ಅಕ್ಕನ ಆರೋಗ್ಯ ಧರ್ಮ
ಆಹಾರವ ಕಿರಿದು ಮಾಡಿರಣ್ಣಾ ಆಹಾರವ ಕಿರಿದು ಮಾಡಿ
ಆಹಾರದಿಂದ ವ್ಯಾಧಿ ಹಬ್ಬಿ ಬಲಿವುದಯ್ಯಾ
ಆಹಾರದಿಂ ನಿದ್ರೆ, ನಿದ್ರೆಯಿಂ ತಾಮಸ, ಅಜ್ಞಾನ, ಮೈಮರೆವು
ಅಜ್ಞಾನದಿಂ ಕಾಮವಿಕಾರ ಹೆಚ್ಚಿ
ಕಾಯವಿಕಾರ ಮನೋವಿಕಾರ ಇಂದ್ರಿಯ ವಿಕಾರ
ಭಾವ ವಿಕಾರ ವಾಯು ವಿಕಾರವನುಂಟುಮಾಡಿ
ಸೃಷ್ಠಿಗೆ ತಂದುದಾದ ಕಾರಣ ಕಾಯದ ಅತಿ ಪೋಷಣೆ ಮೃತ್ಯುವೆಂದುದು
ಜಪ, ತಪ, ಧ್ಯಾನ, ಪೂಜೆಗೆ ಸೂಕ್ಷ್ಮ ದಿಂದ
ತನು ಮಾತ್ರವಿದ್ದರೆ ಸಾಲದೇ? ತನುವ ಪೋಷಿಸುವ
ಆಸೆ ಅತೀತ್ವಕ್ಕೆ ವಿಘ್ನವೆಂದುದು ತನು ಪೋಷಣೆಯಿಂದ
ತಾಮಸ ಹೆಚ್ಚಿ ಅಜ್ಞಾನದಿಂದ ವಿರಕ್ತಿ ಹಾನಿ,
ಅರಿವು ನಷ್ಟ, ಪರವು ದೂರ, ನೀರಕೆ
ನಿಲವಿಲ್ಲದ ಕಾರಣ ಚೆನ್ನಮಲ್ಲಿಕಾರ್ಜುನನ
ಒಲಿಸ ಬಂದ ಕಾಯವ ಕೆಡಿಸದೆ ಉಳಿಸಿಕೊಳ್ಳಿರಯ್ಯ
ಆಹಾರ ಭಯ ಮೈಥುನಂ ಚ ಸಾಮಾನ್ಯ ಮೇತತ್ ಪಶುರ್ಬಿನಾರಾಣಾಂ” ಎಂಬ ಮಾತಿನಂತೆ ಮನುಷ್ಯನೂ ಸಹಜ ಜೀವಿಯೇ. ಅವನ ಇರುವಿಕೆಯ ಪ್ರತೀಕ ಆಹಾರ ಸೇವನೆ. ದೇಹ ಪೋಷಣೆಗೆ ಬೇಕಾದ ಈ ಆಹಾರದ ಬಗ್ಗೆ ಅಕ್ಕಮಹಾದೇವಿ ಅತ್ಯಮೂಲ್ಯ ಸಲಹೆ ಸೂಚನೆಗಳನ್ನು ಇಡೀ ಲೋಕಕ್ಕೆ ಉದ್ಘೋಷಣೆಯಂತೆ ನೀಡುತ್ತಿದ್ದಾಳೆ. ಈ ಶರೀರ ಸುಮ್ಮನೆ ಬಂದುದಲ್ಲ. ಇದೊಂದು ಪುಣ್ಯದ ಕೊಡುಗೆ ಇಂತಹ ಶಾರೀರಿಕ ಸಂಪತ್ತನ್ನು ಜೋಪಾನವಾಗಿಡುವಲ್ಲಿ ಬೇಕಾದ ಒಂದು ಪಟ್ಟಿಯನ್ನೆ ಕೊಡುತ್ತಾಳೆ ಆರೋಗ್ಯ ಚಿಂತಕಳಾದ ಅಕ್ಕಮಹಾದೇವಿ.
