ವ್ಯಕ್ತಿತ್ವ ವಿಕಸನ ಮಾಲೆ
ಚರ್ಚೆ ಚಿಂತನೆ ಮಾಡೋಣ ವಾದ ಬೇಡ
ನಾವು ತಪ್ಪು ಮಾಡಿದರೆ ಕೂಡಲೇ ಬುದ್ದಿಪೂರ್ವಕವಾಗಿ ಒಪ್ಪಿಕೊಳ್ಳುವಂತ ಗುಣ ಇರಬೇಕು, ಈ ನಡುವಳಿಕೆ ನಮ್ಮನ್ನು ಸರಿದಾರಿಗೆ ತರುತ್ತದೆ. ಕೆಲವರು ಬದುಕಿನಿಂದ ಪಾಠ ಕಲಿಯುತ್ತಾರೆ ಮತ್ತೆ ಕೆಲವರು ಬದುಕುತ್ತಾರೆ ಆದರೆ ಪಾಠವನ್ನು ಎಂದು ಕಲಿಯುವುದಿಲ್ಲ. ಮಾಡಿದ ತಪ್ಪನ್ನೇ ಮತ್ತೆ ಮಾಡುವುದು ಅತಿ ದೊಡ್ಡ ತಪ್ಪು, ತಪ್ಪಿನ ಅರಿವಾದಾಗ ಅದನ್ನು ಒಪ್ಪಿಕೊಂಡು ಕ್ಷಮೆ ಯಾಚಿಸುವುದೇ ಜಾಣರ ಲಕ್ಷಣ. ನಮ್ಮ ತಪ್ಪನ್ನು ನಾವು ಯಾವತ್ತಿಗೂ ಸಮರ್ಥಿಸಿಕೊಳ್ಳಬಾರದು ನಮ್ಮ ತಪ್ಪು ಒಪ್ಪಿಕೊಳ್ಳುವುದರಿಂದ ಇತರರಿಗೆ ದೂಷಿಸಲು ಅಸ್ತ್ರವಿಲ್ಲದಂತಾಗುತ್ತದೆ.
ಪ್ರತಿಯೊಂದು ಸಮಸ್ಯೆಗಳಲ್ಲು ಪ್ರತಿಯೊಂದು ಪರಿಹಾರ ಇದ್ದೇ ಇರುತ್ತದೆ , ಯಾವುದೇ ವಿಷಯ ಇರಲಿ ನಾವು ಚರ್ಚೆ ಮಾಡಿದರೆ ಅದಕ್ಕೊಂದು ಸಮಾಧಾನ ಸಿಗುತ್ತದೆ , ಆದರೆ ವಾದ ಮಾಡಿದರೆ ಅನಾಹುತಗಳೇ ಜಾಸ್ತಿ.
ವಾದಗಳನ್ನು ತಪ್ಪಿಸಬಹುದು ಇದರಿಂದ ಹಲವರ ಹೃದಯ ಕಾಯಿಲೆಗಳು ನಿಯಂತ್ರಿಸಬಹುದು, ವಾದದಲ್ಲಿ ಗೆಲ್ಲಲು ಅದರಿಂದ ದೂರವಿರುವುದೇ ಒಳ್ಳೆಯ ಮಾರ್ಗ, ಯಾಕೆಂದರೆ ಈ ವಾದದಿಂದ ಯಾರು ಕೂಡ ಗೆಲ್ಲಲಾರರು. ವಾದದಲ್ಲಿ ಗೆದ್ದವನೇ ಸೋತ, ಯಾಕೆಂದರೆ ವಾದದಲ್ಲಿ ಗೆದ್ದವ ಒಳ್ಳೆಯ ಉದ್ಯೋಗ ಒಳ್ಳೆಯ ಸ್ನೇಹಿತ ಹೀಗೆ ಏನಾದರೂ ಕಳೆದುಕೊಳ್ಳುವ ಸಂಭವ ಹೆಚ್ಚು ಯಾಕೆಂದರೆ ಇದು ಯಾವ ಬಗೆಯ ಗೆಲುವು ನಾನಂತೂ ಇದಕ್ಕೆ ಗೆಲುವು ಎನ್ನಲಾರೆ ಅಹಂಕಾರವೇ ವಾದಕ್ಕೆ ಮೂಲ ಕಾರಣ
ವಾದ ಮಾಡುವುದೆಂದರೆ ಸೋಲುವ ಯುದ್ಧದಲ್ಲಿ ಸೇರಿಕೊಂಡಂತೆ, ಒಂದೊಮ್ಮೆ ಗೆದ್ದರೂ ಕೂಡ ಅದು ಬಹಳ ದುಬಾರಿಯಾಗುತ್ತದೆ, ಯಾಕೆಂದರೆ ಭಾವನಾತ್ಮಕ ಸಂಘರ್ಷಗಳು ನಾವು ಗೆದ್ದ ನಂತರವೂ ಕಾಡುತ್ತಲೇ ಇರುತ್ತವೆ.
