ಗಾಂಧಿ ಎಂಬ ಬೆಳಕನ್ನು ನಂದಿಸಿದ ಸನಾತನಿಗಳು

ಗಾಂಧಿ ಎಂಬ ಬೆಳಕನ್ನು ನಂದಿಸಿದ ಸನಾತನಿಗಳು

ಇತ್ತೀಚಿನ ವರ್ಷಗಳಲ್ಲಿ ಗಾಂಧಿ ಜಯಂತಿ (ಅ.2) ಹಾಗೂ ಗಾಂಧಿ ಪುಣ್ಯಸ್ಮರಣೆ (ಜ.30) ಆಸುಪಾಸು ಸಾಮಾಜಿಕ ಜಾಲ ತಾಣಗಳಲ್ಲಿ ಗಾಂಧಿಯವರ ಅವಹೇಳನ, ನಿಂದನೆ ತಾರಕ್ಕೆರುತ್ತದೆ. ಹೀಗೆ ನಿಂದಿಸುವವರಲ್ಲಿ ಬಲಪಂಥೀಯ ಎಂದು ಹೇಳಿಕೊಳ್ಳುವ ಯುವಕರೇ ಹೆಚ್ಚಾಗಿರುತ್ತಾರೆ.

ಇವರು ಗಾಂಧಿಯನ್ನು ‘ದೇಶ ವಿಭಜನೆಗೆ ಕಾರಣಿಕರ್ತ, ಹಿಂದೂಗಳ ಕಗ್ಗೊಲೆ ಖಂಡಿಸದ ಮುಸ್ಲಿಂರ ಪಕ್ಷಪಾತಿ’ ಎಂದೆಲ್ಲಾ ಆರೋಪಿಸಿ ಗೋಡ್ಸೆ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತಾರೆ. ತಮ್ಮ ಬದುಕು, ಹೋರಾಟದ ಮೂಲಕ ದಾಸ್ಯದಿಂದ ಬಿಡುಗಡೆ ಹೊಂದುವ ಶಾಂತಿ ಮಾರ್ಗವನ್ನು ಸಂಶೋಧಿಸಿ, ವಿಶ್ವಕ್ಕೆಲ್ಲಾ ಬೆಳಕು ನೀಡಿದ ಗಾಂಧಿಯನ್ನು ಅವಹೇಳನ ಮಾಡುತ್ತಿರುವುದು ಅತ್ಯಂತ ಖೇದಕರ,

ಪ್ರಪಂಚದ ಮೂರನೇಯ ಎರಡು ಭಾಗದಲ್ಲಿ ಆಳ್ವಿಕೆ ನಡೆಸಿದ ಬ್ರಿಟೀಷರನ್ನು ನಿರಾಯುಧನಾಗಿ ಎದುರಿಸಿ, ಗೆದ್ದ ನಮ್ಮ ರಾಷ್ಟ್ರಪಿತ ಮಹಾತ್ಮಗಾಂಧಿಯವರನ್ನು ಅಸಹ್ಯವಾಗಿ ನಿಂದಿಸುವುದು ಕಂಡು ತೀವ್ರ ನೋವಾಗುತ್ತದೆ. ಗಾಂಧಿಯವರ ವ್ಯಕ್ತಿತ್ವ ಹಾಗೂ ಹೋರಾಟ ಇಡೀ ಜಗತ್ತನ್ನು ಪ್ರಭಾವಿಸಿದ್ದು ಕಣ್ಣೆದುರಿಗೇ ಇರುವಾಗಲೂ ಇಲ್ಲಿ ಗಾಂಧಿ ಬಗ್ಗೆ ಸುಳ್ಳುಗಳನ್ನು ಹರಡಲಾಗುತ್ತಿದೆ. ಗಾಂದಿ ಕೊಲೆಗೆ ಗೋಡ್ಸೆ ನೀಡಿದ ಕಾರಣಗಳ ಸತ್ಯಾಸತ್ಯತೆ ಅರಿಯದೇ ಸುಳ್ಳುಗಳನ್ನು ಹರಡಲಾಗುತ್ತಿದೆ.

