ಕತೆ : ಅಳಿಯನ ಅವಾಂತರ
ಕತೆಗಾರ : ಆನಂದ ಮರಳದ ಬೆಂಗಳೂರು.
ಮದುವೆಯಾದ ಮೊದಲ ದೀಪಾವಳಿ ಆಚರಣೆ ಸಾಧಾರಣವಾಗಿ ಎಲ್ಲರಿಗೂ ಸಂಭ್ರಮ, ಸಡಗರ ಕೂಡಿದ ನೆನಪು ತಂದರೆ, ಙಗೆ ಮಾತ್ರ ಫಜೀತಿಗೆ ಬಿದ್ದ ನೆನಪು ಮೂಡಿಸುತ್ತದೆ.
ಅದು ೨೦೦೯ ರ ದೀಪಾವಳಿ ಹಬ್ಬ. ಅದು ನಾನು ಮದುವೆ ಆದ ವರ್ಷ.ಹೀಗಾಗಿ ಹಬ್ಬದ ಆಚರಣೆಗೆ ನನ್ನೂರಾದ ಮಸ್ಕಿಯಿಂದ ಹೆಂಡತಿಯ ಊರು ಸಿರುಗುಪ್ಪಕ್ಕೆ ನನ್ನ ಎಸ್ಟಿಮಾ ಕಾರಲ್ಲಿ ಹೋಗಿದ್ದೆ. ನನ್ನ ತಾಯಿಯು ಜತೆಗೆ ಬಂದಿದ್ದರು. ಮದುವೆಯಾದ ಮೊದಲ ವರ್ಷವಾದ್ದರಿಂದ ಮಾವನ ಮನೆಯಲ್ಲಿ ಆರತಿಯ ಜತೆಗೆ ಹೊಸ ಉಡುಗೆಯ ಉಡುಗೊರೆ ಸಿಕ್ಕಿತ್ತು. ನಂತರ ಸಾಯಂಕಾಲ ಕಳೆದು ಕತ್ತಲು ಆವರಿಸಿಕೊಳ್ಳುವ ಹೊತ್ತಿಗೆ ಪಟಾಕಿ ಸಿಡಿಸುವ ಸಂಭ್ರಮ ಶುರು ಮಾಡಿದೆವು. ಮನೆ ಅಂಗಳದಲ್ಲಿ ಚಿತ್ತಾಕರ್ಷಕ ಬಣ್ಣ ಹೊಮ್ಮುವ, ಕ್ಷಣಾರ್ಧದಲ್ಲಿ ಜೀವ ಮೈ ತಳೆದು ಮರು ಕ್ಷಣದಲ್ಲಿ ಸತ್ತು ಬೀಳುವ, ನಾನ ವಿಧದ ಪಟಾಕಿಗಳ ಸಿಡಿಸುವ ಆನಂದ. ಸರಕ್ಕೆಲ್ಲ ಮುಗಿಯುವ ಹೊತ್ತಿಗೆ, ಕೊನೆಗೆ ಉಳಿದದ್ದು ಉಕ್ಕಿನ ಗುಳ್ಳೆ.ಅದು ಚೆಲ್ಲುವ ಬಣ್ಣದ ಬೆಳಕು ಎಂಥ ಅರಸಿಕರಲ್ಲೂ ಮೋಡಿ ಉಂಟು ಮಾಡಿ ಅಲ್ಪ ಕಾಲದಾದ್ದರೂ ಉಲ್ಲಾಸ ತುಂಬುತ್ತದೆ.
ನಾನು ಮತ್ತು ನನ್ನ ಪತ್ನಿ, ಅವಳಿಗೆ ಒಂದಾದ ನಂತರ ಒಂದರಂತೆ ಜೀವ ಕೊಡತೊಡಗಿದ್ದೆವು. ನನ್ನ ತಾಯಿ, ಅತ್ತೆ ಮತ್ತು ಮಾವ ದೂರದಿಂದ ತಮ್ಮ ಈ ಮಕ್ಕಳ ಆಟ ( ಮದುವೆ ಆದ ಮಕ್ಕಳು !) ದೂರದಿಂದಲೇ ಮುಗುಳ್ನಗೆಯೊಂದಿಗೆ ಗಮನಿಸುತ್ತಿದ್ದರು. ನಾನು ಒಂದು ಉಕ್ಕಿನ ಗುಳ್ಳೆಯನ್ನು ಹಚ್ಚಿ ಅದನ್ನು ಎತ್ತಿ ಕಾಂಪೌಂಡ್ ಗೋಡೆಯ ಮೇಲೆ ಇಟ್ಟೆ. ಬೆಳಕು ಇನ್ನು ಎತ್ತರಕ್ಕೆ ಚಿಮ್ಮಿ, ಪುಳಕ ಹೆಚ್ಚಾಯಿತು. ಇದರ ಪುನರಾವರ್ತನೆ ಮಾಡಲು ಇನ್ನೊಂದನ್ನು ಉಕ್ಕಿನ ಗುಳ್ಳೆ ಹಚ್ಚಿದ ತಕ್ಷಣ ಕೈಯಲ್ಲಿ ಹಿಡಿದು, ಕಾಂಪೌಂಡ್ ಗೋಡೆಯ ಮೇಲೆ ಇಡುವಷ್ಡರಲ್ಲಿ ಅದು ಕೈಯಲ್ಲೇ ಸಿಡಿದು ಹೋಯಿತು.
