ಉಭಯದ ಭೇದವ ಬಲ್ಲಡೆ ಪಿಂಡಜ್ಞಾನಸಂಬಂಧಿ

ಉಭಯದ ಭೇದವ ಬಲ್ಲಡೆ ಪಿಂಡಜ್ಞಾನಸಂಬಂಧಿ

ಗೂಡಿನೊಳಗಿದ್ದು ಕಾಲ ವೇಳೆಯನರಿದು ಕೂಗುವ ಕುಕ್ಕುಟ ತಾ ಸಾವುದ ಬಲ್ಲುದೆ?
ತನ್ನ ಶಿರವನರಿದು ಶಿರ ಬೇರೆ ಅಂಗ ಬೇರಾದಲ್ಲಿ
ಆ ಅಂಗ ಪುಟನೆಗೆವಲ್ಲಿ ಆತ್ಮಸಂಗವೆಲ್ಲಿದ್ದಿತ್ತು?
ಶಿರಚ್ಛೇದವಾದಲ್ಲಿ ಮತ್ತಾವ ಘಟಕ್ಕೂ ಶಿರಬಂಧವಾಗಲಿಕ್ಕೆ
ಆ ಘಟ ಚೇತನವಡಗಿ ಅಲ್ಲಿಯೆ ಮೃತವಾಗಿಪ್ಪುದು
ಇಂತೀ ಘಟ-ಆತ್ಮನ ಉಭಯದ ಭೇದವ ಬಲ್ಲಡೆ ಪಿಂಡಜ್ಞಾನಸಂಬಂಧಿ ಸದ್ಯೋಜಾತಲಿಂಗವ ಬಲ್ಲವ
                                                 – ಅವಸರದ ರೇಕಣ್ಣ

ಅವಸರದ ರೇಕಣ್ಣ ೧೨ನೇ ಶತಮಾನದಲ್ಲಿ ಬಸವಾದಿ ಶರಣರ ಸಂಗದಲ್ಲಿದ್ದ ಗುಪ್ತ ವಚನಕಾರ. ಅವನು ಹಿಡಿದ ಯಾವ ಕೆಲಸವನ್ನಾದರೂ ತ್ವರಿತಗತಿಯಲ್ಲಿ ಮಾಡಿ ಮುಗಿಸುತ್ತಿದ್ದುದರಿಂದ, ಅವನನ್ನು ಅವಸರದ ರೇಕಣ್ಣನೆಂದು ಕರೆಯಲಾಗಿದೆ. ಶಿವಶಕ್ತಿ-ಶಿವಭಕ್ತಿಗಳ ಸಂಗಮವನ್ನು ಈತನ ವಚನಗಳಲ್ಲಿ ಕಾಣಬಹುದು. ಶರಣರ ಅಂತರಂಗವನ್ನು ಬಣ್ಣಿಸುವಂತಹ ವಚನಗಳನ್ನು ಇವನು ರಚಿಸಿರುವನು. ಇವನ ವಚನಗಳ ಅಂಕಿತ ‘ಸದ್ಯೋಜಾತಲಿಂಗ’.

ಅವಸರದ ರೇಕಣ್ಣ ಸುಮಾರು 104 ವಚನಗಳನ್ನು ರಚಿಸಿದ್ದಾರೆ.

ತತ್ವ ನಿಷ್ಠ ಅಧ್ಯಾತ್ಮ ಸಾಧನೆ ಮಾಡಲು ಕ್ರಮ ಕೈಗೊಳ್ಳುವ ತೀರ್ಮಾನಗಳು ನಿರ್ಧಾರ ನಿರ್ಣಯ ಆಂತರಿಕ ಪರಿವರ್ತನೆ ಬಾಹ್ಯ ಲೋಕದಲ್ಲಿ ಬದುಕುವ ಭಕ್ತನ ಗುಣಗಳನ್ನು ಅನಾವರಣಗೊಳಿಸುವ ವುಂಗ್ಯ ವಿಡಂಬನೆ ಮೊನಚಾದ ಟೀಕೆ ಇವರ ವಚನಗಳಲ್ಲಿ ಕಾಣ ಬಹುದು.
ಗೂಡಿನೊಳಗಿದ್ದು ಕಾಲ ವೇಳೆಯನರಿದು ಕೂಗುವ ಕುಕ್ಕುಟ ತಾ ಸಾವುದ ಬಲ್ಲುದೆ?

