ನಿಜಶರಣ ಅಂಬಿಗರ ಚೌಡಯ್ಯನವರು
ನಿಜಶರಣ ಅಂಬಿಗರ ಚೌಡಯ್ಯನವರು ಶ್ರೇಷ್ಠ ವಚನಕಾರರು. ಅವರು ರಚಿಸಿದ.
ವಚನಗಳಲ್ಲಿ ಸು. ೩೮೦ ವಚನಗಳು ನಮಗೆ ಲಭ್ಯವಾಗಿವೆ. ದೊರಕಿದ ವಚನಗಳಿಂದಲೇ ಆತನ ವ್ಯಕ್ತಿತ್ವವನ್ನು ಅರಿಯಬಹುದು. ಅಂಬಿಗರ ಚೌಡಯ್ಯನ ವಚನಾಂಕಿತನಾಮ ಅವನ ಹೆಸರು ಮತ್ತು ಜಾತಿಯೇ ಆಗಿದೆ. ಹನ್ನೆರಡನೆಯ ಶತಮಾನದ ಎಲ್ಲಾ ವಚನಕಾರರು(ಶಿವಶರಣರು) ಸಾಮಾನ್ಯವಾಗಿ ದೇವರು, ಧರ್ಮ, ಭಕ್ತಗುರು, ಲಿಂಗ-ಜಂಗಮ, ಕಾಯಕ-ದಾಸೋಹ ಅಲ್ಲದೇ ಸಾಮಾಜಿಕ ವಿಷಮತೆ, ಮಾನವ ಸಮಾನತೆಯನ್ನು ಪ್ರಮುಖವಾಗಿ ಕಾಣುತ್ತವಲ್ಲದೆ ಬಂಡಾಯ ಪ್ರತಿಜ್ಞೆ ಬಿಸಿ ಹೆಚ್ಚಾಗಿದೆ. ಅವರ ನಡುವೆ ಇದ್ದ ಚೌಡಯ್ಯ ತನ್ನ ಹೆಸರು ಮತ್ತು ಜಾತಿಯನ್ನು ತನ್ನ ಅಂಕಿತವಾಗಿರಿಸಿಕೊಂಡು ಸ್ವಾಭಿಮಾನದಿಂದ ಮೆರೆದಿದ್ದಾನೆ.
ಉದಾಹರಣೆಗಾಗಿ ಬಸವಣ್ಣನವರು “ಕೂಡಲಸಂಗಮದೇವ” ಪ್ರಭುದೇವರ “ಗುಹೇಶ್ವರ” ಚನ್ನಬಸವಣ್ಣ “ಕೂಡಲಚೆನ್ನಸಂಗಮದೇವ” ಸಿದ್ಧರಾಮನ “ಕಪಿಲಸಿದ್ಧಮಲ್ಲಿಕಾರ್ಜುನ” ಇಂತಹ ಹಲವಾರು ವಚನಾಂಕಿತಗಳು ಕಂಡು ಬರುತ್ತವೆ. ಆದರೆ ಚೌಡಯ್ಯನ ಅಂಕಿತ ಹಾಗಲ್ಲ “ನನ್ನಂತೆ ನಾನಾಗುವೆ” ಸಾಧನೆಯ ಪ್ರತೀಕದಂತೆ ಕಾಣುತ್ತದೆ. ನಿನ್ನ ಅರಿವಿನ ಕುರುಹಾಗಿರುವ ಇಷ್ಟಲಿಂಗವನ್ನು ಅನು ಸಂಧಾನಗೈದು, ನಿನ್ನ ಸ್ವರೂಪವನ್ನು ಕಂಡುಕೊಂಡು ನಿನ್ನಂತೆ ನೀನಾಗು ಎಂದು ಅರುಹುತ್ತದೆ. ಇಂತಹ ಜ್ಞಾನದ ಸಂಕೇತವಾಗಿ ಕಾಣುತ್ತದೆ. ಅಂಬಿಗರ ಚೌಡಯ್ಯನ ಅಂಕಿತನಾಮ ತನ್ನನ್ನು ತಾನು ತಿಳಿದುಕೊಳ್ಳುವ ಮೂಲಕ ಬೇರೆಯವರನ್ನು ತಿಳಿಯಬೇಕು. ಅನ್ಯರನ್ನು ಪ್ರೀತಿ ಗೌರವದಿಂದ ಕಾಣಬೇಕು. ಅನ್ಯರ ಬದುಕಿಗೂ ಆಸರೆಯಾಗಿ ನಿಂತುಕೊಳ್ಳಬೇಕು ಎನ್ನುವ ಮತ ಉದಾತ ವಿಚಾರಗಳು ಅವನಲ್ಲಿವೆ.
