ಕಿತ್ತೂರು ಇತಿಹಾಸ -ಭಾಗ 7
ಕಿತ್ತೂರು ಇತಿಹಾಸ ಇತಿಹಾಸದ ಮರೆತ ಪುಟಗಳು.
ಕಾಕತಿ ದೇಸಾಯಿಯವರ ಮನೆಯಲ್ಲಿ ಚೆನ್ನಮ್ಮ ಹುಟ್ಟಿದ್ದು 14 ನವೆಂಬರ್ 1778ರಲ್ಲಿ ಬೆಳಗಾವಿಯಿಂದ ಉತ್ತರಕ್ಕೆ ಸುಮಾರು 6 ಕಿ.ಮಿ. ದೂರದಲ್ಲಿರುವ ಕಾಕತಿ ಅವಳ ಹುಟ್ಟೂರು. ತಂದೆ ಕಾಕತಿಯ ದೇಸಾಯಿ ಧೂಳಪ್ಪಗೌಡರು ತಾಯಿ ಪದ್ಮಾವತಿ . ಚನ್ನಮ್ಮ ಎಳೆ ವಯಸ್ಸಿನಲ್ಲಿಯೆ ಕುದುರೆ ಸವಾರಿ ಹಾಗು ಬಿಲ್ಲುವಿದ್ಯೆಗಳನ್ನು ಕರಗತ ಮಾಡಿಕೊಂಡಿದ್ದಳು. ಇಷ್ಟಲಿಂಗ ಪೂಜೆ ಶರಣರ ಜೀವನ ಚರಿತ್ರೆ ಅದರಲ್ಲೂ ಅಕ್ಕ ಮಹಾದೇವಿಯವರ ಜೀವನ ತುಂಬಾ ಪ್ರಭಾವ ಬೀರಿತ್ತು. ಕಾಕತಿಯ ಚಾಲುಕ್ಯರ ಪಾಳೇಯಗಾರರೆಂದು ಇವರು ಕೂಡ ಮೂಲ ಸಗರ ನಾಡಿನ ಕಡೆಯವರೆಂದು ಇತಿಹಾಸದ ಮೂಲಕ ತಿಳಿದು ಬರುತ್ತದೆ . ಕಾಕತಿಯಲ್ಲಿನ ವಾಡೆ ಮತ್ತು ಕೋಟೆಯಲ್ಲಿ ಜೈನರ ವಿಗ್ರಹಗಳು ದೊರೆಯುವ ಕಾರಣ ಧೂಳಪ್ಪ ಗೌಡ ದೇಸಾಯಿ ಮನೆತನದ ಮೂಲ ಪುರಷರು ಜೈನರಿರಬಹುದೆಂದು ಕಾಲಾಂತರದಲ್ಲಿ ಅವರು ಲಿಂಗಾಯತರಾದರೆಂದು ತಿಳಿದು ಬರುತ್ತದೆ. ಇದಕ್ಕೆ ಪುಷ್ಟಿಯಾಗಿ ಚೆನ್ನಮ್ಮನವರ ತಾಯಿಯವರ ಹೆಸರು ಪದ್ಮಾವತಿ .ಕಿತ್ತೂರು ಮತ್ತು ಕಾಕತಿಯ ದೇಸಾಯಿವರು ದೂರದ ನೆಂಟರು ಮತ್ತು ಬಂಧುಗಳು .
ಕನ್ನಡ ನಾಡಿನ ವೀರಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವವಳು, ಸ್ವಾತಂತ್ರಸ್ವಾಭಿಮಾನಗಳ ಸಾಕಾರಮೂರ್ತಿ ಕಿತ್ತೂರಿನ ರಾಣಿ. ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ. ತನ್ನ ಪುಟ್ಟ ರಾಜ್ಯದ ಸ್ವಾತಂತ್ರ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಸೆಟೆದು ನಿಂತು ನಡೆಸಿದ ಹೋರಾಟ, ಅಲ್ಲಿ ತೋರಿಸಿದ ಧೈರ್ಯ, ಸಾಹಸ, ಕೆಚ್ಚುಗಳು ಚೆನ್ನಮ್ಮನನ್ನು ಅಜರಾಮರವಾದ ಕೀರ್ತಿ ಶಿಖರಕ್ಕೇರಿಸಿವೆ. ಚೆನ್ನಮ್ಮನಿಂದ ಕಿತ್ತೂರು ಪ್ರಸಿದ್ಧವಾಗಿದೆ.
ಚಂಡಿಯೋ ಕಾಳಿಯೋ
ಚಾಮುಂಡಿಯೋ ಇವಳು
ಖಂಡಿತ ಮಾನವಳಿವಳಲ್ಲ
ಪುಂಡ ರಕ್ಕಸರನ್ನು
ರುಂಡ ಚೆಂಡಾಡುವಳು
ಎಂದು ಕಿತ್ತೂರಿನ ವೀರಯುದ್ಧದ ಸನ್ನಿವೇಶವನ್ನು ಕವಿಯೊಬ್ಬ ಸ್ಮರಿಸಿದ್ದಾರೆ .1857 ಅಂದರೆ ಸಿಪಾಯಿ ದಂಗೆಯ ಮೊದಲು 33 ವರುಷ ಮೊದಲೇ ಬ್ರಿಟಿಷರ ವಿರುದ್ಧ ಖಡ್ಗ ಹಿಡಿದು ಹೋರಾಡಿ ಅವರನ್ನು ಸೆದೆ ಬಡೆದ ವೀರ ಮಹಿಳೆಯ ಚರಿತ್ರೆ ಇತಿಹಾಸದ ಪುಲಾಟಗಳಲ್ಲಿ ಸೇರಲೇ ಇಲ್ಲ. ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಭಾರತದ ಮೊದಲ ವೀರ ಮಹಿಳೆ ಎನ್ನುವ ಇತಿಹಾಸಕಾರರು ಕಿತ್ತೂರು ಸಂಸ್ಥಾನದ ಬಹು ದೊಡ್ಡ ಬಂಡಾಯವನ್ನು ಗಣನೆಗೆ ತೆಗೆದುಕೊಳ್ಳದೆ ಇರುವುದು ನಮ್ಮ ದೌರ್ಭಾಗ್ಯ.