ವಾದದಲ್ಲಿ ತೊಡಗಿದವರಿಬ್ಬರು ತಮ್ಮ ಮಾತೆ ಕೊನೆ ಆಗಬೇಕೆಂಬುದು ಬಯಸುತ್ತಾರೆ. ಇದು ಕೇವಲ ಅಹಂ ಭಾವದ ಸಂಘರ್ಷವೇ ಹೊರೆತು ಬೇರೇನೂ ಅಲ್ಲ , ವಾದ ಮಾಡುವವರಿಗಿಂತ ಮೂರ್ಖ ಈ ಜಗತ್ತಿನಲ್ಲಿ ಬೇರೆ ಯಾರು ಇಲ್ಲ
ಅದಕ್ಕಾಗಿ no arguments please ಅಂತ ಹೇಳೋದೆ ಜಾಣರ ಲಕ್ಷಣ .
ಪ್ರತಿ ಬಾರಿ ವಾದದಲ್ಲಿ ಗೆದ್ದಾದರೂ ಕೆಲವರು ಗೆಳೆಯರನ್ನು ನೀವು ಕಳೆದುಕೊಳ್ಳಬಹುದು ನಾವು ಹೇಳುವುದು ಸರಿ ಇದ್ದರೂ ಕೂಡ ವಾದಿಸುವುದು ಅಗತ್ಯವಿದೆಯೇ ಇಲ್ಲ , ಹಾಗಿದ್ದ, ಮಾತ್ರಕ್ಕೆ ತಪ್ಪು ಕಲ್ಪನೆ ಇರುವವರನ್ನು ಸರಿದಾರಿಗೆ ತರಬಾರದೆಂದು ಅಲ್ಲ , ಆದರೆ ಜಾಣತನದಿಂದ ಮಾತಿನ ಕೌಶಲ್ಯದಿಂದ ಇದನ್ನು ಮಾಡಬಹುದು.
ನನಗೆ ತಿಳಿದ ಮಟ್ಟಿಗೆ ಇದು ಸರಿ ಎಂದು ಅಥವಾ ಇನ್ನಿತರ ಜಾಣತನದಿಂದ ಕೂಡಿದ ಮಾತುಗಳಿಂದ ಈ ಕೆಲಸ ಸಾಧಿಸಬಹುದೇನೋ.
ಎದುರಿಗಿರುವ ವ್ಯಕ್ತಿಯ ತಪ್ಪನ್ನ ಸಾಧ್ಯತೆ ಪಡಿಸುವುದರಿಂದ ಆಗುವ ಲಾಭವಾದರೆ ಏನು? ವಾದ ವಿವಾದ ಆರಂಭವಾಗುವುದೇ ಸಂಕುಚಿತ ಮನಸ್ಸಿನಿಂದ ತಾನು ಹೇಳುತ್ತಿರುವುದೇ ಸರಿ ಎನ್ನುವುದರಿಂದ ಮಾತ್ರ.
