ಪ್ರಕೃತಿಯಲ್ಲಡಗಿದ ದೇವನ ಪರಿ

ಅಕ್ಕನೆಡೆಗೆ…ವಚನ – 6

ಪ್ರಕೃತಿಯಲ್ಲಡಗಿದ ದೇವನ ಪರಿ

ಈಳೆ ನಿಂಬೆ ಮಾವು ಮಾದಲಕೆ
ಹುಳಿ ನೀರನೆರೆದವರಾರಯ್ಯಾ?
ಕಬ್ಬು ಬಾಳೆ ಹಲಸು ನಾರಿವಾಳಕ್ಕೆ
ಸಿಹಿ ನೀರನೆರೆದವರಾರಯ್ಯಾ?
ಕಳವೆ ರಾಜಾನ್ನ ಶಾಲ್ಯನ್ನಕ್ಕೆ
ಓಗರದ ಉದಕವನೆರೆದವರಾರಯ್ಯಾ?
ಮರುಗ ಮಲ್ಲಿಗೆ ಪಚ್ಚೆ ಮುಡಿವಾಳಕ್ಕೆ
ಪರಿಮಳದುದಕವನೆರೆದವರಾರಯ್ಯ?
ಇಂತೀ ಜಲ ಒಂದೇ ನೆಲ ಒಂದೇ ಆಕಾಶ ಒಂದೇ
ಒಂದೇ ಜಲವು ಹಲವು ದ್ರವ್ಯಂಗಳ ಕೂಡಿ
ತನ್ನ ಪರಿ ಬೇರಾಗಿಹ ಹಾಂಗೆ
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನು
ಹಲವು ಜಗಂಗಳ ಕೂಡಿಕೊಂಡಿರ್ದಡೇನು?
ತನ್ನ ಪರಿ ಬೇರೆ!

ಅಕ್ಕ ಅದ್ಭುತ ಕವಿ! ಕವಿಯ ಒಳಗಣ್ಣು ತೆರೆದುಕೊಂಡಾಗ ಸೃಷ್ಟಿಯ ವೈಶಿಷ್ಟ್ಯಗಳನ್ನು ಕಾಣುತ್ತ ಪದರು ಪದರಾಗಿ ಬೇರ್ಪಡಿಸಿ ನೋಡಲು ಸಾಧ್ಯ. ಅವಳಲ್ಲಿರುವ ಪ್ರಕೃತಿ ಪ್ರೇಮ, ನಿಸರ್ಗದ ಒಲವು, ವಿಸ್ಮಯ ಭಾವನೆಗಳನ್ನು ಈ ವಚನದಲ್ಲಿ ಕಾಣಬಹುದು. ಅದೇ ವಿಸ್ಮಯದ ಸಂಗತಿಗಳೊಳಗೆ ತನ್ನ ಆರಾಧ್ಯದೈವ ಚೆನ್ನಮಲ್ಲಿಕಾರ್ಜುನನನ್ನು ಅರಸುವ, ಅರಿಯುವ, ಕಾಣುವ ಹಂತದವರೆಗೂ ತಲುಪುತ್ತಾಳೆ.

ಈಳೆ ನಿಂಬೆ ಮಾವು ಮಾದಲಕೆ
ಹುಳಿ ನೀರನೆರೆದವರಾರಯ್ಯಾ?

ಈಳೆ ಎಂದರೆ ಕಿತ್ತಳೆ ಹಣ್ಣು, ನಿಂಬೆ ಎಂದರೆ ಲಿಂಬೆ ಹಣ್ಣು, ಮಾದಲವೂ ಒಂದು ಜಾತಿಯ ಹುಳಿ ಹಣ್ಣು. ಈ ಮೂರೂ ಹಣ್ಣುಗಳಲ್ಲಿ ಬೇರೆ ಬೇರೆ ತೆರನಾದ ಹುಳಿಗಳ ಸ್ವಾದವಿದೆ. ಅದನ್ನು ನೆಟ್ಟು ಬೆಳೆಸಲು ಸಾಧ್ಯವಾಗಿಸಿದ್ದು ಒಂದೇ ಭೂಮಿ, ಒಂದೇ ನೀರು. ಆದರೂ ಅದರೊಳಗಿನ ರುಚಿ ಹುಳಿಯಾಗಿದೆ. ಅದರಲ್ಲೂ ಭಿನ್ನಭಿನ್ನ ಹುಳಿಗಳು. ಇದಕ್ಕೆಲ್ಲ ಹುಳಿ ನೀರನೆರೆದವರು ಯಾರೆಂದು ಅಕ್ಕನ ಪ್ರಶ್ನೆ.

