ಬಯಲು ಬಯಲನೆ ಬಿತ್ತಿದ ಶರಣರು

ಬಯಲು ಬಯಲನೆ ಬಿತ್ತಿದ ಶರಣರು

ವಚನ ಧರ್ಮದ ಭಕ್ತಿ ಪರಂಪರೆಯಲ್ಲಿ ಬಯಲು ಎಂಬ ಶಬ್ದ ಶರಣರ ವಚನಗಳಲ್ಲಿ ಭಾವನಾತ್ಮಕ ವಿನ್ಯಾಸದ ಮೂಲಕ ಮುಖಾಮುಖಿಯಾಗುತ್ತದೆ. ಶರಣರಲ್ಲಿ ಬಯಲು ಅಗೋಚರ ಇಂದ್ರಿಯಾನಂದಕ್ಕೆ ಮುದ ನೀಡುವ ಶೂನ್ಯವದು. ನಿರಾಳ ಅಗೋಚರ ಶಕ್ತಿಯ ವಿಶಿಷ್ಟ ವಿಶ್ವವದು. ಬೀಜದಲ್ಲಿ ಬೀಜ ಅಡಗಿರುವಂತೆ ಬೆಚ್ಚನೆಯ ಭಾವಾನುಭೂತಿ. ನಿರಾಕಾರದ ಕತ್ತಲೆಯ ಜಗತ್ತು.

ವಚನಕಾರರ ಬಯಲು ಎಂದರೆ ಸತ್ಯದ ಪವಿತ್ರತೆಯನ್ನು ಮುಂದು ಮಾಡುವ ವಿಶೇಷ ರೂಪಕದ ಅವಲೋಕನಕ್ಕೆ ಒಳಪಡಿಸುವ ಮನಸ್ಥಿಯಾಗಿದೆ. ಬಯಲು ಎನ್ನುವ ಸಂವೇದನೆಯನ್ನು ವಚನ ಸಾಹಿತ್ಯದಲ್ಲಿ ಮಾತ್ರ ಕಾಣಲು ಸಾದ್ಯ. ಗ್ರಹಿಕೆಗೆ ಸಿಗದ ಶಬ್ದಗಳಲ್ಲಿ ಬಂಧಿಸಲು ಸಾಧ್ಯವಾಗದ ವಿಸ್ಮಯ ಆಧ್ಯಾತ್ಮಿಕ ಲೋಕ. ಶೂನ್ಯ, ಅಂಧಕಾರ, ಕತ್ತಲು ಇವೆಲ್ಲಾ ಸೃಷ್ಟಿಯ ನಿಯಮಗಳು. ಈ ಜಗದ ಸೃಷ್ಟಿಗಿಂತ ಪೂರ್ವದಲ್ಲಿ ಶೂನ್ಯವಿತ್ತೆಂದರು. ಶೂನ್ಯದಿಂದ ಪ್ರಕೃತಿ ಹುಟ್ಟಲು ಸಾದ್ಯವಿರದಿದ್ದರೂ ಪ್ರಕೃತಿಯನ್ನು ನಿರ್ಮಿಸಿದ ಕರ್ತೃ ನಿರಾಕಾರನು ಒಬ್ಬನಿದ್ದಾನೆ. ಅವನೇ ಶಿವ. ಶರಣರ ಶಿವ ನಿರಾಕಾರ ನಿಗೂಢನು. ಕಾಯದ ಕಣ್ಮುಚ್ಚಿ ಜ್ಞಾನದ ಕಣ್ತೆರೆದು ನೋಡುವಂತೆ ಪ್ರೇರೇಪಿಸುವವನು. ನಿರಾಕಾರನು ನಿಗೂಢನು ಕತ್ತಲೆಯ ರಾತ್ರಿಯಲ್ಲಿ ಪಂಚಭೂತಗಳಿಗೆ ಒಡೆಯನು. ಹೀಗಾಗಿಅಧ್ಯಾತ್ಮದ ಆಂತರಿಕ ಜಗತ್ತು ಪ್ರಕೃತಿಯ ಬೀಜಗಳಾಗಿ ವ್ಯಕ್ತವಾಗುವ ಶೂನ್ಯವಾದ ಎಂದು ಸ್ಪಷ್ಟಪಡಿಸಬಹುದು.

ಶರಣರಲ್ಲಿ ಬಯಲಿನ ಪರಿಕಲ್ಪನೆ ಸೃಷ್ಟಿಯಲ್ಲಿ ಕಾಣುವ ಸಂಮೋಹನದ ವಿಸ್ಮಯ ಭಾವವದು. ಸೃಷ್ಟಿ ಸ್ಥಿತಿ ಲಯಗಳಿಗೆ ಆನಂದವೇ ಮೂಲ. ಬಯಲು ನಿರ್ವಯಲ ಅತೀಂದ್ರಿಯ ಹುಡುಕಾಟದಲ್ಲಿ ಧರ್ಮ ಮತ್ತು ವಿಜ್ಞಾನ ಮುಖಾಮುಖಿಯಾಗುತ್ತದೆ. ಪ್ರಕೃತಿ ತತ್ವದ ಶೂನ್ಯ ನಿಶೂನ್ಯ ಹುಡುಕಾಟವೇ ಆದಿ ಅನಾದಿ ಇಲ್ಲದ ನಿರ್ವಯಲು. ಬಯಲಲ್ಲಿ ಪ್ರಕೃತಿಯನ್ನು ಕಾಣುವ ಹಂಬಲ ಶರಣರದು.

