ವಚನ ಅನುಸಂಧಾನ

ವಚನ ಅನುಸಂಧಾನ

ಅಂಗದೊಳಗೆ ಲಿಂಗನಾಗಿ ಬಂದ
ಲಿಂಗವನೆಂತು ಪೂಜಿಸಿ
ಮುಕ್ತಿಯ ಪಡೆವೆನಯ್ಯಾ!

ಸೃಷ್ಟಿಯಲ್ಲಿ ಹುಟ್ಟಿ ನಷ್ಟವಹ
ಲಿಂಗವನೆಂತು ಮುಟ್ಟಿ ಪೂಜಿಸಿ
ಮುಕ್ತಿಯ ಪಡೆವೆನಯ್ಯಾ!

ಕಿಚ್ಚು ಕಿಚ್ಚ ಸುಡುವುದೆ ಅಯ್ಯಾ?
ಈ ಕಷ್ಟವ ಕಂಡು ಮುಟ್ಟಲಂಜಿ
ನಿಮ್ಮಲ್ಲಿಯೇ ನಿಂದೆ,
ಸಿಮ್ಮಲಿಗೆಯ ಚೆನ್ನರಾಮಾ.
                                 -ಚಂದಿಮರಸ

ಅಪ್ಪ ಬಸವಣ್ಣನವರು ಪ್ರಾರಂಭಿಸಿದ ಅರಿವಿನ ಗುರು ಕಿರಣದಿಂದ ಶುರುವಾಗಿ ಸಾಗಿ ಬಯಲು ಬೆಳಗಿನ ಮಹಾ ಬೆಳಗಿನೊಂದಿಗೆ ಅನುವಿರದಂತೆ ಬೆರೆತು ಬಯಲಾಗುವ ಶೂನ್ಯ ಸಂಪಾದನೆಯ ಅಭಿಯಾನವು;

ವ್ಯಕ್ತಿಯ ಒಳಹೊರಗಿನಲ್ಲಿನ ಕತ್ತಲೆ, ಕಲ್ಮಶಗಳನ್ನು ಕಳೆದು, ನಿರ್ಮಲ ಭಾವ ದಿಂದ ಚಿತ್ತ ಚೈತನ್ಯವನ್ನು ಪ್ರಜ್ವಲನೆಯ ಮಾಡಿ ಕೊಂಡು ಚಿನ್ಮಯ ಚಿತ್ತನಾಗಿ ಶರಣಭಾವದಿಂದ ಮುಂದೆ ಲೋಕ ಕಲ್ಯಾಣದತ್ತ ಸಾಗಿ, ಶರಣಸಂಗ ಶಿವಸುಖದ ಸ್ವಯಾನುಭಾವದ ಪರಿಣಾಮದಿಂದ ಗಳಿಸಿದ ಆ ಅನುಭಾವದ ಮಹಾ ಪ್ರಸಾದವನ್ನು ಜಗ ಜಂಗಮದ ಕಲ್ಯಾಣಕ್ಕಾಗಿ ಪ್ರಸಾದಿಸುತ್ತಲೇ ಮರಳಿ ಮತ್ತೆ ಭವಕ್ಕೆ ಹುಟ್ಟಿ ಬಾರದ ಜೀವನ್ಮುಕ್ತಿ ಯನ್ನು ಹೊಂದುವ ಅನುಪಮವಾದ ಕೈಂಕರ್ಯ ಕೈಗೊಂಡ ಮಣಿಹವನ್ನ ಹೊಂದಿರುವ ಸಂದರ್ಭ ದಲ್ಲಿ ಅದು ಕಲ್ಯಾಣದ ಕೇಂದ್ರದಿಂದ ತರಂಗದ ಉಪಾದಿಯಲ್ಲಿ ಹೊರಟು ದೇಶದ ತುಂಬೆಲ್ಲಾ ವ್ಯಾಪಿಸಿರುವಾಗ; ಇತ್ತ ಆಕರ್ಷಿತರಾಗಿ ಬದುಕಿನ ನಾನಾ ನೆಲೆಯಿಂದ ಈ ವಿಶಿಷ್ಟ ವಿನೂತನವಾದ ಪ್ರಯೋಗದಲ್ಲಿ ಪಾಲ್ಗೊಳ್ಳಲಿಚ್ಛಿಸಿದ ದುಡಿಯುವ ಸಾಮಾನ್ಯ ಜನರಿಂದ ರಾಜ ಮಹಾರಾಜರ ತನಕ ಎಲ್ಲ ಜನ ಬಂದು ಬೆರೆತು ಹೋಗುವರು. ಹೀಗೆ
ಬಂದವರಲ್ಲಿ ಈ ಮೇಲಿನ ವಚನವನ್ನು ರಚಿಸಿದ
ಚಂದಿಮರಸರೂ ಒಬ್ಬ ಅರಸರಾಗಿದ್ದವರು.ಈಗ ಇಲ್ಲಿ ಪ್ರಸ್ತುತ ವಚನದ ಅನುಸಂಧಾನವ ಮಾಡಿ ನೋಡೋಣ.