ಆಹಾರ ಲೌಕಿಕ ಕ್ರಿಯೆ. ಇದರ ಪ್ರಕ್ರಿಯೆ ಜೈವಿಕ ಕ್ರಿಯೆ. ಆಹಾರ ದೇಹ ಪೋಷಣೆಗೆ ಮುಖ್ಯ. ಆದರೆ ಇದರ ಜೊತೆಯಲ್ಲಿ ಅಲೌಕಿಕ ಚಿಂತನೆಗಳು ಪುಷ್ಠಿಗೊಳ್ಳಬೇಕು. ಕಾಯ ಪೋಷಣೆಯೊಂದಿಗೆ ಆತ್ಮದ ಪೋಷಣೆಯು ಮುಖ್ಯವೆ. ಆ ಪೋಷಣೆಯಾಗಬೇಕಾದರೆ ಅಕ್ಕ ಹೇಳುವಂತೆ ನಮ್ಮೆಲ್ಲ ಆಮಿಷಗಳನ್ನು ಮನದಿಂದ ಅಳಿಸಿ ಆ ಭಗವಂತನನ್ನೆ ನಂಬಿ ನಮ್ಮ ಮನವನ್ನು ಅವನಲ್ಲೆ ಇಡಬೇಕು.
ಆಹಾರವೇ ಆರೋಗ್ಯಕ್ಕು ಅನಾರೋಗ್ಯಕ್ಕು ಮೂಲ. ಈ ವಚನವು ಅತಿ ಆಹಾರ ಸೇವನೆಯಿಂದಾಗುವ ಅವಘಡಗಳನ್ನು ತಿಳಿಸುತ್ತಿದೆ. ನಿದ್ರೆಯಿಲ್ಲದೆ ನೆಮ್ಮದಿ ಹಾಳಾಗುತ್ತದೆ. ಆತ್ಮವು ಕೂಡ ಅಶುದ್ಧವಾಗುತ್ತದೆ. ದೇಹ ನಿರೋಗಿಯಾದಲ್ಲಿ ಆತ್ಮವು ನಿರೋಗಿಯಾಗುತ್ತದೆ. ಅತಿ ಆಹಾರ ಸೇವನೆಯಿಂದ ತಾಮಸ ಗುಣಗಳು ಬೆಳೆಯುತ್ತವೆ. ಅಜ್ಞಾನ ಅವಿವೇಕಗಳು ವೃದ್ಧಿಸುತ್ತವೆ. ಹಾಗಾಗಿ ಅಕ್ಕನ ಆರೋಗ್ಯದ ಗುಟ್ಟು “ಆಹಾರವ ಕಿರಿದು ಮಾಡಿರಣ್ಣಾ” ಎಂಬುದೆ ಆಗಿದೆ.