ವಚನಕಾರ ಘನಲಿಂಗಿ ದೇವನು ಎನ್ನ ಮನವೊಪ್ಪಿ ಪಂಚರೈವರ ಸಾಕ್ಷಿಯಾಗಿ ನಡುವುತ್ತಿಪ್ಪೆನ್ನಯ್ಯ ನಿಮ್ಮಾಣೆಯೆನಗೆ ದೋಹರ ಕಕ್ಕಯ್ಯ ಮಾದರ ಚನ್ನಯ್ಯ ಅಂಬಿಗರ ಚೌಡಯ್ಯಯಿಂತಪ್ಪ ಶಿವಶರಣರ ಮನೆಯ ಬಾಗಿಲಿಕ್ಕುವ ಸೋನಾಗನ ಮಾತಿಎನ್ನನಿರಿಸಯ್ಯಾ ಎಂದು ಹೆಸರಿಸುವನು, ಗುರುಬೋಧಾಮೃತ ಬರೆದ ಮಹಾಲಿಂಗರು “ಕುಂಬಾರ ಗುಂಡಯ್ಯ, ಅಂಬಿಗರ ಚೌಡಯ್ಯ ಕೆಂಬಾವಿಯೊಳಗೆ ಮೊರೆದ ಬೊಗಣ್ಣನಿಗೆ ಸಂಭ್ರಮದೊಳೆರಗಿ ನಮಿಸುವೆನು” ಎಂಬ ಉಲ್ಲೇಖಗಳು ಅಂಬಿಗರ ಚೌಡಯ್ಯನು ತನ್ನ ಸಮಕಾಲೀನ ಹಾಗೂ ತದನಂತರದ ಕಾಲದಲ್ಲಿಯೂ ಅಚ್ಚಳಿಯದ ಪ್ರಭಾವ ಬೀರಿದ ಶರಣೆಂಬುದು ಖಚಿತವಾಗುತ್ತದೆ.
ಇನ್ನೊಂದೆಡೆಯಲ್ಲಿ ನಿಜವಾದ ಶರಣರೊಳಗಿದ್ದ ಅಂಬಿಗರ ಚೌಡಯ್ಯನು ತನ್ನನ್ನು “ನಿಜಶರಣ”ನೆಂದು ಆತ್ಮಸ್ಯೆರ್ಯದಿಂದ ಹೇಳಿಕೊಳ್ಳುತ್ತಾನೆ. ವಚನಗಳಲ್ಲಿ ನಿಜಶರಣ ಎಂಬುದರ ಪ್ರಯೋಗವು ಹಲವಾರು ಕಡೆಗಳಲ್ಲಿ ಕಾಣುತ್ತೇವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನೋಡಬಹುದು.
ಪಡಿಹಾರಿ ಉತ್ತಣ್ಣಗಳ ಪಾದುಕೆಯಿಂದ ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು ಚಂಡಿ ನಾಯಿಗಳ ಕಂಡು ಮನ ಹಸಿತ್ತೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜ ಲಿಂಗವರಿಯದವನ ಭಕ್ತನೆಂದರೆ ಆಘೋರ ನರಕವೆಂದಾತ ನಮ್ಮ ಅಂಬಿಗರ ಚೌಡಯ್ಯ ಆಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಕೀಳು ಕುಲವೆಂದೇ ಪರಿಗಣಿತವಾಗುತ್ತಿದ್ದ ಅಂಬಿಗರ ಮನೆತನದಲ್ಲಿ ಹುಟ್ಟಿದ ಚೌಡಯ್ಯನು ವರ್ಣಾಶ್ರಮಿಗಳಾದ ಮೇಲು ವರ್ಗದವರ ನಿಂದೆ ಅವಹೇಳನಕ್ಕೆ ಗುರಿಯಾಗಿದ್ದಾನೆ. ಕೀಳುಕುಲವೆಂದು ಹಳಿಯುವ ಕುಲಗೇಡಿಗಳನ್ನು ಕುರಿತು ಈ ವಚನದಲ್ಲಿ ತನ್ನ ನಿಜಶರಣನ ಶಕ್ತಿ
ಸಾಮರ್ಥ್ಯವನ್ನು ಹೇಳಿಕೊಂಡಿದ್ದಾನೆ.
