ಅಂತ ಅನಸ್ತದ ಅಲ್ವಾ……?
ಅಪ್ಪ ಅನ್ನುವ ಆ ದೇವಮಾನವ ಅದದೆಷ್ಟು ಪ್ರೀತಿ ಕಾಳಜಿಯನ್ನು ತನ್ನ ಕರುಳಕುಡಿಗಳಿಗೆ ನೀಡುತ್ತಾನೆ. ಮಗ ಅಥವಾ ಮಗಳಿಗೆ ಹುಷಾರಿಲ್ಲ ಅನ್ನುವಾಗ… ಜಾತಿ-ಮತ-ಪಂತ ಧರ್ಮವನ್ನು ಮೀರಿ, ಅಪ್ಪ ಗುಡಿ ಗುಂಡಾರ ಮಸೀದಿ ಚರ್ಚು ಗಳಿಗೆ ಹೋಗಿ ದೇವರುಗಳಿಗೆ ಪೂಜೆ, ಪ್ರಾರ್ಥನೆ ,ಹರಕೆ ಸಲ್ಲಿಸುತ್ತಾನೆ. ಕೇರಿಯೊಳಗಿನ ಯಲ್ಲವ್ವನ ಕಡೆಗೂ ಹೋಗಿ ಭಂಡಾರ ಹಚ್ಚಿಸಿಕೊಂಡು ಬರುತ್ತಾನೆ. ದೇವರ ಹೇಳೋರು , ದೆವ್ವ ಬಿಡಿಸೊರ ಬಳಿಗೆ ಕರೆದುಕೊಂಡು ಹೋಗಿ ಚೀಟಿ ಕಟ್ಟಿಸುತ್ತಾನೆ.ಮಂತ್ರಹಾಕಿಸುತ್ತಾನೆ. ಅದರಲ್ಲಿ ಅವನಿಗೆ ನಂಬಿಕೆ ಇರಲಿ ಬಿಡಲಿ ಕರುಳಕುಡಿಗಾಗಿ ,ಅದರ ಒಳಿತಿಗಾಗಿ ಒಪ್ಪಿಕೋಳ್ಳುತ್ತಾನೆ. ಕರೆದುಕೊಂಡು ಹೋಗುತ್ತಾನೆ. ಅಪ್ಪ ಬಡವನೇ ಆಗಿರಲಿ, ಶ್ರೀಮಂತನೇ ಆಗಿರಲಿ…. ಅಪ್ಪ ಅಪ್ಪನೇ…!
ದೇವರು ಅದೇನು ಜಾದು ಮಾಡ್ತಾನೋ ಗೊತ್ತಿಲ್ಲ… ಈ ಗಂಡು ಜೀವಿಯಲ್ಲಿ ಅಪ್ಪ ಅನ್ನೊ ಭಾವ ಸೃಷ್ಟಿಸಿ,ಕಲ್ಲಿನಂಥಾ ಎದೆಯನ್ನೂ ಬೆಲ್ಲದ ಹಾಗೆ ಕರಗಿಸಿ ಬಿಡುತ್ತಾನೆ. ಈ ಪ್ರೀತಿ ಪ್ರಾಣಿ ಪಕ್ಷಿಗಳಲ್ಲಿಯೂ ಕಾಣುತ್ತೆವೆ ಆದ್ರೆ ಅವುಗಳ ಶೈಶವಾವಸ್ಥೆಯ ಅವಧಿ ತುಂಬಾ ಕಡಿಮೆ.ತಮ್ಮ ಮರಿಗಳಿಗೆ ಜನ್ಮ ಕೊಟ್ಟು ತರಬೇತಿ ನೀಡಿ ಅವು ದೂರವಾಗುತ್ತವೆ. ಮನುಷ್ಯನ ಸಂಬಂಧ ಹಾಗಲ್ಲ.ಮಾನವನು ಶೈಶವಾವಸ್ಥೆಯಲ್ಲಿ ಅಷ್ಟೆ ಅಲ್ಲ ಜೀವನ ಪೂರ್ತಿ ಈ ಅಪ್ಪ ಅನ್ನೋ ಆಲದ ಮರದ ನೆರಳಿನ ಕೆಳಗ ತಣ್ಣಗ, ಭದ್ರವಾಗಿ ಇರಲಿಕ್ಕೆ ಇಚ್ಚೆ ಪಡ್ತಾನ.
ಮಕ್ಕಳ ಪಾಲಿಗೆ ಅಪ್ಪ ಭಾವನಾತ್ಮಕ ಭದ್ರತೆ.
