ಸ್ಮರಣೆ
ಟಿ.ಬಿ.ಸೊಲಬಕ್ಕನವರ ಕರ್ನಾಟಕ ಕಂಡ ಅತ್ಯಂತ ಅದ್ಬುತ್ ಪ್ರತಿಭಾವಂತ
ದಿನಾಂಕ 19-11-2020 ರಂದು ನಮ್ಮೆಲ್ಲರನ್ನು ಅಗಲಿ ಹೋದ ಟಿ.ಬಿ.ಸೊಲಬಕ್ಕನವರ ಕರ್ನಾಟಕ ಕಂಡ ಅತ್ಯಂತ ಅದ್ಭುತ ಪ್ರತಿಭಾವಂತ ವ್ಯಕ್ತಿಗಳು.ಬಯಲಾಟ ಮತ್ತು ದೊಡ್ಡಾಟಗಳ ಬಗ್ಗೆ ವಿಪರೀತ ಆಸಕ್ತಿಯನ್ನು ಬೆಳೆಸಿಕೊಂಡು ಆ ಕಲೆಯ ಪುನರುಜ್ಜೀವನಕ್ಕೆ ಶ್ರಮಿಸಿದ ವ್ಯಕ್ತಿ
ಟಿ.ಬಿ.ಸೊಲಬಕ್ಕನವರ.ಸುಮಾರು ಇಪ್ಪತ್ತು ಇಪ್ಪತ್ತೈದು ವರ್ಷಗಳ ಹಿಂದೆ ಬಸವ ಜಯಂತಿಯಂದು ಕೊಪ್ಪಳದಲ್ಲಿ ಇವರದೇ ತಂಡದಿಂದ “ಬಸವೇಶ್ವರ ಮಹಾತ್ಮೆ” ಬಯಲಾಟವನ್ನು ಆಡಿಸಿದ್ದು ನನಗಿನ್ನೂ ನೆನಪಿದೆ.ಅಂದಿನ ಕಾರ್ಯಕ್ರಮದಲ್ಲಿ ಡಾ.ಸ.ಜ.ನಾಗಲೋಟಿಮಠ ಮತ್ತು ಎ. ಎಂ. ಮದರಿ,ವೀರಬಸಪ್ಪ ಬಳ್ಳೊಳ್ಳಿ ಉಪಸ್ಥಿತರಿದ್ದರು.ಕೊಪ್ಪಳದ ಜನತೆ ಅಂದಿನ “ಬಸವೇಶ್ವರ ಮಹಾತ್ಮೆ”ಬಯಲಾಟವನ್ನು ನೋಡಿ ಹಲವಾರು ವರ್ಷ ಅದರ ಬಗ್ಗೆ ಮಾತನಾಡುತ್ತಿದ್ದರು.ಇದರ ಸಂಪೂರ್ಣ ನಿರ್ದೇಶನ ಟಿ.ಬಿ. ಸೊಲಬಕ್ಕನವರದಾಗಿತ್ತು.ತಾವು ಕಂಡ ಕನಸುಗಳ ಸಾಕಾರಕ್ಕಾಗಿ ಸರ್ಕಾರಿ ಪದವಿ ಕಾಲೇಜಿನ ಪ್ರೊಫೆಸರ್ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಹೊರಬಿದ್ದವರು.ಆಲಮಟ್ಟಿ ಡ್ಯಾಂ ಸೈಟ್ ,ಪುಣೆ ಹಾಗೂ ಶಿಗ್ಗಾಂವ ಹತ್ತಿರ ಗೋಟಗೋಡಿಯ ಬಳಿ ಅದ್ಭುತ ಏನಿಸುವಂತೆ ನೂರು ಎಕರೆ ಜಾಗದಲ್ಲಿ “ಉತ್ಸವ್ ರಾಕ್ ಗಾರ್ಡನ್” ನಿರ್ಮಾಣ ಮಾಡಿ ಭಾರತೀಯ ಸಂಸ್ಕೃತಿಯನ್ನು ಅನಾವರಣಗೊಳಿಸಿದ್ದಾರೆ.ನಿತ್ಯ ಸಾವಿರಾರು ಜನ “ಉತ್ಸವ ರಾಕ್ ಗಾರ್ಡನ್” ಗೆ ಬೆಟ್ಟಿ ಕೊಟ್ಟು ತಮ್ಮ ಮನಸ್ಸನ್ನು ಮುದಗೊಳಿಸಿಕೊಳ್ಳುತ್ತಿದ್ದಾರೆ.