ಮಿತ ಆಹಾರ ಸೇವನೆಯಿಂದ ಆಯುಷ್ಯ ವೃದ್ಧಿಸುತ್ತದೆ ಎಂಬ ವೈಜ್ಞಾನಿಕ ವಿಶ್ಲೇಷಣೆಯಿದೆ. ಶರಣರು ಆಹಾರ ತಯಾರಿಕೆಯ ಪದಾರ್ಥಗಳನ್ನು (ದವಸ ದಾನ್ಯ) ಪ್ರಸಾದ ಎಂದಿದ್ದಾರೆ. ಆಹಾರವನ್ನು ಪ್ರಸಾದವೆಂದೆ ಸ್ವೀಕರಿಸಬೇಕು. ಆಹಾರ ಸೇವನೆಗೂ ರೀತಿ ನೀತಿಗಳಿರುತ್ತವೆ. ಸಮಯವಲ್ಲದ ಸಮಯದಲ್ಲಿ ಆಹಾರ ಸೇವಿಸುವುದರಿಂದ ಶರೀರದೊಳಗೆ ಕೆಲವು ನಿಷೇಧಾತ್ಮಕ ಆಮ್ಲಗಳು ಉತ್ಪತ್ತಿಯಾಗುತ್ತವೆ. ಪಚನ ಕ್ರಿಯೆ ಸರಾಗವಾಗುವುದಿಲ್ಲ. ದೇಹಕ್ಕೆ ಎಷ್ಟು ಪೂರಕವೋ ಅಷ್ಟನ್ನು ಮಾತ್ರ ಸೇವಿಸಿದರೆ ಅನಾರೋಗ್ಯದ ತೊಂದರೆಯಿರುವುದಿಲ್ಲ. ಯಾವ ಬಗೆಯ ಆಹಾರವನ್ನಾದರೂ ತಿಂದು ಜೀರ್ಣಿಸಿಕೊಳ್ಳುವ ಶಕ್ತಿ ದೇಹ ರಚನೆಗಿದ್ದರೂ ಯಾವಾಗಲು ಮತ್ತು ಅತಿಯಾಗಿ ತಿನ್ನುವುದಂತು ತಪ್ಪು. ದೇಹಕ್ಕೆ ತೆಗೆದುಕೊಳ್ಳುವ ಆಹಾರದ ಪ್ರಮಾಣ ಮುಖ್ಯವಲ್ಲ. ಗುಣ ಮುಖ್ಯವೆಂಬುದನ್ನು ನಾವೆಲ್ಲರು ಅರಿತಿರಬೇಕು.
ಅಕ್ಕ ಹೇಳುವ ಕಾಯವಿಕಾರ ಮನೋವಿಕಾರ ಇಂದ್ರಿಯವಿಕಾರ ಭಾವವಿಕಾರ ವಾಯು ವಿಕಾರಗಳನ್ನು ಅಕ್ಕನ ವಚನದೊಂದಿಗೆ ವಿಜ್ಞಾನದ ಹಿನ್ನೆಲೆಯಲ್ಲಿ ನೋಡೊಣ.
ಇಂದ್ರಿಯ ವಿಕಾರಗಳು:-
ಇಂದ್ರಿಯಗಳೆಂದರೆ ಪಂಚೇಂದ್ರಿಯಗಳು. ಕಣ್ಣು, ಮೂಗು, ಕಿವಿ, ನಾಲಗೆ ಮತ್ತು ಚರ್ಮ. ಇವೆಲ್ಲವುಗಳಿಗೆ ಆಜ್ಞೆ ಮಾಡುವುದು ಮೆದುಳು. ಪಂಚೇಂದ್ರಿಯಗಳಿಗೂ ಮೆದುಳಿಗೂ ಅವಿನಾಭಾವ ಸಂಬಂಧವಿದೆ. ತಿನ್ನು, ನೋಡು, ಗ್ರಹಿಸು, ಮಾತನಾಡು, ಸ್ಪರ್ಶಿಸು ಈ ಪಂಚ ಕ್ರಿಯೆಗಳನ್ನು ಆದೇಶಿಸುವುದು ಅಥವಾ ನಿಯಂತ್ರಿಸುವುದು ನಮ್ಮ ಮೆದುಳು. ಮೆದುಳು ಮತ್ತು ಈ ಪಂಚೇಂದ್ರಿಯಗಳಲ್ಲಿ ಒಂದು ರೀತಿಯ ಭಾವೈಕ್ಯತೆಯನ್ನು ಕಾಣುತ್ತೇವೆ.
