ಬಸವನೆಂಬ ಪರುಷ ನೋಡಾ
ಬಸವನೆಂಬ
ಪರುಷ ಮುಟ್ಟಲು
ಕನ್ನಡ ಹೊನ್ನಾಯಿತು ನೋಡಾ.
ಬಸವನೆಂಬ
ಮಂತ್ರ ಹುಟ್ಟಲು
ಕನ್ನಡ ಧರ್ಮವಾಯಿತು ನೋಡಾ.
ಬಸವನೆಂಬ
ಗುರು ಬರಲು
ಬದುಕು ಕಾಯಕವಾಯಿತು ನೋಡಾ.
ಬಸವನೆಂಬ
ಲಿಂಗ ನೋಡಲು
ಜಗವೆಲ್ಲ ವಶವಾಯಿತು ನೋಡಾ.
ಬಸವನೆಂಬ
ಜಂಗಮ ಕಾಣಲು
ಲೋಕ ದಾಸೋಹವಾಯಿತು ನೋಡಾ.
ಬಸವನೆಂಬ
ಭಕ್ತ ಕೇಳಲು
ಲಿಂಗ ಜಂಗಮವಾಯಿತು ನೋಡಾ
ಬಸವನೆಂಬ
ಶರಣ ಹೇಳಲು
ಜಂಗಮ ಲಿಂಗವಾಯಿತು ನೋಡಾ.
ಬಸವನೆಂಬ
ಪ್ರಜ್ಞೆ ನುಡಿಯಲು
ದಯೆ ಮಾತ್ರ ಅರಿಯಿತು ನೋಡಾ.
ಬಸವನೆಂಬ
ತತ್ತ್ವ ಹೊಳೆಯಲು
ಕನ್ನಡದ ಸತ್ವವಾಯಿತು ನೋಡಾ.
–ರಂಜಾನ್ ದರ್ಗಾ