ಅಂಬಿಗರ ಚೌಡಯ್ಯನವರ ಈ ವಚನ:
ಬಯಲ ಉದಕವ ಹಿಡಿದು | ಮಜ್ಜನಕ್ಕೆರೆವೆನಯ್ಯಾ ||
ಸಕಲವನುಳಿದೊಂದು ಪುಷ್ಪದ | ಪೂಜೆಯ ಮಾಡುವೆನಯ್ಯ ||
ಸುಗಂಧ ದುರ್ಗಂಧವ ಕಳೆದು | ಧೂಪದಾರತಿ ಮಾಡುವೆನಯ್ಯಾ ||
ಪರಬ್ರಹ್ಮವ ಹಿಡಿದು | ನಿವಾಳಿಯನೆತ್ತುವೆನಯ್ಯಾ ||
ಪುಣ್ಯಪಾಪವ ಕಳೆದು | ಓಗರವನಿಕ್ಕುವೆನಯ್ಯಾ ||
ಹದಿನಾಲ್ಕು ಭುವನವನೊಳಗು ಮಾಡಿ | ಹೊರಗೆ ನಿಂದು ||
ಸದಾಶಿವನ ಪೂಜಿಸಿದಾತನಂಬಿಗ | ಚೌಡಯ್ಯ ||

ಶರಣರಿಗೆ ಬಯಲಲ್ಲಿ ದೇವರನ್ನು ಕಾಣುವ ಕಾತುರತೆ. ಆಧ್ಯಾತ್ಮಿಕ ಪೂಜೆಯನ್ನು ನಿರಾಕಾರ ಬಯಲಲ್ಲಿ ಮತ್ತು ಅದ್ವೈತ ಭಕ್ತಿಯನ್ನು ಕಾಯದ ಕಣ್ಮುಚ್ಚಿ ಮಾಡುವ ಉತ್ಸುಕತೆ ಅಂಬಿಗರ ಚೌಡಯ್ಯನವರಿಗೆ. ದೇಹದ ಆಮಿಷಗಳನ್ನು ನಿರಾಕರಿಸಿ ಹೃದಯ ಕಮಲದ ಪೂಜೆಯನ್ನು ಮಾಡುವ ಸಾರ್ಥಕತೆಯ ಜೊತೆಗೆ ಮನದ ಕಲ್ಮಶವನ್ನು ತೊಳೆಯಬೇಕು. ಅದಕ್ಕೋಸ್ಕರ ಧೂಪ ಮತ್ತು ದೀಪದ ಆರತಿಯನ್ನು ಬ್ರಹ್ಮಾಂಡದ ಬಯಲಲ್ಲಿ ಪಿಂಡಾಂಡದ ನಿರ್ವಯಲಲ್ಲಿ ಮಾಡುವ ವಿಸ್ಮಯ ಭಾವವದು. ಇದನ್ನೇ ಆಧ್ಯಾತ್ಮದಲ್ಲಿ ಮನೋವಿಜ್ಞಾನವೆಂದು ಹೇಳಬಹುದು. ಬಯಲಿಗೆ ರೂಪ ಕೊಡಲು ಸಾಧ್ಯವಾಗುವುದಿಲ್ಲ. ನಿಗೂಢ ಬಯಲ ಪೂಜೆಗೆ ಪ್ರಾಣಲಿಂಗ ಪೂಜೆ ಮಾಡಬೇಕು. ಇದುವೇ ಅಂಗ ಲಿಂಗ ಸಂಬಂಧವಾಗಿ ಶರಣಾಗುವ ಪರಿಯದು. ಪ್ರಕೃತಿಯಲ್ಲಿ ಕಾಣುವ ಶಿವನೇ ಸಚ್ಚಿದಾನಂದ ಸ್ವರೂಪದ ಶಕ್ತಿಯುಳ್ಳವನು ಲಿಂಗಮಯನು.

ಬಸವಣ್ಣನವರ ಈ ವಚನ:
ಅಯ್ಯಾ ನೀನು | ನಿರಾಕಾರನಾಗಿದ್ದಲ್ಲಿ ||
ನಾನು ಜ್ಞಾನವೆಂಬ | ವಾಹನವಾಗಿದ್ದೆ ಕಾಣಾ ||
ಅಯ್ಯಾ ನೀನು | ನಾಟ್ಯಕ್ಕೆ ನಿಂದಲ್ಲಿ ||
ನಾನು ಚೈತನ್ಯವೆಂಬ | ವಾಹನವಾಗಿರ್ದೆ ಕಾಣಾ ||
ಅಯ್ಯಾ ನೀನು | ಆಕಾರವಾಗಿರ್ದಲ್ಲಿ ||
ನಾನು ವೃಷಭನೆಂಬ | ವಾಹನವಾಗಿರ್ದೆ ಕಾಣಾ ||
ಅಯ್ಯಾ ನೀನೆನ್ನ | ಭವವ ಕೊಂದೆಹೆನೆಂದು ||
ಜಂಗಮ | ಲಾಂಛನವಾಗಿ ಬಂದಡೆ ||
ನಾನು ಭಕ್ತನೆಂಬ ವಾಹನವಾಗಿರ್ದೆ | ಕಾಣಾ ಕೂಡಲಸಂಗಮದೇವಾ ||

