ಭಾರತದ ಪ್ರಜೆಗಳಿಗೆ ತಾಯಿ ಭಾರತಿಯ ಪತ್ರ!!!
ಶ್ರೀ
ಕ್ಷೇಮ.
ಇಂದ:
ತಾಯಿ ಭಾರತಿ
ಕಾಶ್ಮೀರ ದಿಂದ ಕನ್ಯಾಕುಮಾರಿ
ನೆನೆದ ಭಾರತೀಯರ ಮನದಲ್ಲಿ
ಚಿರಂಜೀವಿಗಳಾದ ನನ್ನೊಡಲ ಕರುಳ ಬಳ್ಳಿಗಳಾದ ಪ್ರಜೆಗಳಿಗೆ ನಿಮ್ಮ ತಾಯಿ ಭಾರತಾಂಬೆಯ ಆಶೀರ್ವಾದಗಳು. ನಾನು ಕ್ಷೇಮವಾಗಿದ್ದೇನೆ ಮಕ್ಕಳೇ!! ನೀವೆಲ್ಲರೂ ಕ್ಷೇಮವಾಗಿದ್ದೀರಿ ಎಂದು ಭಾವಿಸಿದ್ದೇನೆ!
ಎನ್ನ ಮನದಂಗಳದಲ್ಲಿ ಅರಳಿದ ಕುಸುಮಗಳು ನೀವು. ನಿಮ್ಮಂದಲೇ ನಾನು, ನನ್ನಿಂದಲೇ ನೀವು!! ತಾಯಿ ಭಾರತಿಯಾದ ನಾನು ನನ್ನ ಭಾರತೀಯರನ್ನು ತುಂಬಾ ನೆನಪಿಸಿಕೊಳ್ಳಿತ್ತಿದ್ದೇನೆ. ತಾವೂ ನನ್ನನ್ನು ನಿತ್ಯ ಸ್ಮರಿಸುತ್ತೀರಾ ಎಂದು ಭಾವಿಸಿದ್ದೇನೆ.
ಈ ಪತ್ರ ಬರೆಯಲು ಒಂದೆರಡಲ್ಲ, ಹತ್ತು ಹಲವು ಕಾರಣಗಳಿವೆ ನನ್ನ ಮಕ್ಕಳೇ! ನಾನು ಭಾರತಾಂಬೆ, ಭುವನೇಶ್ವರಿ, ಭೂಮಾತೆ, ಉತ್ಕೃಷ್ಟ ಸಂಸ್ಕೃತಿ, ಸಂಸ್ಕಾರವುಳ್ಳ ಭವ್ಯ ಭಾರತೀಯರ ತಾಯಿ. ನನಗೆ ಭಾರತಾಂಬೆ ಎಂದು ಹೇಳಿಕೊಳ್ಳುವುದೇ ಒಂದು ರೋಮಾಂಚನ!.
ಇಡೀ ಜಗತ್ತಿನಲ್ಲಿ ನಾನೊಂದು ಅದ್ಭುತವೇ ಸರಿ!. ಶಾಂತಿ, ಸಹಬಾಳ್ವೆ, ಸಹೋದರತ್ವ, ಸ್ವಾತಂತ್ರ‍್ಯದಿಂದ ವೈವಿಧ್ಯತೆಯಲ್ಲಿ ಏಕತೆ ಸಾರಿ ಬದುಕಿ ಬಾಳಿದ ಎನ್ನ ಪ್ರಜೆಗಳ ಪರಿಶ್ರಮದ ಫಲವೇ ನಾನು!!. ಇಂಥ ಭವ್ಯ ಚರಿತ್ರೆ, ಕಾಶ್ಮೀರದಂಥ ಕಿರಿಟ, ಕನ್ಯಾಕುಮಾರಿಯ ಕೋಮಲತೆಯಿಂದ ನಾನು ಜಗತ್ತಿನಲ್ಲೇ ಆರ‍್ಷಕಳಾಗಲು ಸಾಧ್ಯವಾಗಿದೆ. ಎನ್ನ ಹಿರಿಮೆ-ಗರಿಮೆಯನ್ನು ಎತ್ತಿ ಹಿಡಿಯಲು ಪರಕೀಯರಿಂದ ದೇಶವನ್ನು ರಕ್ಷಿಸಿ ಸುವ್ಯವಸ್ಥಿತ ಸ್ವಾತಂತ್ರ‍್ಯ ತಂದು ಕೊಟ್ಟ ನನ್ನ ನೆಚ್ಚಿನ ಮಕ್ಕಳಾಗಿದ್ದ ಹೋರಾಟಗಾರರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ ಇಲ್ಲ!