ನನ್ನ ಅಪ್ಪನೂ ಇವುಗಳನ್ನೆಲ್ಲಾ ನನಗಾಗಿ ಮಾಡಿದ್ದ.ನಾನು ಅಪ್ಪನಿಗೆ ಆರನೆಯ ಮಗಳು.”ಕಡಿಹುಟ್ಟು ಕಟ್ಟಾಣಿ”, ಅಪ್ಪನ ಪ್ರೀತಿ ಮಗಳು ಅಂತ ಎಲ್ಲರೂ ಕಾಡಸ್ತಿದ್ದರು. ನಾನು ನೋಡಲು ಅಪ್ಪನ ತರಹ ನನ್ನಪ್ಪ ನೋಡಲು ಸಿನಿಮಾ ನಟ ಡಾ. ರಾಜಕುಮಾರ ಮೆಕಪ್ ಇಲ್ಲದೆ ಇರುವಾಗ ಕಾಣುವಂತೆ ಕಾಣುತ್ತಿದ್ದರು.ಅವ್ವ ಸ್ವಲ್ಪ ಕಪ್ಪು ಅವಳಿಗೂ ನನಗೂ ಒಂದು ಚೂರು ಹೋಲಿಕೆ ಇರಲಿಲ್ಲ. ಅದಕ್ಕೆ ನಮ್ಮ ಮನಿಗೆ ಹಾಲು ಕೊಡುವ ಈರವ್ವ ಕಾಕಿ “ನಿನ್ನನ್ನು ಗೊಳ್ಳ ಹಾಕಿ ತಗೊಂಡಾರ…”ಅಂತ ಆಡಸ್ಯಾಡತಿದ್ದಳು.ಅದು ನನಗ ಖರೆ ಅನಿಸಿ , “ಹೌದಾ ಅಪ್ಪಾ… ನನ್ನ ಡೊಳ್ಳು ಹಾಕಿ ತೊಗೊಂಡಿರಿ..ಅಂತ ಅಳಮಾರಿ ಮಾಡಿ ಕೇಳಿದರ.”ಅಂಕಿ ನಿನ್ನ ಕಾಡಸಾಕ ಆಡಿಶ್ಯಾಡತಾಳ.. ಡೊಳ್ಳು ಹಾಕಿದರೆಲ್ಲರ ನಿನ್ನಂತಕಿ ಸಿಗತಾಳೆನ ಹುಚ್ಚಿ…” ಅಂತ ಸಮಾಧಾನ ಮಾಡುತ್ತಿದ್ದೆ. ಅವ್ವನಕಿಂತ ಅಪ್ಪನೇ ನನಗ ಹೆಚ್ಚಿಗೆ ಆಪ್ತನಾಗಿದ್ದ.ನನಗೆ ನಾಲ್ಕೈದು ವರ್ಷಗಳಿರಬಹುದು,ಆಗ ನಾನು ರಾತ್ರಿ ಭಾಳ ಹೆದರ್ತೀದ್ದೆ ಅನ್ನುವ ಕಾರಣಕ್ಕೆ ಅಪ್ಪ ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡಿಸಿ ಊರ ಹಣಮಪ್ಪನ ಗುಡಿಗೆ ಕರೆದುಕೊಂಡು ಹೋಗ್ತೀದ್ದಾ.ಗುರುವಾರ ದಿನ ತೆಗ್ಗಿನ ಮಠದ ಸ್ವಾಮಿಗಳ ಮುಂದ ಸವಾರೂಪಾಯಿ ದಕ್ಷಿಣೆ ಇಟ್ಟು, ಅವರ ಕಡೆಯಿಂದ ಮಂತ್ರಿಸಿದ ಚೀಟಿ ಕಟ್ಟಿಸಿಕೊಂಡು ಬರತಿದ್ದ.ಕಿರಿಕಿರಿ ಕಡಿಮ್ಯಾಗಿಲ್ಲ ಅಂತ, ರವಿವಾರ ದಿನ ಕೊಡೆಕಲ್ ಗುಡಿಗೆ ಕರೆದುಕೊಂಡ ಹೋಗಿ ಊದ, ಲೋಬಾನ,ಹಾಕಿ
ಸ್ವಾಮಿಗಳಿಗೆ ” ಯ್ಯಾಕೋ.. ಕೀರಿಕೀರಿ ಮಾಡ್ತಾಳ,ಗಾಳಿ ಶಕ ಏನಾರ ಅಂತ ಸಂಶಯ….ಅದಕ… ” ಅಂತ ಅಪ್ಪ ಹೇಳುದರೊಳಗ
ಸ್ವಾಮಿಗೊಳ ಚೀಟಿ ಮಂತ್ರಸಿ ತಾಯಿತದಾಗ ಹಾಕಿ ಕರಿದಾರಾಗ ಕಟ್ಟಿ ಕೊಳ್ಳಿಗೆ ಬಿಗದ ಹೆಣಿಗೆ ಅಂಗಾರ ಹಚ್ಚಿ ,”ಏನಿದ್ದರೂ ಎಲ್ಲಾ ಕಡಿಮಿ ಆಕ್ಕತಿ..ಹೋಗು…” ಅಂತ ಕಳಿಸ್ತಿದ್ರು.ಆದರೂ ಅಪ್ಪಗ ಸಮಾಧಾನ ಆಕ್ಕಿರಲಿಲ್ಲ.ಮೂರೂ ಸಂಜಿಲೆ ಮನಿಹೊರಗ ನಿಂದರಸಿ ಮಾರಿಮ್ಯಾಲ ನಿಂಬಿಹಣ್ಣ ಇಳಸಿ ಮೂಕಲೆ ಹಳ್ಳದ ಕಡೆ ಹೋಗಿ ಚೆಲ್ಲಿ ಬರ್ತಿದ್ರು.
