ಒದುಗರು ಕೊಡುವ ಪ್ರಶಸ್ತಿ ದೊಡ್ಡದು
ಸಂಘದ ಪ್ರಶಸ್ತಿ ಅಭಿಮಾನದ ಪ್ರತೀಕ
ಜಿಲ್ಲೆಯ ಹೆಮ್ಮೆಯ ಪತ್ರಿಕೆ ಸುದ್ದಿ ಮೂಲ ಪತ್ರಿಕೆ ಪ್ರಾಯೋಜಿತ ಪ್ರಶಸ್ತಿಯನ್ನು ಈ ಬಾರಿ ೨೨-೨೩ನೇ ಸಾಲಿಗೆ ನನಗೆ ಕೊಡಲು ಜಿಲ್ಲಾ ಪತ್ರಕರ್ತರ ಸಂಘ ನಿರ್ಧರಿಸಿ ಅಭಿನಂದನ ಪತ್ರವನ್ನು ಜಿಲ್ಲಾ ಅಧ್ಯಕ್ಷ ಶ್ರೀ ಗುರುನಾಥ ಕಳಿಸಿದ್ದಾರೆ. ಮಸ್ಕಿ ತಾಲೂಕು ಪತ್ರಕರ್ತರ ಸಂಘ ಮತ್ತು ಜಿಲ್ಲಾ ಪತ್ರಕರ್ತರ ಸಂಘದ ಆಡಳಿತ ಮಂಡಳಿಗೆ ಧನ್ಯವಾದಗಳು.
ಪ್ರಶಸ್ತಿ ಗೌರವವನ್ನು , ಜವಬ್ದಾರಿಯನ್ನು ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ. ಇದುವರೆಗೆ ನನಗೆ ಸುದ್ದಿಮೂಲದಲ್ಲಿ ಇದ್ದಾಗ, ಪ್ರಜಾವಾಣಿಯಲ್ಲಿದ್ದಾಗ ಮತ್ತು ಈಗ ವಿಜಯವಾಣಿಯ ಕೆಲಸ ಗುರುತಿಸಿ ಪ್ರಶಸ್ತಿ ಬಂದಿರುವದು ಸಂತೋಷದ ಸಂಗತಿ.
ಆದರೆ ಓದುಗ ಪ್ರಭುಗಳು ನಮಗೆ ನಿತ್ಯ ಮಾನ, ಅವಮಾನ, ಸನ್ಮಾನ ಮಾಡುತ್ತಿರುತ್ತಾರೆ. ವರದಿಗಾರನಾದವ ತನ್ನ ಅಸ್ಥಿತ್ವ ಮತ್ತು ಪತ್ರಿಕೆಯ ಅಸ್ಥಿತ್ವನ್ನು ಕಾಪಾಡಿಕೊಂಡು ಹೋಗಬೇಕಾಗಿದೆ. ನಾವು ಬರೆಯುವ ಸುದ್ದಿಗಳನ್ನು ಓದುವ ಓದುಗರು ನಮ್ಮ ಬರವಣಿಗೆಯಿಂದಲೇ ನಮ್ಮನ್ನು ತೂಕ ಮಾಡುತ್ತಾರೆ.
ನಾವು ಒಪ್ಪಿಕೊಂಡ ವರದಿಗಾರಿಕೆ ವೃತ್ತಿಗೆ ನಿಶ್ಚಿತ ಆದಾಯ ಮೂಲವಿಲ್ಲ. ಪ್ರಕಟಿತ ಸುದ್ದಿಗಳ ಮೇಲೆ ವರಮಾನದ ಕುಸುರಿ ಕಲೆಗೆ ಬೆಲೆ.