ಸ್ವತಂತ್ರ ಭಾರತಕ್ಕೆ ಬೇಕಾದ ಬಲಿಷ್ಠ ಬುನಾದಿಯಂತೆ ರ‍್ವಸಮ್ಮತ ಸಂವಿಧಾನ ಮಾಡಿಕೊಟ್ಟವರಿಗೆ ಚಿರಋಣಿಯಾಗಿದ್ದೇನೆ!
ಆದರೇನು ಮಾಡಲಿ? ಮಕ್ಕಳೇ ನಿಮ್ಮ ಈಗಿನ ವರ‍್ತನೆಗಳಿಂದ ನಾನು ಬೇಸತ್ತು ಬಿಟ್ಟಿದ್ದೇನೆ. ಜಾತಿ, ಧರ‍್ಮ, ಲಿಂಗ, ಅಂತಸ್ತುಗಳ ಲೋಭ ಮೋಹ, ಮದ, ಮತ್ಸರಗಳಿಂದ ನೀವು ನೀವೇ ಕಚ್ಚಾಡುವುದನ್ನು ತಾಯಿ ಭಾರತೀಯಳಾದ ನಾನು ಹೇಗೆ ತಾನೇ ಸಹಿಸಲಿ? ಹಿಂದುವೆಂದು ಹಿಯಾಳಿಸಿದಾಗ, ಮುಸ್ಲೀಮರೆಂದು ಮೂದಲಿಸಿದಾಗ, ಸಿಖ್ಖರೆಂದು ಸಿಟ್ಟು ತೋರಿದಾಗ, ಕ್ರೈಸ್ತ ನೆಂದೇ ಕೊಂದು ಬಿಟ್ಟಾಗ ಎನ್ನ ಕರುಳು ಕಿತ್ತು ಬರುತ್ತದೆ. ಅಧಿಕಾರದಾಹದಲಿ ನೀಡುತ್ತಿರುವ ಅಮಾಯಕರ ಬಲಿ! ನಾ ಹೇಗೆ ಸಹಿಸಲಿ?? ಜಾತಿ ಧರ್ಮ ಭೇದದ ವಿಷಬೀಜ ಬಿತ್ತಿ ಉಂಟು ಮಾಡುತ್ತಿರುವ ಗಲಭೆಗಳನ್ನು ನಾ ಹೇಗೆ ಸುಮ್ಮನಾಗಿ ನೋಡಲಿ? ಹಿಂದು, ಮುಸ್ಲಿಮ್, ಸಿಖ್, ಇಸಾಯಿ ಭಾರತಾಂಬೆಯ ನಾಲ್ಕು ಸಿಪಾಯಿ ಎಂಬುದನ್ನೇಕೆ ಮರೆತಿದ್ದೀರಿ? ಸ್ವಲ್ಪವಾದರೂ ಚಿಂತಿಸುವಿರಾ??
