ಜ್ಯೋತಿರ್ಭೀಮೇಶ್ವರ ವ್ರತ (ಪತಿ ಸಂಜೀವಿನಿ ವ್ರತ)…
ಜ್ಯೋತಿರ್ಮಾತ್ರ ಸ್ವರೂಪಾಯ ನಿರ್ಮಲ ಜ್ಞಾನ ಚಕ್ಷುಷೆ ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗ ಮೂರ್ತಯೇ.
ಜ್ಯೋತಿರ್ಭೀಮೇಶ್ವರ ವ್ರತ ಆಷಾಢ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಬೀಳುತ್ತದೆ. ಈ ವ್ರತವು ಪ್ರತಿ ಹೆಣ್ಣು ಮಕ್ಕಳು ಮಾಡುವ ವ್ರತ ಕಥೆ. ತಮ್ಮ ಸಂಪ್ರದಾಯ ಪದ್ದತಿಯಂತೆ ಹೆಣ್ಣು ಮಕ್ಕಳಿಗೆ ಸಣ್ಣ ಮಕ್ಕಳಿಂದಲೂ ಈ ಪೂಜೆ ಮಾಡಿಸಿಕೊಂಡು ಬರುತ್ತಾರೆ. ಮದುವೆಯಾಗದ ಹೆಣ್ಣು ಮಕ್ಕಳು ಭೀಮನಂತ ಬಲಾಢ್ಯ ಆರೋಗ್ಯವಂತ ಗಂಡ ಸಿಗಲಿ ಎಂದು ಪೂಜಿಸುತ್ತಾರೆ. ಮದುವೆಯಾದ ಹೆಣ್ಣು ಮಕ್ಕಳು ತಮ್ಮ ಗಂಡನಿಗೆ ಆರೋಗ್ಯ ಆಯಸ್ಸು ವೃದ್ಧಿಸಲು ಎಂದು ಒಂಬತ್ತು ವರ್ಷಗಳ ಕಾಲ ವ್ರತ ಆಚರಣೆ ಮಾಡುತ್ತಾರೆ. ನಂತರ ಅಣ್ಣ ತಮ್ಮಂದಿರಿಗೆ ಬೆಳ್ಳಿ ದೀಪ ಕೊಟ್ಟು, ಹಬ್ಬದೂಡ ಬಡಿಸಿ ಉದ್ಯಾಪನೆ ಮಾಡುತ್ತಾರೆ.
ಈ ವ್ರತದ ವೈಷಿಷ್ಠ್ಯವೇನೆಂದರೆ, ಒಂದು ಮಣೆ ಅಥವಾ ಮಂದಾಸನದ ಮೇಲೆ ಅಕ್ಕಿ ಹರಡಿ ಅದರ ಮೇಲೆ ಎರಡು ದೀಪ ಕಂಬಗಳನ್ನಿಟ್ಟು, ನಮ್ಮ ಬಲಗಡೆ ಇರುವ ಕಂಬಕ್ಕೆ ಹಸಿದಾರದಲ್ಲಿ ಸುತ್ತಿದ ಅರಿಶಿನದ ಕೊಂಬನ್ನು ಕಟ್ಟಬೇಕು. ಅದಕ್ಕೆ ಹೂವು ಸುತ್ತಬೇಕು. ಈ ಕಂಬಗಳು ಸಾಕ್ಷಾತ್ ಶಿವ ಪಾರ್ವತಿಯರ ಸ್ವರೂಪವೆಂದು ಆಹ್ವಾನಿಸಿ ಪೂಜೆ ಸಲ್ಲಿಸಬೇಕು.