ಕೆಂಪು ಮೆಣಸಿನಕಾಯಿ ಉಪ್ಪ ನಿಂದ ನೆದರ ತಗಿ ಅಂತ ಅವ್ವಗೂ ತಾಕಿತು ಮಾಡುತಿದ್ದರು. ಬೆಳಗಾವಿಗೆ ಹೋದಾಗೆಲ್ಲ ನೆನಪಲೇ ಕ್ಯಾರ ತರುತ್ತಿದ್ದರು,ಅದು ನೆದರ ತಗ್ಯಾಕನ….!!. ಊಟ ಮಾಡದಿದ್ದರ ಬೆಳಿಗ್ಗೆ ಎದ್ದ ಕೂಡಲ ರಂಜಕ ಹಿಡಿಯುವುದಕ್ಕ ಅವ್ವಗ ನೆನಪು ಮಾಡುದು ಅಪ್ಪನ ಕೆಲಸ. ನನ್ನ ಸಣ್ಣ ಅಣ್ಣಾ ನನ್ನ ಜೋತೆ ಜಗಳಾಮಾಡಿದರ “ಅಕಿ ನಾಜೂಕ ಅದಾಳ ಅಕಿಗೆ ಕಾಡಬ್ಯಾಡ, ಸುಮ್ನ ಕರಕೊಂಡು ಆಡು.ಅಕಿನ ಅಳಸಿದಿ ಅಂದ್ರ… ನಿನಗ ಗಜ್ಜ ಕೊಡತೇನಿ.. ” ಅಂತ ಅಣ್ಣಾಗೆ ಬೆದರಿಸ್ತಿದ್ದಾ.ಬ್ಯಾಸಗಿವಳಗ
ಬೆವರಿನಿಂದಾಗಿ ಗದ್ದದ ಮೇಲ *ಫೈನ* ಆಗಿತ್ತು. ಅದು ಕಡಿಮಿಯಾಗುವರೆಗೂ ಅಪ್ಪನದೆ ಕಾಳಜಿ.ಅದು ಜಲ್ದಿ ಕಡಿಮಿಯಾಗಬೇಕಂದ್ರ ಗುರವಾರಕ್ಕ ಒಮ್ಮೆ ಸಿಂಹಕ್ಕ ಅಣಗಸಿ ಪನಿವಾರ ತಿನಬೇಕು ಅನ್ನುವ ನಂಬಿಕೆ ಚಾಲ್ತಿ ಯೋಳಗಿತ್ತು ಆವಾಗ.ನಮ್ಮ ಓಣಿಯೊಳಗ ಗೌಡರ ಮಿನಿ ಕಟ್ಟಿ ಕಲ್ಲಿನ ಮ್ಯಾಲ ಸಿಂಹದ ಕೆತ್ತನೆ ಇತ್ತು ಅದಕ್ಕ ಪೂಜಾ ಮಾಡಿ ಅದಕ ಅಣಗಿಸಿ ಪನಿವಾರ ಹಂಚಿ ತಿನ್ನಬೇಕು.ಅದಕ ಅಪ್ಪ ಗುರವಾರ ಅಂಗಡಿಯಿಂದ ಲಗೂನ ಬರ್ತೀದ್ದರು.ಬರುಮುಂದ ಶೇಂಗಾ, ಪುಟಾಣಿ,ಬೆಲ್ಲ, ಚುರುಮುರಿನು ತರುತ್ತಿದ್ದರು. ನನ್ನ ಸಲುವಾಗಿ, ನಮ್ಮೂರಿಗೆ ಹತ್ತಿದ ಹಳ್ಳಿ ನಾಗೂರಿನ ಯಮನೂರಪ್ಪನ ಉರಸಿಗೆ ನಸಕಿಲೆ
ನಡಕೋಂತ ಹೋಗಿ,ಕೌಡಿ ಊದ ಲೋಬಾನ ಹಾಕಿ ಬೆಳ್ಳಿ ಕುದರಿ ಕೊಟ್ಟು,ಸಕ್ರಿ ಹಂಚತ್ತಿದ್ದರು.