ಆ ಕ್ಷಣ ಕೋರೈಸಿದ ಬೆಳಕಿಗೆ ಮತ್ತು ಕಿವಿಯ ಪಕ್ಕದಲ್ಲೇ ಕೇಳಿಸಿದ ಸಿಡಿತದ ಜೋರಾದ ಶಬ್ದಕ್ಕೆ ಎಡಗೈಯನ್ನು ಕಣ್ಣುಗಳಿಗೆ ಏನು ಬಡಿಯಲಾರದಂತೆ ಅಡ್ಡ ಹಿಡಿದು, ಮೊಳ ಕಾಲಲ್ಲಿ ಕುಳಿತು ಬಿಟ್ಟೆ. ಸಾವರಿಸಿಕೊಂಡು ನಂತರ ನಗು ಬಂತು. ಆದರೆ ಆ ನಗು ಮರು ಕ್ಷಣವೇ ಅಳಿಸಿ ಹೋಯಿತು. ಬಲಗೈಯಲ್ಲಿ ಉಕ್ಕಿನ ಗುಳ್ಳೆ ಸಿಡಿದಿದ್ದರಿಂದ ಹೆಬ್ಬೆರಳ ಒಂದು ಭಾಗದ ಚರ್ಮ ಸಂಪೂರ್ಣ ಸುಟ್ಟ ಹೋಗಿತ್ತು. ಹೆಬ್ಬೆರಳು ಮತ್ತು ತೋರು ಬೆರಳಿನ ನಡುವಿನ ಭಾಗದಲ್ಲಿ ಒಂದು ಬೊಬ್ಬೆ ಎದ್ದು ಅದರಲ್ಲಿ ನೀರು ತುಂಬಿಕೊಂಡು ಜೋಲಾಡತೊಡಗಿತು.
ಅಳಿಯ ಮಾಡಿಕೊಂಡ ಅವಾಂತರಕ್ಕೆ ಮನೆಯವರು ಮನೆಯಲ್ಲಿ ಸಾಧ್ಯವಾಗುವಂಥ ಪ್ರಥಮ ಚಿಕಿತ್ಸೆ ಮಾಡಿದರೂ, ಅದು ಸಾಕಾಗುವಂತೆ ಕಾಣಲಿಲ್ಲ. ಪರಿಚಯದವರನ್ನು ಕರೆದು ಅವರ ಬೈಕಿನ ಮೇಲೆ ನನ್ನನ್ನು ಆಸ್ಪತ್ರೆಗೆ ಕಳಿಸಿದರು. ಆಸ್ಪತ್ರೆ ಮುಟ್ಟಿದಾಗ ಅಂದು ಹಬ್ಬದ ದಿನವಾದರೂ ರೋಗಿಗಳ ದೊಡ್ಡ ಸಾಲೇ ಕಂಡು ಡಾಕ್ಟರನ್ನು ಕಾಣಲು ಎಷ್ಟು ಹೊತ್ತಾಗ ಬಹುದೋ ಅನ್ನಿಸಿತು. ಆದರೆ ನನ್ನ ಕೈ ಅವಸ್ಥೆ ಕಂಡ ಎಲ್ಲರೂ ದಾರಿ ಮಾಡಿಕೊಟ್ಟು, ಡಾಕ್ಟರನ್ನು ಕಾಣಲು ತಕ್ಷಣ ಅವಕಾಶ ಮಾಡಿಕೊಟ್ಟರು. ನನ್ನ ಕೈ ಪರಿಶಿಲಿಸಿದ ವೈದ್ಯರು, ಆಸ್ಪತ್ರೆಗೆ ಹೊಂದಿಕೊಂಡಿದ್ದ ಔಷಧ ಅಂಗಡಿಯಿಂದ ಒಂದು ಮಲಾಮು ತರಿಸಿ ಮದ್ದು ಸಿಡಿದ ಜಾಗಕ್ಕೆಲ್ಲಾ ಸವರಿದರು. ನನ್ನ ಮುಂಗೈ ಚರ್ಮ ಅದಕ್ಕೆ ಸ್ಪಂದಿಸಿದ ಒರಟು ಭಾಗ ಎನ್ನುವಂತೆ ಭಾಸವಾಗುತ್ತಿತ್ತು. ಆದರೆ ಅದರ ಕೆಳಗೆ ಮೂಳೆಯ ಭಾಗದಲ್ಲಿ ಮಾತ್ರ ಸಹಿಸಲು ಅಸಾಧ್ಯ ಎನ್ನುವಷ್ಟು ನೋವು.
