ಹಾರೈಕೆ
ಯಾರ ಸೋಲೋ
ಯಾರ ಗೆಲುವೋ
ಯಾರ ನೋವೋ
ಯಾರ ನಲಿವೋ
ಬದುಕಿಗಾಗಲಿ ವಿಜಯವು
ಯಾರ ಸಾವೋ
ಯಾರ ಹುಟ್ಟೋ
ಯಾರ ಕೊಲೆಯೋ
ಯಾರ ಹಬ್ಬವೋ
ಬಾಳಿಗಿರಲಿ ಸಕಲ ಭಾಗ್ಯವು
ಕೊಡಲಿ ಗರಗಸ
ಮಚ್ಚು ಖಡ್ಗವು
ಹಸಿರನಳಿಯಲು
ಉಸಿರ ತೆಗೆಯಲು
ಬೇಡವೆಂಬುದು ತಿಳಿಯಲಿ
ಅಳೆದು ತೂಗುವ
ಸೇರು ತಕ್ಕಡಿ
ಒಳಿತು ಕೆಡುಕಿನ
ಸೈರಣೆಯ ನೀಡಲಿ
ಎಬ್ಬಿ ತೆಗೆಯುವ
ಹಾರಿ ಗುದ್ದಲಿ
ಅಗೆದು ಹಾಕಲಿ
ಕೊಳೆ ಕಸವನು
ಮುಂದೆ ತಳ್ಳಲಿ
ಸಿಲುಕಿದ ಬಡ ಬಾಳನು
ಗಿಡಮರದ ಬೆಳೆಯು
ಜೀವಪ್ರೀತಿ ಸಿರಿಯು
ನೆಲದ ತುಂಬಾ ಹಬ್ಬಲಿ
ಸೊಕ್ಕು ಬಿಂಕದ, ಕಾಕು ಬುದ್ಧಿಯ
ಹಲವು ವೈರಗಳಳಿಯಲಿ
ಭೇದವಳಿದು,ಎಲ್ಲರನು ಸೆಳೆದು
ಬನ್ನಿಬನ್ನಿರೆಂದು ಕರೆಯುತಲಿ ಬಾಳು
ನೂರು ಸೀಮೆಯ ಮೀರಲಿ
ಹಬ್ಬವಾಗಲಿ ‘ವಿಜಯ ದಶಮಿ’ಯು
ಸೋಲು ಶಬ್ದವು ಅಳಿಯಲಿ.
-ಕೆ.ಶಶಿಕಾಂತ
ಲಿಂಗಸೂಗೂರ.
ಅರ್ಥಪೂರ್ಣ ಕವಿತೆ ಸರ್. ಆಯುಧಗಳು ಬದುಕನ್ನು ನೀಡಬೇಕೇ ಹೊರತು ಅಂತ್ಯಗೊಳಿಸಬಾರದು. ಬುದ್ಧಿ ಹಸನಾಗಿ ಸಂಬಂಧ ನೂರು ಸೀಮೆಯ ಮೀರಿ, ವಿಜಯ ದಶಮಿ ದಿನ ಸೋಲು ಮೂಲೆ ಗುಂಪಾಗಲಿ ಎಂಬ ಹಾರೈಕೆಯ ನುಡಿಗಳು ಶುಭಾಶಯಗಳಾಗಿ ಓದುಗನನ್ನು ತಲುಪಿವೆ ಸರ್. ಅಭಿನಂದನೆಗಳು ರಿ