ಕಣ್ಣು ಕಂಡ ಕಂಡ ಆಹಾರವನ್ನೆಲ್ಲ ಬಯಸುತ್ತದೆ. ಬಯಸುವುದು ಮಾತ್ರ ನಮ್ಮ ಮನಸ್ಸೆ. ಒಳಿತು ಕೆಡುಕಿನ ಬಗ್ಗೆ ವಿವೇಚಿಸುವುದು ಮೆದುಳು. ಕಣ್ಣಿನ ನೋಟ ಸತ್ವಭರಿತ ಆಹಾರದೆಡೆ ಇರಬೇಕು. ಮೆದುಳಿನ ಆಜ್ಞೆಯನ್ನು ಕಣ್ಣು ಚಾಚೂ ತಪ್ಪದೆ ಪರಿಪಾಲಿಸಬೇಕು.
ಕಿವಿ ಗ್ರಹಣ ಶಕ್ತಿಯುಳ್ಳ ಅಂಗ. ಉತ್ತಮವಾದುದನ್ನು ಗ್ರಹಿಸುವ ಶಕ್ತಿ ಕಿವಿಗಿರಬೇಕು. ಕೆಲವರು ಆ ಆಹಾರ ಈ ಆಹಾರ ಮತ್ತೊಂದು ಮಗದೊಂದು ತುಂಬಾ ಚೆನ್ನಾಗಿರುತ್ತದೆಂದು ಹೇಳುವುದುಂಟು ಅಂತಹ ಸನ್ನಿವೇಶದಲ್ಲಿ ನಮ್ಮ ಆರೋಗ್ಯದ ದೃಷ್ಟಿಯಿಂದ ಒಳಿತನ್ನು ಮಾತ್ರ ಗ್ರಹಿಸಬೇಕು.
ನಾಲಗೆಯೆಂಬುದು ರಸೋತ್ಪತ್ತಿಯ ಅಂಗ. ಉಪ್ಪು ಹುಳಿ ಖಾರ, ಸಿಹಿ, ಕಹಿ, ಒಗರು, ಈ ಷಡ್ರಸಗಳ ಸೇವನೆಗೆ ಪೂರಕವಾಗಿ ವಾಸನೆಯನ್ನು ಇದು ಗ್ರಹಿಸುತ್ತದೆ. ನಾಲಗೆಯು ಖಾರದ ರಸೋತ್ಪತ್ತಿಯನ್ನು ಮಾಡುವುದಿಲ್ಲ. ಉಪ್ಪು ಹುಳಿ ಖಾರ ಕಹಿ ಒಗರನ್ನು ಮಾತ್ರ ರುಚಿಸುತ್ತದೆ. ಖಾರವೆಂಬುದು ನಾಲಗೆಯಲ್ಲಿಳಿದಾಗ ಅಲ್ಲಿ ಚರ್ಮ ಉದ್ರೇಕಗೊಂಡು ಮೆಣಸಿನಕಾಯಿಯ ಉರಿಯ ಗುಣ ನಮ್ಮ ಅನುಭವಕ್ಕೆ ಬರುತ್ತದೆ. ಇದಕ್ಕೆ ಉದಾಹರಣೆಯಾಗಿ ನೋಡುವುದಾದರೆ ಸಕ್ಕರೆ ಬೆಲ್ಲ ಬೇಳೆ ಇತರ ಪದಾರ್ಥಗಳನ್ನು ಹಿಡಿದಾಗ ನಮ್ಮ ಕೈ ಉರಿಯುವುದಿಲ್ಲ. ಅನುಭವಕ್ಕೆ ಬರುತ್ತದೆ. ಖಾರದ ಪುಡಿವಸ್ತು ನಮ್ಮ ದೇಹದ ಯಾವುದೇ ಭಾಗಕ್ಕೆ ಸೋಕಿದರೂ ಉರಿಯುವ ಅನುಭವವಾಗುತ್ತದೆ.