ಬ್ರಿಟೀಷರು ದೇಶದ ನೂರಾರು ಸಂಸ್ಥಾನಗಳನ್ನು ರಾಜರುಗಳಿಂದ ವಶಪಡಿಸಿಕೊಂಡಿದ್ದರು. ಇಲ್ಲಿಂದ ತೆರಳುವುದಾಗಿ ಬ್ರಿಟೀಷರು ಹೇಳಿದಾಗ ಬಹಳಷ್ಟು ಸಂಸ್ಥಾನಿಕರು ತಮಗೇ ತಮ್ಮ ಸಂಸ್ಥಾನಗಳನ್ನು ಮರಳಿಸಬೇಕು ಎಂದು ಒತ್ತಾಯಿಸಿದರು. ಅಷ್ಟೊತ್ತಿಗಾಗಲೇ ಇಲ್ಲಿ ಗಾಂಧಿ ನೇತೃತ್ವದ ಹೋರಾಟದ ಫಲವಾಗಿ ಪ್ರಜಾ ಪ್ರತಿನಿಧಿ ಸಭೆಗಳು ಅಸ್ತಿತ್ವಕ್ಕೆ ಬಂದಿದ್ದವು.

ಪ್ರಜಾ ಪ್ರತಿನಿಧಿಗಳಿಗೆ ಅಧಿಕಾರ ಹಸ್ತಾಂತರವಾಯಿತು. ಇದು ಅನೇಕ ಮಾಜಿ ರಾಜರುಗಳಿಗೆ, ಅವರ ಆಸ್ಥಾನದಲ್ಲಿದ್ದ “ಶ್ರೇಷ್ಟ’ರ ಸಿಟ್ಟಿಗೆ ಕಾರಣವಾಗಿತ್ತು. ಜತೆಗೆ ಸ್ವತಂತ್ರ ಭಾರತದಲ್ಲಿ ಸರ್ಕಾರಗಳ ಆಯ್ಕೆ ಹಾಗೂ ಆಡಳಿತದ ಭಾಗವಾಗಿ ಶೂದ್ರರು, ದಮನಿತರೂ ಇರುತ್ತಾರೆ ಎನ್ನುವುದನ್ನು ಅರಗಿಸಿಕೊಳ್ಳಲು ಈ ‘ಶ್ರೇಷ್ಠ’ರಿಗೆ ಕಷ್ಟವಾಯಿತು. ಆದರೆ ಇಡೀ ದೇಶ ಗಾಂಧಿ ಜತೆಗಿದ್ದ ಕಾರಣಕ್ಕೆ ಒಳಗೊಳಗೆ ಕುದಿಯುತ್ತಿದ್ದರು.

ತಮ್ಮನ್ನು ತಾವು ಸನಾತನಿ ಹಿಂದೂ ಎಂದು ಹೇಳಿಕೊಂಡು ಜಾತಿ ವ್ಯವಸ್ಥೆಯ ಪರವಾಗಿ ಗಾಂಧಿ ಮಾತನಾಡಿದಾಗ ಅವರು ಯಾರ ನಿಂದೆಗೂ ಗುರಿಯಾಗಿರಲಿಲ್ಲ. ಯಾವಾಗ ಈ ವಿಷಯವಾಗಿ ಗಾಂಧಿ ಬದಲಾದರೋ ಆಗ ‘ಶ್ರೇಷ್ಠ’ರಿಗೆ ಸಾವಿರ ಚೇಳು ಕಡಿದಂತಾಯಿತು. ಅಸ್ಪೃಶ್ಯತೆ ವಿರುದ್ಧ ಹೋರಾಡಲು ಹರಿಜನ ಸೇವಕ ಸಂಘ ಕಟ್ಟಿದ ಗಾಂಧಿ 21 ದಿನಗಳ ಉಪವಾಸ ಕೈಗೊಂಡರು. 9 ತಿಂಗಳ ಕಾಲ ದೇಶ ವ್ಯಾಪಿ ಪ್ರವಾಸ ಕೈಗೊಂಡು ದಮನಿತರ ದೇವಾಲಯ ಪ್ರವೇಶಕ್ಕಾಗಿ ಆಂದೋಲನ ಮಾಡಿದರು.