ಏನಿದು ಈ ಸಂಚಿಕೆಯಲ್ಲಿ ಒಮ್ಮಿಲೇ ವ್ಯಕ್ತಿಯ ವಿಷಯಗಳು ಭಿತ್ತರಿಸುತ್ತಿದೆಯಲ್ಲ ಎಂದೆನ್ನಬಹುದು. ಕಾರಣ ಭಾರತದ ಇತಿಹಾಸ ಮತ್ತು ಕಿತ್ತೂರಿನ ಇತಿಹಾಸದಲ್ಲಿ ಅನೇಕ ವಿಷಯಗಳು ಸತ್ಯದಿಂದ ಮರೆಮಾಚಿದರೆ ಇನ್ನು ಅನೇಕ ಕಹಿ ಸತ್ಯಗಳು ಜನರಿಗೆ ಪರಿಚಯವಾಗಿಲ್ಲ. ಸುಳ್ಳು ಪ್ರಕ್ಷಿಪ್ತ ವಿಚಾರಗಳನ್ನು ಇತಿಹಾಸಕಾರರು ವೈಭವೀಕರಿಸಿದ್ದಾರೆ .ಅವುಗಳೆಲ್ಲವನ್ನೂ ತಮ್ಮ ಮುಂದೆ ಇಡುವ ಅತ್ಯಂತ ಶಿಸ್ತು ಮತ್ತು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇನೆ, ಕಿತ್ತೂರು ರಾಣಿ ಚೆನ್ನಮ್ಮ ಮಲ್ಲಸರ್ಜ ದೇಸಾಯಿಯ ಎರಡನೆಯ ಅರಸಿ ಮತ್ತು ಕಿತ್ತೂರಿನ ಕಾರ್ಯಭಾರದಲ್ಲಿ ಗಂಡನಿಗೆ ನೆರವಾಗಿ ಕಿತ್ತೂರಿನ ರಾಜ್ಯ ಆಡಳಿತವನ್ನು ಸಧೃಡಗೊಳಿಸಿದಳು.ಕರ್ನಾಟಕದ ಹೆಮ್ಮೆಯ ಮಗಳು ಬ್ರಿಟಿಷರ ಗುಲಾಮಗಿರಿಯ ವಿರುದ್ಧ ಧ್ವನಿ ಎತ್ತಿ ಸಂಸ್ಥಾನದ ಕೆಲ ದ್ರೋಹಿಗಳ ಕುಟಿಲ ಕಾರಸ್ಥಾನಕ್ಕೆ
ಬಲಿಯಾದಳು ವೀರ ಮಾತೆ ಕಿತ್ತೂರು ಸಿಂಹಿಣಿ ರಾಣಿ ಚೆನ್ನಮಾಜಿ
.ಮಲ್ಲಸರ್ಜ ದೊರೆ (1782-1816)
ಕಿತ್ತೂರು ರಾಜ್ಯರಲ್ಲಿ ಮಲ್ಲಸರ್ಜನ ಆಳ್ವಿಕೆ ಅತ್ಯಂತ ವೈಭವಪೂರ್ಣ ಹಾಗು ಅನೇಕ ಮಹತ್ವದ ಘಟನೆಗಳಿಂದ ಒಡಗೂಡಿದ ಕಾಲ.ಅದು ಕಿತ್ತೂರಿನ ಇತಿಹಾಸದಲ್ಲಿ ಅತ್ಯಂತ ಕಷ್ಟದ ಕಾಲವೂ ಹೌದು.ಕಿತ್ತೂರು ರಾಜ್ಯವನ್ನು ಆತನು 34 ವರ್ಷಗಳ ಕಾಲ ಆಳಿದನು.ಮಲ್ಲಸರ್ಜ ದೊರೆ ಕಿತ್ತೂರಿನ ರಾಜರಲ್ಲಿ ಅತ್ಯಂತ ಪ್ರಖ್ಯಾತ ಹಾಗು ಗೌರವಾನ್ವಿತ ದೊರೆ.ಇತನ ಎರಡನೆಯ ಧರ್ಮ ಪತ್ನಿ ವೀರ ರಾಣಿ ಚೆನ್ನಮ್ಮ.ಗಂಡನಿಗೆ ಆದರ್ಶ ಪತ್ನಿಯಾಗಿ,ರಾಜ್ಯ ಭಾರದ ನೊಗವನ್ನು ಪತಿಯೊಂದಿಗೆ ತಾನೂ ಎಳೆದು ಕಿತ್ತೂರು ಇತಿಹಾಸ ಅಜರಾಮರಗೊಳಿಸಿದ ಕೀರ್ತಿ ಈ ಮಹಾ ತಾಯಿಗೆ ಸಲ್ಲುತ್ತದೆ.ಮಲ್ಲ ಸರ್ಜ ದೊರೆಯನ್ನು ಪೇಶ್ವೇ ದಂಡನಾಯಕ ಬಾಜಿರಾಯ ಮೋಸದಿಂದ ಬಂಧಿಸಿ ಮೂರು ವರುಷ ಪುಣೆಯಲ್ಲಿಟ್ಟಾಗ ರಾಜ್ಯ ಭಾರದ ನೊಗ ಹೋತ್ತ ಚೆನ್ನಮ್ಮ ಕಿತ್ತೂರು ರಾಜ್ಯ ರಕ್ಷಕಳಾಗಿ ನಿಂತಳು.