ಶ್ರೀ ಕನಕದಾಸರು

ಶ್ರೀ ಕನಕದಾಸರು


ಹರಿದಾಸಸಾಹಿತ್ಯದಲ್ಲಿ ಶ್ರೀಪುರಂದರದಾಸರಿಗೆ ಹಾಗೂ ಶ್ರೀಕನಕದಾಸರಿಗೆ ಒಂದು ವಿಶಿಷ್ಟ ಸ್ಥಾನವಿದೆ. ತಮ್ಮ ಸ್ವಂತಿಕೆಯಿಂದ ಹರಿದಾಸ ಸಾಹಿತ್ಯಕ್ಕೆ ಮೆರಗು ನೀಡಿರುವವರು. ಶ್ರೀಪುರಂದರದಾಸರು ಸಂಗೀತ ಶಾಸ್ತ್ರದಲ್ಲಿ ಪರಿಣತಿ ಪಡೆದಿದ್ದರೆ ಕನಕದಾಸರು ಕವಿಗಳಾಗಿ ಕಾವ್ಯಲೋಕದಲ್ಲಿಯೂ ಮಿಂಚಿದ್ದಾರೆ. ಅವರ ಕೀರ್ತನೆಗಳಲ್ಲಿ ಅತುಳ ಭಕ್ತಿ ಕಾವ್ಯ ಕೃತಿಗಳಲ್ಲಿಯೂ ಎದ್ದು ಕಾಣುತ್ತದೆ. ಅಪರೋಕ್ಷಜ್ಞಾನಿಗಳಾದ ಕನಕದಾಸರು “ಯಮಾಂಶಸಂಭೂತರು “ ಎಂಬ ಗೌರವಕ್ಕೆ ಪಾತ್ರರಾಗಿದ್ದರು. “ಬಾಡದಾದಿಕೇಶವ” , “ಕಾಗಿನೆಲೆಯಾದಿಕೇಶವ” ಎಂಬ ಅಂಕಿತಗಳಲ್ಲಿ ಕೀರ್ತನೆಗಳನ್ನು ರಚಿಸಿದ್ದಾರೆ. ಬಹುಶ: ಇವರ ಕಾಲ ಕ್ರಿ.ಶ. 1508-1606 ಇರಬಹುದು.
ಕನಕದಾಸರು “ರಾಮಧ್ಯಾನಚರಿತೆ”,” ನಳಚರಿತ್ರೆ”, “ಮೋಹನತರಂಗಿಣಿ”, “ಹರಿಭಕ್ತಿಸಾರ” ಎಂಬ ಕೃತಿಗಳನ್ನು ರಚಿಸಿ ಕವಿಗಳು ಹಾಗೂ ಕೀರ್ತನಕಾರರು ಎಂದು ಪ್ರಸಿದ್ಧಿ ಪಡೆದಿದ್ದರು. ಇವರು ದಾಸರಲ್ಲಿ “ಕವಿ” ಎಂದು ಪ್ರಶಸ್ತಿ ಪಡೆದ ಮಹನೀಯರು. “ಕನಕಮುಂಡಿಗೆ” ಎಂಬ ಹಾಡುಗಳನ್ನು ರಚಿಸಿದ್ದಾರೆ. ಅವುಗಳನ್ನು ಅರ್ಥಮಾಡಿಕೊಳ್ಳುವದು ಬಹು ಕಠಿಣವೆನಿಸಿವೆ. ಇವರ ಭಕ್ತಿಗೆ ಉಡುಪಿಯಲ್ಲಿ ತನ್ನ ದಿಕ್ಕನ್ನೇ ಬದಲಿಸಿ ಶ್ರೀಕೃಷ್ಣನು ದರ್ಶನ ಕೊಟ್ಟಿದ್ದು ಎಲ್ಲರಿಗೂ ಗೊತ್ತಿದ್ದ ಸಂಗತಿಯಾಗಿದೆ. ಈಗಲೂ “ಕನಕನಕಿಂಡಿ” ಎಂದು ಪ್ರಸಿದ್ಧವಾದ ಕಿಂಡಿಯನ್ನು ನಾವು ಉಡುಪಿಯ ಮಂದಿರದಲ್ಲಿ ಕಾಣಬಹುದು.

