ಕಲ್ಲು ಗಣಿಕಾರಿಕೆ 21 ಜನರ ವಿರುದ್ದ ಪ್ರಕರಣ ದಾಖಲು

e, ಕುಷ್ಟಗಿ-ಸುದ್ದಿ

ಕಲ್ಲು ಗಣಿಗಾರಿಕೆಯಿಂದ ನಿರ್ಮಾಣಗೊಂಡ ತಗ್ಗು/ಗುಂಡಿಗಳನ್ನು ಮುಚ್ಚದಿದ್ರೆ ಅಂತಹ ಕ್ವಾರಿ ಮಾಲೀಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಲಾಗುವದು ಎಂದು ಪೊಲೀಸರು ತಿಳಿಸಿದ್ದಾರೆ.
ತಾಲೂಕಿನ ಬಿಸನಾಳ ಹಾಗೂ ಕಲ್ಲುಗೋನಾಳ ಸೀಮಾ ವ್ಯಾಪ್ತಿಯಲ್ಲಿ ಗುಂಡಿಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡ ಬಾಲಕರ ಪ್ರಕರಣಗಳಿಂದ ಎಚ್ಚೆತ್ತುಕೊಂಡಿರುವ ಪೊಲೀಸರು, ಕಲ್ಲು ಗಣಿಗಾರಿಕೆ ನಡೆಯುವ ಸ್ಥಳಗಳಿಗೆ ತೆರಳಿ ತೆರೆದ ಗುಂಡಿಗಳನ್ನು ಪತ್ತೆ ಹಚ್ಚುತ್ತಿದ್ದಾರೆ. ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಜನರ ಪ್ರಾಣಕ್ಕೆ ಅಪಾಯವನ್ನುಂಟು ಮಾಡುವಂತೆ ಗುಂಡಿಗಳನ್ನು ಮುಚ್ಚದೆ ನಿರ್ಲಕ್ಷ್ಯ ವಹಿಸಿರುವ ಕ್ವಾರಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ.
ಬಿಸನಾಳ ಸೀಮಾದಲ್ಲಿರುವ ಕ್ವಾರಿಯ ಗುಂಡಿಯಲ್ಲಿ ಬಿದ್ದು ಬಾಲಕ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಕ್ವಾರಿ ಮಾಲೀಕರಾದ ಹನುಮಂತಮ್ಮ ಪೊಲೀಸ್ ಪಾಟೀಲ್ ಎನ್ನುವವರ ವಿರುದ್ಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಲ್ಲದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಹನುಮಂತಮ್ಮ ಸೇರಿ ೮ಜನರ ವಿರುದ್ಧ ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಸದ್ಯ ಕುಷ್ಟಗಿ, ತಾವರಗೇರಾ ಹಾಗೂ ಹನುಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರತ್ಯೇಕ ೩ಪ್ರಕರಣ ದಾಖಲಾಗಿದ್ದು, ೨೧ಜನರಿಗೆ ನೋಟಿಸ್ ಜಾರಿಯಾಗಲಿವೆ.

ತಾಲೂಕಿನ ಸೇಬಿನಕಟ್ಟಿ ಸೀಮಾ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿರುವ ಹನುಮಸಾಗರ ಠಾಣೆ ಪೊಲೀಸರು, ಕಲ್ಲುಗಣಿಗಾರಿಕೆ ನಡೆಸಿ ಗುಂಡಿಗಳನ್ನು ಮುಚ್ಚದೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಕ್ವಾರಿ ಮಾಲೀಕರಾದ ಬೆಂಗಳೂರು ಮೂಲದ ವಿವೇಕ್, ಕೊಪ್ಪಳದ ಸಿ.ಬಿ.ಮಹಾಂತಯ್ಯನಮಠ, ಹೂಲಗೇರಿಯ ರೇಖಪ್ಪ ರಾಠೋಡ್, ಶಿವಬಸಮ್ಮ ಪಾಟೀಲ್, ಕಡೂರಿನ ಶಿವಶಂಕರಗೌಡ ಪಾಟೀಲ್, ಬಾಗಲಕೋಟೆ ಜಿಲ್ಲೆ ಇಳಕಲ್ ಮೂಲದ ಶಾಂತಪ್ಪ ಗುರುಂ, ಶಿವಶರಣಪ್ಪ ಆಲಮೇಲ್, ಸುಭಾಸ್ ಹರಿಹರ, ಮಲ್ಲಿಕಾರ್ಜುನ ಶೆಟ್ಟರ್, ಶರಣಪ್ಪ ಗುರುಂ, ಮರ್ತುಜಾಸಾಬ ಕರಡಿ ಹಾಗೂ ಹಿರೇಓತಗೇರಿಯ ಲಕ್ಷ್ಮಿಪುತ್ರಪ್ಪ ರೇವಡಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ತಾಲೂಕಿನ ಪರಸಾಪುರ, ಬಿಸನಾಳ, ಕಲಕೇರಿ ಹಾಗೂ ಕ್ಯಾದಿಗುಪ್ಪ ಸೀಮಾ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿದ ಕುಷ್ಟಗಿ ಪೊಲೀಸರು, ಪರಸಾಪುರದ ಗೂಡಸಾಬ ವೆಂಕಟಾಪುರ, ಇಳಕಲ್‌ನ ಹನುಮಂತಮ್ಮ ಪೊಲೀಸ್ ಪಾಟೀಲ್, ದೋಟಿಹಾಳದ ಲಕ್ಷ್ಮವ್ವ ಕೊಳ್ಳಿ, ಕ್ಯಾದಿಗುಪ್ಪಾದ ಮಲ್ಲಿಕಾರ್ಜುನ ಶೆಟ್ಟರ್, ಹನುಮಂತ ತಳವಾರ ಹಾಗೂ ರಾಮರಾವ್ ದೇಸಾಯಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇನ್ನು, ತಾವರಗೇರಾ ಪೊಲೀಸರು ಕಳಮಳ್ಳಿ ಸೀಮಾ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿ ಹೂಲಗೇರಿಯ ರೇಖಪ್ಪ ರಾಠೋಡ್ ಹಾಗೂ ಇಳಕಲ್‌ನ ರಿಯಾನಬಾನು ಉಸ್ಮಾನ್ ಗಣಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
—————————————————

ಕಲ್ಲು ಗಣಿಗಾರಿಕೆ ನಡೆಸಿ ತಗ್ಗು/ಗುಂಡಿಗಳನ್ನು ಮುಚ್ಚದೆ ನಿರ್ಲಕ್ಷ್ಯ ವಹಿಸಿರುವ ಕ್ವಾರಿ ಮಾಲೀಕರ ವಿರುದ್ಧ ಕುಷ್ಟಗಿ, ಹನುಮಸಾಗರ ಹಾಗೂ ತಾವರಗೇರಾ ಠಾಣೆ ವ್ಯಾಪ್ತಿಯಲ್ಲಿ ಪ್ರತ್ಯೇಕ ೩ಪ್ರಕರಣಗಳಲ್ಲಿ ೨೧ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೊದಲ ಹಂತದಲ್ಲಿ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು. ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.’

  • -ಎನ್.ಆರ್.ರುದ್ರಪ್ಪ, ಸಿಪಿಐ ಕುಷ್ಟಗಿ
Don`t copy text!