ಮಲ್ಲಸರ್ಜನನ್ನು ಟೀಪು ಬಂಧಿಸಿ ಕಿರುಕಳ ನೀಡಿ ಮತ್ತೆ ಬಿಡುಗಡೆ ಮಾಡಿದನು .1796 ರಲ್ಲಿ ಕಿತ್ತೂರಿನ ರಾಜ್ಯಭಾರ ಹೊತ್ತ ಮಲ್ಲಸರ್ಜನೊಂದಿಗೆ ಚೆನ್ನಮ್ಮಳ ವಿವಾಹ ನಡೆಯಿತು. ಕಿರಿಯ ವಯಸ್ಸಿನಲ್ಲಿಯೇ ಕಿತ್ತೂರಿನ ರಾಜ್ಯಭಾರ ಹೊತ್ತ ಮಲ್ಲಸರ್ಜನು ನಿಜಕ್ಕೂ ಶೂರ ಧೀರನಾಗಿದ್ದನು. ಮೊದಲ ರಾಣಿ ರುದ್ರವ್ವ ಚೆನ್ನಮ್ಮಳನ್ನು ಮಲ್ಲಸರ್ಜನ ಕಿರಿಯ ರಾಣಿಯಾಗಿ ತಂದಳು. ಪುಣೆಯಲ್ಲಿ ಬಂಧನಕ್ಕೊಳಗಾದ ಮಲ್ಲಸರ್ಜನ ಆರೋಗ್ಯವು ಅತ್ಯಂತ ವಿಷಮಗೊಂಡಾಗ ಅವರನ್ನು ಮತ್ತೆ ಕಿತ್ತೂರಿನ ಸಂಸ್ಥಾನಕ್ಕೆ ತರುವಾಗ ಮಧ್ಯದ ಅರಭಾವಿಯಲ್ಲಿ 1816 ರಲ್ಲಿ ಮೃತನಾಗುತ್ತಾನೆ.
ಮಲ್ಲಸರ್ಜ ದೊರೆಯ ಸಮಾಧಿ ಸ್ಥಳ ವಣ್ಣೂರೋ, ಕಿತ್ತೂರಿನ ಕಲ್ಮಠವೋ
ಚನ್ನಮ್ಮನ ಕಿತ್ತೂರು ದೇಶದಲ್ಲಿ ಪ್ರಪ್ರಥಮವಾಗಿ ಸ್ವಾತಂತ್ರ್ಯ ಕಹಳೆ ಮೊಳಗಿಸಿದ ಕಿತ್ತೂರು ಸಂಸ್ಥಾನ, ಇತಿಹಾಸವನ್ನು .ದೇಶದಲ್ಲಿ ಪ್ರಪ್ರಥಮವಾಗಿ ಸ್ವಾತಂತ್ರ್ಯ ಕಹಳೆ ಮೊಳಗಿಸಿದ ಕಿತ್ತೂರು ಸಂಸ್ಥಾನ, ಇತಿಹಾಸವನ್ನು ನಿರ್ದಿಷ್ಟವಾಗಿ ಹೇಳಲು ಇಂದಿಗೂ ಸಾಧ್ಯವಾಗದಿರುವುದು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ. ಕಿತ್ತೂರು ದೊರೆ ಮಲ್ಲಸರ್ಜನ ಸಮಾಧಿ ಸ್ಥಳದ ಕುರಿತು ಇನ್ನೂ ಸ್ಪಷ್ಟತೆ ಇಲ್ಲದಿರುವುದು ಇದಕ್ಕೊಂದು ಉತ್ತಮ ನಿದರ್ಶನ.
‘ರಾಣಿ ಚನ್ನಮ್ಮಾಜಿಯ ಪತಿ ಮಲ್ಲಸರ್ಜ ದೊರೆಯನ್ನು ಮರಾಠರ ಪೇಶ್ವೆಗಳು ಬಂಧಿಸಿ ಜೈಲಿನಲ್ಲಿಟ್ಟಾಗ ಮಾರಣಾಂತಿಕ ಕಾಯಿಲೆ ಕಾಣಿಸಿಕೊಂಡು ಆತನನ್ನು ಪೇಶ್ವೆಗಳು ಬಿಡುಗಡೆ ಮಾಡಿದರು. ಆಗ ಕಿತ್ತೂರಿಗೆ ಆಗಮಿಸಿದ ಮಲ್ಲಸರ್ಜ ರಾಜ ಅರಮನೆಯಲ್ಲೇ ಮೃತನಾದ . ಮೃತ ರಾಜನನ್ನು ರಾಜಮನೆತನದ ಎಲ್ಲರನ್ನೂ ಸಮಾಧಿ ಮಾಡಲಾದ ಕಲ್ಮಠದ ಆವರಣದಲ್ಲಿ ಸಮಾಧಿ ಮಾಡಲಾಯಿತು’ ಎಂದು ಒಂದು ಇತಿಹಾಸ ಹೇಳುತ್ತದೆ.