ಬಾಯಿಯ ಎರಡೂ ಬದಿಯ ವಸಡುಗಳಲ್ಲಿ ಜೊಲ್ಲುರಸ ಉತ್ಪತ್ತಿಯಾಗುತ್ತದೆ. ನಮ್ಮ ಬಾಯೊಳಗಿನ ಎರಡು ದವಡೆಗಳು ಅರೆಯುವ ಯಂತ್ರಗಳು. ದವಡೆಯ ಮೇಲೆ ಕುಳಿತ ಪದಾರ್ಥ ಅಲ್ಲಿ ಅಂಟಿದ್ದಲ್ಲಿ ನಮ್ಮ ನಾಲಗೆಯು ಕಲ್ಲುಗುಂಡು ಸುತ್ತುವಂತೆ ನಮ್ಮ ಬಾಯಿಯ ಸುತ್ತ ಸುತ್ತುತ್ತ ಹಲ್ಲಿಗೆ ಅಂಟಿದ ಬೇಡದ್ದನ್ನು ತೆಗೆದುಬಿಡುತ್ತದೆ.
ಮೂಗು ಇದೊಂದು ಆಘ್ರಾಣಕೇಂದ್ರ. ಮೂಗಿನ ಒಳಭಾಗದಲ್ಲಿ ಆಘ್ರಾಣ ಗೋಡೆಯಿದೆ. ನಾವು ಆಹಾರ ಸೇವಿಸಿದಾಗ ಇಲ್ಲಿ ಆಹಾರದ ಕಣಗಳ ಸಂವೇದನೆಯಿಂದ ರಸಾಂಕುರವಾಗುತ್ತದೆ. ನಾವು ಈ ಹಿಂದೆ ತಿಂದ ರುಚಿಯ ಆಘ್ರಾಣದಿಂದ ನಾಲಗೆಯಲ್ಲಿ ನೀರೂರುತ್ತದೆ. ಕಾರಣ ಈ ವೇಳೆಗೆ ನಮ್ಮ ಮೂಗು ಆ ವಾಸನೆಯನ್ನು ಗ್ರಹಿಸಿರುತ್ತದೆ. ನಮ್ಮ ಪರಿಚಿತ ಆಹಾರದ ವಾಸನೆ ಮಾತ್ರ ನಮ್ಮ ಮೂಗಿಗೆ ಬಡಿಯುತ್ತದೆಯೆ ಹೊರತು ನಮ್ಮ ಅನುಭವಕ್ಕೆ ಬಾರದ ರುಚಿ ನಾಲಗೆಯಲ್ಲಿ ಸ್ಪಂದಿಸುವುದಿಲ್ಲ. ಉದಾಹರಣೆಗೆ ಆಟ ಆಡುತ್ತಿರುವ ಯಾರಾದರೂ ಸೋತವರು ಗೆದ್ದವರಿಗೆ ಮಸಾಲ್ ದೋಸೆ ಮತ್ತು ಮೈಸೂರು ಪಾಕು ಕೊಡಿಸಬೇಕೆಂಬ ಷರತ್ತನ್ನು ವಿಧಿಸಿದ್ದರೆಂದು ಇಟ್ಟುಕೊಳ್ಳೋಣ. ಪಂದ್ಯದಲ್ಲಿ ಇನ್ನೇನು ನಾವೇ ಗೆಲ್ಲುತ್ತೆವೆಂದು ಗೊತ್ತಾದವರು ಸೋಲಿನ ಅಂಚಿನಲ್ಲಿರುವವರಿಗೆ ಹೀಗೆ ಹೇಳುತ್ತಾರೆ “ ಆಹಾ ಮಸಾಲೆ ದೋಸೆ ಮತ್ತು ಮೈಸೂರು ಪಾಕ್ ವಾಸನೆ ಮೂಗಿಗೆ ಬಡಿಯುತ್ತಿದೆ ‘ಎನ್ನುತ್ತಾರಲ್ಲವೆ. ಇದರ ರುಚಿ ಈ ಹಿಂದೆ ಅವರ ನಾಲಗೆಗೆ ದಕ್ಕಿರುತ್ತದೆ. ಎಂದೆಂದೂ ಮಸಾಲೆ ತಿನ್ನದವರ ನಾಲಗಗೆ ಅದರ ರುಚಿ ತಿಳಿದಿರುವುದಿಲ್ಲ. ರುಚಿಯೆನಿಸಿದ್ದನ್ನೆಲ್ಲಾ ತಿಂದರೆ ಆರೋಗ್ಯ ಕೆಡುತ್ತದೆ.
