e- ಸುದ್ದಿ ಮಾನ್ವಿ
ಮಾನ್ವಿ ಪುರಸಭೆಯ ನೂತನ ಅಧ್ಯಕ್ಷೆ ಸುಫಿಯಾ ಬೇಗಂ ಹಾಗೂ ಉಪಾಧ್ಯಕ್ಷ ಕೆ.ಶುಕಮುನಿ ಗುರುವಾರ ಅಧಿಕಾರ ಸ್ವೀಕರಿಸಿದರು.
ನಂತರ ಪುರಸಭೆಯ ಸಭಾಂಗಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಮಾಜಿ ಶಾಸಕ ಜಿ.ಹಂಪಯ್ಯ ನಾಯಕ, ‘ ಪುರಸಭೆಯ ನೂತನ ಅಧ್ಯಕ್ಷೆ, ಉಪಾಧ್ಯಕ್ಷ ಹಾಗೂ ಎಲ್ಲಾ ಸದಸ್ಯರು ಚುನಾವಣೆಯಲ್ಲಿ ಆಯ್ಕೆಯಾದ ಎರಡು ವರ್ಷಗಳ ನಂತರ ಅಧಿಕಾರ ದೊರೆತಿದೆ. ಎಲ್ಲರೂ ಪಕ್ಷಾತೀತವಾಗಿ ಕೆಲಸ ಮಾಡುವ ಮೂಲಕ ಮಾನ್ವಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಸಲಹೆ ನೀಡಿದರು. ಪುರಸಭೆಯ ಸದಸ್ಯ ಶೇಖ್ ಫರೀದ್ ಉಮ್ರಿ ಮಾತನಾಡಿ, ‘ ಮಾನ್ವಿ ಪಟ್ಟಣದ ಎಲ್ಲಾ ವಾರ್ಡ್ ಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ’ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ತಾ.ಪಂ ಮಾಜಿ ಅಧ್ಯಕ್ಷ ರಾಜಾ ವಸಂತ ನಾಯಕ, ಪುರಸಭೆಯ ಮುಖ್ಯಾಧಿಕಾರಿ ಜಗದೀಶ, ಪುರಸಭೆಯ ಸದಸ್ಯರು ಇದ್ದರು. ಪುರಸಭೆಯ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ವಿವಿಧ ಸಂಘ ಸಂಸ್ಥೆಗಳ ಸದಸ್ಯರು ನೂತನ ಅಧ್ಯಕ್ಷೆ, ಉಪಾಧ್ಯಕ್ಷರನ್ನು ಸನ್ಮಾನಿಸಿ ಅಭಿನಂದಿಸಿದರು.