ಇವೆಲ್ಲಾ ಹೆಚ್ಚು ಕಡಮಿ ಸಾಲಿಗೆ ಹೋಗುಕಿಂತ ಮುಂಚಿನ ನೆನಪುಗಳಾದರ. ನಾನು ಹೈಸ್ಕೂಲ್ ನಲ್ಲಿದ್ದಾಗ ಟೈಫಾಯಿಡ್ ಆಗಿ ತುಂಬಾ ವೀಕ್ ಆಗಿದ್ದೆ.ಆರಾಮ ಆದಮೇಲು ಬಡಕಲಾಗಿದ್ದ ನನ್ನ ಕಂಡು ಆರೋಗ್ಯ ಸುಧಾರಸ್ಲಿ ಅನ್ನೊ ಕಾರಣಕ್ಕ ಬದಾಮ.ಕ್ಯಾರಬೀಜ, ಕಲ್ಲಸಕ್ಕರಿ ದಿನಾ ಮುಂಜಾನೆ ತನ್ನಾಕ ಕೊಡುತ್ತಿದ್ದರು.ಅದಕ್ಕೂ ನಾನು ಸುಧಾರಿಸಲಿಲ್ಲ ಅಂದಾಗ ಅಪ್ಪನಿಗೆ ಯಾಕೋ ಇಂದು ಗಾಳಿ ಶಖಾ ಇರಬೇಕು ಅನ್ನೊ ಸಂಶಯ ಸುರುವಾಯಿತು.ಆದರೆ ಈಗ ನಾನು ಅವರ ಮಾತು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.ತಾಯತ, ಚೀಟಿ ಕಟ್ಟಿಸಿಕೊಳ್ಳೊದು ಮೂಢ ನಂಬಿಕೆ ಅನ್ನೊ ಅಭಿಪ್ರಾಯಕ್ಕೆ ಬಂದು ವಿರೋಧಿಸುತ್ತಿದ್ದೆ.ಆದರು ಅಪ್ಪ ತಮಗೆ ಇಷ್ಟ ಇಲ್ಲದಿದ್ದರೂ ಕೇರಿಯ ಎಲ್ಲವ್ವನ ಕಡೆಗೆ ಕರೆದುಕೊಂಡು ಹೋಗಲು ಅಕ್ಕನಿಗೆ ಸಮ್ಮತಿಸಿದರು. ನನಗೂ ಬೇಡಿಕೊಂಡ ದೆವ್ವ ಬಿಡಸುವ ಕಾರ್ಯಕ್ರಮ. ನಾ ಹೋಗುವುದಿಲ್ಲ ಅಂದದ್ದಕ್ಕ
ಅಕ್ಕಾ ಅತ್ತು ಕರೆದು ನನ್ನ ಮನವಲಿಸಿ ಎಲ್ಲವ್ವನ ಕಡೆಗೆ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾದಳು. ನಾನು ಒಲ್ಲದ ಮನಸ್ಸಿನಿಂದ ಹೋದೆ.ಆ ಎಲ್ಲಮ್ಮನ ಮೈಮೇಲೆ ದೇವರು, ದೇವ್ವ ಎರಡು ಬರುತ್ತಿದ್ದವು.ಅಲ್ಲಿ ಒಂದಷ್ಟು ಹೊತ್ತು ಕಳಿತು ಅಲ್ಲಿಯದೆಲ್ಲ ಗಮನಿಸಿದ ನನಗ ದೇವರನು ಈಕಿ ಮೈಯೋಳಗ ಬರ್ತದ, ಅಲ್ಲಿ ಕುಂತವರ ಮೈಯಾಗಿನ ದೆವ್ವ ನೂ ಅಕಿ ಮೈಯೋಳಗ ಬರತದ ಅಂದ್ರೆ ಏನೋ ಐತಿ. ಅಂತ ಅಲಿಂದ ಹೋರಬಂದು ಅದೆಲ್ಲ ಸುಳ್ಳು ಮೋಸ ಅಂತ ರಂಪಾಟ ಮಾಡಿದ್ದು ಬೇರೆ ಮಾತು.