ಅಂಬಿಗ ಅಂಬಿಗ ಎಂದು ಕುಂದು ನುಡಿಯದಿರು ನಂಬಿದರೆ ಒಂದೆ ಹುಟ್ಟಲಿ ಕಡೆ ಹಾಯಿಸುವನೆಂದಾತ ನಮ್ಮ ಅಂಬಿಗರ ಚೌಡಯ್ಯ
೧೨ನೆಯ ಶತಮಾನದ ವಚನಕಾರರ ಚಳುವಳಿ: ಅಂಬಿಗರ ಚೌಡಯ್ಯನ ಮೇಲೆ ಬೀರಿದ ಪ್ರಭಾವ
ಕರ್ನಾಟಕದ ಇತಿಹಾಸದಲ್ಲಿ ಶಿವಶರಣರ ಚಳುವಳಿ ಒಂದು ಅಪೂರ್ವ ಘಟನೆ ವಚನಗಳ ಸೃಷ್ಟಿ ಒಂದು ಅನನ್ಯ ಪ್ರಯೋಗ, ಸಮಾಜದ ಎಲ್ಲಾ ವರ್ಗ ವರ್ಣಗಳ ಜನಸಮುದಾಯದ ಶರಣರು ಕೈಗೊಂಡಿದ್ದು ವ್ಯಕ್ತಿ ಕಲ್ಯಾಣ ಮತ್ತು ಸಮಾಜ ಕಲ್ಯಾಣ ಚಳುವಳಿಯ ಸೃಷ್ಟಿಯೆನಿಸಿದೆ. ೧೨ನೆಯ ಶತಮಾನದಲ್ಲಿ ಕರ್ನಾಟಕದ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳು ದಿವಾಳಿಯೆದ್ದವು. ಮಠಾಧೀಶರು, ಧಾರ್ಮಿಕ, ಸಾಮಾಜಿಕ ಮುಖಂಡರು ಬ್ರಷ್ಟರಾಗಿ ಜನರನ್ನು ಶೋಷಿಸುತ್ತಿದ್ದರು. ಅಪಾರ ಹಣ ಅಂತಸ್ತು ಸಂಗ್ರಹಿಸಿ ಆಳರಸರಂತೆ ಮೆರೆಯುತ್ತಿದ್ದರು. ದೇವಾಲಯಗಳನ್ನು ನಡೆಸಿಕೊಂಡು ಬರುವ ಪುರೋಹಿತಶಾಹಿಗಳು ವ್ಯಾಪಾರಿಗಳಂತೆ ವರ್ತಿಸುತ್ತಿದ್ದರು.
ಮಠ, ಮಂದಿರ, ದೇವಾಲಯಗಳು ಶೋಷಣೆಯ ಕೇಂದ್ರಗಳಾಗಿದ್ದವು. ಧರ್ಮಾಧಿಪತಿಗಳು ವ್ಯಾಪಾರಸ್ಥರು, ಆಳುವ ರಾಜರುಗಳನ್ನು ಒಲೈಸಿ ಸಾಮಾನ್ಯ ಪ್ರಜೆಗಳು ಬೆಳೆದ ಬೆಳೆಗಳನ್ನು ಸರಕುಗಳನ್ನು ಕಾಲುಭಾಗಕ್ಕೆ ಖರೀದಿಸಿ ಆಣೆ ಭಾಗಕ್ಕೆ ಮಾರುತ್ತಿದ್ದರು. ಕೆಲವು ಮಠಮಾನ್ಯಗಳು ಹಣವನ್ನು ಟಂಕಿಸುವ ಅಧಿಕಾರ ಹೊಂದಿದ್ದವು. ಸಾಮಾನ್ಯ ಜನರು ಗುಡಿ ಗುಂಡಾರಗಳಲ್ಲಿ ಮಠಗಳಲ್ಲಿ ಬಿಟ್ಟ ಸೇವೆಯನ್ನು ಕಡ್ಡಾಯವಾಗಿ ಮಾಡಬೇಕಾಗಿತ್ತು.