ಅಂಗದೊಳಗೆ ಲಿಂಗನಾಗಿ ಬಂದ
ಲಿಂಗವನೆಂತು ಪೂಜಿಸಿ
ಮುಕ್ತಿಯ ಪಡೆವೆನಯ್ಯಾ!

ಶರಣ ಚಳುವಳಿಯ ಮುಖ್ಯ ಕೇಂದ್ರದಲ್ಲಿ ವ್ಯಕ್ತಿ ಇರುವುದು. ವ್ಯಕ್ತಿಯ ಅಂಗದಲ್ಲಿನ ಚೈತನ್ಯವೇ ಲಿಂಗವಾಗಿದೆ. ಇಂತಹ ಅಂಗ ಅಂತರ್ಗತವಾಗಿ ಇರುವಂತಹ ಲಿಂಗವನ್ನು ಪೂಜಿಸಿ ಹೇಗೆ ಮುಕ್ತಿ ಪಡೆಯನ್ನು ಹೊಂದಬಹುದು!? ಎನ್ನುವ ಜಿಜ್ಞಾಸೆ ವಚನಕಾರರ ಮನದಲ್ಲಿ ಭುಗಿಲೆದ್ದಿದೆ ಎನ್ನುವುದ ವಚನದ ಈ ಸಾಲುಗಳು ಸಾರುತ್ತಿವೆ.

ಸೃಷ್ಟಿಯಲ್ಲಿ ಹುಟ್ಟಿ ನಷ್ಟವಹ
ಲಿಂಗವನೆಂತು ಮುಟ್ಟಿ ಪೂಜಿಸಿ
ಮುಕ್ತಿಯ #ಪಡೆವೆನಯ್ಯಾ!

ಅಂಗ ಅಂತರ್ಗತವಾಗಿರುವ ಲಿಂಗವನ್ನು ವ್ಯಕ್ತಿ ಪೂಜಿಸಲಾಗದಿರುವ ಹೊತ್ತಿನಲ್ಲಿ ಇನ್ನು ಈ ಸೃಷ್ಟಿ ಯೊಳಗೆ ಹುಟ್ಟಿದ ಮತ್ತು ನಷ್ಟವಾಗಿ ಹೋಗುವ ಇಷ್ಟ ಲಿಂಗವನ್ನು ಮುಟ್ಟಿ ಪೂಜಿಸಿ ಮುಕ್ತಿಯನ್ನು ಪಡೆಯಲು ಅದು ಹ್ಯಾಗೆ ಸಾಧ್ಯ!? ಎನ್ನುವಂತಹ ಮುಖ್ಯ ಸಂದೇಹದ ಹುದುಲಲ್ಲಿ ವಚನಕಾರರು ಬಿದ್ದು ನಿಡುಸುಯ್ಯುವರು. ಯಾಕೆಂದರೆ ಇವರು ವೈದಿಕ ಕುಟುಂಬದಿಂದ ಬಂದ ಶರಣರಾಗಿದ್ದು, ಮುನ್ನಿನ ತಮ್ಮ ಇಂತಹ ಗ್ರಹಿಕೆಯನ್ನು ಮೀರಲು ಆಗದೆ ಒಪ್ಪಿಕೊಂಡು ಬಂದ ಶರಣಧರ್ಮದಂತೆ ಇಷ್ಟಲಿಂಗವನ್ನು ಧರಿಸಿ ಪೂಜಿಸಿಕೊಳ್ಳಲು ಆಗದ
ದ್ವಂದ್ವದ ಸಂದಿಯಲ್ಲಿ ತೊಳಲಾಟ ಮಾಡುವುದು ಇಲ್ಲಿ ಎದ್ದು ತೋರುತ್ತದೆ.