ಆದರೆ ಇತಿಹಾಸ ಚರಿತ್ರೆಯ ಮತ್ತೊಂದು ದಾಖಲೆ ಮತ್ತು ಮೌಖಿಕ ಹೇಳಿಕೆಯ ಪ್ರಕಾರ ‘ದೊರೆ ಜೈಲಿನಿಂದ ಬಿಡುಗಡೆಯಾಗಿ ಕಿತ್ತೂರಿಗೆ ಬರುವಾಗ ರೋಗ ಉಲ್ಬಣಿಸಿ ದಾರಿ ಮಧ್ಯದ ಅರಬಾವಿ ಮಠದಎದುರಿಗಿರುವ ಪತ್ರಿಯ ಗಿಡದ ಬುಡದಲ್ಲಿ ಮೃತಪಟ್ಟನೆಂದು ಮತ್ತು ಮೃತನಾದ ದೊರೆಯ ಶರೀರವನ್ನು ವಣ್ಣೂರ ಗ್ರಾಮದಲ್ಲಿ ಸಮಾಧಿ ಮಾಡಲಾಯಿತು’ ಎಂದು ವಣ್ಣೂರಿನಲ್ಲಿರುವ ಗುಡಿಯೊಂದನ್ನು ಸಾಕ್ಷ್ಯೀಕರಿಸಿ ಹೇಳಲಾಗುತ್ತದೆ. ಇದನ್ನು ಕಿತ್ತೂರು ಪ್ರಾಧಿಕಾರವು ಒಪ್ಪಿಕೊಂಡಿದೆ . ಇಪ್ಪತ್ತೈದು ವರುಷಗಳಿಂದ ಅರಭಾವಿ ಮತ್ತು ದುರುದುಂಡಿ ಅನೇಕ ವೃದ್ಧರನ್ನು ನಾನು ಸಂಪರ್ಕಿಸಿ ಮಲ್ಲಸರ್ಜ ದೊರೆಯು ಅರಭಾವಿ ಮಠದ ಎದುರು ಇರುವ ಪತ್ರಿಯ ಗಿಡದ ಕೆಳಕ್ಕೆ ಜೀವಬಿಟ್ಟನೆಂದು ಹೇಳುತ್ತಾರೆ ಹಾಗು ಅಲ್ಲಿ ಒಂದು ಪತ್ರಿಯ ಮರವು ಇದೆ ನೋವಿನ ಸಂಗತಿಯೆಂದರೆ ಅಲ್ಲಿ ಒಂದು ಪುಟ್ಟ ಫಲಕವನ್ನು ಹಾಕಲಾಗದ ನಿರಭಿಮಾನಿ ಲಿಂಗಾಯತರು ಅಥವಾ ಬಣಜಿಗ ಸಮಾಜ ಅಂದರೆ ತಪ್ಪಾಗಲಾಗದು.ಮಲ್ಲಸರ್ಜ ದೊರೆಯ ಸಮಾಧಿಯು ಬೈಲುಹೊಂಗಲ ತಾಲೂಕಿನ ವಣ್ಣೂರಿನಲ್ಲಾಯಿತು ಎಂಬುದಕ್ಕೆ ಅನೇಕ ಸಾಕ್ಷಿ ಪುರಾವೆಗಳಿವೆ .ಅಲ್ಲಿ ಮಲ್ಲಸರ್ಜ ದೇಸಾಯಿಯ ಸಮಾಧಿ ಇದೆ ,ಮತ್ತು ಅಲ್ಲಿನ ದೇಸಾಯಿಯ ಮನೆತನದವರ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಚೆನ್ನಮ್ಮ ಮತ್ತು ಗಂಡು ಮಕ್ಕಳಿಗೆ ಮಲ್ಲಸರ್ಜ ಶಿವಲಿಂಗ ಸರ್ಜ ಮುಂತಾದ ಹೆಸರಿನಿಂದ ಈಗಲೂ ಕರೆಯುತ್ತಾರೆ .
ಇದಕ್ಕೆ ಇನ್ನೊಂದು ಕಾರಣವೆಂದರೆ ಮಲ್ಲಸರ್ಜನ ತಮ್ಮ ನೇಸರಗಿಯ ಪಕ್ಕದ ದೇಶನೂರಿನಲ್ಲಿ ಕಂದಾಯ ಗ್ರಾಮದ ಆಡಳಿತವನ್ನು ನೋಡಿಕೊಳ್ಳುತ್ತಿದ್ದವನು ಮಲ್ಲಸರ್ಜ ದೊರೆಯ ಸಹೋದರ
ಶಿವಲಿಂಗ ಸರ್ಜ ( ಹೆಸರಿನಲ್ಲಿ ಸ್ವಲ್ಪ ಗೊಂದಲ ಇದೆ )
ಇನ್ನೊಂದು ಪ್ರಮುಖ ಕಾರಣವೇನಾದರೆ ಬಾಪು ಶಿವಲಿಂಗ ರುದ್ರ ಸತ್ತಮೇಲೆ ಮೇಕಲಮರಡಿಯ ಗೌಡರ ಮಗ ಶಿವಲಿಂಗಪ್ಪನನ್ನು ದತ್ತುಕ ಪಡೆದದ್ದು ವಣ್ಣೂರಿನ ಹತ್ತಿರವಿರುವ ಗ್ರಾಮವಾಗಿದೆ .
