ಭ್ರಮರಾಂಬಾ ದೇವಸ್ಥಾನದಲ್ಲಿ ಘಟಸ್ಥಾಪನೆ
ಮಸ್ಕಿ : ವಿವಿಧೆಡೆ ನವರಾತ್ರಿ ಉತ್ಸವಕ್ಕೆ ಚಾಲನೆ ಇಂದಿನಿಂದ

e-ಸುದ್ದಿ ಮಸ್ಕಿ

ಮಸ್ಕಿ : ನವರಾತ್ರಿ ಉತ್ಸವ ನಿಮಿತ್ತ ‌ಪಟ್ಟಣದ ಭ್ರಮರಾಂಬಾ ದೇವಿ ದೇವಸ್ಥಾನದಲ್ಲಿ ಸೋಮವಾರ ಬೆಳಿಗ್ಗೆ 8-20 ಕ್ಕೆ ಘಟ ಸ್ಥಾಪನೆ ನೆರವೇರಿಸುವ ಮೂಲಕ 52ನೇ ವರ್ಷದ ಮಹಾದೇವಿ ಪುರಾಣಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಗುತ್ತಿದೆ.
ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ನೇತೃತ್ವದಲ್ಲಿ ಭ್ರಮರಾಂಬಾ ದೇವಿಯ ವಿಗ್ರಹಕ್ಕೆ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜೆ ಹಾಗೂ ಚಿನ್ನದ ಕಿರೀಟ ಧಾರಣೆ ನಡೆಯಲಿದೆ.
ಸೋಮವಾರ ಸಂಜೆ 6-30 ರಿಂದ 8-30 ವರೆಗೆ ಮಹಾದೇವಿಯ ಪುರಾಣ ಪ್ರವಚನ ನಡೆಯಲಿದೆ.

ಪ್ರವಚನಕಾರರಾಗಿ ಸಿದ್ದರಾಮ ಶಾಸ್ತ್ರಿಗಳು ಬ್ಯಾಡಿಗಿಹಾಳ, ಸಂಗೀತಗಾರರಾಗಿ ಸಂಗಮೇಶ ಪಾಟೀಲ್ ಗದಗ, ಸೋಮನಾಥ ಚೌಡಾಪೂರ ಪಾಲ್ಗೊಳ್ಳಲಿದ್ದಾರೆ.
ನ. 4 ರಂದು ಪ್ರವಚನ ಮಂಗಲೋತ್ಸೋವ ನಡೆಯಲಿದೆ. ನಂದವಾಡಗಿಯ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಸಂತೆಕೆಲ್ಲೂರಿನ ಗುರು ಬಸವ ಸ್ವಾಮಿಗಳು, ಅಂಕಲಿಮಠದ ವೀರಭದ್ರ ಮಹಾಸ್ವಾಮಿಗಳು ಸೇರಿದಂತೆ ಅನೇಕ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ.
ನ. 5 ರಂದು ವಿಜಯ ದಶಮಿ‌ ಆಚರಣೆ ಹಾಗೂ ನ. 6 ರಂದು ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ನ.7 ರಂದು ಗದುಗಿನ ರಾಮಕೃಷ್ಣ ಆಶ್ರಮದ  ಶ್ರೀ ಸ್ವಾಮಿ ನಿರ್ಭಯಾನಂದಜೀ ಅವರಿಂದ ಸಮಾಜ‌ ನಿರ್ಮಾಣದಲ್ಲಿ ಸ್ತ್ರೀಶಕ್ತಿಯ ಕುರಿತು ವಿಶೇಷ ಉಪನ್ಯಾಸ ನಡೆಯಲಿದೆ. ನ 8 ರಂದು  ಉಪ್ಪಿನ ಬೆಟಗೇರಿಯ ಮೂರುಸಾವಿರ ವಿರಕ್ತಮಠದ  ಶ್ರೀ.ಮ.ನಿ.ಪ್ರ. ಕುಮಾರ ವಿರುಪಾಕ್ಷ ಮಹಾಸ್ವಾಮಿಗಳಿಂದ ಸಾರ್ಥಕ ಬದಕು ಕುರಿತು ಮಾರ್ಗದರ್ಶನ ಇರುತ್ತದೆ.

ನ. 9 ರಂದು ಬೆಳಿಗ್ಗೆ ಗಂಗಾಸ್ಥಳದಿಂದ ಭ್ರಮರಾಂಬಾ ದೇವಿಯ ಮೆರವಣಿಗೆ ಜಂಬೂ ಸವಾರಿ ಮಾದರಿಯಲ್ಲಿ ನಡೆಯಲಿದೆ. ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಲಿವೆ. ನಂತರ ದೇವಿಗೆ ಅಭಿಷೇಕ, ಭಕ್ತರಿಗೆ ಮಹಾ ಪ್ರಸಾದ ಹಾಗೂ ಸಂಜೆ 5 ಗಂಟೆಗೆ ಭ್ರಮರಾಂಬಾ ದೇವಿಯ ರಥವನ್ನು ಮಹಿಳೆಯರು ಎಳೆಯುವ ಮೂಲಕ ನವರಾತ್ರಿ ಉತ್ಸವಕ್ಕೆ ಕೊನೆಗೊಳ್ಳಲಿದೆ.

 

Don`t copy text!