ನಮ್ಮ ಸುದ್ದಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸಿ ಸಾರ್ವಜನಿಕ ಉಪಯೋಗವಾದಾಗ ಮಾತ್ರ ಓದುವ ಓದುಗ ಮೆಚ್ಚುಗೆಯ ಪ್ರಶಂಸೆ ವ್ಯಕ್ತಪಡಿಸುವುದಿದೆಯಲ್ಲ ಅದುವೇ ನಮಗೆ ನಿಜವಾದ ಸನ್ಮಾನ. ನಮ್ಮನ್ನು , ನಮ್ಮ ಪತ್ರಿಕೆಯ ಮಾಲಿಕರು, ಸಂಪಾದಕರು, ಸ್ಥಾನಿಕ ಸಂಪಾದಕರು, ಜಿಲ್ಲಾ ವರದಿಗಾರರು, ಡೆಸ್ಕ್ ನಲ್ಲಿರುವ ಹಿರಿಯ ಉಪಸಂಪಾದಕರು ನಮ್ಮನ್ನು ಗೌರವಿಸುತ್ತಿದ್ದರೆ ಅದೆ ನಮಗೆ ಮಾನ.
ಅಧಿಕಾರ ಎಂಬ ಮಂತ್ರ ದಂಡವನ್ನು ಕೈಯಲ್ಲಿ ಹಿಡಿದುಕೊಂಡಿರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ನಿತ್ಯ ಸಂಪರ್ಕದಲ್ಲಿರುವ ನಮಗೆ , ಅವರಂತೆ ನಾವು ತಲೆಗೇರಿಸಿಕೊಂಡರೆ ನಾವು ಪ್ರಪಾತಕ್ಕೆ ಬಿದ್ದಂತೆಯೆ. ಅದರ ಎಚ್ಚರಿಕೆ ಅನಿವಾರ್ಯ. ನಮ್ಮ ಬಗ್ಗೆ ನಾವು ಗೌರವ ಕೊಡದೆ, ಇಲ್ಲದ ದುಶ್ಚಟಗಳಿಗೆ ಅಂಟಿಕೊಂಡರೆ ಕಸಕ್ಕಿಂತ ಕಡೆ. ಆ ರೀತಿ ಬದುಕಿದರೆ ಅದರಂತ ಅವಮಾನ ಮತ್ತೊಂದಿಲ್ಲ .
ಪತ್ರಕರ್ತರು ನಿತ್ಯ ನಡೆಯುವ ವಿದ್ಯಾಮಾನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರೆ, ವರದಿಗಾರರನ್ನು ಪ್ರತಿ ದಿನವು ಈ ಸಾಮಾಜದಲ್ಲಿರುವ ಹಲವು ಸ್ಥರದ ಜನ ಹದ್ದಿನ ಕಣ್ಣು ಇಟ್ಟುಕೊಂಡು ನಮ್ಮನ್ನು ಗಮನಿಸುತ್ತಿರುತ್ತಾರೆ.
ನಮ್ಮ ನಡೆ ನುಡಿ, ಬರಹ, ಬದುಕನ್ನು ಸೂಕ್ಷ್ಮವಾಗಿ ಅವಲೋಕಿಸಿ ನಮಗೆ ನಮ್ಮ ಯೊಗ್ಯತೆಗೆ ತಕ್ಕಂತೆ ನಿಜವಾದ ಪ್ರಶಸ್ತಿಯನ್ನು ಕೊಡುತ್ತಿರುತ್ತಾರೆ. ಸಂಘದ ಪ್ರಶಸ್ತಿ ಮತ್ತು ಓದುಗರ ಅಭಿಮಾನ ಎರಡು ದೊಡ್ಡವು.
ಪ್ರಶಸ್ತಿಯ ನೆಪದಲ್ಲಿ ಇದನ್ನೆಲ್ಲ ಬರೆಯಬೇಕಾಯಿತು.
ಪ್ರಶಸ್ತಿ ಸಂತೋಷ ತಂದಿದೆ. ರಾಜ್ಯದ ಅನೇಕ ಕಡೆಯಿಂದ ಅಭಿನಂದಿಸಿದ ಹಿತೈಷಿಗಳು, ಸ್ನೇಹಿತರು, ಕುಟುಂಬವರ್ಗದವರಿಗೆ ಕೃತಜ್ಞತೆಗಳು. 🙏🙏🙏
–ವೀರೇಶ ಸೌದ್ರಿ ಮಸ್ಕಿ