ಮಲ್ಲಸರ್ಜ ದೊರೆಯು ಕಿತ್ತೂರಿನ ಅತ್ಯಂತ ನಿಪುಣ ಶೂರ ದೊರೆಯಾಗಿದ್ದನು. ಮೊದಲನೆಯ ಮಡದಿ ರುದ್ರಮ್ಮ ತಲ್ಲೂರಿನ ದೇಸಾಯಿಯವರ ಮಗಳು, ಮಗ ಶಿವಲಿಂಗ ರುದ್ರ ಸರ್ಜ
ಇವನಿಗೆ ವೀರಮ್ಮ ಮತ್ತು ಜಾನಕಿಬಾಯಿ ಎಂಬ ಇಬ್ಬರು ಹೆಂಡಂದಿರರು. ವೀರಮ್ಮನ ತವರು ಮನೆ ಧಾರವಾಡದ ಯಾಲಕ್ಕಿ ಶೆಟ್ಟರ ಕಾಲೋನಿಯಲ್ಲಿದೆ.ಅಲ್ಲಿನ ಹಪ್ಪಳ ಶೆಟ್ಟರ ಮನೆಯಲ್ಲಿ ಅವಳ ಸಮಾಧಿ ಇದೆ ಕೆಲವು ಮೂಲಗಳ ಅವಳು ಶಿವನಗುತ್ತಿ ಅವರ ತವರು ಎಂತಲೊ ಹೇಳುತ್ತಾರೆ. ಇನ್ನು ಜಾನಕೀ ಭಾಯಿಯನ್ನು ಕುಸುಗಲ್ಲ ಮತ್ತು ಮುಂತಾದ ಪ್ರದೇಶಗಳಿಗೆ ಸ್ಥಳಾಂತರಿಸಿದರು ಕೊನೆಗೆ ಅವಳು ವಿಷಪ್ರಾಷನ ಮಾಡಿದಳೆಂದು ಅಥವಾ ಬ್ರಿಟಿಷರೇ ಅವಳಿಗೆ
ವಿಷ ಹಾಕಿ ಕೊಂದರೆಂದು ಗುಮಾನಿ ಇನ್ನೂ ಮುಂದುವರೆದಿದೆ .
ಕಿತ್ತೂರಿನ ಸಂಸ್ಥಾನದ ಮರೆತ ಅಧ್ಯಾಯ ದೇಶನೂರು
ಮಲ್ಲಸರ್ಜನ ತಮ್ಮ ಶಿವಲಿಂಗ ಸರ್ಜನು ತುಂಬಾ ಸ್ಪುರದ್ರೂಪಿಯೂ ಶೂರನು ಕಂದಾಯ ಗ್ರಾಮವಾದ ಅಂಕಲಗಿ ವಣ್ಣೂರು ಮೆಕಲಮರಡಿ ಮುಂತಾದ ಸುತ್ತಲಿನ ಪ್ರದೇಶಗಳನ್ನು ನೋಡಿಕೊಂಡು ಅಣ್ಣ ಮಲ್ಲಸರ್ಜನಿಗೆ ಸಹಾಯ ಮಾಡುತ್ತಿದ್ದನು . ಅವನೊಮ್ಮೆ ದೂರದ ಕಾಶ್ಮೀರಕ್ಕೆ ಹೋದಾಗ ಅಲ್ಲಿನ ಸುಂದರಿಯೊಬ್ಬಳನ್ನು ವರಸಿ ಮದುವೆಯಾಗಿ ಅವಳಿಗೆ ಲಿಂಗ ದೀಕ್ಷೆ ಕೊಡಲು ದೇಶನೂರಿನಲ್ಲಿ ಶಿವಲಿಂಗಸ್ವಾಮಿಗಳ ವಿರಕ್ತಮಠವನ್ನು ಸ್ಥಾಪಿಸಿದನು .ಮುಸ್ಲಿಮ ಕಾಶ್ಮೀರ್ ಕನ್ಯೆಗೆ ಲಿಂಗ ದೀಕ್ಷೆ ನೀಡಿದ ಜಾತ್ಯತೀತ ರಾಜರು ಕಿತ್ತೂರಿನ ಅರಸರು . ಅಣ್ಣನ ಮರಣದ ನಂತರ ಅವನು ಅತ್ಯಂತ ಅಲ್ಪ ಅವಧಿಯವರೆಗೆ ಕಿತ್ತೂರನ್ನು ನೋಡಿಕೊಂಡರೂ ಸಹಿತ ಅನಾರೋಗ್ಯಕ್ಕೆ ತುತ್ತಾಗಿ ಮರಣಹೊಂದಿದನು. ಕಿತ್ತೂರಿನ ದೊರೆಗಳು ಆಳಿದ ಊರು ದೇಶನೂರು ಆಯಿತು ಎಂಬ ಪ್ರತೀತಿ ಇದೆ.