ಇನ್ನು ಚರ್ಮ. ಇದೊಂದು ಸ್ಪರ್ಶಾನುಭವವನ್ನು ನೀಡುವಂಥದ್ದು. ನಮಗೆ ಮೆದೋಜೀರಕ ಗ್ರಂಥಿಯಿಂದ ಬಿಡುಗಡೆಯಾಗುವ ಇನ್ಸುಲಿನ್ ಮತ್ತು ಗ್ಲುಕೊಗಾನ್ ಹಾರ್ಮೊನುಗಳ (ರಸಧೂತಗಳು) ಚರ್ಮದ ಅಡಿಭಾಗದಲ್ಲಿ ಕೊಬ್ಬನ್ನು ಉತ್ಪಾದಿಸಿ ದೇಹದ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ಚರ್ಮ ಕ್ರಿಯಾಶೀಲವಾಗಿರಲು ಇನ್ಸುಲಿನ್ ಮತ್ತು ಗ್ಲುಕೋನ್ ಸಹಕಾರಿ. ಇದು ನಮ್ಮ ಚರ್ಮಕ್ಕೆ ಶಕ್ತಿ ಕೊಡುತ್ತದೆ. ಇವು ಉತ್ಪತ್ತಿ ಮಾಡುವಲ್ಲಿ ಕೊಬ್ಬಿನ ಅಂಶ ಜಾಸ್ತಿಯಾದಾಗ ಚರ್ಮದ ಆರೋಗ್ಯ ಕೆಡುತ್ತೆ. ಕೊಬ್ಬಿನ ಅಂಶವನ್ನು ಹೆಚ್ಚಿಸುವ ಆಹಾರವನ್ನು ಸೇವಿಸಬಾರದು.
ನಮ್ಮ ಈ ಪಂಚೇಂದ್ರಿಯಗಳು ಅತಿಯಾದ ಆಹಾರ ಸೇವನೆಯಿಂದ ಅಶುದ್ಧಗೊಂಡು ಆರೋಗ್ಯ ಕೆಡುತ್ತದೆ. ಆಗ ಕಾಯವಿಕಾರಗಳು ಕಾಣಿಸಿಕೊಳ್ಳುತ್ತವೆ.
ಕಾಯವಿಕಾರಗಳು:-
ದೇಹದಲ್ಲಿ ಬೊಜ್ಜು ಬೆಳೆಯುತ್ತದೆ. ವಾಯುರೋಗ ಕಾಣಿಸಿಕೊಳ್ಳುತ್ತದೆ. ದೇಹದ ಅಂಗಾಂಗಳು ಹಿಂಡಿದಂತೆ ಭಾಸವಾಗುತ್ತದೆ. ನಮ್ಮ ಕೈ ಕಾಲುಗಳನ್ನು ಒತ್ತಿಸಿಕೊಳ್ಳೋಣ ಅನ್ನಿಸುತ್ತದೆ. ದೇಹದಲ್ಲಿ ಬೆಳೆದ ಬೊಜ್ಜು ಚರ್ಮದ ಬುಡದಲ್ಲಿ ಮಾತ್ರವಿರದೆ ಹೃದಯದ ಸ್ನಾಯುಗಳ ನಡುವೆ ಸಂಗ್ರಹವಾಗಿ ಹೃದಯದ ಕಾರ್ಯದಲ್ಲಿ ಏರುಪೇರಾಗುತ್ತದೆ. ಹೃದಯ ಸಂಬAಧಿ ಖಾಯಿಲೆಯಿಂದ ಶ್ವಾಸದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ರಕ್ತದೊತ್ತಡ ಹೆಚ್ಚುತ್ತದೆ. ಇದರಿಂದ ಇತರ ಅಂಗಾಂಗಗಳು ಸೋಲಲು