ಈ ವಚನದ ಮುಖ್ಯ ಆಶಯವೆಂದರೆ ಶಿವನೇ ದೈವ ಅಮೂರ್ತನು. ಲೌಕಿಕತೆಯಲ್ಲಿ ಶಿವನನ್ನು ಹುಡುಕುವುದು ಅಪ್ರಮೇಯವಾದದ್ದು. ಹೀಗಾಗಿ ಶಿವನೇ ರೂಪಕನಾಗಿದ್ದಾನೆ. ಬಯಲ ಹುಡುಕಾಟದಲ್ಲಿ ಶಿವನೇ ಬಯಲೆಂದು ಹೇಳದೆ ನೀನು ನಿರಾಕಾರನಾಗಿರ್ದಲ್ಲಿ ಎನ್ನುವ ಶೂನ್ಯಾನುಭಾವವದು. ನಿರಾಕಾರನಾದ ಶಿವ ಆದಿಯೂ ಹೌದು, ಅನಾದಿಯು ಹೌದು. ವಿಶೇಷವಾಗಿ ಬಸವಣ್ಣನು ಚೈತನ್ಯವೆಂಬ ಓಂಕಾರದ ಮಾರ್ಗದೆಡೆಗೆ ನಮ್ಮನ್ನು ಕರೆದೊಯ್ಯುತ್ತಾನೆ. ಅದುವೇ ಭೂಮಿ, ಸ್ವರ್ಗ, ಆಕಾಶ, ಪ್ರಾಣಗಳು ರೂಪಕದ ಉಪಮೆಗಳಾಗಿವೆ.

ಪ್ರಕೃತಿಯ ರೂಪಕವೇ ಶೂನ್ಯವಾದವೆಂದು ವಿಜ್ಞಾನವು ಹೇಳುತ್ತದೆ. ಪ್ರಕೃತಿಯ ಆರಾಧನೆಯಲ್ಲಿ ಕವಿಯಾಗಿ ಭಕ್ತಿಯ ಕಥನಕ್ಕೆ ಶರಣಾಗುತ್ತಾನೆ. ಸಂಗಮನಾಥನನ್ನು ಕಾಣಬೇಕಾದರೆ ಜ್ಞಾನವೆಂಬ ವಾಹನ ಬೇಕಾಗುತ್ತದೆ. ಅರಿವು ಪ್ರಾಣಲಿಂಗ ಪೂಜೆಯಾಗಿ ಲೌಕಿಕತೆಯಲ್ಲಿ ಜ್ಞಾನದ ಸಿಂಚನಗಳನ್ನು ವಿಶಾಲವಾಗಿಸುವ ಬಯಕೆಯಾಗಿದೆ. ಭಕ್ತನಾದ ಬಸವಣ್ಣನು ಪ್ರಾಣಲಿಂಗ ಪೂಜೆಯ ಮೂಲಕ ನಿರಾಕಾರ ಬಯಲನ್ನು ಅಪ್ಪಿಕೊಳ್ಳುವುದಾಗಿದೆ. ಜ್ಞಾನವೆಂಬ ವಾಹನಕ್ಕೆ ಶ್ರದ್ಧೆ ಶರಣಾಗತಿ ಆಗಬೇಕಾದರೆ ಚೈತನ್ಯವೆಂಬ ಇಚ್ಛಾಶಕ್ತಿಯ ವಾಹನ ಅವಶ್ಯವಾಗಿ ಬೇಕಾಗುತ್ತದೆ. ವೃಷಭನೆ ಅಧ್ಯಾತ್ಮ ಶಕ್ತಿಯ ಮಾನಸಿಕ ದೈವ. ಮರ್ತ್ಯಲೋಕದ ಜಂಗಮ ಲಿಂಗ. ನೀನೇ ದೇವ, ಮನ ನಿರಾಳವಾಗುವ ಮನಸ್ಥಿತಿಯದು.

ಬಯಲ ಪರಿಕಲ್ಪನೆಯನ್ನು ನಿರಾಕಾರವಾದ ತಾಯಿಗೆ ಸ್ವಾರಸ್ಯಕರವಾಗಿ ಹೋಲಿಸಿ ಹೇಳುವ ಅಕ್ಕನಿಗೆ ಈ ಜಗವೆಲ್ಲಾ ತಾಯಿ ಭಾವವಾಗಿದೆ. ಅಕ್ಕನು ಹೇಳುವಂತೆ ಬಯಲನ್ನು ದರ್ಶನಗಳ ಮೀಮಾಂಸೆಯಲ್ಲಿ ಬಂಧಿಸಲು ಸಾಧ್ಯವಿಲ್ಲವೆಂಬ ಚರ್ಚೆಯನ್ನು ವಚನಕಾರರಲ್ಲಿ ಹೀಗೂ ಕಾಣಲು ಸಾಧ್ಯವಾಗಿದೆ.

ಅಕ್ಕ ಮಹಾದೇವಿಯವರ ಈ ವಚನ:
ಬಯಲಿಂದ ಹುಟ್ಟಿದ | ಪರವೆಂಬ ತಾಯಿಗೆ ||
ಐವರು ಮಕ್ಕಳು | ಜನಿಸಿದರು ||
ಒಬ್ಬ ಭಾವರೂಪ | ಒಬ್ಬ ಪ್ರಾಣ ರೂಪ ||
ಒಬ್ಬ ಪ್ರಮುಖವಾಗಿ | ಕಾಯರೂಪಾದ ||
ಇಬ್ಬರು ಉತ್ಪತ್ತಿ | ಸ್ಥಿತಿಗೆ ಕಾರಣವಾದರು ||
ಐಮುಖನರಮನೆ | ಸುಖವಿಲ್ಲೆಂದು ||
ಕೈಲಾಸವ ಹೊಗೆನು | ಮರ್ತ್ಯಕ್ಕೆ ಅಡಿಯಿಡೆನು ||
ಚೆನ್ನಮಲ್ಲಿಕಾರ್ಜುನದೇವಾ | ನೀನೆ ಸಾಕ್ಷಿ ||