ಕಬ್ಬು ಬಾಳೆ ಹಲಸು ನಾರಿವಾಳಕ್ಕೆ
ಸಿಹಿ ನೀರನೆರೆದವರಾರಯ್ಯಾ?

ನಾರಿವಾಳ ಅಂದರೆ ನಾರಿಕೇಳ, ಅರ್ಥಾತ್ ತೆಂಗಿನ ಮರ ಮತ್ತು ಅದರ ಕಾಯಿ. ಕಬ್ಬು, ಬಾಳೆಹಣ್ಣು, ಹಲಸಿನಹಣ್ಣು, ನಾರಿಕೇಳ ಫಲಗಳು ಸಿಹಿಸಿಹಿ ಅಂಶದಿಂದ ಕೂಡಿದ ರಸವತ್ತಾದ ನಿಸರ್ಗದ ಫಲ. ಇದಕ್ಕೆಲ್ಲಾ ನೀರು ಹಾಕುವ ಬದಲಿಗೆ ಸಿಹಿ ನೀರು ಹಾಕಿದವರು ಯಾರು ಎನ್ನುವ ಪ್ರಶ್ನೆ ಅಕ್ಕನದು.

ಕಳವೆ ರಾಜಾನ್ನ ಶಾಲ್ಯನ್ನಕ್ಕೆ
ಓಗರದ ಉದಕವನೆರೆದವರಾರಯ್ಯಾ?

ಕಳವೆ ಎಂದರೆ ಬತ್ತ. ಒಳಗೆ ಅಕ್ಕಿ. ಅದರಿಂದ ಅನ್ನ. ರಾಜಾನ್ನವೂ ಒಂದು ಬಗೆಯ ಅಕ್ಕಿ. ಶಾಲ್ಯಾನ್ನವೆಂದರೆ ಹಾಲಿನಲ್ಲಿ ಅಕ್ಕಿಯನ್ನು ಬೇಯಿಸಿ ಮಾಡುವ ಒಂದು ತರಹದ ಭಕ್ಷ್ಯ. ಈ ಮೂರರಲ್ಲಿ ಇರುವುದು ನೆಲ್, ನೆಲ್ಲು, ಬತ್ತ, ಅಕ್ಕಿ ಎನ್ನುವ ಆಹಾರ ಪದಾರ್ಥ. ಉದಕ ಎಂದರೆ ನೀರು, ಜಲ ಎಂದರ್ಥ. ಹೀಗೆ ಅಕ್ಕಿಯಂತಹ ಆಹಾರ ಪದಾರ್ಥವಾಗುವಂತೆ ನೀರೆರೆದವರು ಯಾರೆಂದು ಅಕ್ಕನ ಪ್ರಶ್ನೆ.

ಮರುಗ ಮಲ್ಲಿಗೆ ಪಚ್ಚೆ ಮುಡಿವಾಳಕ್ಕೆ
ಪರಿಮಳದುದಕವನೆರೆದವರಾರಯ್ಯ?

ಪ್ರಕೃತಿಯಲ್ಲಿರುವ ಅನೇಕ ಎಲೆ ಹೂವುಗಳು ಸುಂಗಧ ಪರಿಮಳದಿಂದ ಕೂಡಿವೆ. ಸುವಾಸನೆಯ ಎಲೆಗಳುಳ್ಳ ಒಂದು ಜಾತಿಯ ಎಲೆಯೇ ಮರುಗ. ಒಂದು ವಿಧವಾದ ಬಳ್ಳಿ ಮತ್ತು ಅದರ ಹೂವೇ ಮಲ್ಲಿಗೆ. ಪಚ್ಚೆ ಮುಡಿವಾಳವೆಂದರೆ ಹಸಿರು ಬಣ್ಣದ ಸುಗಂಧದ ಬೇರು. ಈ ಮೇಲಿನ ಹೂವು, ಬೇರು ಮತ್ತು ಎಲೆಗಳಲ್ಲಿರುವ ಸುವಾಸನೆಗೆ, ಪರಿಮಳಯುಕ್ತ ನೀರನ್ನು ಉಣಿಸಿದವರಾರೆಂದು ಅಕ್ಕನ ವಿಸ್ಮಯದಾಲೋಚನೆ.

