ಅಕ್ಷರಲೋಕದ ಮಾಂತ್ರಿಕ ರವಿ ಬೆಳಗೆರೆ

ಅಕ್ಷರಲೋಕದ ಮಾಂತ್ರಿಕ ರವಿ ಬೆಳಗೆರೆ

ಅಕ್ಷಲೋಕದ ಮಾಂತ್ರಿಕ ರವಿ ಬೆಳಗೆರೆ ಇನ್ನಿಲ್ಲ ಎನ್ನುವ ಸುದ್ದಿ ಅರಗಿಸಿಕೊಳ್ಳಲಾರದಷ್ಟು ಆಘಾತವಾಗಿದ್ದಂತೂ ನಿಜ. ಬದುಕನ್ನು ಅಗಾಧವಾಗಿ ಪ್ರೀತಿಸಿದ ಹಟಕ್ಕೆ ಬಿದ್ದು ಬರೆದಂಥ ರವಿ ಬೆಳೆಗೆರೆಯನ್ನು ನಾವು ಎಷ್ಟೇ ವಿಮರ್ಶೆ ಮಾಡಿದರೂ ಅವರು ಬರೆದ ಲೇಖನಗಳು, ಪುಸ್ತಕಗಳು ಓದುಗರನ್ನು ಚಿಂತನೆಗೆ ಒಳಪಡಿಸುತ್ತದೆ ಎನ್ನುವುದು ನಿರ್ವಿವಾದ. ಎಲ್ಲದ್ದಕ್ಕೂ ಅವಸರ ಅದೇನೋ ಧಾವಂತ, ಬದುಕು ಈ ಕ್ಷಣವೆ ಮುಗಿದು ಹೋಗುತ್ತದೆ, ಮುಗಿದು ಹೋಗುವ ಮುನ್ನ ಎಲ್ಲ ಕೆಲಸ ಮುಗಿಸಬೇಕೆಂಬ ಹಠದಿಂದ ಕೆಲಸ ಮಾಡಿದವರು ರವಿ ಬೆಳಗರೆ.

15.03.1958 ರಲ್ಲಿ ಬಳ್ಳಾರಿಯ ಸತ್ಯನಾರಾಯಣಪೇಟೆಯಲ್ಲಿ ಜನಿಸಿದ ರವಿ ಬೆಳಗೆರೆಯವರ ತಂದೆಯವರೂ ಕೂಡ ಲೇಖಕರು ಮತ್ತು ತಾಯಿ ಪಾರ್ವತಮ್ಮ ಗೃಹಿಣಿ. ಮೊದಲನೇ ಪತ್ನಿ ಶ್ರೀಮತಿ ಲಲಿತಾ ಮತ್ತು ಎರಡನೇ ಪತ್ನಿ ಯಶೋಮತಿ. ಚೇತನಾ, ಭಾವನಾ ಇಬ್ಬರು ಹೆಣ್ಣುಮಕ್ಕಳು. ಕರ್ಣ ಮತ್ತು ಹಿಮವಂತ ಇಬ್ಬರು ಗಂಡು ಮಕ್ಕಳು.