ರಾಜರು ಸಹ ಮಠಾಧಿಪತಿಗಳ ಮಾತನ್ನು ಕೇಳಿಕೊಂಡು ವಿಜೃಂಭಿಸುತ್ತಿದ್ದರು. ಸಾಮಾನ್ಯರ ಮೇಲೆ ಹಾಕಬಾರದ ತೆರಿಗೆಗಳನ್ನು ಹಾಕಿ ಹಣದಿಂದ ಸೂಲಿಯುತತಿದ್ದರು. ಅಸಂಖ್ಯಾತ ಸೈನ್ಯವನ್ನು, ಹೊಂದಿ ರಾಜ್ಯವನ್ನು ಹಿಂಸೆಯಿಂದ ವಿಸ್ತರಿಸುತ್ತಾ ವೈಭವಯುತ ಕಾಲ ಕಳೆಯುತ್ತಿದ್ದರು. ಈ ಅವಧಿಯಲ್ಲಿ ಅಂಬಿಗ, ಅಕ್ಕಸಾಲಿಗ, ಆಗಸ, ಕುಂಬಾರ, ಕಂಬಾರ, ನೇಕಾರ, ನಾಯಿಂದ, ಉದ್ದಾರ, ಬಣಜಿಗಾರ, ಬಡಿಗ, ಗಾಣಿಗ, ವೈದ್ಯ, ವ್ಯವಸಾಯಗಾರ, ಬಾರಿಕೇರ, ಕೋಲಕಾರ, ವಾಲಿಕಾರ, ತಳವಾರ ಮುಂತಾದ ಕಾಯಕ ಜೀವಿಗಳು ರಾಜರು ಮತ್ತು ಮೇಲ್ವರ್ಗದ ಅಧಿಕಾರಿಗಳು ವಿಧಿಸಿದ ತೆರಿಗೆಗಳನ್ನು ದಂಡಗಳನ್ನು ಕಟ್ಟುವುದರಲ್ಲಿಯೇ ಸವೆದು ಹೋಗುತ್ತಿದ್ದರು.
ಅಂತವುಗಳನ್ನು ಶಾಸನಗಳು, ಗಾಣದಕೆರೆ, ಮಗ್ಗದೆರೆ, ದೊಣಿದೆರೆ, ತಪ್ಪದರೆ, ಕುಮ್ಮೆದೆರೆ, ಮದುವೆದೆರೆ, ಬಾಸಿಂಗದೆರೆ, ಮೈನೆರೆದ ತೆರೆ, ಒಡಲಿಟ್ಟಿದ್ದರೆ, ರಾಜಕುಮಾರ ಮತ್ತು ರಾಜರಾಣಿಯರ ದರ್ಶನದರೆ ಹೀಗೆ ಎಲ್ಲಾ ಕ್ಷೇತ್ರದಲ್ಲಿ ತೆರಿಗೆ, ಕಪ್ಪು ಕಾಣಿಕೆ, ದಂಡ ಇತ್ಯಾದಿಗಳನ್ನು ಸಂದಾಯ ಮಾಡಬೇಕಾಗುತ್ತಿತ್ತು. ಅಲ್ಲದೇ ಎತ್ತು, ಎಮ್ಮೆ, ಹಸು, ಕುರಿ, ಕತ್ತೆ, ಆಡು, ಗುಡಿ, ತಿಪ್ಪೆಗುಂಡಿಗೂ ತೆರಿಗೆ ವಿಧಿಸಲಾಗುತ್ತಿತ್ತು. ಇದರಿಂದಾಗಿ ಜನಸಾಮಾನ್ಯರ ಸ್ಥಿತಿ ಅತ್ಯಂತ ಶೋಚನೀಯವಾಗಿತ್ತು.
ಆಳುವ ಆರಸರು, ಪುರೋಹಿತಶಾಹಿಗಳು, ದರ್ಪದಿಂದ ಮೆರೆಯುವ ಅಧಿಕಾರಿಗಳು ನಡೆಸುತ್ತಿರುವ ಆಳ್ವಿಕೆ, ದಬ್ಬಾಳಿಕೆ, ಅನ್ಯಾಯ, ಅತ್ಯಾಚಾರ, ಮೋಸ, ವಂಚನೆಗಳಿಂದ ಬೆಸತ್ತ ಕಾಯಕ ಜೀವಿಗಳು ದಂಗೆಯೆಳಲು ಕಾಯುತ್ತಿದ್ದರು. ಅದೇ ಸಂದರ್ಭದಲ್ಲಿ ಕಲಚುರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಬಸವಣ್ಣನವರು ಅರ್ಥಮಂತ್ರಿಯಾಗಿ ಈ ಕಾಯಕ ಜೀವಿಗಳ ಕಷ್ಟವನ್ನು ಅರ್ಥೈಸಿಕೊಳ್ಳುತ್ತಾರೆ. ಅವರೆಲ್ಲರಿಗೂ ತೆರಿಗೆಗಳಿಂದ ಸಡಲಿಸುತ್ತಾನೆ. ಶರಣ ಕಾಯಕರೆಲ್ಲರನ್ನು ಒಗ್ಗೂಡಿಸಿ ಇವರು ಮಾಡುವ ಕಾಯಕಗಳನ್ನು ಗೌರವಿಸಿ ಕಾಯಕವೂ ಕೀಳಲ್ಲ – ಮೇಲಲ್ಲ ಎಲ್ಲಾ ಕಾಯಕಗಳೂ ಸಮಾನ ಗೌರವಕ್ಕೆ ಪಾತ್ರವಾದವುಗಳು ಕಾಯಕವೇ ಕೈಲಾಸವಾಗಿದ್ದರಿಂದ ಯಾವುದೊಂದು ಕಾಯಕದ ಕೊರತೆ ಇದ್ದರೂ ಸಮಾಜ ನಡೆಯುವುದಿಲ್ಲ.
ಕಾರಣ ಎಲ್ಲಾ ಕಾಯಕವುಳ್ಳವರನ್ನು ಸಮಾಜ ಗೌರವಿಸುವಂತಾಗಬೇಕೆಂಬ ಆದರ್ಶ ನಿಲವ ಬಸವಣ್ಣನವರಾದಾಗಿತ್ತು. ಸಮಾಜ ಕಟ್ಟುವ ಸಮಗ್ರತೆ ತರುವ ಚಿಂತನೆಗೆ ಚಾಲನೆ ನೀಡುತ್ತಾನೆ. ವರ್ಣಾಶ್ರಮ ಧರ್ಮದ ಪ್ರಭಾವದಿಂದಾಗಿ ಜಿಡ್ಡುಗಟ್ಟಿರ ಜಾತಿ ವ್ಯವಸ್ಥೆಯ ವಿರುದ್ಧ ಪ್ರತಿಭಟಿಸಿದ್ದಾನೆ. ಸಾಮಾಜಿಕ, ಧಾರ್ಮಿಕ ಶೋಷಣೆಯಲ್ಲಿ ಸಿಲುಕಿದ ಜನವರ್ಗದ ಪರವಾಗಿ ಧ್ವನಿಯೆತ್ತಿದ್ದಾನೆ. ಶೋಷಿತರ ತಮ್ಮ ಕ್ರಿಯಾಶೀಲತೆಯಿಂದಲೂ ಜೀವನವನ್ನು ಎದುರಿಸುವ ಛಲಗಾರಿಕೆಯಿಂದಲೂ ಬದುಕನ್ನು ಛಲವನ್ನು ತೋರುತ್ತಲೇ ಬಂದಿದ್ದಾರೆ.