ಅಕ್ಕ ತನ್ನ ಬಯಲ ಸಿದ್ಧಿಯನ್ನು ತನ್ನದಾಗಿಸಿಕೊಳ್ಳುವ ಹಂತದಲ್ಲಿ ನಿಸರ್ಗವನ್ನು ಆಶ್ರಯಿಸುತ್ತಾಳೆ. ಪ್ರಕೃತಿಯ ಉತ್ಪತ್ತಿ ಸ್ಥಿತಿಗಳನ್ನು ಜೀವ-ಭಾವ ದೇಹ ಭಾವದ ಮೂಲಕ ಬಯಲನ್ನು ಕಾಣುವ ಅನುಭಾವಿಕ ರೂಪಕಗಳವು. “ಬಯಲಿಂದ ಹುಟ್ಟಿದ ಪರವೆಂಬ ತಾಯಿಗೆ” ಪರತತ್ವವನ್ನು ಸ್ತ್ರೀಯ ರೂಪದಲ್ಲಿ ಕಂಡಂತಹ ಶರಣರು ತಾಯಿತನವನ್ನು ಗೌರವಿಸಿ ಆರಾಧಿಸಿಸದವರು. ಈ ಬಯಲ ಶಕ್ತಿಯ ನಿಸರ್ಗಕ್ಕೆ ಸ್ತ್ರೀ ಮತ್ತು ಪುರುಷ ಎರಡು ರೂಪಗಳಿದ್ದರೂ ನಿರಾಕಾರನಾದ ಶಿವ ಶಕ್ತಿಯಾಗಿ ತಾಯಿಯಾಗುವ ಹಂತ. ಚಿತ್ ಶಕ್ತಿ ಪ್ರಭೆ ಹೊಂದಿದ ತಾಯಿಗೆ ಪ್ರಕೃತಿಯ ಪಂಚಭೂತಗಳೇ ಮಕ್ಕಳು ಇದನ್ನೇ ಅಕ್ಕ ಹೇಳುವ “ಐವರು ಮಕ್ಕಳು ಜನಿಸಿದರು”. ಪರವೆಂಬ ಈ ತಾಯಿ ನಿರಾಕಾರಳಾದರೂ ಚಿತ್ತ ವೃತ್ತಿಯ ಮನದಲ್ಲಿ ಪ್ರಜ್ಞೆಯೇ ಪ್ರಾಣವಾದ ಇಬ್ಬರು ಮಕ್ಕಳೆಂದು ತಾಯಿಯಾಗಿ ಸಂಭ್ರಮಿಸುತ್ತಾಳೆ. ಇವರ ದೇಹದಲ್ಲಿ ಪಂಚಮಕಾರಗಳು (ಮಧ್ಯ, ಮಾಂಸ, ಮತ್ಸ್ಯ, ಮೈಥುನ, ಮುದ್ರ) ಈ ಶತ್ರುಗಳನ್ನು ಹೊಡೆದೋಡಿಸಲು ಪರವೆಂಬ ತಾಯಿಗೆ ಮಾತ್ರ ಸಾಧ್ಯ. “ಐ ಮುಖನ ಅರಮನೆ ಸುಖವಿಲ್ಲವೆಂದು” ಹೇಳುವ ವಿಶಾಲಾರ್ಥವಾಗಿದೆ. ಹುಟ್ಟು-ಸಾವು ಪಯಣದಲ್ಲಿ ನಿರಾಕಾರ ನಿರ್ವಯಲಲ್ಲಿ ಅಗೋಚರವಾಗಿ ಕಣ್ಣಿಗೆ ಕಾಣದಂತೆ ಇರುವ ಚೆನ್ನಮಲ್ಲಿಕಾರ್ಜುನನೇ ಅಕ್ಕನಿಗೆ ಸಾಕ್ಷಿಯಾಗಿದ್ದಾನೆ. ನಿರಾಕಾರದಿಂದ ಆಕಾರವನ್ನು ಪಿಂಡಾಂಡದ ಮೂಲಕ ಶೂನ್ಯದಲ್ಲಿ ಗಟ್ಟಿಯಾಗಿಸಿಕೊಳ್ಳುವುದಾಗಿದೆ. “ಬಯಲಿಂದ ಹುಟ್ಟಿದ ಪರವೆಂಬ ತಾಯಿ” ಒಂದರ ಒಳಗೊಂದು ಕಣ್ಣಿಗೆ ಕಾಣದ ಅಗೋಚರ ಮಾನಸಿಕ ಬೆಸುಗೆ ಅದು.

ಬಯಲನ್ನು ಕುರಿತು ಚರ್ಚಿಸುತ್ತಿರುವ ವಚನಗಳಲ್ಲಿ ಅನೇಕ ಸೂಕ್ಷ್ಮ ನೋಟಗಳಿವೆ. ಶಿವದರ್ಶನದ ವ್ಯಾಪ್ತಿಯಲ್ಲಿ ವಿಶ್ವಾಸ, ಶ್ರದ್ಧೆ, ಭಕ್ತಿ ಕಂಪನದ ಅನುಭೂತಿಗಳುಂಟಾಗುತ್ತವೆ. ಇದುವೇ ಭಾವಚಿತ್ತದ ಒಂದು ಅವಸ್ಥೆಯಾಗಿದೆ. ಶೂನ್ಯ ಅವಸ್ಥೆಯಲ್ಲಿ ದೇವರನ್ನು ಕಾಣಬೇಕಾದರೆ ಭಾವವೊ, ಬಯಲೊ ಎಂಬ ಜಿಜ್ಞಾಸೆ. ಆದರೆ ಬಯಲ ಭಾವದಲ್ಲಿ ನಿರ್ವಯಲ ಲಿಂಗರೂಪದಲ್ಲಿ ಲೀನವಾಗುವ ಹಂತ. ಅಮುಗೆ ರಾಯಮ್ಮನ ವಚನದಲ್ಲಿ ಹೀಗೆ ಕಾಣಬಹುದು.

