ಬಾಪು!!

ಬಾಪು!!

ರಾಮ ರಾಜ್ಯದ ರಾಜಕೀಯದಲ್ಲೀಗ
ಸ್ವಜನ ಪಕ್ಷಪಾತದ್ದೇ ಛಾಪು!!
ಸತ್ಯ ಅಹಿಂಸೆಯ ಮಾರ್ಗ
ಸವೆದು ಹೋಗುತಿಹುದಲ್ಲಾ ಬಾಪು!!

ಬಟ್ಟೆ, ಬಣ್ಣಗಳದ್ದೇ ಬದಲಾವಣೆ
ಒಳಿತಿನ ಒಲವುಗಳನ್ನೀಗ ನಾ ಕಾಣೆ!!
ಸೂಟು ತೊರೆದದ್ದೂ ಒಳ್ಳೆಯದಾಯ್ತು,
ವಸ್ತ್ರಗಳೀಗ ವಿನಾಶದಂಚಿನಲ್ಲಿವೆ ಬಾಪು!!

ಎಲ್ಲಿ‌ನೋಡಿದರೂ ಎಡೆಬಿಡದೇ ಸಾಗುತಿದೆ
ಮೇಲು-ಕೀಳು, ಜಾತಿ-ಕುಲಗಳ ಗೀಳು!
ಸರ್ವಜನಾಂಗದ ಸಹಿಷ್ಣುತೆಯ ನಾಡಲ್ಲಿ
ನೀರು ಕುಡಿದರೂ ಶೋಷಿತರಿಗೆ, ಶಿಕ್ಷೆ ಸಾವು!!

ನಡೆದದ್ದು ಸಾಕು, ಕೂತು ಬಿಡು ಬಾಪು!
ಹೊತ್ತಿ ಉರಿಯುತಿದೆ ಧರ್ಮಗಳ ಕಿಚ್ಚು
ಕಾಣಲಾಗದು ಭಾರತದಲ್ಲಿ ಭಾರತೀಯರು,
ಈಗೀಗ ಹಿಂದು‌-ಮುಸ್ಲೀಮರೇ ಹೆಚ್ಚು!!

ಪರಕೀಯರನ್ನೇ ಹೆದರಿಸಿದ್ದ,ಬಾಪು ನಿನ್ನ ಕೋಲು,
ಕಸಗುಡಿಸಿ ಬದಿಗಿಟ್ಟಿದ್ದಾರೆ ಈ ಕೊಳಕು ಜನರು
ಸತ್ಯಾನ್ವೇಷಿಸಿದ ನಿನ್ನ ಚಾಳೀಸನ್ನೂ
ಸ್ವಚ್ಛತೆಯ ಹೆಸರಲಿ ಗೊಬ್ಬೆಬ್ಬಿಸಿದ್ದಾರೆ ನೋಡು!

ಉಪ್ಪು ತಿಂದವರೇ ತಪ್ಪು ಮಾಡುತಿಹರು
ಸದ್ದು ಇಲ್ಲದೇ ಬೊಬ್ಬೆ ಹೊಡೆಯುತಿಹರು
ಕೇಳದಿರು ಬಾಪು ನಿನ್ನೂರಿನ ಹೆಣ್ಣಿನ ಪಾಡು
ಮಧ್ಯರಾತ್ರಿಯಲ್ಲ ಹಾಡಹಗಲೇ ಶವವಾಗುತಿಹಳು

ರಂಗು ರಂಗಿನ ಕಟ್ಟಡಗಳಲ್ಲಿ ಭಾವವಿಲ್ಲದೇ
ನೇತಾಡುತಿದೆ ಬಾಪು ನಿನ್ನ ಭಾವ ಚಿತ್ರ!!
ತಲುಪುವುದಾದರೂ ಹೇಗೆ ನಿನ್ನ ವಿಳಾಸಕೆ
ಬರೆದು ಹಾಕಿದ ಭಾವೈಕ್ಯತೆ ಇಲ್ಲದ ಪ್ರೇಮ ಪತ್ರ!!

ಶುಭ್ರತೆಯ ಪ್ರತೀಕ ಶ್ವೇತಧಾರಿ ಬಾಪು
ನಿನ್ನನೂ ಸಂಶಯಗಳಿಂದ ನೋಡುತಿಹರು
ಮತ್ತೇ‌ ಮರಳಿ ಎಂದೂ ಬರದಿರು ಬಾಪು
ಸಮಯಸಾಧನೆಗೆ ಮಾತ್ರ ಈಗೀಗ ನಿನ್ನ ನೆನಪು!!

-ಪ್ರೊ. ಫರ್ಹಾನಾಜ್. ಮಸ್ಕಿ
ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ನೆಲಮಂಗಲ, ಬೆಂಗಳೂರು ಗ್ರಾಮಾಂತರ

Don`t copy text!