ಭಾರತೀಯ ಸಂಪ್ರದಾಯ, ಸಂಸ್ಕೃತಿ, ಆಚಾರ-ವಿಚಾರಗಳನ್ನು ದೃಶ್ಯರೂಪಕದಲ್ಲಿ ನೋಡಿ ತಿಳಿದುಕೊಳ್ಳಬೇಕೆಂದರೆ “ಉತ್ಸವ ರಾಕ್ ಗಾರ್ಡನ್ನಿ”ಗೆ ಜೀವಮಾನದಲ್ಲಿ ಒಮ್ಮೆ ಭೇಟಿ ಕೊಡಲೇಬೇಕು.ಹಾಗೆಯೇ ತಮ್ಮ ಪತ್ನಿ ಮಕ್ಕಳು ಕುಟುಂಬ ಗೆಳೆಯರನ್ನು ಕರೆದುಕೊಂಡು ಹೋಗಿ ನೋಡಬಹುದಾದಂಥ ಅದ್ಭುತ ತಾಣ ಟಿ.ಬಿ. ಸೊಲಬಕ್ಕನವರ ನಿರ್ಮಾಣದ ರಾಕ್ ಗಾರ್ಡನ್. ನಾನು ಸಹ ವೈಯಕ್ತಿಕವಾಗಿ ಮೂರು-ನಾಲ್ಕು ಸಲ ಭೆಟ್ಟಿಯಾಗಿ ಅವರ ಜತೆ ನಾಲ್ಕೈದು ತಾಸು ಕಳೆದು ವಿಚಾರಗಳನ್ನು ಹಂಚಿಕೊಂಡಿದ್ದೇವೆ.ಒಂದು ಸಲ ನನ್ನ ಜೊತೆಗೆಳೆಯ ಬಸವರಾಜ ಬಳ್ಳೊಳ್ಳಿ ಅವರೂ ಇದ್ದರು.ಇವರೆಂದೂ ಪ್ರಚಾರಪ್ರಿಯರಲ್ಲ, ದೃಶ್ಯ ಮಾಧ್ಯಮಗಳ ಮುಂದೆ ಅನಗತ್ಯವಾಗಿ ಪೋಸ್ ಕೊಟ್ಟವರು ಅಲ್ಲ.
ಕರ್ನಾಟಕ ಸರ್ಕಾರ ಶಿಗ್ಗಾಂವದ ಬಳಿ ಜಾನಪದ ವಿಶ್ವವಿದ್ಯಾಲಯವನ್ನು ಅಸ್ತಿತ್ವಕ್ಕೆ ತರುವಲ್ಲಿ ಇವರ ಶ್ರಮ ಮತ್ತು ಮಾರ್ಗದರ್ಶನವೂ ಇತ್ತು ಎನ್ನುವುದನ್ನು ಹಲವಾರು ಹಿರಿಯ ಸಾಹಿತಿಗಳು ಜಾನಪದ ವಿದ್ವಾಂಸರು ಮಾತನಾಡುತ್ತಿರುವುದನ್ನು ನಾನು ಕೇಳಿಸಿಕೊಂಡಿದ್ದೇನೆ.ಇವರ ಸಮಕಾಲೀನರಾಗಿ ನಾವು ಬದುಕಿದ್ದೇವೆ ಎನ್ನುವದೆ ನನಗೆ ಸಾರ್ಥಕ ಭಾವನೆ ಮೂಡಿಸುತ್ತದೆ.ಇನ್ನು ಇವರ ಜತೆಗೆ ಕಳೆದದ್ದು,ಮಾತನಾಡಿದ್ದು,ವಿಚಾರಗಳನ್ನು ಹಂಚಿಕೊಂಡದ್ದು, ಊಟ ಮಾಡಿದ್ದು ಮೊನ್ನೆ ಮೊನ್ನೆ ಏನೋ ಅನಿಸುತ್ತದೆ.ಇವರು ಕೊಪ್ಪಳಕ್ಕೆ ಬಂದಾಗಲೊಮ್ಮೆ ನಾನು, ಅಲ್ಲಮಪ್ರಭು ಬೆಟ್ಟದೂರು, ಗವಿಸಿದ್ಧ ಬಳ್ಳಾರಿ, ಎಚ್.ಎಸ್. ಪಾಟೀಲ,ವಿಟ್ಟಪ್ಪ ಗೋರಂಟ್ಲಿ ,ಎಸ್ ಎನ್ ತಿಮ್ಮನಗೌಡರ,ಅಂದಾನಪ್ಪ ಬೆಣಕಲ್ ಮುಂತಾದ ಗೆಳೆಯರು ಕೂಡಿ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೆವು, ತಮಾಷೆ ಮಾಡುತ್ತಿದ್ದೆವು, ಹರಟೆ ಹೊಡೆಯುತ್ತಿದ್ದೆವು,ಇಂದಿಗೂ ಆ ದಿನಗಳು ನನ್ನ ಕಣ್ಣ ಮುಂದೆ ಕಟ್ಟಿದಂತಿವೆ. ಟಿ.