ಕೋಳಿ ಒಂದು ಗೂಡಿನಲ್ಲಿದ್ದು ಕಾಲಜ್ಞಾನ ಮತ್ತು ವೇಳೆಯ ಗುಣವನ್ನು ಅರಿದು ಬೆಳಿಗ್ಗೆ ಕೂಗುತ್ತದೆ ಎಲ್ಲರಿಗೂ ಬೆಳಗಿನ ಸೂರ್ಯನ ಆಗಮನದ ಸೂಚನೆ ನೀಡುತ್ತದೆ.ಆದರೆ ಇಂತಹ ಕಾಲಜ್ಞಾನ ಮತ್ತು ಸಮಯ ವೇಳೆಯ ಅರಿವನ್ನು ಹೊಂದಿರುವ ಕುಕ್ಕಟ ಕೋಳಿ ತನ್ನ ಸಾವು ಯಾವಾಗ ಬರುತ್ತದೆ ಎಂದು ತಿಳಿಯಲು ಸಾಧ್ಯವೇ? ಸಾಧ್ಯವಿಲ್ಲ ಹಾಗೆ ಜಗತ್ತಿಗೆ ಸಮಯ ಸಾರಿ ಹೇಳಿದರೂ ತನ್ನ ಸ್ವಂತ ಬದುಕಿನ ಸಾವು ಯಾವಾಗ ಬರುತ್ತದೆ ಎಂದು ತಿಳಿಯಲು ಸಾಧ್ಯವೇ ಇಲ್ಲ ಅಂದ್ರೆ ಕೋಳಿಯ ಕೂಗು ಒಂದು ಸಹಜ ಪ್ರಕ್ರಿಯೆ ಅಷ್ಟೆ

ತನ್ನ ಶಿರವನರಿದು ಶಿರ ಬೇರೆ ಅಂಗ ಬೇರಾದಲ್ಲಿ ಆ ಅಂಗ ಪುಟನೆಗೆವಲ್ಲಿ ಆತ್ಮಸಂಗವೆಲ್ಲಿದ್ದಿತ್ತು?

ಮನುಷ್ಯ ತನ್ನ ಬುದ್ಧಿ ಶಕ್ತಿ ಮತ್ತು ಶಿರದ ಕವಚದಲ್ಲಿರುವ ಮೆದುಳು ಜ್ಞಾನವನ್ನು ತಿಳಿಯುವ ಪ್ರಮುಖ ಅಂಗ. ಇಂತಹ ಪ್ರಮುಖ ಅಂಗವು ಆದರೆ ಯುದ್ಧದಲ್ಲಿ ವೈರಿಯು ವ್ಯಕ್ತಿಯ ಶಿರವನ್ನು ಛೇದಿಸಿದಲ್ಲಿ ಶಿರ ಮತ್ತು ಅಂಗ ಬೇರೆ ಅಗಿ ಬೀಳುವುದು
ರುಂಡ ಮುಂಡ ಬೇರಾದಲ್ಲಿ ಶಿರ ಹೋಯಿತ್ತು ಉಳಿದ ಮುಂಡ ಪುಟಿ ಪುಟಿದು ಬೀಳುವಾಗ ಅತ್ಮ ಜ್ಞಾನದ ಸಂಗ ಎಲ್ಲಿ ಹೋಗುವುದು,,? ಇಂತಹ ಸುಂದರ ಪ್ರಾಯೋಗಿಕ ನಿರೀಕ್ಷೆ ವಚನಕಾರರಲ್ಲಿ ಕಾಣಬಹುದು.

ಶಿರಚ್ಛೇದವಾದಲ್ಲಿ ಮತ್ತಾವ ಘಟಕ್ಕೂ ಶಿರಬಂಧವಾಗಲಿಕ್ಕೆ
ಆ ಘಟ ಚೇತನವಡಗಿ ಅಲ್ಲಿಯೆ ಮೃತವಾಗಿಪ್ಪುದು