ಈ ಕಾರ್ಯದಲ್ಲಿ ಗಾಂಧಿ ಸಾಕಷ್ಟು ಯಶಸ್ಸು ಗಳಿಸಿದರು. ಅಸ್ಪೃಷ್ಯತೆ ಎಂಬ ಅನಿಷ್ಟ ತೊಲಗದೇ ಇದ್ದರೆ ಹಿಂದೂ ಧರ್ಮವೇ ನಾಶವಾಗಲಿ ಎಂದು ಗಾಂಧಿ ಪ್ರತಿಪಾದಿಸಿದರೋ ಆಗ ಗಾಂಧಿಯನ್ನೇ ತೊಲಗಿಸುವ ಪ್ರಯತ್ನಗಳನ್ನು “ಶ್ರೇಷ್ಠ’ರು ಶುರುವಿಟ್ಟುಕೊಂಡರು.

ದೇಶದ ಹಿಂದೂಗಳು ಹಾಗೂ ಮುಸ್ಲಿಂರಲ್ಲಿ ಐಕ್ಯತೆ ಮೂಡಿಸಿ, ‘ಭಾರತೀಯರ’ ಸ್ವಾತಂತ್ರ್ಯ ಹೋರಾಟವಾಗಿಸಿದ್ದ ಗಾಂಧಿಯ ಪರಾಕ್ರಮದಿಂದಾಗಿ ಬ್ರಿಟೀಷರಿಗೆ ಮಾತ್ರವಲ್ಲ, ‘ಶ್ರೇಷ್ಟರಿಗೂ ಆತಂಕವಾಯಿತು. ಆಗಲೇ ಎಂ.ಎಸ್. ಗೋಲ್ವಾಲ್ಕರ್ ಅವರ We, or our nationhood difined’, Bunch of thoughts  ಹಾಗೂ ವಿ.ಡಿ. ಸಾವರ್ಕರ್  ಅವರ Who is a Hindu ?, Essentials of Hindutva ಎಂಬ ಹಿಂದೂತ್ವ ಪ್ರತಿಪಾದನೆಯ ಪುಸ್ತಕಗಳು ಪ್ರಕಟಗೊಂಡವು.

ಹಿಂದುತ್ವ ಸಿದ್ಧಾಂತ ಹಾಗೂ ಸಂಘಟನೆಗಳು ಪ್ರವರ್ಧಮಾನಕ್ಕೆ ಬಂದವು. ದೇಶ ಸ್ವಾತಂತ್ರ್ಯ ಗಳಿಸುವುದು ಖಾತ್ರಿಯಾಗುತ್ತಿದ್ದಂತೆ ಭಾರತೀಯರನ್ನು ಹಿಂದೂಗಳು ಹಾಗೂ ಮುಸ್ಲಿಂರು ಎಂದು ಒಡೆಯುವಲ್ಲಿ ಈ ಹಿಂದೂತ್ವವಾದಿ ಮುಖಂಡರು ಹಾಗೂ ಜಿನ್ನಾ ಯಶಸ್ವಿಯಾದರು. ಮೊದಲ ಬಾರಿಗೆ ಗಾಂಧಿ ಮತ್ತು ಅವನ ಸಂದೇಶಗಳಿಗೆ ಸೋಲಾಗಿತ್ತು.

1937 ರಲ್ಲಿಯೇ ಹಿಂದೂ ಮಹಾಸಭಾದ ಮುಖಂಡರೊಬ್ಬರು ಧರ್ಮದ ಆಧಾರದ ಮೇಲೆ ದ್ವಿ ರಾಷ್ಟ್ರ ಸಿದ್ಧಾಂತ ಮಂಡಿಸಿದರು. 1940ರಲ್ಲಿ ಜಿನ್ನಾನ ಮುಸ್ಲಿಂ ಲೀಗ್ ಪ್ರತ್ಯೇಕ ಪಾಕಿಸ್ತಾನದ ಬೇಡಿಕೆ ಮುಂದಿಟ್ಟು ಹಿಂಸಾಚಾರಕ್ಕಿಳಿಯಿತು. ದೇಶದ ವಿಭಜನೆಗೆ ಒಪ್ಪದ ಗಾಂಧಿ, ‘ದೇಶ ನನ್ನ ದೇಹದ ಮೇಲೆ ತುಂಡಾಗಬೇಕಷ್ಟೇ’ ಎಂದು ಸಿಡಿಮಿಡಿಗೊಂಡರು. ಇತ್ತ ಗಾಂಧಿ ಧಾರ್ಮಿಕ ಐಕ್ಯತೆಗೆ ಹೋರಾಡುತ್ತಿದ್ದರೇ, ಅತ್ತ ಎರಡೂ ಮತೀಯವಾದಿ ಗುಂಪುಗಳು ಕೋಮುದ್ವೇಷ ಬಿತ್ತಲು ಶ್ರಮಿಸುತ್ತಿದ್ದರು. ಒಡೆದಾಳುವುದರಲ್ಲಿ ನಿಪುಣರಾಗಿದ್ದ ಬ್ರಿಟಿಷರು ಇದಕ್ಕೆಲ್ಲಾ ಗಾಳಿ ಹಾಕಿದರು.