ಶಿವಲಿಂಗ ರುದ್ರಸರ್ಜ ( 1816 ರಿಂದ 1824 )
ಮಲ್ಲಸರ್ಜರ ನಿಧನದ ನಂತರ ಆತನ ತಮ್ಮನಾದ ಶಿವಲಿಂಗ ಸರ್ಜನು ಅಲ್ಪಾವಧಿಯವರೆಗೆ ಆಡಳಿತ ನಡೆಯಿಸದನೆಂದು ಕೆಲವು ಕಡೆಗೆ ಹೇಳಿದ್ದರೂ ಅದರ ದಾಖಲೆಯಾಗಿಲ್ಲ .ಮುಂದೆ ಮಲ್ಲಸರ್ಜನ ಮಗ ಅಂದರೆ ರುದ್ರಮ್ಮ ಮತ್ತು ಮಲ್ಲಸರ್ಜರ ಮಗ .ಇವನಿಗೆ ಬಾಪೂ ಎಂತಲೂ ವಾಡೆಯಲ್ಲಿ ಕರೆಯುತ್ತಿದ್ದರು , ತಂದೆಯ ಅಕಾಲಿಕ ಮರಣದ ನಂತರ ಕಿತ್ತೂರನ್ನು ಸಮರ್ಥವಾಗಿ ನಡೆಸಲಾಗದ ವ್ಯಸನಿ ಮತ್ತು ವಿಲಾಸಿ ಜೀವನ ನಡೆಸುವದರಿಂದ ಕಿತ್ತೂರಿಗೆ ಅಪಾಯದ ಮುನ್ಸೂಚನೆಗಳು ಕಾಣ ಹತ್ತಿದವು .ಸರದಾರ ಗುರು ಸಿದ್ದಪ್ಪನವರು ಅವರಾದಿ ವೀರಪ್ಪನವರು ರಾಣಿ ಚೆನ್ನಮ್ಮ ಮತ್ತು ರುದ್ರಮ್ಮ ಸೇರಿ ಕಿತ್ತೂರಿನ ಅರಸೊತ್ತಿಗೆಯ ಅನೇಕರ ಮಾತಿಗೆ ಕಿವಿಗೊಡದೆ ತನ್ನ ವಿಲಾಸಿ ಜೀವನದಲ್ಲಿ ಮುಳುಗಿ ಬಿಡುತ್ತಾನೆ..ಇವನಿಗೆ ವೀರಮ್ಮ ಮತ್ತು
ಜಾನಕಿಬಾಯಿ ಎಂಬ ಇಬ್ಬರು ರಾಣಿಯರಿರಿದ್ದರು ಮಕ್ಕಳಾಗಲಿಲ್ಲ .ಮುಂದೆ ಇದೆ ಕೊರಗು ಹೆಚ್ಚಾಗಿ ಕುಡಿತಕ್ಕೆ ಬಲಿಯಾಗಿ ಮರಣ ಹೊಂದುತ್ತಾನೆ.
ಕಿತ್ತೂರು ಸಂಸ್ಥಾನಕ್ಕೆ ಗರಗದ ಮಡಿವಾಳರ ಶಾಪ ಮುಳುವಾಯಿತೆ ??
ಕಿತ್ತೂರಿನಲ್ಲಿ ರಾಜಗುರು ಸಂಸ್ಥಾನ ಮಠವಿದೆ . ಈ ಮಠಕ್ಕೆ ಗರಗದ ಮಡಿವಾಳಪ್ಪನವರುಪೀಠಾಧಿಪತಿಯಾಗಬೇಕೆಂದು ಅಭಿಲಾಷೆಯನ್ನು ಹೊಂದಿದ್ದರು .ಆದರೆ ಬಾಲ್ಯದಲ್ಲಿ ಶಿವಲಿಂಗ ರುದ್ರ ಸರ್ಜ ಮತ್ತು ಮಡಿವಾಳಪ್ಪನವರು ಕೂಡಿ ಆಡಿ ಬೆಳೆದವರು . ಇವರನ್ನು ರಾಜಗುರು ಮಠಕ್ಕೆ ಅಧಿಪತಿಯನ್ನಾಗಿ ಮಾಡಿದರೆ ಮಡಿವಾಳಪ್ಪನವರ ಆಜ್ಞೆಯಂತೆ ನಡೆದುಕೊಳ್ಳುವುದು ಶಿವಲಿಂಗಸರ್ಜರಿಗೆ ಇಷ್ಟವಿರಲಿಲ್ಲ .ಹೀಗಾಗಿ ಕಿತ್ತೂರಿನಲ್ಲಿ ಬರದ ಇದೆ ಜನರಿಗೆ ಕುಡಿಯಲು ನೀರಿಲ್ಲ ಕಾರಣ ತಮ್ಮನ್ನು ಶ್ರೀ ಮಠಕ್ಕೆ ಅಧಿಪತಿ ಮಾಡುತ್ತೇವೆ ತಾವು ಕಾಶಿಗೆ ಹೋಗಿ ಪವಿತ್ರ ಗಂಗೆಯನ್ನು ತಂದು ಪವಿತ್ರ ಜಲದಲ್ಲಿ ತಮ್ಮ ಪಟ್ಟಕಟ್ಟುವದಲ್ಲದೆ ಕಿತ್ತೂರಿನ ನೀರಿನ ಬರವನ್ನು ನಿವಾರಿಸಬಹುದು ಎಂದು ಶಿವಲಿಂಗಸರ್ಜರು ಗರಗ ಮಡಿವಾಳರಿಗೆ ಹೇಳಿ ಕಾಶಿಗೆ ಕಳುಹಿಸಿದರಂತೆ ..ಅತ್ತ ಅವರನ್ನು ಕಳುಹಿಸಿ ಇತ್ತ ಕಿತ್ತೂರಿನ ವಾಡೆಗೆ ಸುಣ್ಣ ಬಣ್ಣ ಸಿಂಗರಿಸುವ ಕಾರ್ಯವು ಬರದಿಂದ ಸಾಗಿತು . ಕಾಶಿಯಿಂದ ಮರುಳಿದ ಮಡಿವಾಳಸ್ವಾಮಿಗಳಿಗೆ ಆಘಾತ ನೋವು ಕಾದಿತ್ತು.