ಆಮುಗೆ ರಾಯಮ್ಮನವರ ಈ ವಚನ:
ಭಾವವಿಲ್ಲದ ಬಯಲೊಳಗೆ | ಮನೆಯ ಮಾಡಿದಡೆ ||
ಬೆಟ್ಟ ಬೆಟ್ಟಕ್ಕೆ ಜಗಳ ಬಂದು | ಕಿಚ್ಚು ಹತ್ತಿತ್ತು ||
ಭಾವವಿಲ್ಲದ ಬಯಲೊಳಗಣ | ಮನೆ ಬೆಂದಿತ್ತು ||
ಅಮುಗೇಶ್ವರನೆಂಬ | ಲಿಂಗವರಿಯಬಂದಿತ್ತು ||

ಶರಣ ಧರ್ಮದಲ್ಲಿ ಭಾವಕ್ಕೆ ಮಹತ್ತರ ಸ್ಥಾನವಿದೆ. ಭಾವವೆಂಬ ಬಯಲಲ್ಲಿ ಅರಿವಿನ ರೂಪ ಕಾಣುವ ಅಗೋಚರ ವಿಸ್ಮಯವದು. ಅಮೂರ್ತ ಮನದಲ್ಲಿ ಪ್ರಖರತೆಗೆ ಸ್ಪಂದಿಸುವ ಗುಣವೇ ಭಾವ. ಮನದ ಭಾವದಲ್ಲಿ ಶೂನ್ಯ ನಿರಾಳ ಮನಸ್ಥಿತಿಯಲ್ಲಿ ಪ್ರವೇಶ ಪಡೆಯುವುದಾಗಿದೆ. ಶಿವನನ್ನು ಕಾಣುವ ಚಿತ್ ಶಕ್ತಿಯದು. “ಭಾವ ಬಯಲೊಳಗೆ ಮನೆಯ ಮಾಡಿದಡೆ” ಬಯಲನ್ನು ಹುಡುಕುವ ಪರಿಕ್ರಮದಲ್ಲಿ ಭಾವ ಸೋಲುತ್ತದೆ. ಬಯಲಲ್ಲಿ ಶಿವನನ್ನು ಕಾಣಬೇಕಾದರೆ ಒಂದು ಆಧ್ಯಾತ್ಮದ ಸುಖವಿರುತ್ತದೆ. ಬಯಲ ಒಡಲಲ್ಲಿ ಮನೆಯ ಮಾಡಿದಡೆ ಜೀವಾತ್ಮ ಪರಮಾತ್ಮರ ಏಕತೆಯ ಭಾವದ ಅದ್ವೈತ ಮನಸ್ಥಿತಿಯಾಗುತ್ತದೆ. “ಬೆಟ್ಟ ಬೆಟ್ಟಕ್ಕೆ ಜಗಳ ಬಂದು ಕಿಚ್ಚು ಹತ್ತಿತ್ತು” ಆಧ್ಯಾತ್ಮದ ಬೆಟ್ಟವನ್ನು ಹತ್ತಲು ಸಾಧ್ಯವಾಗದಿದ್ದಾಗ ಕಿಚ್ಚೆಂಬ ಕ್ರೋಧದ ಜ್ವಾಲೆ ಸುಡಲು ಪ್ರಾರಂಭಿಸುತ್ತದೆ. ಅಧ್ಯಾತ್ಮದಲ್ಲಿ ವೈರಾಗ್ಯ ಭಾವ ಗಟ್ಟಿಯಾಗಬೇಕಾದರೆ ಬೆಟ್ಟ ಬೆಟ್ಟಕ್ಕೆ ಕಿಚ್ಚು ಹಚ್ಚಲು ಬಿಡಬಾರದು. ಮನ ಮತ್ತು ಭಾವದ ಅನುಸಂಧಾನದಲ್ಲಿ ಜ್ಞಾನ ವಿಶಾಲವಾಗಬೇಕು.

ಅಧ್ಯಾತ್ಮದಲ್ಲಿ ಆಳವಾದ ಶಕ್ತಿಯನ್ನು ಕಾಣಬೇಕಾದರೆ ದೇಹವನ್ನೇ ದೇಗುಲವಾಗಿಸುವ ಸತ್-ಚಿತ್-ಆನಂದದ ತನ್ಮಯತೆ ಅದಾಗುತ್ತದೆ. ಭಾವ ಬಯಲು ಎಂದು ಹೇಳುವ ಪರಿಕ್ರಮದಲ್ಲಿ ಶಬ್ದಗಳಲ್ಲಿ ವಿಶೇಷ ಸೌಂದರ್ಯವನ್ನು ಕಾಣಬಹುದು. ಭಾವದ ಮೂಲಕ ನಿರಾಕಾರ ಬಯಲಿನಲ್ಲಿ ಅಮುಗೇಶ್ವರಲಿಂಗ ಕಾಣುವ ತವಕ. ಈ ದೈವ ಭಾವ ದಿವ್ಯ ಭಾವವಾಗಲು ಬಯಲಿಗೆ ಶರಣಾಗಲೇಬೇಕು. ಅಂತರಂಗದ ಬಯಲು ಬಹಿರಂಗದ ನಿರ್ವಯಲು ಅಗೋಚರ ಉನ್ಮತ್ತ ಮನದ ಪ್ರಾಣಲಿಂಗದ ಪ್ರಖರತೆಯಾಗಿದ್ದನ್ನು ಗಮನಿಸಲೇಬೇಕು.
ಶರಣರು ದೇವರ ಅಸ್ತಿತ್ವದ ಹುಡುಕಾಟದಲ್ಲಿ ನಾನು ಒಂಟಿ, ಇತರರಿಗಿಂತ ಪ್ರತ್ಯೇಕ ಎಂಬ ಮೌನ ಕಾಡಿದಾಗ ಪ್ರಕೃತಿಯ ಬಯಲಲ್ಲಿ ತನ್ನ ಅಸ್ತಿತ್ವವನ್ನು ಹುಡುಕಲು ಶುರು ಮಾಡುತ್ತಾನೆ. ಒಬ್ಬ ವ್ಯಕ್ತಿಯಾಗಿ ಯೋಚಿಸುವುದಿಲ್ಲ. ಇಡೀ ಸಮಾಜದ ಕುರಿತು ತರ್ಕಿಸುತ್ತಾನೆ. ಸಮಷ್ಟಿ ಬಯಲಲ್ಲಿ ಶಿವನ ಪ್ರಸಾದ ಲಿಂಗ ಪ್ರಸಾದ ಬಸವ ಪ್ರಸಾದ. ಶರಣರ ಶಾಸ್ತ್ರೀಯ ಜ್ಞಾನದ ಅಂಗೀಕಾರಗಳಾಗಿವೆ. ಬಸವ ಪಥವನ್ನು ನಿರ್ಮಲ ಮನಸ್ಸಿನಿಂದ ಅರ್ಪಿಸಿಕೊಂಡ ಶರಣರ ಮನಸ್ಥಿತಿ ಚಾರಿತ್ರಿಕ ಸಮೀಕ್ಷೆಯಾಗಿದೆ.