ಪ್ರತ್ಯೇಕತೆ ಬೀಜ ಬಿತ್ತಿ ಒಡಕು ತಂದರು. ಪರಿಣಾಮವಾಗಿ ವಿಭಜನೆ ಸಂದರ್ಭದಲ್ಲಿ ಲಕ್ಷಾಂತರ ಜನರ ಕಗ್ಗೊಲೆಗಳು ನಡೆದು, ಸ್ವಾತಂತ್ರ್ಯವೂ ಸಂಭ್ರಮದ ಬದಲು ಸೂತಕವಾಯಿತು.

ನೌಕಾಲಿ, ಕಲ್ಕತ್ತಾ, ದೆಹಲಿ, ಪಂಜಾಬ ಪ್ರಾಂತ್ಯಗಳಲ್ಲಿ ಮತಾಂಧರ ದ್ವೆಷಾಗ್ನಿಗೆ ಸುಮಾರು 1ಮಿಲಿಯನ್ ಜನರು ಪ್ರಾಣ ಕಳೆದುಕೊಂಡರು. ಆಗಲೇ ಏಕಾಂಗಿಯಾಗಿದ್ದ ಗಾಂಧಿ  ದೇಶ ವಿಭಜನೆ ತಪ್ಪಿಸಲಾಗದೇ, ಕಣ್ಣೆದುರಿನ ರಕ್ತಪಾತಕ್ಕೆ, ಅಮಾನವೀಯ ಕೃತ್ಯಗಳಿಗೆ ಜರ್ಜರಿತಗೊಂಡಿದ್ದರು. ಸತ್ಯವೇ ದೇವರೆಂದುಕೊಂಡಿದ್ದ ಗಾಂಧಿ, ದೇವರ ಮೇಲೆ ವಿಶ್ವಾಸವಿರಿಸಿ ಉಪವಾಸ, ಶಾಂತಿ ಸಭೆಗಳ ಮೂಲಕ ಧಂಗೆಗಳನ್ನು ನಂದಿಸಲು ಹೋರಾಡುತ್ತಲೇ ಇದ್ದ. ಆವರೆಗೆ ಆತನ ಆಜ್ಞೆಗಾಗಿ ಕಾಯುತ್ತಿದ್ದ ನೆಹರು, ಪಟೇಲ್ ಮತ್ತೀತರ ಅನುಯಾಯಿಗಳಿಗೆ ಈ ಹಂತದಲ್ಲಿ ಗಾಂಧಿಯ ಸಲಹೆಗಳು ಮುದುಕನೊಬ್ಬನ ಬಡಬಡಿಕೆಯಂತೆ ಕಂಡವು.

ಅಧಿಕಾರದ ಕನಸು ಅವರನ್ನು ಗಾಂಧಿ ತತ್ವಗಳಿಂದ ವಿಮುಖರನ್ನಾಗಿಸಿತ್ತು. ಯಾವ ಕಾಂಗ್ರೆಸ್ ಗೆ ಗಾಂಧಿ ಚೈತನ್ಯ ತುಂಬಿ ಜನಾಂದೋಲನ ಮಾಡಿದ್ದನೋ, ಆ ಕಾಂಗ್ರೆಸ್ ಗೂ ಗಾಂಧಿ ಬೇಡವಾಗಿದ್ದ. ಗಾಂಧಿ ಅಕ್ಷರಶಃ ಒಬ್ಬಂಟಿಯಾಗಿದ್ದ.