ಅಂದು ಗಾಂಧೀಜಿ ಮಧ್ಯರಾತ್ರಿಯಲ್ಲಿ ಹೆಣ್ಣು ನಿರ್ಭಯಳಾಗಿ ಓಡಾಡುವ ಕಾಲ ಬಂದಾಗಲೇ ನಮಗೆ ನಿಜವಾದ ಸ್ವಾತಂತ್ರ‍್ಯ ಸಿಗುವುದೆಂದು ಹೇಳಿದ್ದನ್ನು ನೆನಪಿಸಿಕೊಳ್ಳಿ. ಇಂದು ಹೆಣ್ಣುಮಕ್ಕಳು ಎಷ್ಟು ಸರಕ್ಷಿತರಾಗಿದ್ದಾರೆ? ಬರೀ ಹೆಣ್ಣೆಂಬ ಹಣೆ ಪಟ್ಟಿ ತೊಡಿಸಿ ತರತಮವನ್ನೆಸಗಿ, ಅತ್ಯಾಚಾರಗೈಯ್ಯುತ್ತಿರುವವರೂ ನನ್ನ ಮಕ್ಕಳೆಯೇ?? ನಂಬಲಸಾಧ್ಯ!!! ಹೆಣ್ಣು ಮಕ್ಕಳಿಗೆ ಸುರಕ್ಷಿತ ವಾತಾವರಣ ನೀಡಲು ವಿಫಲರಾದ ನೀವು, ಅತ್ಯಾಚಾರಕ್ಕೆ ಬಲಿಯಾದ ಹೆಣ್ಣನ್ನು ಯಾವ ಹೊತ್ತು ಎಲ್ಲಿದ್ದೆ? ಆ ಸಮಯ ಮನೆ ಹೊರಗೇಕೆ ಇರಬೇಕಿತ್ತು ಎಂದು ಕೇಳುವ ನಿಮ್ಮ ಪ್ರಶ್ನೆಗಳು ಸಮಂಜಸವೇ?
ದೇಶದ ಸಂಪತ್ತನ್ನೇ ಕೊಳ್ಳೆಹೊಡೆದು ವಿದೇಶ ಸೇರಿದ ಮಹಾಗಳ್ಳರನ್ನು ಬದುಕಲು ಬಿಟ್ಟು, ಪುಡಿಗಾಸು ಸಾಲಕ್ಕಾಗಿ ಆತ್ಮ ಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಬಗೆಗೆ ಕನಿಕರ ಬೇಡವೇ?
ದೊಡ್ಡ ಲಂಚಕೋರರಿಗೆ ಸನ್ಮಾನಿಸುತ್ತಿದ್ದೀರಿ. ಹಸಿವು ಹೊತ್ತು ‘ಬನ್ನು’( ಬ್ರೆಡ್) ಕದ್ದಿದ ಕಂದನಿಗೆ ಕಳ್ಳನ ಪಟ್ಟಿ ಕಟ್ಟುವ ನಿಮ್ಮ ನೈತಿಕತೆಯ ಮತಿಗೆಟ್ಟಿರುವುದು ಅರ್ಥ ವಾಗುತ್ತಿಲ್ಲವೆ?? ನಿಮ್ಮನೆಯ ಹಳಸಿದ ಅನ್ನಕ್ಕಿಂತ ಬಡವರ ಹಸಿವು ಇನ್ನೂ ತಾಜಾವಾಗಿದೆ.