ಮಡಿವಾಳ ಮಾಚಿದೇವರ ಈ ವಚನ:
ಬಸವಣ್ಣನ ನೆನ್ನೆದೆನ್ನ | ತನು ಬಯಲಾಗಿತ್ತು ||
ಬಸವಣ್ಣನ ನೆನೆದೆನ್ನ | ಮನ ಬಯಲಾಯಿತ್ತು ||
ಬಸವಣ್ಣನ ನೆನೆದೆನ್ನ | ಭಾವ ಬಯಲಾಯಿತ್ತು ||
ಕಲಿದೇವಯ್ಯ ನಿಮ್ಮ, | ಶರಣ ಮಹಾಮಹಿಮ ||
ಸಂಗನಬಸವಣ್ಣನ | ನೆನೆದು ನೆನೆದು ||
ಎನ್ನ ಸರ್ವಾಂಗ | ಲಿಂಗವಾಯಿತ್ತೆಂದರಿದೆನಯ್ಯಾ ||

ವೀರ ಗಣಾಚಾರಿ ಕಾಯಕ ನಿಷ್ಠೆಗೆ ಹೆಸರಾದ ಮಡಿವಾಳ ಮಾಚಿದೇವರು ತನ್ನ ಸ್ವಾಭಿಮಾನದ ಬದುಕಿನಲ್ಲಿ ಬಸವಣ್ಣನನ್ನು ತನು ಭಾವದ ಮೂಲಕ ಕಂಡವನಾಗಿದ್ದ. ಅರಿವೇ ಗುರುವಾದ ಬಸವಣ್ಣನವರ ಶ್ರೇಷ್ಠತೆಗೆ ಮಾರುಹೋಗಿದ್ದ. ಬಸವ ಧರ್ಮದಲ್ಲಿ ಬಸವ ಲೀಲೆಯಾಗಿ ತನ್ನನ್ನು ಅಂತರಂಗಿಸಿಕೊಂಡಾಗ ತನು ಮತ್ತು ಮನೋಭಾವದಲ್ಲಿ ಅಣ್ಣನ ವಿರಾಟ ರೂಪಕ್ಕೆ ಶರಣಾಗುತ್ತಾನೆ. ಅರಿವೆ ದಾರ್ಶನಿಕ ಪ್ರತಿಭೆಯ ಮೂಲ ತತ್ವ. ಪಾರಮಾರ್ಥಿಕ ಬದುಕಿನಲ್ಲಿ ದೇಹದ ವ್ಯಾಮೋಹ ನಿರಾಕರಿಸಿ “ಬಸವಣ್ಣನ ನೆನೆದೆನ್ನ ಮನ ಬಯಲಾಯಿತು”. ಆಧ್ಯಾತ್ಮದಲ್ಲಿ ಅಭದ್ರತೆ ಕಾಡಿದಾಗ ಪ್ರಕೃತಿಯ ಬಯಲಲ್ಲಿ ತನ್ನ ಅಸ್ತಿತ್ವವನ್ನು ಬಸವ ಪ್ರಜ್ಞೆಯ ಮೂಲಕ ಹುಡುಕಲು ಪ್ರಾರಂಭಿಸುತ್ತಾನೆ. ಲಿಂಗಮಯ ಜಗತ್ತಿನ ಮನದಲ್ಲಿ ಬಸವಣ್ಣನೆ ಇರುವಾಗ “ನೆನಹು ಬಯಲಾಗುತ್ತದೆ.” ಬಸವ ಭಕ್ತನಾಗುವ ತೀವ್ರತೆಯಲ್ಲಿ ಮನವು ಬಯಲಾಗುತ್ತದೆ. “ಬಯಲು ಲಿಂಗವೆಂಬೆನೆ” ದೇವರ ಅಸ್ತಿತ್ವದ ಹುಡುಕಾಟ ಕಾಣಬಹುದು.