ಪ್ರಾಥಮಿಕ ವಿದ್ಯಾಭ್ಯಾಸವನ್ನು ಬಳ್ಳಾರಿಯಲ್ಲಿ ಪೂರೈಸಿದ ರವಿ ಬೆಳಗೆರೆ ಮಾಧ್ಯಮಿಕ ಶಿಕ್ಷಣವನ್ನು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಪಡೆದವರು. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಮ್. ಏ ಪದವಿಯನ್ನು ಪಡೆದರು. ಬಳ್ಳಾರಿ, ಹಾಸನ ಮತ್ತು ಹುಬ್ಬಳ್ಳಿಯಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದ ರವೆ ಬೆಳಗೆರೆ ಮುಂದೆ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪತ್ರಕರ್ತನಾಗಿ ವೃತ್ತಿಯನ್ನು ಪ್ರಾರಂಭ ಮಾಡತಾರೆ. ಆಡು ಮುಟ್ಟದ ಗಿಡವಿಲ್ಲ ರವಿ ಬೆಳಗೆರೆ ಮಾಡದ ಕೆಲಸವಿಲ್ಲ ಎನ್ನುವಷ್ಟು ತರಾವರಿ ಕೆಲಸಗಳನ್ನು ರವಿ ಬೆಳಗೆರೆ ಮಾಡಿದ್ದಾರೆ. ಎಂತೆಂಥ ಕೆಲಸ ಅಂತೀರಿ, ರೂಮ್ ಬಾಯ್, ಸ್ವಾಗತಕಾರ, ಹಾಲು ಮಾರುವದು, ಮೆಡಿಕಲ್ ರೆಪ್ರೆಸೆಂಟೇಟಿವ್, ಸಿನಿಮಾ ಟಾಕೀಜಿನ ಗೇಟ್ ಕೀಪರ್ ಹೀಗೆ ಹತ್ತು ಹಲವಾರು. ಆದರೆ ಯಾವುದನ್ನು ತಲೆಗೆ ಹಚ್ಚಿಕೊಳ್ಳದ ರವಿ ಬೆಳಗೆರೆಯವರಲ್ಲಿ ಒಬ್ಬ ಬರಹಗಾರ ಕುಳಿತಿದ್ದ ಅನ್ನೋದನ್ನು ಪತ್ತೆ ಹಚ್ಚಿ ಬರವಣಿಗೆಗೆ ಹಚ್ಚಿದ್ದು ಸಂಯುಕ್ತ ಕರ್ನಾಟಕ ದಿನ ಪತ್ರಿಕೆ. ಪಾಪಿಗಳ ಲೋಕವಾದ ಭೂಗತ ಕ್ರಿಮಿನಲ್ ಗಳ ಒಂದೊಂದೇ ಮಜಲುಗಳನ್ನು ಅನಾವರಣ ಮಾಡುತ್ತಾ ಹೋದಂತೆ ಯಶಸ್ಸಿನ ಮೆಟ್ಟಿಲುಗಳನ್ನು ಹತ್ತುತ್ತಾ ರವಿ ಬೆಳಗೆರೆ ಏರಿದ ಎತ್ತರ ಗೌರೀಶಂಕರ. 1995 ರಲ್ಲಿ ಬೆಂಗಳೂರಿಗೆ ಕಾಲಿಟ್ಟ ರವಿ ಬೆಳಗೆರೆ “ಹಾಯ್ ಬೆಂಗಳೂರ್” ಎಂಬ ಟ್ಯಾಬ್ಲೈಡ್ ಪತ್ರಿಕೆಯನ್ನು ಅರ್.ಟಿ. ವಿಠಲಮೂರ್ತಿ, ರಾ. ಸೋಮನಾಥ, ಜೋಗಿ ಮತ್ತು ಐ.ಎಚ್. ಸಂಗಮ್ ಮಿತ್ರರೊಡಗೂಡಿ ಪ್ರಾರಂಭ ಮಾಡತಾರೆ. ಅಲ್ಲಿಂದ ಹಿಂತಿರುಗಿ ನೋಡದ ರವಿ ಬೆಳಗೆರೆ ಎನ್ನುವ ಮಹಾನ್ ಬರಹಗಾರ ಮತ್ತು ಲೇಖಕನ ಅದ್ಭುತ ಅಕ್ಷರಲೋಕದ ಅನಾವರಣಗೊಳ್ಳುತ್ತದೆ.