ಹೌದು ಭಾರತವನ್ನು ಸೂಪರ್ ಪವರ್ ಆಗಿ ಮಾಡುತ್ತಿದ್ದೀರಿ ಒಪ್ಪಿಕೊಳ್ಳುವೆ! ಆದರೆ ಇದೇ ಪ್ರ‍್ಯಾಯ ವ್ಯವಸ್ಥೆಯಲ್ಲಿ ಅನ್ನ, ನೀರು ಇಲ್ಲದೇ ಬಳಲಿ ಸಾಯುತ್ತಿರುವ ಕಂದಮ್ಮಗಳ ಕರುಳಿನ ಕೂಗು ಕೇಳುವರ‍್ಯಾರು? ಒಂದಾ ಎರಡಾ? ವಾರಕ್ಕೊಮ್ಮೆ ಬಡಜನರ ಶವ ಹೊತ್ತು ಸಂಸ್ಕಾರಾದಿ ಕ್ರಿಯೆಗಳನ್ನು ಮಾಡಿಬರಲೂ ಆ್ಯಂಬುಲೆನ್ ಇಲ್ಲ, ಸತ್ತ ತಾಯಿಯ , ಸತ್ತ ಸಹೋದರರ, ಸತ್ತ ಸಂಬಂಧಿಗಳ ಶವವನ್ನು ಸೈಕಲ್ ಮೇಲೆ, ಬೈಕ್ ಮೇಲೆ ಸಾಗಿಸುವ ಸುದ್ದಿ ಪತ್ರಿಕೆಗಳಲ್ಲಿ ಓದಿದಾಗ ನಿಮ್ಮ ಅಭಿವೃದ್ಧಿಯ ಗುರಿಗಳು ಮಣ್ಣು ಪಾಲು ಅಂತ ಅರಿವಾಗುವುದಿಲ್ಲವೇ?
ದೀನ ದಲಿತರ ಒಳಿತಿನಲ್ಲೇ ರಾಮರಾಜ್ಯ ಕಟ್ಟಲು ಸೂಚಿಸಿದ ಹಿರಿಯರ ಕನಸುಗಳು ನೆನಪಿದೆಯೇ? ಕೈಗಾರಿಕೀಕರಣ, ಆಧುನೀಕರಣ ನಗರೀಕರಣಗಳ ಭರದಲ್ಲಿ ಕಂಡ ಕನಸುಗಳನ್ನು ನನಸುಮಾಡುವ ಛಲದಲ್ಲಿ ಮಾನವೀಯತೆಯನ್ನೇ ಮೂಲೆಗುಂಪು ಮಾಡಿದ್ದೀರಿ.
ಮನುಜ ಜನ್ಮವೇ ಶ್ರೇಷ್ಠ ಎಂದು ನಂಬಿರುವುದು ಸರಿಯಾಗಿದೆ!! ಆದರೇ ತಾಯಿ ಭಾರತಿಯ ಪಕೃತಿಯನ್ನೇ ಪತನಗೊಳಿಸುತ್ತಿದ್ದೀರಿ. ನಿಮ್ಮ ಆಧುನಿಕತೆ ತಾಂತ್ರಿಕತೆಗಳಿಂದ ಪರಿಸರ ವಿನಾಶವಾಗುತ್ತಿರುವುದನ್ನೂ ಗಮನಿಸುತ್ತಿಲ್ಲ!!! ಬೋರುಗಳನ್ನು ಬೇಕಾಬಿಟ್ಟಿ ಕೊರೆಯುತ್ತಾ ತಾಯಿ ಭಾರತಿಯ ಗರ್ಭದಿಂದ ರಕ್ತ ಸುರಿಯುವಂತೆ ಮಾಡುತ್ತಿದ್ದೀರಿ! ಭೂಮಿಯ ಮೇಲಿನ ಸಕಲ ಜೀವ ಸಂಪತ್ತಿಗೂ ಬದುಕುವ ಅಧಿಕಾರವಿದೆ ಎಂಬುದನ್ನೂ ಮರೆತು ತಮ್ಮ ಅಭಿವೃದ್ಧಿಯ ಅಂಧ ವೇಗದಲ್ಲಿ ಎಲ್ಲವನ್ನೂ ಕೊಚ್ಚಿಕೊಂಡು ಹೋಗುತ್ತಿರುವುದರಿಂದಲೇ ಇಂದು ಅನಾರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದೀರಿ. ಇದನ್ನೆಲ್ಲಾ ಮರೆತಿರುವ ನೀವುಗಳು ಇಂದು ಆಜಾದಿಕ ಅಮೃತ ಮಹೋತ್ಸವನ್ನೇನೋ ಆಚರಿಸಿಕೊಳ್ಳುತ್ತಿದ್ದೀರಿ. ಆದರೆ ಭಾರತಾಂಬೆಯ ವಯಸ್ಸಾಗಿರುವುದನ್ನೇಕೆ ಅರಿಯುತ್ತಿಲ್ಲಾ? ಮಕ್ಕಳೇ ತಾಯಿ ಭಾರತಿ, ನಾನು ಈಗ ಹಿರಿಯಳಾಗಿದ್ದೇನೆ. ಮೊದಲಿಗಿಂತ ಜಾಸ್ತಿ ಕಾಳಜಿವಹಿಸುವ ಅಗತ್ಯತೆ ಇದೆ. ನನಗೆ ನಿಮ್ಮ ಅವಶ್ಯಕತೆ ಇದೆ. ತಾವೆಲ್ಲಾ ತಮ್ಮತನದಲ್ಲೇ ತನ್ಮಯರಾಗಿ ಬಿಟ್ಟರೇ? ಈ ಹಿರಿತಾಯಿಯ ಉಪಚಾರ ಮಾಡುವರ‍್ಯಾರು? ಯಾವುದೇ ಒಂದು ಅಂತಸ್ತಿನ, ಕುಲ, ಗೋತ್ರದವರಲ್ಲ ನನಗೆ ಕಾಶ್ಮೀರದಿಂದ ಕನ್ಯಾಕುಮಾರಿಯ ಎಲ್ಲಾ ಮಕ್ಕಳ ಸಹಕಾರ ಬೇಕು. ನೀವೆಲ್ಲಾ ಒಂದಾದಾಗಲೇ ನಿಮ್ಮ ತಾಯಿಯ ಮೊಗದಲ್ಲಿ ನೆಮ್ಮದಿಯ ನಗು ಕಾಣಲು ಸಾಧ್ಯ. ಅದನ್ನರಿತು ನಡೆಯಿರಿ. ನಿಮ್ಮ ರಾಜಕೀಯ, ಧಾರ‍್ಮಿಕ, ಸಾಮಾಜಿಕ, ಸಾಂಸ್ಕೃತಿಕ ಸ್ವರ‍್ಥ ಗಳಿಗಾಗಿ ಎನ್ನ ಭವ್ಯತೆಯನ್ನು ಹಾಳು ಮಾಡದಿರಿ.
ನನ್ನ ಮುದ್ದು ಪ್ರಜೆಗಳೇ ನನ್ನ ಭಾರತೀಯರೇ ಈ ತಾಯಿಯ ಮನದಾಳದ ಮಾತುಗಳನ್ನು ಅರಿತು ಬಾಳುವಿರಿ, ಎಂಬ ಭರವಸೆಯ ಮೇಲೆ ಈ ಪತ್ರಕ್ಕೆ ನಿಮ್ಮ ನುಡಿಗಳಿಂದಲ್ಲ ನಡೆಗಳಿಂದಲೇ ಉತ್ತರಿಸುವಿರೆಂದು ಕಾದುಕುಳಿತಿರುವೆ.
ಇಂತಿ ನಿಮ್ಮ ತಾಯಿ –
ತಾಯಿ ಭಾರತಿ.
ಭಾರತೀಯರು
ಕಾಶ್ಮೀರ ದಿಂದ ಕನ್ಯಾಕುಮಾರಿ
ಭಾರತಾಂಬೆಯ ಮನದಂಗಳಲ್ಲಿ.
–ಫರ‍್ಹಾನಾಜ್. ಮಸ್ಕಿ, ( ಸಹಾಯಕ ಪ್ರಾಧ್ಯಾಪಕರು ರ‍್ಕಾರಿ ಪ್ರಥಮ ರ‍್ಜೆ ಕಾಲೇಜು, ನೆಲಮಂಗಲ.)