ಜೀವನಚರಿತ್ರೆ :
ಬಾಡ ಧಾರವಾಡ ಜಿಲ್ಲೆಯ ಒಂದು ಚಿಕ್ಕ ಗ್ರಾಮ. ಅಲ್ಲಿಯ ಬೀರಪ್ಪ ಮತ್ತು ಬಿಚ್ಚಮ್ಮ ಎಂಬ ದಂಪತಿಗಳಿಗೆ ತಿರುಪತಿಯ ಶ್ರೀನಿವಾಸನ ದಯೆಯಿಂದ ಹುಟ್ಟಿದ, ಈ ಮಗುವೇ ತಿಮ್ಮಪ್ಪ. ಬೀರಪ್ಪ ಎಪ್ಪತ್ತೈದು ಹಳ್ಳಿಗಳ ಡಣಾಯಕ . ತಿಮ್ಮಪ್ಪ ಬಾಲಕನಿದ್ದಾಗಲೇ ರಾಮಾಯಣ, ಮಹಾಭಾರತ, ಭಾಗವತ, ವ್ಯಾಕರಣ, ಛಂದಸ್ಸು , ಅಲಂಕಾರ ಎಲ್ಲವುಗಳನ್ನು ಅಧ್ಯಯನ ಮಾಡಿದ. ಕತ್ತಿವರಸೆ ಯುದ್ಧ ವಿದ್ಯೆಗಳಲ್ಲಿ ತರಬೇತಿ ಪಡೆದಿದ್ದ. ವೀರನೂ, ಶೂರನೂ ಆದ ಇವನ ಮುಂದೆ ಶತ್ರುಗಳ ಆಟ ನಡೆಯುತ್ತಿರಲಿಲ್ಲ. ಅಲ್ಪಕಾಲದಲ್ಲಿ ತಂದೆಯನ್ನು ಕಳೆದುಕೊಂಡ ತಿಮ್ಮಪ್ಪನಿಗೆ ಡಣಾಯಕನಾಗುವ ಅನಿವಾರ್ಯತೆ ಉಂಟಾಯಿತು. ಅಧಿಕಾರ ವಹಿಸಿದ ಮೇಲೆ ಕೊಪ್ಪರಿಗೆ ಕೊಪ್ಪರಿಗೆ ಚಿನ್ನ ಒದಗಿ ಬಂದು ಜನರಿಂದ “ಕನಕನಾಯಕ”ನೆಂದು ಕರೆಯಿಸಿಕೊಂಡ. ಆ ಸಂಪತ್ತನ್ನು ದೇವಾಲಯಗಳ ಜೀರ್ಣೋದ್ಧಾರಗಳಿಗೆ , ಬಡಬಗ್ಗರಿಗೆ ಹಂಚಿ ಜನರಿಂದ ಮನ್ನಣೆ ಪಡೆದ.
ಈತನಿಗೆ ಒಳ್ಳೆಯ ರೂಪವತಿಯಾದ ಸುಗುಣಗಳಿಂದ ಕೂಡಿದ ಪತ್ನಿಯಿದ್ದಳು. ಈ ದಂಪತಿಗಳಿಗೆ ಮಕ್ಕಳಿರಲಿಲ್ಲ. ಒಂದು ಮಗು ಹುಟ್ಟಿದ ಕೂಡಲೇ ತೀರಿತು. ಮುಂದೆ ಕನಕನ ತಾಯಿಯು, ಮತ್ತೆ ಕೆಲ ವರ್ಷಗಳ ನಂತರ ಹೆಂಡತಿಯೂ ತೀರಿಕೊಂಡರು. ಆಗಾಗ ಸಂಸಾರದಲ್ಲಿ ವಿರಕ್ತಿ ಉಂಟಾಗುತ್ತಿದ್ದರೂ ತನ್ನ ಪ್ರೀತಿಯ ಜನರನ್ನು ಬಿಟ್ಟು ಹೋಗಲು ಮನಸ್ಸು ಮಾಡಲಿಲ್ಲ. ಒಮ್ಮೆ ಯುದ್ಧದಲ್ಲಿ ಗಾಯಗೊಂಡಾಗ ದೈವಸಹಾಯ ಎಂಬಂತೆ ಆದಿಕೇಶವನೇ ಈ ಯುದ್ಧದಲ್ಲಿ ಉಪಚರಿಸಿದಂತೆ ನೀನು ನನ್ನ ದಾಸನಾಗುವೆಯಾ ಎಂದು ಕೇಳಿದಾಗ ನಾನು ಅರಸು, ಆಳಾಗಬಲ್ಲನೇ ಎಂದು ಕನಕ ಹೇಳಿದನಂತೆ. ಕಡೆಗೆ ಯುದ್ಧದಲ್ಲಿ ಆದ ನೋವಿನಿಂದ “ಮುಕ್ತಿ” ನೀಡು, ನಾನು ನಿನ್ನ ದಾಸನಾಗುವೆ ಎಂದು ಕನಕ ಹೇಳಿದಾಗ ಅವನ ನೋವುಗಳೆಲ್ಲ ಮಾಯವಾಗಿ , ಭವ ಬಂಧನ ಕೊಂಡಿಯೂ ಕಳಚಿ ಅವನ ಜೀವನ ಚರ್ಯೆಯೇ ಬದಲಾಗಿ ಹೋಯಿತು. ಕನಕನಾಯಕನು “ಕನಕದಾಸನಾಗಲು” ಈ ಕಾಳಗವೇ ಒಂದು ನೆಪವಾಯಿತು. ಶ್ರೀಹರಿಯು ತನ್ನ ಭಕ್ತರನ್ನು ಏನಾದರೂ ಕಾರಣ ನೀಡಿ ತನ್ನೆಡೆಗೆ ಸೆಳೆದುಕೊಳ್ಳುವನು. ಮಾಯಾ ಮಾನವ ವೇಷಧಾರಿಯಾದ ಶ್ರೀಕೇಶವನು ತನ್ನ ಕರ ಸ್ಪರ್ಶ ಮಾಡಲು ಕನಕನ ನೋವುಗಳೆಲ್ಲ ಮಾಯವಾದವು. ಆತನ ಅಭೀಷ್ಟದಂತೆ ತನ್ನ ಮೂಲದರ್ಶನವಿತ್ತು, ನೆನೆದಾಗ ದರ್ಶನವೀಯುವೆನೆಂದು ಅಭಯ ನೀಡಿದ. ಅಂದಿನಿಂದ ಕನಕನು ಅಧಿಕಾರವನ್ನು ಬೇರೆಯವರಿಗೆ ವಹಿಸಿ ತಂಬೂರಿ ತೆಗೆದುಕೊಂಡು ದೇವಾಲಯಕ್ಕೆ ಹೋಗಿ ಆದಿಕೇಶವನ ದಾಸನಾದ.
ಸ್ವಪ್ನದಲ್ಲಿ ವ್ಯಾಸರಾಯರ ಶಿಷ್ಯತ್ವ ಪಡೆಯಬೇಕೆಂದು ದೇವರ ಆಜ್ಞೆಯಾಗಲು ವ್ಯಾಸರಾಯರನ್ನು ಹುಡುಕುತ್ತಾ ಹೊರಟನು. ವ್ಯಾಸರಾಯರನ್ನು ಭೇಟಿಯಾಗಿ ತನ್ನ ಪರಿಚಯ ಹೇಳಿಕೊಂಡು ಮಂತ್ರೋಪದೇಶ ನೀಡಲು ಬೇಡಿಕೊಂಡ. ಕುರುಬನಿಗೆ ಮಂತ್ರವೋ “ಕೋಣ ಮಂತ್ರ” ಎಂದರು ಸ್ವಾಮಿಗಳು. ಅಷ್ಟೇಕೋಣ ಕೋಣ ಎಂದು ಜಪಿಸಿ ಯಮನ ಕೋಣವನ್ನೇ ತರಿಸಿದ. ಅವನ ಭಕ್ತಿಗೆ ಮೆಚ್ಚಿ ಯಮನು ತನ್ನ ಕೋಣವನ್ನೇ ಕಳುಹಿಸಿದ್ದ.
ಗುರುಗಳೇ ಕೋಣ ಬಂದಿದೆ ಏನು ಕೆಲಸ ಹೇಳಿರಿ ಎಂದು ಕೇಳಿದ. ಭಲೇ ನೀನೇ ಸರಿಯಾದ ಶಿಷ್ಯ ಅಲ್ಲಿ ಕಾಣುವ ಮತ್ತು ಅಡೆತಡೆಯಾಗುವ ಬಂಡೆಗಳನ್ನು ಕಿತ್ತೊಗೆಸು ಎಂದು ಹೇಳಿ ಆ ಕಾರ್ಯವನ್ನು ಕೋಣದಿಂದ ಮಾಡಿಸಿದರಂತೆ. ಆಮೇಲೆ ವ್ಯಾಸರಾಯರು ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸಿದರಂತೆ. ಇವನು ಕುರುಬನೆಂದು ತಿಳಿದು ಈತ ಯಮಧರ್ಮ ಎಂಧು ಶಿಷ್ಯರಿಗೆ ಅರುಹಿ “ಆದಿಕೇಶವ” ಎಂಬ ಅಂಕಿತನಾಮದಿಂದ ಗಾನ , ಕೀರ್ತನೆ ಮಾಡು ಎಂದು ಆಶೀರ್ವದಿಸಿದರು.