ಹಠಕ್ಕೆ ಬಿದ್ದವರಂತೆ ಅಂಕಣ, ಲೇಖನ ಮತ್ತು ಪುಸ್ತಕಗಳನ್ನು ಪ್ರಕಟಿಸಿದ ರವಿ ಬೆಳಗೆರೆ ಸೃಷ್ಟಿಸಿದ ಸಂಚಲನ ಅಗಾಧ ಮತ್ತು ಅದ್ಭುತ. ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಅಂಕಣಗಳಾದ ಲವ್ ಲವಿಕೆ, ಬಾಟಮ್ ಐಟಮ್, ಖಾಸ್ ಬಾತ್, ಪಾಪಿಗಳ ಲೋಕದಲ್ಲಿ ಓದುಗರನ್ನು ಸೂಜಿಗಲ್ಲಿನಂತೆ ಸೆಳೆದು ಪತ್ರಿಕೆಯ ಪ್ರಸಾರ ಕೆಲವೇ ವರ್ಷಗಳಲ್ಲಿ ಲಕ್ಷಗಟ್ಟಲೇ ಮುಟ್ಟಿದು ಪತ್ರಿಕಾ ಲೋಕದಲ್ಲಿ ಮೈಲಿಗಲ್ಲು. ಇದರ ಮುಂದುವರಿದ ಭಾಗವಾಗಿ ತರುಣ ತರುಣಿಯರ ಒಳಮನಸ್ಸುಗಳನ್ನು ಬಿಚ್ಚಿಡುವ “ಓ ಮನಸೇ” ಎನ್ನುವ ಪತ್ರಿಕೆಯನ್ನು ಪ್ರಾರಂಭ ಮಾಡತಾರೆ.

1985 ರಲ್ಲಿ ಪ್ರಕಟವಾದ ಅವರ ಕಥಾ ಸಂಕಲನ “ದಾರಿ” ಯಿಂದ “ಏನಾಯ್ತು ಮಗಳೇ” ವರೆಗೂ ಅವರು ಬರೆದ ಸುಮಾರು 80 ಪುಸ್ತಕಗಳು ರವಿ ಬೆಳಗೆರೆಯವರ ಅಗಾಧ ಸಾಹಿತ್ಯ ಸೃಷ್ಟಿಗೆ ಹಿಡಿದ ಕನ್ನಡಿ ಎನ್ನಬಹುದು. ಅಂಥ ದೈತ್ಯ ಬರಹಗಾರ ರವಿ ಬೆಳಗೆರೆ. ಆ ಲೇಖನಗಳಲ್ಲಿ ಸಂಚಲನ ಸೃಷ್ಟಿಸಿದವುಗಳೆಂದರೆ ನೀ ಹೀಂಗ ನೋಡಬ್ಯಾಡ ನನ್ನ, ಹಿಮಾಲಯನ್ ಬ್ಲಂಡರ್, ರಾಜ ರಹಸ್ಯ, ಕಾರ್ಗಿಲ್ ನಲ್ಲಿ ಹದಿನೇಳು ದಿನ ಮುಂತಾದವುಗಳನ್ನು ಹೆಸರಿಸಬಹುದು.


ಹಲವಾರು ಟೀವಿ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿದ್ದಾರೆ. ಬೇಂದ್ರೆ ಬದುಕು ಬರಹ ಎನ್ನುವ ಕಾರ್ಯಕ್ರಮವಂತೂ ಅತ್ಯಂತ ಯಶಸ್ವೀ ಕಾರ್ಯಕ್ರಮ. ಸಿನಿಮಾ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು ರವೆ ಬೆಳಗೆರೆ.