ಶಿರಚ್ಛೇದವಾದಲ್ಲಿ ಅಂತಹ ರುಂಡವನ್ನು ಮತ್ತೊಂದು ಶಿರಚ್ಛೇದನ ಮಾಡಿದ ಅಂಗಕ್ಕೆ ಜೋಡಿಸಿದಲ್ಲಿ ಅಲ್ಲಿಯೂ ಸಂಪೂರ್ಣ ಚೇತನವು ಅಡಗಿ ಅದು ಸತ್ತ ಶವವಾಗುವುದು. ವ್ಯಕ್ತಿಯ ಅರಿವು ಮತ್ತು ಆಚಾರ ಒಂದಕ್ಕೊಂದು ಸಂಬಂಧ ಗೌಪ್ಯತೆ ಹೊಂದಿರಬೇಕು.ಇಲ್ಲದಿದ್ದರೆ ಒಂದು ಅಂಗದ ಶಿರ ಅರಿವು ಇನ್ನೊಂದು ಅಂಗದ ಆಚಾರ ಮುಂಡ ಜೋಡಿಸಲು ಜಂಗಮ ಚೇತನ ನಿಷ್ಕ್ರಿಯಗೊಳ್ಳುವುದು ಸಹಜ ಸಾಧ್ಯ. ಕಾರಣ ಅರಿವು ಆಚಾರ ಒಂದಕ್ಕೊಂದು ಸಂಬಂಧ ಹೊಂದಿರಬೇಕು ಪೂರಕವಾಗಿ ಕಾರ್ಯ ಮಾಡುತ್ತಿರಬೇಕು.

ಇಂತೀ ಘಟ-ಆತ್ಮನ ಉಭಯದ ಭೇದವ ಬಲ್ಲಡೆ ಪಿಂಡಜ್ಞಾನಸಂಬಂಧಿ ಸದ್ಯೋಜಾತಲಿಂಗವ ಬಲ್ಲವ*

ಹೀಗೆ ಭಕ್ತನಾದವನು ಜ್ಞಾನ ಮತ್ತು ಕ್ರಿಯೆ ಇವುಗಳ ಉಭಯ ಭೇದ ಮತ್ತು ಸಂಬಂಧಗಳನ್ನು ಅರಿತರೆ ಪಿಂಡ ಸಂಬಂಧಿ ಎಂತೇಣಿಸಿಕೊಳ್ಳುವನು. . ಜ್ಞಾನ ಇದು ಒಂದು ಕವಚದಲ್ಲಿರುವ ಸೂಕ್ಷ್ಮ ಭಾವ ಅದನ್ನು ಅಷ್ಟೇ ಬದ್ಧವಾಗಿ ಆಚರಿಸುವ ಘಟ ಜ್ಞಾನಕ್ಕೆ ಪೂರಕವಾದ ಕ್ರಿಯೆಯನ್ನು ಪಾಲಿಸಬೇಕು. ಒಂದು ಹಂತದಲ್ಲಿ ಅರಿವು ಮತ್ತು ಜ್ಞಾನ ಎರಡೂ ಏಕಕಾಲಕ್ಕೆ ಬೇರೆ ಬೇರೆ ಅದಲ್ಲಿ ಅವುಗಳನ್ನು ಜೋಡಿಸಲು ಹೇಗೆ ಸಾಧ್ಯ
ಮೇಲಿನ ವಚನವು ಮೇಲು ನೋಟಕ್ಕೆ ವ್ಯಕ್ತಿಯ ಅರಿವು ಜ್ಞಾನ ಸಂಬಂಧಗಳನ್ನು ಕಳಚಿಕೊಂಡ ರುಂಡ ಮುಂಡ ಬೇರೆ ಬೇರೆ ಆದಲ್ಲಿ ಅವುಗಳನ್ನು ಜೋಡಿಸಲು ಹೇಗೆ ಸಾಧ್ಯವಿಲ್ಲವೋ ,,? ಹಾಗೆ ಜ್ಞಾನ ಅರಿವು ಮತ್ತು ಆಚಾರ ಕ್ರಿಯೆ ಇವುಗಳ ಉಭಯ ಭೇದ ಅರಿಯದಿದ್ದಲ್ಲಿ ಮತ್ತೂ ಆಚಾರ ವಿಚಾರ ವಿರುದ್ಧವಾದಲ್ಲಿ ರುಂಡ ಮುಂಡ ಜೋಡಿಸಲು ಸಾಧ್ಯವೇ ಇಲ್ಲ ಎನ್ನುವ ಅತ್ಯಂತ ಸುಂದರ ಪ್ರತಿಮೆ ಮತ್ತು ಬೆಡಗನ್ನು ಹೊಂದಿರುವ ಅವಸರದ ರೇಚಣ್ಣನವರ ವಚನ. ಇಂತಹ ಸೂಕ್ಷ್ಮತೆಯ ಆಧ್ಯಾತ್ಮಿಕ ಸಾಧನೆ ಮಾಡಿದ ಭಕ್ತ ಮಾತ್ರ ಸದ್ಯೋಜಾತಲಿಂಗವ ಬಲ್ಲವನಾಗುತ್ತಾನೆ.

ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!