ಕಾವ್ಯದಿಂದ ಕೂಡಿದ ಭಕ್ತಿಯುತವಾದ ಅನೇಕ ಕೀರ್ತನೆಗಳನ್ನು ರಚಿಸಿ ಗಾನ ಮಾಡುತ್ತ ಆದಿ ಕೇಶವನ ಸೇವೆಯಲ್ಲಿ ನಿರತರಾದರು. ಇವರ ಸಮಕಾಲೀನರಾದ ಪುರಂದರದಾಸರು ಈ ಕನಕದಾಸರ ಮೇಲೆ ಪ್ರೀತಿಯಿತ್ತು . ನಮ್ಮ ಕನಕ ನಮ್ಮ ಕನಕ ಎಂದು ಪುರಂದರದಾಸರು , ವ್ಯಾಸರಾಯರು ಎಂದು ಉದ್ಗರಿಸುತ್ತಿದ್ದರಂತೆ. ಗುರುಗಳು ಒಡ್ಡಿದ ಅನೇಕ ಪರೀಕ್ಷೆಗಳಲ್ಲಿ ವಿವೇಚನೆಯಿಂದ ಉತ್ತೀರ್ಣರಾಗುತ್ತಿದ್ದರು. ಯಾರು ಮೋಕ್ಷಕ್ಕೆ ಹೋಗುವರು ಎಂದು ಶಿಷ್ಯರಿಗೆ ಕೇಳಲಾಗಿ ತಮಗೆ ತಿಳಿದದ್ದನ್ನು ಹೇಳಿದರು. ಆಗ ಕನಕದಾಸರು “ನಾನು ಹೋದರೇ ಹೋಗಬಹುದು “ ಎಂದರು. ಈ ಮಾತಿನ ಅರ್ಥ ಗುರುತಿಸಿದ ಗುರುಗಳು ಮುಗುಳ್ನಕ್ಕರು. “ನಾನು” ಎಂಬ ಅಹಂಕಾರ ಹೋದರೇ ಮುಕ್ತಿಗೆ ಹೋಗಬಹುದು ಎಂದು ಅರ್ಥ.
ವ್ಯಾಸರಾಯರು ಕೈಯಲ್ಲಿ ಸಾಲಿಗ್ರಾಮ ಹಿಡಿದು ಮುಚ್ಚಿ ಏನಿದೆ ಎಂದು ಕೇಳಲಾಗಿ “ ಈತನೀಗ ವಾಸುದೇವನು” ಎಂದು ಕೀರ್ತನೆ ರಚಿಸಿ ಕೈಯಲ್ಲಿರುವದು ವಾಸುದೇವ ಸಾಲಿಗ್ರಾಮ ಎಂದು ತಿಳಿಸಿದರು.
ಕನಕದಾಸರು ದೇವರನ್ನು ಯಾವಾಗ ತೋರಿಸುವೆ ಎಂದು ಕನಕನಿಗೆ ವ್ಯಾಸರಾಯರು ಕೇಳಲಾಗಿ ಪೂಜೆಯವೇಳೆಗೆ ಎಂದು ಹೇಳಿದರಂತೆ. ದೇವರು ನಾಯಿಯ ರೂಪದಲ್ಲಿ ಬಂದು ಹೋದದ್ದನ್ನು ಎಲ್ಲರೂ ಕಂಡು ಕನಕನ ಮಹಿಮೆಯನ್ನು ಕೊಂಡಾಡಿದರು. ಅನೇಕ ಮಹಿಮೆಗಳನ್ನು , ಪವಾಡಗಳನ್ನು ಕನಕದಾಸರು ತೋರಿಸಿದ್ದಾರೆ.
ವ್ಯಾಸರಾಯರು “ದಾಸಕೂಟ” ವನ್ನು ರಚಿಸಿ ಅದನ್ನು ಪುರಂದರದಾಸರಿಗೆ ಮತ್ತು ಕನಕದಾಸರಿಗೆ ಒಪ್ಪಿಸಿದರಂತೆ. ಇವರ ಕಾಲದಲ್ಲಿ “ದಾಸಕೂಟ”ವು ಅತ್ಯಂತ ಮಹತ್ವ ಪಡೆದಿತ್ತು ಎಂದು ದಾಖಲೆಗಳಲ್ಲಿ ಉಲ್ಲೇಖವಿದೆ. ಹರಿಧ್ಯಾನವ ಮಾಡುತ್ತ ತನ್ನ ಗುರುವಾದ ಆದಿಕೇಶವನನ್ನು ನೆನೆಯುತ್ತಾ ಹರಿಪಾದ ಸೇರಿದರು. ಇವರು ದಾಸಸಾಹಿತ್ಯಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಹರಿದಾಸರಲ್ಲಿ ಅಗ್ರಗಣ್ಯರು ಎಂದು ತಮ್ಮ ಹೆಸರನ್ನು ದಾಖಲಿಸಿದ್ದಾರೆ.

ಕೃಷ್ಣ ನಾರಾಯಣ ಬೀಡಕರ
ನಿವೃತ್ತಬ್ಯಾಂಕ ವ್ಯವಸ್ಥಾಪಕರು
ಕೆಎಚ್ ಬಿ ಕಾಲನಿ
ವಿಜಯಪುರ. -3
ದೂರವಾಣಿ 9972087473

Don`t copy text!