ವಾಪಸ್ಸು ಮತ್ತೇ ಬೈಕಿನ ಮೇಲೆ ಹಿಂದೆ ಕೂತು ಮನೆಗೆ ಬರುವಾಗ, ಗಾಯಗೊಂಡ ಕೈಯನ್ನು ಬೀಸುತ್ತಿದ್ದ ಗಾಳಿಯಲ್ಲಿ ತೇಲಿ ಬಿಟ್ಟಿ. ಅದುವರೆಗೆ ಶಮನವಾಗದಿದ್ದ ನೋವು ಆಗ ತಂಗಾಳಿಯಲ್ಲಿ ಮರೆಯಾಗತೊಡಗಿತು. ಅದನ್ನು ಬೈಕ್ ಓಡಿಸುತ್ತಿದ್ದವರಿಗೆ ತಿಳಿಸಿದೆ. ಅವರು ನನಗೆ ಹಾಯೆನಿಸುತ್ತಿದ್ದರೆ ಗಾಡಿಯಲ್ಲಿ ಇನ್ನು ಸ್ವಲ್ಯ ಸುತ್ತಿಸಿ ಆಮೇಲೆ ಮನೆಗೆ ಕರೆದೊಯ್ಯುವದಾಗಿ ತಿಳಿಸಿದರು. ನಗೆ ಮತ್ತೆ ಮುಖಕ್ಕೆ ಮರಳಿತು.
ಅದಾಗಿ ಒಂದು ತಾಸು ಕಳೆದ ನಂತರ ಯಾರ ಒತ್ತಾಯಕ್ಕೂ ಮಣಿಯದೆ, ವಾಪಸ್ಸು ನಮ್ಮ ಊರಿಗೆ ನನ್ನ ತಾಯಿಯನ್ನು ಕರೆದುಕೊಂಡು ಹೊರಟು ನಿಂತೆ. ನಾನು ಕಾರನ್ನು ಒಂದೇ ಕೈಯಲ್ಲಿ ಓಡಿಸಬೇಕಾಗಿತ್ತು. ಆದರೆ ಅದು ಕಷ್ಟ ಏನು ಅನಿಸಲಿಲ್ಲ. ಅವಶ್ಯಕತೆ ಬಿದ್ದರೆ, ಸ್ನೇಹಿತನೊಬ್ಬ ಕರೆದೊಯ್ಯಲು ಬರುವುದಾಗಿ ತಿಳಿಸಿದ್ದ. ೬೫ ಕಿ.ಮೀ. ದಾರಿಯನ್ನು ಒಂದುವರೆ ಗಂಟೆಯಲ್ಲಿ ಸವೆಸಬಹುದಾಗಿತ್ತು. ಎಡಗೈಯಿಂದಲೇ ಗೇರ್ ಬದಲಾಯಿಸುತ್ತ ಹಾಗೆಯೇ ಕಾರು ಚಲಾಯಿಸುತ್ತಾ, ಬಲಗೈಯನ್ನು ಕಿಟಕಿಯ ಉದ್ದಕ್ಕೂ ಇಟ್ಟುಕೊಂಡೆ ಹೊರಟೆ. ಅರ್ದ ದಾರಿ ಸಾಗುವಷ್ಟರಲ್ಲಿ ಕೈ ಉರಿ ಆ ಗಾಳಿಗೆ ತಂಪಾಯಿತು. ಆದರೆ ಇನ್ನೊಂದು ಸಮಸ್ಯೆ ಎದುರಾಯಿತು.