ಪ್ರಾರಂಭಿಸುತ್ತವೆ. ಕಣ್ಣು ದೃಷ್ಠಿ ಕಳೆದುಕೊಳ್ಳುತ್ತವೆ. ಮೂತ್ರಪಿಂಡಗಳು ಸರಿಯಾಗಿ ಕೆಲಸ ಮಾಡಲಾರದು. ಇಂತಹ ಸ್ಥಿತಿಯಲ್ಲಿ ನಮ್ಮ ದೇಹದ ಅಸ್ತಿತ್ವ ಉಳಿಯುವುದೆಂತು. ಹಾಗಾಗಿಯೆ ಅಕ್ಕ ಹೇಳುವಂತೆ “ಕಾಯದ ಅತಿ ಪೋಷಣೆ ಮೃತ್ಯುವೆಂದುದು”
ಈ ದೈಹಿಕ ತೊಂದರೆಗಳಲ್ಲಿ ಇನ್ನೂ ಅನೇಕ ರೀತಿಯವು ಇವೆ. `ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕೆ ನಾಚಿದೊಡೆಂತಯ್ಯಾ’’ ಎನ್ನುತ್ತಾಳೆ ಅಕ್ಕ. ನಮ್ಮ ದೇಹ ಪ್ರಕೃತಿಗನುಗುಣವಾಗಿ ಸಹಜವಾದ ಕೆಲವು ಕ್ರಿಯೆಗಳು ಜರುಗುತ್ತವೆ. ಹೊಟ್ಟೆ ತುಂಬಿದಾಗ ತೇಗುತ್ತೇವೆ. ನಿದ್ರೆ ಬಂದಾಗ ಆಕಳಿಸುತ್ತೇವೆ. ಒಳಗಿನ ಕೆಲವಂಶಗಳು ವಿಸರ್ಜನೆಯಾಗುತ್ತವೆ. ಇವುಗಳನ್ನು ಹೊರಹಾಕುವಾಗ ಅಂಜಿಕೆ ಅಳುಕು ಸಂಕೋಚ ಪಡಬಾರದು. ಇವು ಹೊರ ಹೋಗದಿದ್ದಲ್ಲಿ ನಮ್ಮ ಆರೋಗ್ಯ ಹದಗೆಟ್ಟಂತೆಯ ಸರಿ. ಆದರೆ ಅವನ್ನು ಹೊರ ಹಾಕುವುದು ಸುಸಂಸ್ಕೃತ ರೀತಿಯಲ್ಲಿರಬೇಕಷ್ಟೆ. ಏಕೆಂದರೆ ಇವೆಲ್ಲವೂ ಶಬ್ದ ಮಾಡಿಕೊಂಡೆ ಹೊರಬರುತ್ತವೆ.
ಆದರೆ ಹಲವೊಮ್ಮೆ ನಮ್ಮ ಆಹಾರದ ಅತಿ ಸೇವನೆಯಿಂದ ಅನಾರೋಗ್ಯವುಂಟಾಗುತ್ತದೆ. ಕೆಮ್ಮುವುದು, ಸೀನುವುದು, ಪದೆ ಪದೇ ಉಗುಳುವುದು, ತೇಗಿದಾಗ ಅಜೀರ್ಣದಿಂದ ಹುಳಿ ವಾಸನೆ ಬರುವುದು, ವಾಂತಿ ಮಾಡಿಕೊಳ್ಳುವುದು, ಹೊಟ್ಟೆ ಉಬ್ಬಿದಂತಾಗಿ ಸಂಕಟಪಡುವುದು, ಹೊಟ್ಟೆ ನೋವು ಕಾಣಿಸಿಕೊಳ್ಳುವುದು, ಇನ್ನೂ ಮುಂತಾದ ಅತಿ ಆಹಾರ ಸೇವಿಸಿದಾಗ ಅಸಹಜ ರೀತಿಯಲ್ಲಿ ದೇಹವನ್ನು ಹಿಂಡುತ್ತವೆ.