ಮೊದಲಿಗೆ ವಿಘ್ನ ವಿನಾಶಕ ಗಣೇಶನಿಗೆ ಪೂಜೆ ಸಲ್ಲಿಸಿ ನಂತರ ಜ್ಯೋತಿರ್ಭೀಮೇಶ್ವರನ ಪೂಜೆ ಮಾಡಬೇಕು. ಷೋಡಶೋಪಚಾರಗಳು, ನೈವೇದ್ಯ ಮಂಗಳಾರತಿ ಮಾಡಿ, ತುಪ್ಪದಾರತಿ ಎತ್ತಿ ಶಿವ ಪಾರ್ವತಿಯರಲ್ಲಿ ತಮ್ಮ ಗಂಡನಿಗೆ ಆರೋಗ್ಯ ಆಯಸ್ಸು ವೃದ್ಧಿಯಾಗುವಂತೆ ಹೆಣ್ಣು ಮಕ್ಕಳು ಬೇಡಿಕೊಳ್ಳುತ್ತಾರೆ. ಅಂದಿನ ದಿನ ವಿಶೇಷವೆಂದರೆ ಹಣ್ಣು ಕಾಯಿಯ ಜೊತೆ ಒಂಬತ್ತು ಕರಿಗಡಬನ್ನು ನೈವೇದ್ಯ ಮಾಡುವುದು ಹಾಗು ಭಂಡಾರ ಎಂಬ ಭಕ್ಷ್ಯವನ್ನು ಮಾಡುತ್ತಾರೆ. ಒಂದು ಭಂಡಾರದಲ್ಲಿ ಹೂರಣದೊಂದಿಗೆ ದುಡ್ಡು ಇಟ್ಟು ಎಣ್ಣೆಯಲ್ಲಿ ಕರಿದಿರುತ್ತಾರೆ. ಮತ್ತೊಂದರಲ್ಲಿ ಬರೀ ಹೂರಣವಿಟ್ಟು ಕರಿಯುತ್ತಾರೆ. ಪೂಜೆಯ ನಂತರ ಈ ಎರಡು ಭಂಡಾರಗಳನ್ನು, ಅರಿಶಿನ ಕುಂಕುಮ ಹೂವಿನಿಂದ ಪೂಜೆ ಮಾಡಿದ ಮುಂಬಾಗಿಲಿನ ಹೊಸಿಲಿನ ಮೇಲೆ ಎರಡೂ ಬದಿಯಲ್ಲಿ ಇಟ್ಟು ಅಣ್ಣ ಅಥವಾ ತಮ್ಮ ಯಾರ ಕೈಲಾದರೂ ಸರಿ ಮೊಣಕೈಯಿಂದ ಒಡೆಸುತ್ತಾರೆ. ದುಡ್ಡು ಇರುವ ಭಂಡಾರವನ್ನು ಅವರಿಗೆ ಕೊಟ್ಟು ಹಣೆಗೆ ಕುಂಕುಮವಿಟ್ಟು ತಮ್ಮನಾಗಿದ್ದರೆ ಹರಸುತ್ತಾರೆ, ಅಣ್ಣನಾಗಿದ್ದರೆ ಆಶೀರ್ವಾದ ಪಡೆಯುತ್ತಾರೆ.
ಈ ವ್ರತವು ಉದ್ಯಾಪನೆ ಆಗಿದ್ದರೂ ಸಹ ಪ್ರತೀ ವರ್ಷ ಹೆಣ್ಣು ಮಕ್ಕಳು ಪೂಜೆ ಸಲ್ಲಿಸುತ್ತಾರೆ. ಕಾರಣವಿಷ್ಟೆ ಹೆಣ್ಣು ಮಗು ಒಂದು ವರ್ಷದ ವಯಸ್ಸಿದ್ದಾಗಿನಿಂದ ಮಾಡಿಕೊಂಡು ಬಂದಿರುವ ಈ ವ್ರತ ಹಾಗೆಯೇ ಮುಂದುವರಿಯಲಿ ಎಂದು. ವ್ರತ ಮಾಡದಿದ್ದರೂ ಪೂಜೆ ಸಲ್ಲಿಸುತ್ತಾರೆ.
ಹೆಸರೇ ಹೇಳುವಂತೆ ಪತಿ ಸಂಜೀವಿನಿ ವ್ರತವು ಶಿವ ಪಾರ್ವತಿಯ ಪೂಜಾ ವಿಧಿಯು. ಜನರು ಇದನ್ನು ತಪ್ಪಾಗಿ ತಿಳಿದುಕೊಂಡು ಗಂಡನ ಪೂಜೆ ಎಂದು ಅಂದಿನ ದಿನ ತಮ್ಮ ಗಂಡನಿಗೆ ಪಾದ ತೊಳೆದು, ಪೂಜೆ ಮಾಡಿ, ಮಂಗಳಾರತಿ ಮಾಡಿ ಅವರಿಗೆ ಪೂಜೆ ಸಲ್ಲಿಸುತ್ತಾರೆ, ಇದು ಯಾವ ಪುರಾಣದಲ್ಲಿಯೂ ಕೇಳಿರದ ಅನುಕರಣೆ. ತಾವೇ ನಿರ್ಮಿಸಿಕೊಂಡು ಬಂದಿರುವ ಪದ್ಧತಿ. ಹೆಣ್ಣು ಮಕ್ಕಳು ವ್ರತ ಮಾಡಿ ಗಂಡನಿಗೆ ನಮಸ್ಕರಿಸಿ ಆಶೀರ್ವಾದ ಬೇಡುತ್ತಾರೆಯೇ ಹೊರತು ಅವರಿಗೆ ಪೂಜೆ ಸಲ್ಲಿಸುವ ಪದ್ದತಿ ಖಂಡಿತವಾಗಿಯೂ ಇಲ್ಲ.
ಈ ವ್ರತದಿಂದ ಮನ ಕುಲವು ಸುಖ ಶಾಂತಿ, ಸಮೃದ್ದಿಯ ಜೀವನ ನಡೆಸಲಿ ಬಾಳು ಏಳ್ಗೆಯಾಗಲಿ.
ಈ ವ್ರತದ ಕಥೆ….
-“ಚಂಪಕವನ”
ಚಂಪಾ ಚಿನಿವಾರ್.