e- ಸುದ್ದಿ,ಮಾನ್ವಿ
‘ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ 208-19, 2019-20ನೇ ಸಾಲಿನ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿಯಲ್ಲಿ ಭ್ರಷ್ಟಾಚಾರ ಎಸಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಬಸವರಾಜ ನಕ್ಕುಂದಿ ಒತ್ತಾಯಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,’ ತಾಲ್ಲೂಕಿನ ಒಟ್ಟು 17 ಗ್ರಾಮ ಪಂಚಾಯಿತಿ ಗಳಲ್ಲಿ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳ ಸಾಮಾಗ್ರಿ ವೆಚ್ಚದ ಬಿಲ್ (ಬಿಒಸಿ) ಪಾವತಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ರಾಜಧನ ವಸೂಲಿ ಮಾಡಬೇಕು ಎಂಬ ಸರ್ಕಾರದ ನಿಯಮವಿದೆ.ಆದರೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಹಾಯಕರು, ಸಹಾಯಕ ನಿರ್ದೇಶಕರು, ತಾಲ್ಲೂಕು ಸಂಯೋಜಕರು ವೆಂಡರ್ ಗಳ ಜೊತೆಗೆ ಶಾಮೀಲಾಗಿ ರಾಜಧನ ವಸೂಲಿ ಮಾಡದೆ ಸಂಪುರ್ಣವಾಗಿ ಬಿಒಸಿ ಬಿಲ್ ಪಾವತಿಸುವ ಮೂಲಕ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಎಸಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ’ ಎಂದು ಆರೋಪಿಸಿದರು.
‘ ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಾವಳಿ 1994ರ ತಿದ್ದುಪಡಿ2016 ಮತ್ತು 2017ರ ನಿಯಮದ ಪ್ರಕಾರ ಕಾಮಗಾರಿಗಳಿಗೆ ಬಳಸಿದ ಖನಿಜದ ಪ್ರಮಾಣಕ್ಕೆ ಪ್ರತಿ ಟನ್ ಗೆ ರಾಜಧನ ಪಾವತಿ ಮಾಡಬೇಕು. ರಾಜಧನ ಪಾವತಿಸದಿದ್ದರೆ 5ಪಟ್ಟು ದಂಡವನ್ನು ಜಿಲ್ಲಾ ಖಜಾಬೆಗೆ ನೆರವಾಗಿ ಜಮಾ ಮಾಡಬೇಕಾದ ಸರ್ಕಾರದ ನಿಯಮವನ್ನೂ ಅಧಿಕಾರಗಳು ಉಲ್ಲಂಘಿಸಿದ್ದಾರೆ’ ಎಂದು ಬಸವರಾಜ ನಕ್ಕುಂದಿ ದೂರಿದರು.
‘ ಸದರಿ ವಿಷಯದ ಕುರಿತು ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಎರಡು ಬಾರಿ ಪತ್ರ ಬರೆದಿದ್ದಾರೆ. ಆದರೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಈ ಅವ್ಯವಹಾರದ ಬಗ್ಗೆ ಪರಿಶೀಲನೆ ನಡೆಸಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ವರದಿ ಸಲ್ಲಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಕುರಿತು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಯವರು ಒಂದು ವಾರದ ಒಳಗೆ ವರದಿ ಸಲ್ಲಿಸದಿದ್ದರೆ, ಅವರ ವಿರುದ್ಧ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು’ ಎಂದು ಅವರು ಎಚ್ಚರಿಸಿದರು.
ದಸಂಸ ತಾಲ್ಲೂಕು ಘಟಕದ ಅಧ್ಯಕ್ಷ ಯೇಸು ಅಮರೇಶ್ವರ ಕ್ಯಾಂಪ್, ಉಪಾಧ್ಯಕ್ಷ ಸಿದ್ದಪ್ಪ ಅಮರಾವತಿ, ಪ್ರಧಾನ ಕಾರ್ಯದರ್ಶಿ ಶಿವಪ್ಪ ಸಾಧು, ಕಾರ್ಯದರ್ಶಿ ಶಿವಾನಂದ ಸಾದಾಪುರ, ಭೀಮೇಶ ಖಾನಾಪುರ, ಸಂದೀಪ ಕುರ್ಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.