ಮನೋವಿಕಾರಗಳು:- ಹೆಚ್ಚು ಆಹಾರ ಸೇವಿಸುವವರ ಮನಸ್ಸು ನಿಷ್ಕಲ್ಮವಾಗಿರುವುದಿಲ್ಲ. ನಿಷೇಧಾತ್ಮಕ ಭಾವಗಳು ಹುಟ್ಟಿಕೊಳ್ಳುತ್ತವೆ. ಸದ್ಭಾವನೆಗಳು, ರಚನಾತ್ಮಕ ಕ್ರಿಯೆಗಳು ಮಾಯವಾಗುತ್ತವೆ. ಆ ಸಮಯದಲ್ಲಿ ನಾವು ಇಂದ್ರಿಯಗಳ ದಾಸರಾಗಿರುತ್ತೇವೆ. ರಾಗದ್ವೇಷಗಳು ನಮ್ಮನ್ನು ಆಳುತ್ತವೆ. ಇಂದ್ರಿಯಗಳ ಅತೀ ಚಾಪಲ್ಯದಿಂದ ನಮ್ಮ ಮನಸ್ಸು ಹದಗೆಡುತ್ತದೆ. ನಾಲಗೆ ರುಚಿ, ಕಿವಿಯ ಗ್ರಹಿಕೆ, ತ್ವಚೆಯ ತೀಟೆ, ಕಣ್ಣುಗಳ ಚಪಲತೆ, ಮೂಗಿನ ಆಘ್ರಾಣ ನಮ್ಮ ಮುಂದೆ ಎದ್ದು ಕುಣಿಯಲಾರಂಭಿಸುತ್ತವೆ. ಈ ವಿಕಾರಗಳಿಂದ ಜರ್ಜಿತಗೊಂಡು ಮರಣ ಹೊಂದುತ್ತೇವೆ.
ನಿಯಮವುಳ್ಳ ಪ್ರಸಾದ ಸೇವನೆಯಿಂದ ನಮ್ಮ ಇಂದ್ರಿಯಗಳು ಹತೋಟಿಯಲ್ಲಿರುತ್ತವೆ. ಈ ಕಾಯ ಚೆನ್ನಮಲ್ಲಿಕಾರ್ಜುನನೊಲಿಸ ಬಂದ ಕಾಯ. ಕೇವಲ ಲೌಕಿಕ ಆಸಕ್ತಿಗಾಗಿಯೆ ಮೀಸಲಾದುದಲ್ಲ. ನವದ್ವಾರಗಳ ಕ್ರಿಯೆಗಳಿಗೆ ಮಾತ್ರವಲ್ಲ. ಈ ಪ್ರಸಾದ ಕಾಯವನ್ನು ಆರೋಗ್ಯಯುತವಾಗಿ ಸಂರಕ್ಷಿಸಿಕೊಳ್ಳುವ ಸದ್ವೀವೇಕದ ಮಾತನ್ನು ಅಕ್ಕ ಈ ವಚನದಲ್ಲಿ ಹೇಳಿದ್ದಾಳೆ.
–ಸುಶೀಲಾ ಸೋಮಶೇಖರ್
ಸಾಹಿತಿಗಳು ಹಾಸನ
ಸಂಚಾಲಕರು ರಾಜ್ಯ ಕದಳಿ ಮಹಿಳಾ ವೇದಿಕೆ ಬೆಂಗಳೂರು