ಈ ಎಲ್ಲ ಮಸುಕಾದ ಬಾಲ್ಯದ ಸಂಗತಿಗಳು ಆ ಸಾಲುಗಳಿಂದ ಸ್ಮತಿ ಪಟಲದ ಮ್ಯಾಲೆ ಬಂದು ಹೋದವು.
ಅಪ್ಪ ಹೆಗಲ ಮೇಲೆ ಕುಡ್ರಿಸಿಕೊಂಡು ವಿಜಯಪುರದ ಸಿದ್ದೇಶ್ವರ ಜಾತ್ರೆ ತೋರಿಸಿದ್ದು, ಬೆಳಗಾವಿಗೆ ಹೋದಾಗ ಮೊದಲ ತ್ರಡಿ ಸಿನಿಮಾ ಛೋಟಾ ಚೇತನ್ ತೋರಿಸಿದ್ದು.ಬೆಳಗಾವಿಗೆ ಹೊದಾಗಲೆಲ್ಲ ಸಂಪಿಗೆ ಹೂ ಮತ್ತು ಹಲಸಿನ ಹಣ್ಣು ನನಗೆ ಇಷ್ಟ ಅಂತ ಹೊತ್ತು ಕೊಂಡು ಬರ್ತಿದ್ದುದ್ದು .ವಿಜಯಪೂರದ ಮೋಹನ್ ಲಾಲ್ ಅಂಗಡಿಯಿಂದ ಮಾಖನಪೇಡಾ ನಾನಗಾಗಿ ಬೇರೆ ತರುವುದು.ಅಪ್ಪಾ ತಾನು ತಯಾರಿಸಿದ ಎಲ್ಲ ಆಭರಣಗಳನ್ನು ಮೊದಲು ನನಗೆ ತೊಡಿಸಿ ಖುಷಿ ಪಡತಿದ್ದ ,ಪೇಪರನೊಳಗ ಆರ್ಟ್ ಕಾಲ್ ಬಂದರ ಅದನ ಕಟ್ಮಾಡಿ ತೆಗೆದಿಟ್ಟು ಮನೆಗೆ ಬಂದವರಿಗೆಲ್ಲ ತೋರಿಸಿ “ನಮ್ಮ ಬೇಬಿ ಬರದದ್ದು ಪೇಪರನ್ಯಾಗ ಬಂದದ” ಅಂತ ಖುಷಿ ಪಡುತ್ತಿದ್ದ. ಅಪ್ಪ ಇದುವರೆಗೂ ತೋರಿಸಿದ ಪ್ರೀತಿ ಕಾಳಜಿ ಬಗ್ಗೆ ಹೀಗೆ ಬರದ್ರೆ ಬೃಹತ್ ಕಾದಂಬರಿ ಮಾಡುವಷ್ಟು ಸಂಗತಿಗಳು….!!
ಸುಪ್ತ ಮನಸಿನೊಳಗ ಬಾಗಿಲಾ ಹಾಕ್ಕೊಂಡು ಕುಂತು ನೆನಪುಗಳು
ದುಶ್ಯಂತನಿಗೆ ಉಂಗುರ ನೋಡಿ ಶಾಕುಂತಲೆ ನೆನಪಾದಾಂಗ ಈ ಕವನದಿಂದ ನೆನಪಾದವು.ಅಪ್ಪ ಅವ್ವ ಮಾಡು ಕಾಳಜಿ, ತೋರ್ಸೋ ಪ್ರೀತಿ ನಮಗ ಅವರು ಮಾಡುಮುಂದ, ಇರುಮುಂದ ಮಹತ್ವದ್ದು ಅನುಸುದಿಲ್ಲಾ…ಆದರ ಅದು ಸಿಗಲಿಲ್ಲಂದ್ರ …ಆ ಪ್ರೀತಿಗೆ..ಆ ಸೆಕ್ಯೂರಿಟಿಗೆ ಹಪಹಪಸ್ತೀವಿ.ಎಲ್ಲರ ಸಿಗತೈತೇನು ಅಂತ ಹುಡಕತೇವಿ ಅಲ್ಲಾ….ಏನಂತಿರಿ…..?
-ಡಾ. ನಿರ್ಮಲ ಬಟ್ಟಲ
ಬೆಳಗಾವಿ