ಬಂದೆ ದುರ್ಗೆಯಾಗಿಂದು..
ಬಂದಿಹೆ ನಾನಿಂದು ಭದ್ರಕಾಳಿಯಾಗಿ
ನಿಮ್ಮೊಡಲ ಪಿಶಾಚಿಯ ಸೀಳಲು
ಕೆರಳಿದ ಸಿಂಹಿಣಿಯಾಗಿ..
ರಕ್ತ ಬೀಜಾಸುರರ ವಧೆಯಲಂದು
ಕುಡಿದೆ ರಕ್ಕಸರ ಕಪ್ಪು ರುಧಿರವನು..
ಬಿಡದೆ ಹರಿಸುವೆನಿಂದು ನೀಚರೇ
ಕ್ರೌರ್ಯ ಪಾಪ ತುಂಬಿದ ನಿಮ್ಮ ನೆತ್ತರನು…
ಹಸುಳೆ, ತರುಣಿಯ, ಮುಪ್ಪಿನ ಜೀವವ
ಹಿಂಸಿಸಿ ಭೋಗಿಸಿ ಹಿಸುಕಿ ಬಿಸುಟ ಕಟುಕರೇ…
ಹಂದಿ ನಾಯಿಯೂ ಹಾಕಿ ಛೀಮಾರಿ, ಕ್ಯಾಕರಿಸಿ ಉಗಿದು,
ಮರೆಗೆ ಸರಿದಿವೆ ನಾಚಿ ಮುಖ ತಿರುಗಿಸಿ…
ಮರೆಯಲಾಗದ ಆ ಗಳಿಗೆ ಅವಳಿಗೆ
ಮರುಕಳಿಸಿ ಉಮ್ಮಳಿಸಿ ಬಿಕ್ಕಿದೆ..
ಕಾಮುಕರ ಬೇಟ ಪೌರುಷದ ನೋಟ
ಮರೆಯಲೆಂತು ನಾ ಮರೆಯಲೆಂತು…
ಸಾಕಿನ್ನು ಸಂಕೋಲೆಗಳ ಪ್ರತಾಪ
ಹುರಿಗೊಳಿಸಿ ಹೊಸೆದಿಹೆ ನನ್ನ ಹೆಣ್ತನವ
ಉರುಳು ಪಾಶವದೀಗ ಪೌರುಷಕೆ ನಿಮ್ಮ..
ಬೆತ್ತಲಾಗಿಸಿಬಿಡುವೆ ಷಂಡಗೊಳಿಸಿ
ಜಗದ ಜಗುಲಿಯ ಮೇಲೆ ಎಳೆದೊಯ್ದು…
ಮಾನಭಂಗದ ಮೂಲಧ್ವಜವ ಸಂಹರಿಸಲು
ಬಂದೆ ಇಗೋ ರೌದ್ರ ದುರ್ಗೆಯಾಗಿಂದು…!!!!:
–ಹಮೀದಾ ಬೇಗಂ ದೇಸಾಯಿ ಸಂಕೇಶ್ವರ