ಕೋಮುದ್ವೇಷದ ಬೆಂಕಿಯಲ್ಲಿ ಗಾಂಧಿ ಆಶಯಗಳನ್ನು ಸುಟ್ಟು ಹಾಕಿದರೂ ಒಬ್ಬಂಟಿಯಾಗಿ ಗಾಂಧಿ ಹೋರಾಡುತ್ತಲೇ ಇದ್ದ. ಆತನ ಉಪಸ್ಥಿತಿ ಇದ್ದ ಜಾಗದಲ್ಲಿ ಗಲಭೆಗಳು ತಹಬದಿಗೆ ಬರುತ್ತಿದ್ದವು. ಜನ ಸಹಬಾಳ್ವೆ ಮಾಡುವುದಾಗಿ ಪ್ರತಿಜ್ಞೆ ಮಾಡುತ್ತಿದ್ದರು. ಇದು ಕೋಮುವಾದಿ ಕ್ರಿಮಿಗಳಿಗೆ ಅಸಹನೆ ಮೂಡಿಸಿತು. ಪಾಕಿಸ್ತಾನದಿಂದ ಲಕ್ಷಾಂತರ ಹಿಂದೂಗಳು ಓಡಿ ಬಂದು ನಿರಾಶ್ರಿತರಾಗಿದ್ದಕ್ಕೆ, ಕಗ್ಗೊಲೆಯಾಗಿದ್ದಕ್ಕೆ ಗಾಂಧಿಯೇ ಕಾರಣ ಎಂದು ಅಪಪ್ರಚಾರ ನಡೆದವು.

ಶ್ರೇಷ್ಠರು ತಮ್ಮ ಅಧಿಕಾರಕ್ಕೆ, ಸಿದ್ಧಾಂತಕ್ಕೆ ಅಡ್ಡವಾಗಿದ್ದ 79 ವರ್ಷದ ಬಡಕಲು ಮುದುಕನನ್ನು ಇಲ್ಲವಾಗಿಸಲು ಆಗಲೇ ಐದಾರು ಬಾರಿ ಷಡ್ಯಂತ್ರಗಳನ್ನು ಮಾಡುತ್ತಲೇ ಇದ್ದರು. ಅಧಿಕಾರ ಕಳೆದುಕೊಂಡು ಹತಾಶೆಯಲ್ಲಿದ್ದ ಅಲ್ವಾರ್ ನಂತಹ ಕೇಲವು ಸಂಸ್ಥಾನಿಕರು ಸೇಡು ತಿರಿಸಿಕೊಳ್ಳುವ ತವಕದಲ್ಲಿದ್ದರು. ಊರು-ಕೇರಿಗಳ ನಡುವಿನ ಅಂತರ ತಗ್ಗಿಸಿ, ಅಂತರ್ಜಾತಿ ಮದುವೆಗಳಗೆ ಮಾತ್ರ ನಾನು ಬರೋದು ಎನ್ನುತ್ತಿದ್ದ ಗಾಂಧಿಯ ಪರಿವರ್ತನೆಯು ‘ಶ್ರೇಷ್ಠ’ರನ್ನು ದಿಗಿಲುಗೊಳಿಸಿತ್ತು.

ಗಾಂಧಿ ಶೋಧಿಸಿ ಬಳಸಿದ ಅಹಿಂಸೆ, ಅಸಹಕಾರ, ಸತ್ಯಾಗ್ರಹಗಳಿಗೆ ಬ್ರಿಟಿಷ್‍ರು ಮಣಿಯುವವರೆಗೆ ಗಾಂಧಿ ಎಲ್ಲರ ನಾಯಕರಾಗಿದ್ದರು. ಸ್ವಾತಂತ್ರ್ಯ ಸಿಗುವುದು ಖಾತ್ರಿಯಾಗುತ್ತಿದ್ದಂತೆ ಗಾಂಧಿ 1947ರ ಜನೇವರಿಯಿಂದಲೇ ರಾಜಕೀಯವಾಗಿ ಏಕಾಂಗಿಯಾಗಿದ್ದ.