ವಚನ ಚಳುವಳಿಯ ವಿಶೇಷವೆಂದರೆ ಭದ್ರಗೊಳಿಸುವ ವರ್ಣಾಶ್ರಮ ಧರ್ಮವನ್ನು ವಿರೋಧಿಸುತ್ತಾನೆ. ಕೆಳಜಾತಿಗಳ ಮಾನವೀಯ ಸಂಸ್ಕೃತಿಗೆ ಜೀವಕೊಟ್ಟಿದ್ದು ಏಕದೇವೋಪಾಸನೆಯ ಕಡೆಗೆ ಕರೆದೊಯ್ಯಲು ಸಿದ್ಧತೆ ನಡೆಸಿದ ಬಸವಣ್ಣನ್ನವರ ನೇತೃತ್ವದಲ್ಲಿ ವಚನಕಾರರ ಚಳುವಳಿ ಸಮಾಜಕ್ಕೆ ಸೂರ್ತಿಯಾಯಿತು. ಕಾಯಕದ ನೆಲೆಯಿಂದ ಬಂದ ಎಲ್ಲಾ ಶರಣರನ್ನು ಒಂದುಗೂಡಿಸಿದ ಬಸವಣ್ಣ ಕಾಯಕದಿಂದ ಬಂದ ಆದಾಯದ ಕೆಲಭಾಗವನ್ನು ಬಡವರಿಗೆ, ನಿರ್ಗತಿಕರಿಗೆ ದಾನ ಮಾಡಬೇಕೆಂದು ಭೋದಿಸುತ್ತಾನೆ. ಈ ಬಡ ಜನತೆಯೇ ಜಂಗಮರೆಂದು ಭಾವಿಸಲು ಕರೆಕೊಡುತ್ತಾನೆ. ಕಾಯಕ ಜೀವಿಗಳು ಒಂದಾಗುವಂತೆ ಮಾಡಿ ಅವರ ಅಂತರಂಗ ಬಹಿರಂಗ ಶುದ್ದಿ ಸಾಧಿಸಲು ಸಮಾಜೋ ಧಾರ್ಮಿಕ ಚಳುವಳಿಗೆ ಚಾಲನೆ ಕೊಡುತ್ತಾನೆ.
೧೨ನೇ ಶತಮಾನದ ಚಳುವಳಿಯಲ್ಲಿ ಸಾಮಾನ್ಯವಾಗಿ ಕೆಳವರ್ಗದ ವಚನಕಾರರು ಶೋಷಿತ ವರ್ಗಗಳಿಂದಲೇ ಬಂದು ಶರಣತತ್ವಕ್ಕೆ ಆಕರ್ಷಿತರಾಗಿ ಅಂದಿನ ಕಠಿಣ ವರ್ಣಾಶ್ರಮ, ಜಾತಿವ್ಯವಸ್ಥೆಯ ವಿರುದ್ಧ ಹೋರಾಟಕ್ಕೆ ನಿಂತರು. ಅಸ್ಪೃಶ್ಯರು, ತಳವಾರರು, ವಾಲಿಕಾರರು. ಊರಾಚೆಗಿನ ಕೇರಿಗಳಲ್ಲಿ ವಾಸ ಮಾಡುತ್ತಲೆ ಸಮಾಜದಿಂದ ತಿರಸ್ಕೃತರಾಗಿದ್ದರು. ಪ್ರಾಣಿ ಪಕ್ಷಿಗಳಿಗಿಂತ ಕಡೆಯಾಗಿ ಅವರನ್ನು ಕಾಣಲಾಗುತ್ತಿತ್ತು. ಹರಿದು ಹಂಚಿಹೋಗಿದ್ದ ಸಮಾಜವನ್ನು ಒಂದುಗೂಡಿಸುವ ಅವಶ್ಯವಾಗಿತ್ತು.