ಶರಣರು ನೇರವಾಗಿ ಶೂನ್ಯವೆಂದು ಹೇಳದೆ ಬಯಲು ಎಂದು ಬಿಂಬಿಸಿ ಹೇಳುವುದನ್ನು ತಿಳಿಯಬಹುದು. “ಬಸವಣ್ಣನ ನೆನೆದೆನ್ನ ಭಾವ ಬಯಲಾಯಿತ್ತು”. ಈ ದೇಹದಲ್ಲಿ ಕಲಿದೇವನಿರುವಾಗ ಅರಿವು ಕುರುಹುಗಳಲ್ಲಿ ಬಸವಣ್ಣನನ್ನು ಕಾಣಲಾಗದು. ನೆನಹು ಭಾವದಲ್ಲಿ ಬಸವನೆಂಬ ಸಂಮೋಹನ ಶಕ್ತಿ ಅಡಗಿದ್ದರಿಂದ ವಿಶ್ವದ ಬಯಲ ಭಾವದಲ್ಲಿ ಬಸವಣ್ಣನವರ ಅನುಸಂಧಾನದ ಪ್ರಭೆ ಅದಾಗಿದೆ. ಕಲಿದೇವನನ್ನು ತನು ಮನ ಭಾವದಲ್ಲಿ ಕಂಡಾಗ ಬಸವಣ್ಣನವರನ್ನು ಅಗೋಚರ ಬಯಲಲ್ಲಿ ಹಿಡಿಯಲು ಪ್ರಯತ್ನಿಸುತ್ತಾನೆ. ವಿಶ್ವ ಬಯಲಲ್ಲಿ ವಿಜ್ಞಾನದ ಸೆಳೆತಗಳು ಇರುವುದರಿಂದ ಲಿಂಗದೇಹಿಯಾಗಿ, ಆದಿಯೂ ಬಸವ ಅನಾದಿಯೂ ಸಂಗನಬಸವಣ್ಣ, ಸರ್ವಾಂಗ ಲಿಂಗಮಯನು. ಲಿಂಗಾಂಗ ಸಾಮರಸ್ಯದಲ್ಲಿ ಲಿಂಗ ತನುವೇ ಬಸವ. ಲಿಂಗಮಯನೇ ಬಸವಣ್ಣ. ಅಣ್ಣನವರ ನೆನಹು ಶೂನ್ಯವಲ್ಲ. ಬಸವಧರ್ಮದ ಪ್ರೀತಿಯನ್ನು ಕಳೆದುಕೊಳ್ಳುವ ಭಯವಾಗಿದೆ. ಏಕೆಂದರೆ ಅಂದಿನ ದರ್ಶನಗಳ ಸಂಸ್ಕೃತಿಯನ್ನು ಪ್ರತಿಭಟಿಸುವುದಾಗಿದೆ.

“ಬಯಲ ಬೆರಗಿನ ಸುಖದ ಸವಿಯು ಬೆರಗಲ್ಲದೆ ಕಾಣೆ ಕಾಣೆ” ಅಲ್ಲಮರು ಬಯಲನ್ನು ಬೆರಗಾಗಿ ನೋಡುವಾಗ ನಿರಾಕಾರ ಭಾವದಲ್ಲಿ ಮಾನವ ಕಲ್ಪಿತ ರೂಪ ಕೊಡದೆ ಆತ್ಮ ಪ್ರಭೆಯ ಸವಿಯನ್ನು ಹಂಚುತ್ತಾರೆ. ಕಾರ್ಯವೂ ಅಲ್ಲದ ಕಾರಣವೂ ಅಲ್ಲದ ಬಯಲ ಸ್ಪರ್ಶವದು. ಹೀಗಾಗಿ ಕಾಯದ ಇಂದ್ರಿಯಗಳು ಆತ್ಮಪ್ರಭೆಗೆ ತಲುಪುವ ದ್ವಿತೀಯ ಹಂತದಲ್ಲಿ ಗುಹೇಶ್ವರನ ಸಾಮಿಪ್ಯ ಸಕ್ಕರೆಯ ಸವಿಯಾಗುತ್ತದೆ.

ಶರಣರ ಅನುಭಾವ ಮತ್ತು ಅವರ ತಾತ್ವಿಕ ಚೌಕಟ್ಟಿನಲ್ಲಿ ಷಟ್ಸ್ಥಲಗಳ ಆತ್ಮವಿದ್ಯೆ ಅಡಗಿದೆ. ಅದೇ ವಿಶ್ವವ್ಯಾಪಿ ಲಿಂಗಮಯವಾದ ಶಿವನು. ಅದನ್ನು ಇಂದ್ರಿಯಗಳಿಂದ ಅರಿಯಲು ಸಾಧ್ಯವಿಲ್ಲ. ಅಧ್ಯಾತ್ಮದ ಅನುಭಾವಿಕ ಅನುಭೂತಿ ಬೇಕು. ಅದೇ ವಿಸ್ಮಯದ ಶೂನ್ಯ ನಿರಾಲಂಬರ. ಮನುಷ್ಯ ಪ್ರಕೃತಿಯ ಒಂದು ಭಾಗ. ಜೀವಂತವಾದ ಚಲನಶೀಲತೆಯಲ್ಲಿ ಬಯಲನ್ನೇ ಬಿತ್ತಿ ಬಯಲಲ್ಲಿ ಲೀನವಾಗುವ ವಿಶ್ವಾತ್ಮಕ ಮಾದರಿ.