ಅವರ ಸ್ಥಾನದಲ್ಲಿ ರಾಜಗುರು ಮಠಕ್ಕೆ ಇನ್ನೊಬ್ಬರನ್ನು ನೇಮಿಸಿ ಅವರಿಂದ ಶಿವಲಿಂಗರುದ್ರ ಸರ್ಜರು ತಮ್ಮ ಪಟ್ಟಾಭಿಷೇಕ ಮಾಡಿಸಿಕೊಂಡರೆಂದು ಮತ್ತು ಗೆಳೆಯ ಗರಗದ ಮಡಿವಾಳ ಸ್ವಾಮಿಗಳು ಅದೆಷ್ಟು ಸಲ ಕೂಗಿದರೂ ಕಿತ್ತೂರು ವಾಡೆಯ ಅಗಸಿಯ ಬಾಗಿಲನ್ನು ತೆಗೆಯದೆ ಗುರು ಮಡಿವಾಳರಿಗೆ ಅವಮಾನ ಮಾಡಿದರೆಂದು ಜನರ ಮೌಖಿಕ ಹೇಳಿಕೆಗಳು ಚರಿತ್ರೆಗಳಲ್ಲಿ ದಾಖಲಾಗಿವೆ .ಕುಪಿತಗೊಂಡ ಗುರು ಮಡಿವಾಳರು ” ಕಿತ್ತೂರು ಸಂಸ್ಥಾನದಲ್ಲಿ ಕತ್ತೆ ಬಿದ್ದು ಉರುಳಾಡಲಿ”ಎಂದು ಶಪಿಸಿದಿರಂತೆ ಮತ್ತು ಕಿತ್ತೂರಿನಿಂದ ಮುಂದೆ ಒಂದೇ ಕಿಲೋಮೀಟರ್ ದೂರದಲ್ಲಿರುವ ನಿಚ್ಚಣಿಕೆಯಲ್ಲಿ ತಾವು ತಂದಿಟ್ಟ ಗಂಗೆಯನ್ನು ಇಟ್ಟು ಅಲ್ಲಿ ನೀರಿಗೆ ಎಂದೂ ಬರ ಬಾರದಿರಲಿ ಎಂದು ಹರಸಿ ಮುಂದೆ ಹೋದರಂತೆ .ಇಂತಹ ಅಂತೇ ಕಂತೆಗಳ ಕಥೆಗಳು ಕಿತ್ತೂರಿನ ಇತಿಹಾಸದಲ್ಲಿ ಬಹಳಷ್ಟು ಕಂಡು ಬಂದಿದ್ದರೂ ಗುರು ಮಡಿವಾಳರಿಗೆ ಅಸಮಾಧವಾಗಿದ್ದಂತೂ ನಿಜ . ಕಿತ್ತೂರಿನ ಇತಿಹಾಸದಲ್ಲಿ ಹಲವು ಬಾರಿ ಸಂಗತಿಗಳು ವೈಭವೀಕರಣರಣವಾಗಿದ್ದರೆ ,ಕೆಲವು ಕಡೆಗೆ ಸತ್ಯದ ಮರೆಮಾಚುವ ಕಾರ್ಯ ನಡೆದಿದೆ . ಭಾರತೀಯ ಇತಿಹಾಸದಲ್ಲಿ ಸುವರ್ಣಪುಟವಾಗಬೇಕಿದ್ದ ಕಿತ್ತೂರಿನ ಅಧ್ಯಾಯವು ಹಲವು ಅಸಂಗತ ಕಾರಣಗಳಿಂದಾಗಿ ಪ್ರಾಮುಖ್ಯತೆ ಪಡೆಯಲಿಲ್ಲ .ಎರಡು ನೂರು ವರುಷದ ಇತಿಹಾಸವನ್ನು ಮತ್ತೊಮ್ಮೆ ಪುನರ್ ವಿಮರ್ಶೆ ಮತ್ತು ಪುನರಾವಲೋಕನ ಮಾಡುವ ಅಗತ್ಯವಿದೆ.
ಕಿತ್ತೂರು ಕ್ರಾಂತಿಯ ಅಪರೂಪದ ವ್ಯಕ್ತಿ ಅಮಟೂರು ಬಾಳಾಸಾಹೇಬ
ಅಮಟೂರು ಬಾಳಾಸಾಹೇಬನು ಮೂಲತಃ ಬೈಲಹೊಂಗಲದ ಅಮಟೂರಿನವನು . ತಂದೆ ಸೈದನಸಾಬ ಸೈದಣ್ಣವರ ಅಮಟೂರು ಬಾಳಾಸಾಹೇಬನಿಗೆ ಬಾಲ್ಯದಿಂದಲೂ ಗುಲಾಮಗಿರಿಯ ವಿರುದ್ಧ ಹೋರಾಟ ಮಾಡುವ ನಿಶ್ಚಲ ಸಂಕಲ್ಪವನ್ನು ಹೊಂದಿರುವ ಅಮಟೂರು ಬಾಳಾಸಾಹೇಬ ಮುಸ್ಲಿಮ ಧರ್ಮಿಯನಾಗಿದ್ದನು . ಈ ವಿಷಯವನ್ನು ನಾನು 30 ವರುಷಗಳ ಹಿಂದೆ ಬೆಳಗಾವಿಯ ಕನ್ನಡಮ್ಮ ಪತ್ರಿಕೆಯಲ್ಲಿ ಬರೆದಾಗ ತೀವ್ರವಾದ ಚರ್ಚೆಗೆ ಗ್ರಾಸನಾಗಿದ್ದೆನು. ಪ್ರತಿಷ್ಠಿತ ಲಿಂಗಾಯತ ಮನೆತನದವರು ಅಮಟೂರು ಬಾಳಾಸಾಹೇಬ ವಂಶಸ್ಥರೆಂದು ಹೇಳಿಕೊಂಡಿದ್ದರು.ಆದರೆ ನಾನು ದಾಖಲೆ ಸಹಿತ ಪುರಾವೆ ಕೊಟ್ಟಾಗ ಮೌನವಾದರು . ಬಹುತೇಕರು ಅಮಟೂರು ಬಾಳಾಸಾಹೇಬ ಲಿಂಗಾಯತ ಬಂಟನಾಗಿದ್ದನು ಎಂದು ನಂಬಿದ್ದಾರೆ .
