ಹೊಂನ್ನಿನೊಳಗೊಂದೊರೆಯ

ಹೊಂನ್ನಿನೊಳಗೊಂದೊರೆಯ

ಅನುಭವ ಮಂಟಪ ಸ್ಥಾಪಿಸಿ, ಜಗತ್ತಿಗೆ ಪ್ರಜಾಪ್ರಭುತ್ವದ ಮೊದಲ ಪಾಠ ಕಲಿಸಿದ ಬಸವಣ್ಣನವರ ಹೆಸರು ಎಲ್ಲೆಡೆ ವ್ಯಾಪಿಸಿತ್ತು. ಸಮಾಜೋಧಾರ್ಮಿಕ ಕಾರ್ಯಗಳ ಜೊತೆಗೆ ಬಿಜ್ಜಳನ ಪ್ರಧಾನ ಮಂತ್ರಿಯಾಗಿ ಆಡಳಿತದ ಕರ್ತವ್ಯಗಳನ್ನು ಅಷ್ಟೇ ಸಮರ್ಥವಾಗಿ ಬಸವಣ್ಣನವರು ನಿಭಾಯಿಸುತ್ತಿದ್ದರು. ಆದರೆ ಸದಾ ಬಸವಣ್ಣನವರನ್ನು ದ್ವೇಷಿಸುತ್ತಿದ್ದ ಕೆಲವರು ಆಗಾಗ ಅವರ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಬಿಜ್ಜಳನೆದುರಿಗೆ ಮಾಡುತ್ತಿದ್ದರು.
ಒಮ್ಮೆ ಬಿಜ್ಜಳ ಬಸವಣ್ಣನವರನ್ನು ಪರೀಕ್ಷಿಸಬೇಕೆಂದು ಮಾರುವೇಷದಲ್ಲಿ ಬಸವಣ್ಣನವರ ಮಹಾಮನೆಗೆ ಬಂದ. ಸಂಜೆಯ ಸಮಯ ಬಸವಣ್ಣನವರು ದೀಪದ ಬೆಳಕಿನಲ್ಲಿ ಏನೋ ಬರೆಯುವುದರಲ್ಲಿ ಮಗ್ನವಾಗಿದ್ದರು. ಒಳಗಡೆ ಬಂದ ಜಂಗಮವೇಷದ ಅತಿಥಿ ಯನ್ನು ಸ್ವಾಗತಿಸಿ, ಉಚಿತ ಆಸನದಲ್ಲಿ ಕುಳ್ಳಿರಿಸಿ ಮತ್ತೆ ಕೆಲ ಹೊತ್ತು ಕೆಲಸದಲ್ಲಿ ಮಗ್ನವಾದರು. ಕೆಲಸ ಮುಗಿದ ನಂತರ ಮತ್ತೊಂದು ಸಣ್ಣ ದೀಪ ಹೊತ್ತಿಸಿ ಈಗಾಗಲೆ ಉರಿಯಿತ್ತಿದ್ದ ದೊಡ್ಡ ದೀಪವನ್ನು ಆರಿಸಿದರು. ಆಮೇಲೆ ಬಂದ ಅತಿಥಿಯ ಕುಶಲೋಪರಿಯನ್ನು ವಿಚಾರಿಸಿ ಬಂದ ಕಾರಣವನ್ನು ಕೇಳಿದರು.
ಬಸವಣ್ಣನವರ ವರ್ತನೆಯಿಂದ ಆಶ್ಚರ್ಯಚಕಿತನಾದ ಆಗಂತುಕ ಅದಿರಲಿ ಬಸವಣ್ಣನವರೆ, ಮೊದಲು ಉರಿಯುತ್ತಿದ್ದ ದೊಡ್ಡ ದೀಪವನ್ನು ಆರಿಸಿ, ಈ ಪುಟ್ಟ ದೀಪ ಏಕೆ ಹಚ್ಚಿದಿರಿ? ಎಂದು ಪ್ರಶ್ನಿಸಿದ. ಜಂಗಮರೆ, ಇಲ್ಲಿಯವರೆಗೆ ನಾನು ಮಾಡಿದ್ದು ರಾಜ ಕಾರ್ಯ. ಅದಕ್ಕಾಗಿ ಮೊದಲು ಉರಿಯುತ್ತಿದ್ದ ದೀಪಕ್ಕೆ ಬಳಸಿದ ಎಣ್ಣೆ ರಾಜಭಂಡಾರದ್ದು. ಈಗ ತಮ್ಮೊಂದಿಗೆ ಭೇಟಿ ನನ್ನ ವೈಯಕ್ತಿಕ. ಅದರಿಂದ ಈ ದೀಪಕ್ಕೆ ಬಳಸಿದ ಎಣ್ಣೆ ನಾನು ಕಾಯಕದಿಂದ ಸಂಪಾದಿಸಿದ್ದು ಎಂದು ಬಸವಣ್ಣನವರು ಉತ್ತರಿಸಿದರು.ಬಸವಣ್ಣನವರ ಪ್ರಾಮಾಣಿಕತೆಯನ್ನು ಕಣ್ಣಾರೆ ಕಂಡ ಮಾರುವೇಷದ ಬಿಜ್ಜಳನಿಗೆ ಸಂತೋಷ ತಡೆಯದಾಯಿತು. ಇಂಥ ಮಹಾಮಂತ್ರಿಯನ್ನು ಪಡೆದುದಕ್ಕೆ ಹೆಮ್ಮೆ ಎನಿಸಿತು. ತಕ್ಷಣ ಮಾರುವೇಷ ಕಳಚಿ ತಟ್ಟನೆ ಎದ್ದು ನಿಂತ ಬಿಜ್ಜಳ ಭಲೆ, ಭಲೆ, ನಿಮ್ಮಂಥ ಮಹಾನುಭಾವರನ್ನು ಪಡೆದ ನಾನೇ ಧನ್ಯ. ಕಲ್ಯಾಣದ ಪ್ರಜೆಗಳು ಧನ್ಯರೆಂದು ಭಾವಪೂರ್ಣವಾಗಿ ಬಸವಣ್ಣನವರನ್ನು ಆಲಂಗಿಸಿದ. ತಾನು ಸಂಶಯ ಪಟ್ಟದ್ದಕ್ಕಾಗಿ ಪಶ್ಚತ್ತಾಪಪಟ್ಟ ಬಿಜ್ಜಳ.

ಶ್ರೀಮತಿ ರೇಖಾ ಶಿ ವಡಕಣ್ಣವರ್
ಲಕ್ಷ್ಮೇಶ್ವರ

Don`t copy text!