ಅಲ್ಲಮ ಪ್ರಭುಗಳ ಈ ವಚನ:
ಬಯಲು ಬಯಲನೆ ಬಿತ್ತಿ | ಬಯಲು ಬಯಲನೆ ಬೆಳೆದು ||
ಬಯಲು ಬಯಲಾಗಿ | ಬಯಲಾಯಿತ್ತಯ್ಯಾ ||
ಬಯಲ ಜೀವನ | ಬಯಲ ಭಾವನೆ ||
ಬಯಲು ಬಯಲಾಗಿ | ಬಯಲಾಗಿತ್ತಯ್ಯ ||
ನಿಮ್ಮಯ ಪೂಜಿಸಿದವರು | ಮುನ್ನವೇ ಬಯಲಾದರು ||
ನಾ ನಿಮ್ಮ ನಂಬಿ | ಬಯಲಾದೆ ಗುಹೇಶ್ವರಾ ||

ಭಕ್ತಿ ಎನ್ನುವುದು ನಿಶ್ಯಬ್ದ ನೀರವ ವಾತಾವರಣದಲ್ಲಿ ಒಂಟಿಯಾಗಿ ಕುಳಿತು ಮನಸ್ಸನ್ನು ನಿಗ್ರಹಿಸಿಕೊಳ್ಳುವ ಸಾಧನೆಯ ಮಾರ್ಗವದು. ಭೌತಿಕ ಕ್ರಿಯೆಯೇ ಪ್ರಧಾನವಾದ ಈ ಬದುಕಿನಲ್ಲಿ ಸಾಕಾರ ಜ್ಞಾನ ಸ್ವರೂಪದಲ್ಲಿ ವಿಜ್ಞಾನವೇ ಶೂನ್ಯದ ಆಕಾರ ಪಡೆಯುತ್ತದೆ. ನಿರಾಕಾರ ಬಯಲಲ್ಲಿ ಅಂತರಂಗದ ಬಯಲು ಬಿತ್ತುವುದು ಸಾಧಕರಿಗೆ ಮಾತ್ರ ಸಾಧ್ಯ. ಸಾಧಕನ ಶರೀರದ ಬಯಲು ಭಿನ್ನವಾಗಿದ್ದರೂ ಅವು ಪರಸ್ಪರ ಒಂದೇ ಎಂಬ ವಾದ ಮೇಲುನೋಟಕ್ಕೆ ಮಾನ್ಯವಾಗುವ ಸಂಗತಿಗಳಾಗಿವೆ. ಈ ಪ್ರಕೃತಿ ತತ್ವದಿಂದ ಕಾಯ ಹುಟ್ಟಿದರೂ “ಬಯಲು ಬಯಲನ ಬೆಳೆದು” ಹುಟ್ಟು-ಸಾವು ಪಯಣದಲ್ಲಿ ಸ್ವತಂತ್ರವಾಗಿ ಗಟ್ಟಿಯಾಗುವ ಹಂಬಲವಿರುತ್ತದೆ. ನಿರಾಕಾರದ ಉದ್ದೀಪನ ಮನಸ್ಥಿತಿಯಲ್ಲಿ ಈ ಕಾಯ ಮಣ್ಣಲ್ಲಿ ಮಣ್ಣಾಗಿ ಹೋದ ಕಾಯ. ಮತ್ತೆ ಸೂಕ್ಷ್ಮ ರೂಪದ ಮೂಲಕ ಬಯಲ ಭಾವವಾಗುತ್ತದೆ. ಕಾರಣ ಶರೀರದಲ್ಲಿ ವಿಶೇಷ ಶಕ್ತಿ ಸಂಚಯ ಉಂಟಾಗಿ ಪ್ರಕೃತಿಯಲ್ಲಿ ತನ್ನ ನಿರೂಪವನ್ನಾಗಿಸಿಕೊಳ್ಳುವವರೆಗೂ ಬಯಲ ಭಿತ್ತಿಯಲ್ಲಿ ಹೋರಾಡುತ್ತದೆ. ಇದನ್ನು ಆಧ್ಯಾತ್ಮದ ಮನಶಾಸ್ತ್ರವು ಸಹಿತ ಒಪ್ಪುತ್ತದೆ. ಶರಣರ ಬಯಲ ಪ್ರಜ್ಞೆಯಲ್ಲಿ ಮನುಷ್ಯನು ಸಹಿತಾ ಪ್ರಕೃತಿಯ ಒಂದು ಭಾಗ. ಅವನು ಚೈತನ್ಯಾತ್ಮಕವಾಗಿ ನೈಸರ್ಗಿಕ ಪರಿಸರದ ಮೇಲೆ ತನ್ನ ಪ್ರಭಾವವನ್ನು ಹೊಂದಿದವನು. ಆದ್ದರಿಂದ ಅಗೋಚರ ಮನಸ್ಥಿತಿಯಲ್ಲಿ ಬಯಲ ನಿಕ್ಷೇಪದಲ್ಲಿ ಗುಹೇಶ್ವರಲಿಂಗವಾಗುವ ತಾದಾತ್ಮಕ ಭಾವವದು.

ಶರಣರಲ್ಲಿ ಅಂಗ ಲಿಂಗದ ಚರ್ಚೆಯೇ ಪ್ರಧಾನವಾಗಿರುವಾಗ ಬಯಲು ಇರುವುದೇನಿದ್ದರೂ ನಿರಾಕಾರನಾದ ಲಿಂಗಮಯವಾದ ಶಿವನಲ್ಲಿ. ಇದೊಂದು ರೀತಿಯಲ್ಲಿ ಶರಣರ ಸೃಜನಶೀಲ ಹುಡುಕಾಟವಾಗಿದೆ. ಭೌತಿಕ ಶರೀರದ ಆಧ್ಯಾತ್ಮಿಕ ಜೀವವನ್ನು ಪ್ರೇರೇಪಿಸುತ್ತದೆ.

ಡಾ. ಸರ್ವಮಂಗಳಾ ಸಕ್ರಿ
ಕನ್ನಡ ಉಪನ್ಯಾಸಕರು
ರಾಯಚೂರು.
ಮೋಬೈಲ್ ಸಂ : +91 94499 46839

Don`t copy text!