ಈ ಎಲ್ಲ ಕಾರಣಗಳನ್ನು ಮರೆ ಮಾಡಿ, ಗಾಂಧಿ ದೇಶ ವಿಭಜಕ, ಮುಸ್ಲಿಂ ಪಕ್ಷಪಾತಿ ಎಂಬ ಸುಳ್ಳು ಕಾರಣಗಳನ್ನು ಮುಂದು ಮಾಡಲಾಯಿತು. ಸಂಸ್ಥಾನವೊಂದು ಗಾಂಧಿ ನಿರ್ಮೂಲನೆ ಅಭಿಯಾನಕ್ಕೆ ಸಕಲ ನೆರವು ನೀಡಿತು. ೧೯೪೮ರ ಜನೇವರಿ ೩೦ರಂದು ಬಿರ್ಲಾ ಭವನದಲ್ಲಿ ಪ್ರಾರ್ಥನಾ ಸಭೆಗೆ ಆಗಮಿಸುತ್ತಿದ್ದ 79ವರ್ಷದ ಕೃಶ ಕಾಯದ ವಯೋವೃದ್ದನ ಮೇಲೆ ನಾಥುರಾಮ್ ಗೋಡ್ಸೆ ಗುಂಡು ಹಾರಿಸಿದ. ಅದು ಗಾಂಧಿ ಎಂಬ ಬೆಳಕಿಗೆ ತಾಕಿ ಅಂಧಕಾರ ಆವರಿಸಿತು. ಸತ್ಯದ ಮೂರ್ತರೂಪವಾಗಿದ್ದ ಗಾಂಧಿ ಇಲ್ಲವಾಗಿದ್ದು ಕೋಮುವಾದಿಗಳ ಜತೆಗೆ ನವಭಾರತದ ಪ್ರಭುಗಳಿಗೂ ಖುಷಿಯಾಯಿತು. ಗಾಂಧಿ ಕನಸಿನ ಸರ್ವೋದಯ, ರಾಮರಾಜ್ಯ ಕೊನೆ ಉಸಿರೆಳೆದವು.

ಗೋಡ್ಸೆ ಸಂತತಿಗೆ ಇನ್ನೂ ತೃಪ್ತಿಯಾಗಿಲ್ಲ. ಆಗಾಗ, ಅಲ್ಲಲ್ಲಿ ಮರುಹುಟ್ಟು ಪಡೆದು ಧುತ್ತೆಂದು ಎದುರುಗೊಳ್ಳುವ ಗಾಂಧಿಯ ಭಯ ಈಗಲೂ ಕಾಡುತ್ತಿದೆ. ಕಸ ಎತ್ತುವುದಕ್ಕೆ ಮಾತ್ರ ಆತನ ದೃಷ್ಟಿ (ಕನ್ನಡಕವನ್ನು)ಯನ್ನು ಸೀಮಿತಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಅರೆಬೆಂಧ ಭಕ್ತವೃಂದವು ಸಾಮಾಜಿಕ ಜಾಲತಾಣಗಳ ಮೂಲಕ ಗಾಂಧಿ ಎಂಬ ಶ್ರೇಷ್ಠ ಹಿಂದೂವೊಬ್ಬನನ್ನು ಖಳನಾಯಕನ್ನಾಗಿ ಹಾಗೂ ಹೇಡಿಯೊಬ್ಬನನ್ನು ‘ವೀರ’ನನ್ನಾಗಿ  ಬಿಂಬಿಸಲು ಅವಿರತವಾಗಿ ಸುಳ್ಳು ಹರಡುತ್ತಿದೆ..

ಯಾರ ತೆಕ್ಕೆಗೂ ದಕ್ಕದ ನಿರ್ಭಿತ ಬಾಪುವಿಗೆ ಇಂತಹ ಕೃತ್ಯಗಳಿಂದ ಯಾವ ನಷ್ಠವೂ ಇಲ್ಲ. ಆದರೆ ಹೀಗೆ ಮುಂದುವರೆದರೇ ದೇಶಕ್ಕಂತೂ ಭವಿಷ್ಯವಿದೆ ಎನಿಸುವುದಿಲ್ಲ.

-ಬಿ.ಎ.ನಾಡಗೌಡ, ಇಲಕಲ್ಲ

Don`t copy text!