ಈ ವ್ಯವಸ್ಥೆಯೇ ಶರಣರ ಚಳುವಳಿಗೆ ಕಾರಣವಾಯಿತು, ಕೆಳವರ್ಗದವರಿಗೆ ಮಾನಸಿಕ ಧೈರ್ಯ ತಂದು ಕೊಟ್ಟು ವಚನಕಾರರು ಸಮಾಜದ ತಪ್ಪುಗಳನ್ನು ತಿದ್ದುವಲ್ಲಿ ತೋರಿದ ಎದೆಗಾರಿಕೆಯನ್ನು ಅಂದಿನ ಶರಣರು ಸರಿದಾರಿಗೆ ತರವಲ್ಲಿ ಪ್ರಯತ್ನಿಸಿದ್ದಾರೆ. ಈ ಚಳುವಳಿಯಲ್ಲಿ ಸಮಾಜದ ಎಲ್ಲಾ ಕಾಯಕ ಜೀವಿಗಳು ಭಾಗವಹಿಸಿದ್ದಾರೆ. ಅವರಲ್ಲಿ ಅಂಬಿಗರ ಚೌಡಯ್ಯನು ಒಬ್ಬನಾಗಿದ್ದಾನೆ. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಸಿದ್ಧರಾಮ, ಚನ್ನಬಸವಣ್ಣ, ಅಂಬಿಗರ ಚೌಡಯ್ಯ, ಮಾಡಿವಾಳ ಮಾಚಯ್ಯ, ಮೇದಾರ ಕೇತಯ್ಯ ಹಡಪದ ಅಪ್ಪಣ್ಣ ಚಂದಯ್ಯ, ಜೇಡರ ದಾಸಿಮಯ್ಯ, ಮಾಳಿಗೆ ಮಾರಯ್ಯ, ಗಾಣದ ಕಣ್ಣಪ್ಪ ಬಾಹುರ ಬೊಮ್ಮಣ್ಣ, ಹೆಂಡದ ಮಾರಯ್ಯ, ಹಡಪದ ಲಿಂಗಮ್ಮ, ಕಮತದ ಜೀರ್ಮ, ತುರುಗಾಯ ರಾಮಣ್ಣ, ಮಾದರ ಚನ್ನಯ, ಡೋಹರ ಕಕ್ಕಯ್ಯ ಕುಂಬಾರ ಗುಂಡಯ್ಯ, ಸಮಗಾರ ಹರಳಯ್ಯ, ಸುಂಕದ ಬಂಕಣ್ಣ, ತಳವಾರ ಕವಿದೇವ, ಕ್ಷೌರಿಕ ಬೆಸ್ತರು, ಬಾಧಿಕಾರು, ಗೋಳಿಗರು, ಕಿನ್ನಡಿ ನುಡಿಸುವ ಕಲಾವಿದರು, ತಳವಾರ, ಅಂಬಿಗರ ಕಾಯಕದವರು, ವೇಶ್ಯಾವೃತ್ತಿಯವರು, ಅಕ್ಕನಾಗಮ್ಮ, ಕೋಲಶಾಂತಯ್ಯ ಇಂತಹ ನೂರಾರು ಕಾಯಕಜೀವಿಗಳು ಬಸವಣ್ಣನವರು ಕರೆಕೊಟ್ಟ ಚಳುವಳಿಗೆ ಸ್ಪಂದಿಸುತ್ತಾರೆ.
ಅನುಭವಮಂಟಪದಲ್ಲಿ ಭಾಗವಹಿಸಿ ವಿಚಾರಕ್ರಾಂತಿಗೆ ಸಾಧನೆ ಮಾಡಿ ಸಿದ್ಧರಾಗುತ್ತಾರೆ. ಜಾತ್ಯಾತೀತ ಸಮಾಜ ನಿರ್ಮಾಣಕ್ಕೆ ಶೋಷಣಾಮುಕ್ತ ಸಮಾಜಕ್ಕೆ ಆಧಾರಸ್ತಂಭವಾಗುತ್ತಾರೆ. ಶಿವಶರಣರು ಕೈಗೊಂಡ ಈ ಮಹಾಕ್ರಾಂತಿಯಲ್ಲಿ ಅಂಬಿಗರ ಚೌಡಯ್ಯನು ಶರಣ ಚಳುವಳಿಯಲ್ಲಿ ಭಾಗವಹಿಸಿ ಹೋರಾಡುತ್ತಾನೆ. ಅಂಬಿಗರ ಚೌಡಯ್ಯನಿಗೆ ಆತನ ಹೆಸರ ವಚನಾಂಕಿತವಾಗಿದೆ. ಅಂಬು ಎಂದರೆ ನೀರಿನಲ್ಲಿ ಚಲಿಸಲು ಎಂಬ ಅರ್ಥ ಇದ್ದು ಅಂಬಿ+ಇಗ ಎಂದರೆ ದೋಣಿಯನ್ನು ನಡೆಸುವವರು ಎಂದು ಅರ್ಥೈಸಲಾಗಿದೆ.
–ಶ್ರೀಮತಿ ಸಾವಿತ್ರಿ ಕಮಲಾಪೂರ ಮೂಡಲಗಿ