ಇವರನ್ನು ಅರಸಿ ಬಂದ ಪ್ರಶಸ್ತಿ ಗೌರವಾದಗಳು ಅನೇಕ. 1984 ರಲ್ಲಿ “ವಿವಾಹ” ಎನ್ನುವ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1990 ರಲ್ಲಿ “ವಂದ್ಯ” ಪುಸ್ತಕಕ್ಕೆ ಮಾಸ್ತಿ ಕಥಾಸ್ಪರ್ಧೆಯಲ್ಲಿ ಪ್ರಶಸ್ತಿ, 1997 ರಲ್ಲಿ “ಪಾ.ವೆಂ. ಹೇಳಿದ ಕತೆ” ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 2004 ರಲ್ಲಿ “ನೀ ಹೀಂಗ ನೋಡಬ್ಯಾಡ ನನ್ನ” ಪುಸ್ತಕಕ್ಕೆ ಶಿವರಾಮ ಕಾರಂತ ಪ್ರಶಸ್ತಿ, 2005 ರಲ್ಲಿ ಅವರು ನಡೆಸುವ ಶಾಲೆ ಪ್ರಾರ್ಥನಾಕ್ಕೆ ಕೇಂದ್ರ ಸರ್ಕಾರದ “ಕಂಪ್ಯೂಟರ್ ಎಕ್ಷಲನ್ಸಿ ಅವಾರ್ಡ್”, 2008 ರಲ್ಲಿ ಜೀವಮಾನದ ಸಾಧನೆಗಾಗಿ “ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ”, 2011 ರಲ್ಲಿ ಕರ್ನಾಟಕ ಸರ್ಕಾರದಿಂದ “ರಾಜ್ಯೋತ್ಸವ ಪ್ರಶಸ್ತ” ಗಳ ಗೌರವ ಪ್ರಾಪ್ತವಾಗಿವೆ.

ಹೀಗೆ ತಮ್ಮ ವಿವಿಧ ಕ್ಷೇತ್ರಗಳಲ್ಲಿ ಛಲಬಿಡದ ತ್ರಿವಿಕ್ರಮನಂತೆ, ದಣಿವರಿಯದೆ ಕೆಲಸ ಮಾಡಿ ಅಸ್ತಂಗತನಾದ ರವಿ ಬೆಳಗೆರೆ ಅಕ್ಷರ ಲೋಕಕ್ಕೆ ತುಂಬಲಾರದ ಕಂದಕವನ್ನು ನಿರ್ಮಾಣ ಮಾಡಿ ಇಹಲೋಕವನ್ನು ಇಂದು ತ್ಯಜಿಸಿದ್ದಾರೆ. ಭಗವಂತ ಅವರ ಆತ್ಮಕ್ಕೆ ಚಿರ ಶಾಂತಿಯನ್ನು ನೀಡಲಿ.

_——————————–_—————————————–ಮಗಳು ಚೇತನ ಮನದಾಳದ ಮಾತು

ನಾ ಸಾವಿಗೆ ಹೆದರೋದಿಲ್ಲ.. ಯಾಕಂದ್ರ ನಾ ಇರೋ ತನಕ ಅದು ಬರೋದಿಲ್ಲ.. ಅದು ಬಂದಾಗ ನಾ ಇರೋದಿಲ್ಲ.. ಅನ್ನೋ ಶಬ್ದ ಗಾರುಡಿಗ ದ.ರಾ ಬೇಂದ್ರೆಯವರ ಮಾರ್ಮಿಕ ಮಾತುಗಳನ್ನು ರವಿ ಬೆಳಗೆರೆ ಹಿಂದೊಮ್ಮೆ ತಮ್ಮ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದರು. ಈ ಮಾತಿನಂತೆಯೇ ನಿರ್ಭೆಡೆಯಿಂದ ಬದುಕಿದ ರವಿ ಬೆಳಗೆರೆ.. ಕೊನೆ ಕ್ಷಣದ ತನಕ ಬರಹ ಕೃಷಿ ನಿಲ್ಲಿಸಿರಲಿಲ್ಲ. ಸಾವಿಗೂ ಒಂದು ಗಂಟೆ ಮೊದಲು ಬರವಣಿಗೆಯಲ್ಲಿಯೇ ತೊಡಗಿದ್ದ ಅವರಿಗೆ, ಹೃದಯಾಘಾತವಾಗಿತ್ತು.