ಕಿಚ್ಚು ಕಿಚ್ಚ ಸುಡುವುದೆ ಅಯ್ಯಾ?
ಈ ಕಷ್ಟವ ಕಂಡು ಮುಟ್ಟಲಂಜಿ
ನಿಮ್ಮಲ್ಲಿಯೇ ನಿಂದೆ,
ಸಿಮ್ಮಲಿಗೆಯ #ಚೆನ್ನರಾಮಾ.

ಈಗ ಇಲ್ಲಿ ವಚನಕಾರರು ಒಂದು ಸ್ಪಷ್ಟವಾದಂಥ ನಿಲುವಿಗೆ ಬಂದಿರುವುದನ್ನು ವಚನದ ಈ ಸಾಲು ಎತ್ತಿ ತೋರಿಸುತ್ತದೆ. ‘ಕಿಚ್ಚು ಕಿಚ್ಚ ಸುಡುವುದೆ ಅಯ್ಯಾ?’ಎನ್ನುವ ಈ ಸಾಲಿನ ಅರ್ಥ ಏನೆಂದರೆ; ಅಂಗದಲ್ಲಿನ ಆತ್ಮ ಪರದಲ್ಲಿನ ಪರಮಾತ್ಮನಲ್ಲಿ ಒಂದಾಗಿ ಬೆರೆಯುವ ಸಲುವಾಗಿಯೇ ಪೂಜೆಯ
ಅಗತ್ಯವಿದೆ ಎನ್ನುವುದಾದರೆ, ಅಂಗದ ಒಳಗಿನ ಲಿಂಗವಿರಲಿ ಅಥವಾ ಹೊರಗೆ ಧರಿಸಿದ ಲಿಂಗವೆ ಆಗಿರಲಿ ಪೂಜಿಸಿ ಪಡೆಯುವ ಪಲವು ಸಮರಸ ವೇ ಆಗಿರುವಾಗ ಎರಡೂ ಒಂದೇ! ಎನ್ನುವುದನ್ನ
ಈ ಸಾಲಲ್ಲಿ ವಚನಕಾರರು ತಮ್ಮ ಜಿಜ್ಞಾಸೆಯನ್ನು ಸಮರ್ಥಿಸಿಕೊಂಡಿದ್ದಾರೆ. ಆದರೂ ಇಲ್ಲಿ ಅವರು ತಮ್ಮ ಮುನ್ನಿನ ಸಂಸ್ಕಾರದ ವಾಸನೆ ಬಿಡಲಾಗದೆ ಇತ್ತಕಡೆ ಶರಣರ ತತ್ವ ಸಿದ್ಧಾಂತಗಳನ್ನು ಅರಗಿಸಿ ಕೊಳ್ಳಲಾಗದೇ ತಮ್ಮ ದ್ವಂದ್ವ ಭಾವದಿಂದ ಅಂಜಿ
ತಟಸ್ಥರಾಗಿ ತಮ್ಮ ಇಷ್ಟಲಿಂಗದಲ್ಲಿ ನಿಂತೆ ಎನ್ನುವ ಮೂಲಕ ಶರಣರ ತತ್ವಗಳನ್ನೆತ್ತಿ ಹಿಡಿಯುತ್ತಾರೆ.
**
*ಸಂಕ್ಷಿಪ್ತ ಪರಿಚಯ*
ಚಂದಿಮರಸ; ಅಪ್ಪ ಬಸವಣ್ಣನವರ ಹಿರಿಯ ಸಮಕಾಲೀನರು. ಇವರು ಗುಲಬುರ್ಗಾ ಜಿಲ್ಲೆಯ ಕೆಂಭಾವಿಯಲ್ಲಿ ಅರಸರಾಗಿದ್ದವರು. ಮೂಲತ: ಬ್ರಾಹ್ಮಣರಾಗಿದ್ದ ಇವರು ಅದೇ ಕೆಲ ಬ್ರಾಹ್ಮಣರ ಚಾಡಿ ಮಾತು ಕೇಳಿ, ಭೋಗಣ್ಣ ಶರಣರನ್ನ ತಮ್ಮ ಊರಿನಿಂದ ಓಡಿಸಿದರೆಂದೂ ಆದರೆ ಆ ಶರಣರ ಹಿಂದೆಯೇ ಆ ಊರಿನ ಲಿಂಗಗಳೆಲ್ಲವೂ ಹಾರಿ ಹೋಗಲು, ಆಗ ರಾಜನಾಗಿದ್ದ ಈ ಚಂದಮರಸ ಆ ಭೋಗಣ್ಣ ಶರಣರನ್ನು ಹಿಂದಕ್ಕೆ ಕರೆಸಿ, ಈ ಘಟನೆಯ ಪರಿಣಾಮದಿಂದ ರಾಜನಾದ ಇವರ ಮನಸ್ಸು ಮನಪರಿವರ್ತನೆಯಾಗಿ, ಶರಣರಾದ ನಿಜಗುಣ ಶಿವಯೋಗಿಯಿಂದ ಶರಣ ಧರ್ಮವ ಸ್ವೀಕರಿಸಿ, ರಾಜ್ಯಕೋಶಗಳನ್ನು ತೊರೆದು, ಕೃಷ್ಣಾ ನದಿ ತೀರದ ‘ಚಿಮ್ಮಲಿಗೆ’ ಯಲ್ಲಿ ವಾಸಿಸುತ್ತಲೇ ತಮ್ಮ ಗುರುವಿನಂತೆ ತಾವೂ ವಚನಕಾರ ಶರಣ ರಾಗಿ ಶರಣ ಧರ್ಮಪ್ರಸಾರವನ್ನ ಕೈಗೊಳ್ಳುವರು.
ವಚನಕಾರ ಶರಣ ‘ಘನಲಿಂಗ’ ಇರನ್ನು ಮಹಾತ್ಮ ನೆಂದು ತನ್ನ ವಚನಗಳಲ್ಲಿ ಹಾಡಿ ಹೊಗಳಿದ್ದಾನೆ. ೭೭೦ ಅಮರ ಗಣಂಗಳಲ್ಲಿ ಈ ಚಂದಿಮರಸರೂ ಒಬ್ಬ ವಚನಕಾರ ಶರಣರಾಗಿದ್ದು.’ಸಿಮ್ಮಲಿಗೆಯ ಚೆನ್ನರಾಮ’ ವಚನಾಂಕಿತದ ಇವರ ೧೫೭ ವಚನ ದೊರೆತಿವೆ. ‘ ಅವುಗಳಲ್ಲಿ; ಅರಿವು, ಆತ್ಮಜ್ಞಾನ, ಶರಣ ಸ್ತುತಿ, ಅನುಭಾವವು ಕೆನೆಗಟ್ಟಿವೆ ಎಂದು ಪ್ರಾಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕೊನೆಯಲ್ಲಿ ಇವರು ಚಿಮ್ಮಲಿಗೆಯಲ್ಲಿಯೇ ಸಮಾಧಿಸ್ಥರಾದ ರೆಂದೂ ಪ್ರತೀತಿ ಇದೆ. ಅಲ್ಲಿಯೇ ಇವರ ಹೆಸರಿನ ಒಂದು ಗುಡಿ ಇಂದಿಗೂ ಇದೆ ಎನ್ನಲಾಗಿದೆ.

ಸುಜಾತಾ ಪಾಟೀಲ ಸಂಖ🙏🏻

Don`t copy text!