ಮಾರ್ಗ ಮಧ್ಯದಲ್ಲಿ ಬರುವ ಸಿಂಧನೂರು ಪಟ್ಟಣವನ್ನು ಆಗ ತಾನೇ ದಾಟಿದ್ದೇವು. ಆದರೆ ಕಾರಿನ ಹೆಡ್-ಲೈಟ್ ಮೊದಲ ಬಾರಿಗೆ ಕೈ ಕೊಟ್ಟಿತ್ತು. ಅಮವಾಸ್ಯೆಯ ರಾತ್ರಿ, ಗಾಢ ಅಂಧಕಾರ ಕವಿದಿತ್ತು. ಕಾರನ್ನು ಪಕ್ಕಕ್ಕೆ ತೆಗೆದುಕೊಂಡು ಆಕ್ಸಿಲೇಟರ್ ಒತ್ತುವ ಭಾಗದಲ್ಲಿ ಸ್ವಲ್ಪ ಮೇಲಿರುವ ಫ್ಯೂಸ್ ಬಾಕ್ಸ್ ಗೆ ಕೈ ಹಾಕಿದೆ. ಕಾರನ್ನು ಕಳೆದ ಬಾರಿಗೆ ರಿಪೇರಿಗೆ ಬಿಟ್ಟಿದ್ದಾಗ, ಮ್ಯಾಕನಿಕ್ ಅದರ ಮೇಲಿದ್ದ ಮುಚ್ಚಳವನ್ನು ಸಂಪೂರ್ಣ ಸರಿ ಪಡಿಸದೇ ತೆಗೆದು ಬಿಟ್ಟಿದ್ದ. ಸಾಕಷ್ಟು ಗುಂಡಿಗಳಿದ್ದ ಆ ರಸ್ತೆಯಲ್ಲಿ ಯಾವುದೋ ಒಂದು ನೆಗೆತಕ್ಕೆ ಆ ಫ್ಯೂಸ್ ಗಳು ಹಿಡಿತ ಕಳೆದುಕೊಂಡು ಸಡಿಲವಾಗಿದ್ದವು. ಆದರೆ ಅದು ಸರಿ ಪಡಿಸುವ ನನ್ನ ಪ್ರಯತ್ನ ಫಲಕಾರಿಯಾಗಲಿಲ್ಲ. ಮುಂದಿನ ಇಪ್ಪತ್ತು ನಿಮಿಷದ ದಾರಿಯನ್ನು ಇನ್ನೊಂದು ಕಾರಿನ ಹಿಂದೆ ಅವರ ಬೆಳಕಿನಲ್ಲಿ ಅವನದೇ ಗತಿಯಲ್ಲಿ ಸಾಗುತ್ತ ಮನೆ ತಲುಪಿದೆ. ನನ್ನ ತಾಯಿಗೆ ನನ್ನ ಸಮಸ್ಯೆ ಸಂಪೂರ್ಣ ಅರ್ಥವಾಗದಿದ್ದರೂ ಮಗನ ಪರಾಕ್ರಮದಲ್ಲಿ ಯಾವುದೇ ಅನುಮಾನ ಇರದಂತೆ ನಿಶ್ಚಿಂತೆಯಿಂದ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದಳು. ಹೀಗೆ ಬೆಳಕಿನ ಹಬ್ಬ , ನಾನು ಕತ್ತಲಿನ ಜೊತೆ ಸಾಹಸ ಪಡುವದರೊಂದಿಗೆ ಮುಗಿದು ಹೋಯಿತು.
ಆದರೆ ಪಟಾಕಿ ಸಿಡಿತದಿಂದ ಆದ ಗಾಯ ಗುಣವಾಗಲು ಕೆಲವು ವಾರಗಳನ್ನು ತೆಗೆದುಕೊಂಡಿತು. ಮೂಡಿದ ಹೊಸ ಚರ್ಮದ ಬಣ್ಣಕ್ಕೂ, ಮುಂಗೈನ ಉಳಿದ ಚರ್ಮದ ಬಣ್ಣಕ್ಕೂ ಹೊಂದಾಣಿಕೆ ಆಗುತ್ತಿರಲಿಲ್ಲ. ಸುಟ್ಟ ಭಾಗದಲ್ಲಿ ಸ್ಥಿರವಾದ ಮಾಂಸವಿಲ್ಲದೇ ಅದರ ಮೇಲೆ ಇದ್ದ ಚರ್ಮ ಗಟ್ಟಿಯಾಗಿ ನಿಲ್ಲದೇ ಮುದುಡಿಕೊಂಡಿರುತ್ತಿತ್ತು. ಕಾಲ ಕ್ರಮೇಣ ಅದು ಸಂಪೂರ್ಣ ವಾಸಿಯಾಗಿ, ಅದರ ಯಾವ ಗುರುತು ಈಗ ಕೈ ಮೇಲೆ ಉಳಿದಿಲ್ಲ. ಆದರೆ ಪ್ರತಿ ದೀಪಾವಳಿಗೆ ಬಾಣ ಹಚ್ಚಲು ಹೋದಾಗ ನನ್ನ ಪತ್ನಿ ಆ ಘಟನೆಯ ನೆನಪು ಮಾಡಿ ಕೊಡುತ್ತಾಳೆ. ಈಗಲೂ ಉಕ್ಕಿನ ಗುಳ್ಳೆ ಹಚ್ಚುತ್ತೇನೆ. ಆದರೆ ಕೈ ಯಲ್ಲಿ ಹಿಡಿಯುವ ಸಾಹಸ ಮಾಡುವದಿಲ್ಲ.
ಲೇಖಕರು- ಆನಂದ ಮರಳದ, ಬೆಂಗಳೂರು