ಇಂತೀ ಜಲ ಒಂದೇ ನೆಲ ಒಂದೇ ಆಕಾಶ ಒಂದೇ
ಒಂದೇ ಜಲವು ಹಲವು ದ್ರವ್ಯಂಗಳ ಕೂಡಿ
ತನ್ನ ಪರಿ ಬೇರಾಗಿಹ ಹಾಂಗೆ

ಭೂಮಿ, ನೀರು, ಅಗ್ನಿ, ವಾಯು, ಆಕಾಶ, ಈ ಎಲ್ಲಾ ಪಂಚಭೂತಗಳಿಂದ ಕೂಡಿದ ಈ ಜೀವ ಜಗತ್ತಿನಲ್ಲಿ ‌ಪಂಚೇಂದ್ರಿಯಗಳನ್ನು ಹೊಂದಿದ ಮನುಷ್ಯನ ಬದುಕು. ಎಲ್ಲಾ ಮನುಜ ಕುಲ, ಪಶು, ಪಕ್ಷಿ, ಪ್ರಾಣಿ, ಗಿಡ, ಮರ, ಸಸ್ಯಗಳಿಗೆಲ್ಲ ಒಂದೇ ನೆಲ, ಜಲ, ಗಾಳಿ. ಮನುಷ್ಯನು ಅದೇ ಕಣ್ಣು, ಕಿವಿ, ಮೂಗು, ಬಾಯಿ, ಚರ್ಮದಿಂದಲೇ ಆಸ್ವಾದಿಸಬೇಕು. ನೆಲ ಜಲ ಆಕಾಶ ಒಂದೇ ಆದರೂ ಹೊರಹೊಮ್ಮುವ ಹೂವು, ಹಣ್ಣು, ಧಾನ್ಯಗಳೆಲ್ಲ ಭಿನ್ನಭಿನ್ನ ಪರಿಮಳ, ಸ್ವಾದಗಳನ್ನು ಹೊಂದಿರುವುದು ಪಕೃತಿಯಲ್ಲಡಗಿರುವ ಆಶ್ಚರ್ಯ.

ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನು
ಹಲವು ಜಗಂಗಳ ಕೂಡಿಕೊಂಡಿರ್ದಡೇನು?
ತನ್ನ ಪರಿ ಬೇರೆ!

ಅಕ್ಕನ ಧ್ಯಾನದಲ್ಲಿ ಈ ಸೃಷ್ಟಿ ಕರ್ತನ ಪರಿಕಲ್ಪನೆ. ಅವನೇ ನಿರ್ಮಿಸಿದ ಪ್ರಪಂಚದಲ್ಲಿ ಪ್ರಕೃತಿ ಅಡಗಿಕೊಂಡು ಅನಾವರಣಗೊಳಿಸುವ ವಿಸ್ಮಯವನು ಕಾಣುವಳು. ಆ ಚೆನ್ನಮಲ್ಲಿಕಾರ್ಜುನನೇ ಈ ಸೃಷ್ಟಿಗೆ ಕಾರಣ. ಎಲ್ಲವೂ ನೀರು, ಭೂಮಿ, ಆಕಾಶ, ಗಾಳಿ, ಬೆಳಕನ್ನೇ ಅವಲಂಬಿಸಿದ್ದರೂ ವಿವಿಧ ರೂಪದಲ್ಲಿ ಹೊರಹೊಮ್ಮುವುದು. ಅದೇ ರೀತಿ ಈ ಜಗತ್ತಿನಲ್ಲಿರುವ ಎಲ್ಲಾ ಜೀವ ರಾಶಿಗಳು ಬದುಕು ಸಾಗಿಸುತ್ತಿದ್ದರೂ, ಎಲ್ಲರ ಮಧ್ಯೆ ಅವನ ರೀತಿಯೇ ಬೇರೆ.

ಹೀಗೆ ಅಕ್ಕ ಪ್ರಕೃತಿಯ ವೈವಿಧ್ಯತೆ ಮತ್ತು ವೈಶಿಷ್ಟ್ಯಗಳಲ್ಲಿ ಪರಮಾತ್ಮನನ್ನು ಕಾಣುವ ಅಚಲತೆ. ಹಾಗೆಯೇ ಅಲ್ಲಿಯ ದೃಷ್ಟಾಂತಗಳ ಮೂಲಕ ಚೆನ್ನಮಲ್ಲಿಕಾರ್ಜುನನ ಇರವನ್ನು ಚಿತ್ರಿಸುತ್ತ ಅನಾವರಣಗೊಳಿಸುತ್ತಾಳೆ. ಅವಳು ಪ್ರಕೃತಿಯನ್ನು ನೋಡುವ ಆಧ್ಯಾತ್ಮಿಕ ದೃಷ್ಟಿಕೋನ, ನಮಗೆ ಸುಂದರ ಕಲ್ಪನೆ ಎನಿಸಬಹುದು. ಅವಳ ಕಾವ್ಯ ಪ್ರತಿಭೆಯ ಶಕ್ತಿಗೆ ಮಾರು ಹೋಗಬಹುದು. ಆದರೆ ಅಕ್ಕನನ್ನು ತಲುಪುವುದು ಸುಲಭವಲ್ಲ.

ಸಿಕಾ ಕಲಬುರ್ಗಿ

Don`t copy text!