ಬಿ.ಸೊಲಬಕ್ಕನವರ ತಾವಷ್ಟೇ ಬದುಕಲಿಲ್ಲ ತಮ್ಮ ಜೊತೆ ಜೊತೆಗೆ ಭಾರತೀಯ ಸಂಸ್ಕೃತಿಯನ್ನು ಭವಿಷ್ಯದ ಜನಾಂಗಕ್ಕೆ ಬಿತ್ತರಿಸುವ ಕೆಲಸವನ್ನು ಮಾಡಿ ಹೋಗಿದ್ದಾರೆ.ಜಾತಿ, ಧರ್ಮ, ಮತ, ಪಂಥ, ಭಾಷೆ, ಗಡಿ ಮೀರಿ ಬೆಳೆದವರು ಟಿ.ಬಿ.ಸೊಲಬಕ್ಕನವರ.ಇವರ ಸಾಧನೆ ಕರ್ನಾಟಕ ಅಷ್ಟೇ ಏಕೆ ಭಾರತೀಯ ಸಂಸ್ಕೃತಿಗೆ ಕಿರೀಟಪ್ರಾಯವಾದದ್ದು.ಭೌತಿಕವಾಗಿ ಅವರು ಇಂದು ನಮ್ಮ ಜೊತೆ ಇರಲಿಕ್ಕಿಲ್ಲ ಆದರೆ ಅವರ ಸಾಧನೆ,ಹಾಗೂ ಅವರ ” ಉತ್ಸವ್ ರಾಕ್ ಗಾರ್ಡನ್” ನ ಮೂಲಕ ನಮ್ಮ ಜೊತೆಗೆ ಜೀವಂತವಾಗಿದ್ದಾರೆ.ಹಲವು ಶತಮಾನಗಳಿಗೊಮ್ಮೆ ಒಬ್ಬ ಅದ್ಭುತ ವ್ಯಕ್ತಿ ಜನಿಸುತ್ತಾರoತೆ ಅಂತಹ ಅದ್ಭುತ ವ್ಯಕ್ತಿಗಳಲ್ಲಿ ಟಿ.ಬಿ.ಸೊಲಬಕ್ಕನವರು ಒಬ್ಬರು ಎನ್ನುವುದು ನಮಗೆಲ್ಲ ಹೆಮ್ಮೆ.ಇವರ ಸಾಧನೆ, ಬಯಲಾಟ ಮತ್ತು ರಂಗಭೂಮಿ, ಜಾನಪದ ಕ್ಷೇತ್ರದಲ್ಲಿ ಇವರಿಗಿರುವ ಅಪಾರವಾದ ವಿದ್ವತ್ತನ್ನು ಗಮನಿಸಿ ಕರ್ನಾಟಕ ಸರ್ಕಾರವು “ಕರ್ನಾಟಕ ಬಯಲಾಟ ಅಕಾಡೆಮಿಯ” ಅಧ್ಯಕ್ಷರನ್ನಾಗಿ ನೇಮಕ ಮಾಡಿ ತನ್ನನ್ನು ತಾನೇ ಗೌರವಿಸಿಕೊಂಡಿದೆ.ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿ ಬದುಕಿದ್ದೀರಿ ಸರ್.ಮತ್ತೊಮ್ಮೆ ಹುಟ್ಟಿಬನ್ನಿ.ಮಹಾತ್ಮ ಬಸವೇಶ್ವರ ಟಿ.ಬಿ.ಸೊಲಬಕ್ಕನವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ ಅವರ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬ ವರ್ಗಕ್ಕೆ ದಯಪಾಲಿಸಲಿ…
–ಗವಿಸಿದ್ದಪ್ಪ ವೀ. ಕೊಪ್ಪಳ