ನನಸಾಗದ 6 ಕನಸುಗಳು

ಒಬ್ಬ ಬರಹಗಾರನಿಗೆ ತಾನು ಬರೆಯಬೇಕಿದ್ದ ಪುಸ್ತಕ ಒಂದು ಕನಸು.. ಒಂದು ಬದುಕು.. ಅದರಂತೆ ಸದ್ಯ ಆರು ಪುಸ್ತಕಗಳನ್ನು ಬರೆಯುವುದರಲ್ಲಿ ನಿರತರಾಗಿದ್ದರು ರವಿ ಬೆಳಗೆರೆ. ಅದ್ರಲ್ಲೂ ಗೌರಿ ಹತ್ಯೆ ಅನ್ನೋ ಪುಸ್ತಕ ಶೇ.40 ರಷ್ಟು ಕಂಪ್ಲೀಟ್​ ಆಗಿತ್ತು.
ಪುತ್ರಿ ಚೇತನ ಬೆಳಗೆರೆ, ನನ್ನ ತಂದೆ ಅತ್ಯಂತ ಕ್ರಿಯಾಶೀಲರಾಗಿದ್ದಂಥವರು. ಹಲವು ಪುಸ್ತಗಳನ್ನು ಬರೆಯುವುದರಲ್ಲಿ ನಿರತರಾಗಿದ್ದರು. ಅದ್ರಲ್ಲೂ ಗೌರಿ ಹತ್ಯೆ ಅನ್ನೋ ಅವರ ಪುಸ್ತಕ ಶೇ.40 ರಷ್ಟು ಕಂಪ್ಲೀಟ್ ಆಗಿತ್ತು. ಅದು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಮಗಳೇ ನೀನು ಓದಿ ನನಗೆ ರಿವ್ಯೂ ಹೇಳು ಅಂತಾ ಕಳಿಸಿದ್ದರು ಅಂತ ದುಃಖತಪ್ತರಾಗಿ ಹಂಚಿಕೊಂಡಿದ್ದಾರೆ.

ಇನ್ನು ಸ್ಟೇಟ್​ ಪಾಲಿಟಿಕ್ಸ್​ ಕುರಿತ ರೋಚಕ ಪುಸ್ತಕ ಹೊರತರುವ ಸಿದ್ಧತೆಯಲ್ಲಿ ಕೂಡ ರವಿ ಬೆಳಗೆರೆ ಇದ್ದರಂತೆ. ಅದ್ರಲ್ಲಿ ಹಲವು ರಾಜಕೀಯ ನಾಯಕರ ಬಗೆಗಿನ ಇನ್​ಸೈಡ್​​ ಮಾಹಿತಿ ಬಿಚ್ಚಿಡುವ ಸಿದ್ಧತೆಯಲ್ಲಿ ಅವರು ತೊಡಗಿದ್ದರಂತೆ. ಜೊತೆಗೆ ತಮ್ಮ ಆತ್ಮಚರಿತ್ರೆಯನ್ನ ಹೊರತರುವ ಸಿದ್ಧತೆಯಲ್ಲಿಯೂ ಇದ್ದ ಬೆಳಗೆರೆ ತಮ್ಮ ಜೀವನದ ಉದ್ದಕ್ಕೂ ಎದುರಿಸಿದ ಸವಾಲುಗಳನ್ನ ಓದುಗ ಮಿತ್ರರಿಗೆ ಕಟ್ಟಿಕೊಡುವ ತವಕದಲ್ಲಿದ್ದರು. ಈ ಆತ್ಮಚರಿತ್ರೆಯಲ್ಲಿ ಬೆಳಗೆರೆಯಿಂದ ಬೆಂಗಳೂರಿಗೆ ಬಂದ ವೃತ್ತಾಂತವನ್ನ ಕಟ್ಟಿಕೊಡುವ ಕಾರ್ಯದಲ್ಲಿದ್ದ ರವಿ ಬೆಳಗೆರೆ ಕನಸು ಕೊನೆಗೂ ಸಾಕಾರವಾಗಲಿಲ್ಲ.

 


ಸಂಗ್ರಹ ಮತ್ತು ಲೇಖನ :ವಿಜಯಕುಮಾರ ಕಮ್ಮಾರ ತುಮಕೂರು 

 

Don`t copy text!