ಆರದ ದೀಪ
ಹಚ್ಚುತ್ತೇನೆ ಹಚ್ಚುತ್ತೇನೆ ದೀಪ ಆರದ ದೀಪ
ಎಂದಿಗೂ ಆರದ ಬುದ್ಧ, ಬಸವರ ದೀಪ
ಕತ್ತಲಲ್ಲಿ ಕಳೆದ ಕೊಳೆತ ಜೀವನಕ್ಕಾಗಿ
ಧನಿಕರ ಉಸಿರಿನಲಿ ಸತ್ತ ಜೀವಕ್ಕಾಗಿ
ಕಪಟ ದೇವರ ದೇವದಾಸಿಯರಿಗಾಗಿ
ಜೀತವಿರುವ ಅರೆ ಜೀವಿಗಳಿಗಾಗಿ
ಹಚ್ಚುತ್ತೇನೆ ಹಚ್ಚುತ್ತೇನೆ ಆರದ ದೀಪ
ಶತಮಾನದ ಮೌಢ್ಯದಲಿ ಮಡಿದವರಿಗೆ
ಧರ್ಮಾಂಧರ ದರ್ಪದ ದೌಲತ್ತಿನ ಕೊನೆಗೆ
ನಿತ್ಯ ನರಕದಲಿ ಬೆತ್ತಲೆಯಾಗುವ ದೇಹಗಳಿಗೆ
ನಿತ್ಯ ಸುಮಂಗಲೆಯರ ನಗುವಿಗಾಗೆ
ಹಚ್ಚುತ್ತೇನೆ ಹಚ್ಚುತ್ತೇನೆ ಆದರದ ದೀಪ
ಹೆಸರಿಲ್ಲದ ಅನಾಥ ಮಕ್ಕಳಿಗಾಗಿ ದೀಪ
ನಂದಿಸುವೆ ಹಸಿದ ಒಡಲ ಕೋಪ ತಾಪ
ಉರಿಸಿಬಿಡುವೆ ಅಜ್ಞಾನದ ಜಪ-ತಪ
ನರಹೊಸೆದು ನೆತ್ತರದಲಿ ಹಚ್ಚುವೆ ದೀಪ
ಹಚ್ಚುತ್ತೇನೆ ಹಚ್ಚುತ್ತೇನೆ ಆರದ ದೀಪ
ಬೀದಿ ಬದಿ ಬೆತ್ತಲೆಯಾದವರಿಗಾಗಿ
ಹರಿದ ಬಟ್ಟೆಯ ಜೀವಕೆ ತೇಪೆಗಾಗಿ
ಜಾತಿ-ಧರ್ಮ ಅಂಧಕರ ಅಳಿವಿಗಾಗಿ
ಭೀಮ,ಗೌರಿ, ಕಲ್ಬುರ್ಗಿ,ಪನ್ಸಾರೆ ಕನಸಿಗಾಗಿ
ಹಚ್ಚುತ್ತೇನೆ ಹಚ್ಚುತ್ತೇನೆ ಆರದ ದೀಪ
ನನ್ನೊಲುಮೆಯ ನನ್ನವರಿಗಾಗಿ
ಸನಾತನಿಗಳ ದೌರ್ಜನ್ಯ ಕೊನೆಗಾಗಿ
ಲಕ್ಷ ಲಕ್ಷ ನರಳುವವರ ನಗುವಿಗಾಗಿ
ಸೂಫಿ-ಸಂತರ,ಶರಣರ ಆಶಯಕ್ಕಾಗಿ
ಹಚ್ಚುತ್ತೇನೆ ಹಚ್ಚುತ್ತೇನೆ ಆರದ ದೀಪ
–ರವೀಂದ್ರ. ಆರ್. ಪಟ್ಟಣ.
ಮುಳಗುಂದ —– ರಾಮದುರ್ಗ.