ಅಮಟೂರು ಬಾಬಾ ಸಾಹೇಬ ಅಥವಾ ಬಾಳಾಸಾಹೇಬ ಕಿತ್ತೂರಿನ ಸಂಸ್ಥಾನದ ಸೈನ್ಯಕ್ಕೆ ಸೇರಿ ಬ್ರಿಟಿಷರ ವಿರುದ್ಧ ಯುದ್ಧದಲ್ಲಿ ಥಾಕರೇ ಅವನನ್ನು ಗುಂಡಿಟ್ಟು ಕೊಂದದ್ದು ಮಾತ್ರ ದಾಖಲಿಸುವ ಇತಿಹಾಸಕಾರರು ಆತನ ಮೂಲದ ಬಗ್ಗೆ ಕೆಲವೇ ಕೆಲವು ಜನ ಸ್ಪಷ್ಟವಾಗಿ ಹೇಳಿದ್ದಾರೆ.ಅವರಲ್ಲಿ ಬಸವರಾಜ ಕಟ್ಟಿಮನಿ ಮತ್ತು ಅನಕೃ ತಮ್ಮ ಕಾದಂಬರಿಗಳಲ್ಲಿ ಈತನ ಕುಲ ಧರ್ಮವನು ಸುಂದರವಾಗಿ ದಾಖಲಿಸಿದ್ದಾರೆ.
ಇಷ್ಟು ದಾಖಲೆ ಇದ್ದರೂ ಇತ್ತೀಚೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರು ಅಮಟೂರು ಬಾಳಾಸಾಹೇಬ ಎಂಬ ಧೀರನ ಮೇಲೆ ಕಾದಂಬರಿ ರಚಿಸಿ ಇತಿಹಾಸ ತಿರುಚಿದ್ದಾರೆ. ಇಲ್ಲಿ ಇನ್ನೊಂದು ವಿವಾದ ಹುಟ್ಟು ಹಾಕುವ ಇಚ್ಚೆ ನನಗಿಲ್ಲ.
*ಕಿತ್ತೂರಿನ ಇತಿಹಾಸವನ್ನು ಅಧ್ಯಯನ ಮಾಡಿದಂತೆ ನನಗೆ ಅನೇಕ ವಿಚಿತ್ರ ಮತ್ತು ಕಹಿ ಸತ್ಯ ಸಂಗತಿಗಳು ಬೆಳಕಿಗೆ ಬರುತ್ತಿವೆ ಬಹುತೇಕ ಸಂಗತಿಗಳು ದಾಖಲಾಗದೆ ಮಣ್ಣು ಪಾಲಾಗಿದ್ದಾರೆ ಇನ್ನು ಕೆಲವು ಸಂಗತಿಗಳ ಪ್ರಕ್ಷಿಪ್ತತೆ ನಡೆದು ಇತಿಹಾಸವನ್ನು ತಿರಿಚುವ ಬುಡಮೇಲು ಮಾಡುವ ಯತ್ನಗಳು ನಡೆದಿವೆ .ಇಂತಹ ಘಟನೆಗಳ ಶೋಧ ಮತ್ತು ದಾಖಲೀಕರಣದ ಪ್ರಾಮಾಣಿಕ ಪ್ರಯತ್ನ ಕಿತ್ತೂರಿನ ಇತಿಹಾಸದ ಮೇಲೆ ಹೊಸಬೆಳಕು ಎಂಬ ಶೀರ್ಷಿಕೆಯಲ್ಲಿ ಮತ್ತೆ ಮುಂದೆವರೆಯಲಿದೆ
–ಡಾ ಶಶಿಕಾಂತ ಪಟ್ಟಣ ರಾಮದುರ್ಗ, ಪುಣೆ 9552002338
ಮಾನ್ಯ ಓದುಗರಲ್ಲಿ ವಿನಂತಿ,
ಪುಣೆಯ ಡಾ.ಶಶಿಕಾಂತ ಪಟ್ಟಣ ಅವರು *ಕಿತ್ತೂರು ಇತಿಹಾಸದ ಮೇಲೆ ಹೊಸ ಬೆಳಕು*
ಎಂಬ ಸರಣಿ ಲೇಖನ ಪ್ರಕಟವಾಗಲಿದೆ..
ಓದುಗರು ಪ್ರಾಂಜ್ವಲ ಮನಸ್ಸಿನಿಂದ ಓದಿ, ಈ ಲೇಖನ ಸರಣಿ ಮುಗಿದ ಮೇಲೆ ಓದುಗರಿಗೆ ಸಂಶಯ, ಅನುಮಾನ, ಹೆಚ್ಚಿನ ಚಿಂತನೆಯ ಚರ್ಚೆಯ ವಿಷಯಗಳಿದ್ದರೆ ಲೇಖಕರೊಂದಿಗೆ ಚರ್ಚಿಸಿ. 9552002338
–ಸಂಪಾದಕ
******
ವಿಶೇಷ ಸೂಚನೆ
copy rights resrved(ಇಲ್ಲಿನ ಎಲ್ಲ ಬರಹಗಳೂ ಕೃತಿಸ್ವಾಮ್ಯಕ್ಕೆ ಒಳಪಟ್ಟಿರುತ್ತವೆ.) ಈಬರಹಗಳ ಎಲ್ಲಾ ಅಭಿಪ್ರಾಯಗಳೂ ಲೇಖಕರ ವೈಯುಕ್ತಿಕ ಅಭಿಪ್ರಾಯಗಳಾಗಿದ್ದು,e-ಸುದ್ದಿ ಬ್ಲಾಗ್ ಅದಕ್ಕೆ ಹೊಣೆಯಾಗಿರುವುದಿಲ್ಲ
-ಸಂಪಾದಕ