ದಿನದ ಕೊನೆಯಲ್ಲಿ…..

ದಿನದ ಕೊನೆಯಲ್ಲಿ..

ನನ್ನ ನಾ ಅರಿಯುವೆ ಅನ್ಯರ ಅರಿವ ಮೊದಲು
ದಿನದಲ್ಲಿ ನಾ ಎಲ್ಲರೊಂದಿಗೆ ಕಳೆದಾಗ
ನಾನು ಕಳೆದು ಹೋಗಿದ್ದೆ ನನ್ನಿರುವ ಮರೆತು
ನನ್ನ ನಾ ಅರಿಯುವುದು ದಿನದ ಕೊನೆಯಲ್ಲಿಯೇ.

ಮೊದಲ ಪುಟಗಳ ಅರಿಯುವ ಮೊದಲೇ
ಕೊನೆಯ ಪುಟಗಳ ಕುತೂಹಲ, ಬಲು ಜಾಣ
ಬ್ರಹ್ಮ, ಬ್ರಹ್ಮ ಲಿಖಿತವೇ ಅದು ತಿಳಿಯುವುದೇ ಇಲ್ಲ
ಎಲ್ಲಾ ಅರಿವಾಗುವುದು ದಿನದ ಕೊನೆಯಲ್ಲಿಯೇ.

ನೋವುಗಳ ಸರಮಾಲೆಯೇ ಹಾಕಿರುವನು
ಇದರ ಮೇಲೆ ಬರೆಗಳು, ಕೊನೆಗೆ ಬರೀ ‌ಅಸ್ಥಿಯೇ
ಎರಡು ಹಿಡಿ ಅನ್ನಕ್ಕೆ ಜೀವನವಿಡೀ ಹೋರಾಟ
ಅನ್ನದ ಬೆಲೆ ಅರಿವಾಗುವುದು ದಿನದ ಕೊನೆಯಲ್ಲಿಯೇ.

ಹೊರಲಾರದೆ ಹೊರುವ ಪಾಪದ ಮೂಟೆಗಳು
ಹೊರಬರಲಾರದ ಬಿಗುಮಾನಗಳು, ಹತ್ತಿ, ಇಳಿದು
ಈಜುವ ಸಾಗರದಿ ತೇಲಿ ಮುಳುಗುವ ಜೀವನದ ದಡ
ಸೇರಬೇಕೆಂದು ಅರಿವಾಗುವುದು ದಿನದ ಕೊನೆಯಲ್ಲಿಯೇ.

-“ಚಂಪಕವನ”
ಚಂಪಾ ಚಿನಿವಾರ್.

Don`t copy text!