ಇಂಥ ಸಂದರ್ಭದಲ್ಲಿ ವಾದ ಮಾಡದೆ ಸಮಾಧಾನದಿಂದ ಚರ್ಚೆ ಮಾಡುವುದು ಎಲ್ಲಕ್ಕಿಂತ ಉತ್ತಮ.
ನಾನು ಮೊನ್ನೆ ಅಷ್ಟೇ ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಓದಿದ್ದು, ಜೀವನದಲ್ಲಿ ಶ್ರೇಷ್ಠವಾದದ್ದನ್ನು ಸಾಧಿಸಬೇಕಾದರೆ ಪ್ರೌಢಿಮೆಯಿಂದ ವರ್ತಿಸುವುದು ಕಲಿಯಬೇಕು ಕೆಲ ಸಂದರ್ಭಗಳಲ್ಲಿ ನಮ್ಮ ಕೋಪ ನಮ್ಮ ತಾಪ ನಮ್ಮ ಹತೋಟಿ ಮೀರಿ ಹೋದಾಗ ಅನಾವಶ್ಯಕ ವಾದಗಳಿಗೆ ಬಲಿಯಾಗುತ್ತೇವೆ.
ಹಾಗಾದ್ರೆ ಈ ಚರ್ಚೆ ಮತ್ತು ವಾದದ ನಡುವೆ ಏನು ವ್ಯತ್ಯಾಸ ಅಂತೀರಾ?
ವಾದದಿಂದ ಹಾಗೆ ಹೊಗೆಯಾಗಬಹುದು , ಆದರೆ ಚರ್ಚೆಯಿಂದ ವಿಷಯದ ಮೇಲೆ ಬೆಳಕನ್ನು ಚೆಲ್ಲಬಹುದು
ವಾದದಿಂದ ಅಹಂಕಾರ ಮತ್ತು ಸಂಕುಚಿತ ಮನಸ್ಸು ಹುಟ್ಟಬಹುದು, ಆದರೆ ಚರ್ಚೆಯಿಂದ ಮುಕ್ತ ಮನಸ್ಸಿನ ಸಮಾಲೋಚಗಳು ಉದಯಿಸಬಹುದು. ವಾದ ಉದ್ರೇಕದ ಮಿತಿ ಮೀರಿದರೆ ಚರ್ಚೆ ತಾರ್ಕಿಕ ಅಭಿವ್ಯಕ್ತಿಯ ಸಂಕೇತವಾಗುತ್ತದೆ.
ವಾದ ಯಾರ ಮಾತು ಸರಿ ಎಂದು ಸಾಧಿಸ ಹೊರಟರೆ ಚರ್ಚೆ ಯಾವುದು ಸರಿ ಎಂದು ಸಾಧಿಸಲು ಹೊರಟುತ್ತದೆ.
ಪೂರ್ವಗ್ರಹ ಪೀಡಿತ ಮನಸ್ಸಿನಿಂದ ವಾದಿಸುವುದು ಒಳ್ಳೆಯದಲ್ಲ, ಸಂಕ್ಚಿತ್ತ ಮನಸ್ಸು ಮತ್ತು ಗಂಟಲು ಹರಿದು ಬೊಬ್ಬೆ ಹೊಡೆಯುವುದರಿಂದ ಕೇಳುವವರಿಗೆ ಹಗ್ಗದ ಮನರಂಜನೆ ಸಿಗಬಹುದೇ ಹೊರತು ಅದಕ್ಕೆ ಯಾವುದೇ ಅರ್ಥವಿಲ್ಲ, ಚರ್ಚೆಗೆ ಅವಕಾಶವಾಗಬೇಕಾದರೆ ಮೊದಲು ಮಾತನಾಡುವವರ ಮಾತು ಹೇಳುವುದನ್ನ ಹೇಳಿ ಮುಗಿಸಲಿ, ಅದನ್ನ ಅರ್ಧಕ್ಕೆ ತಡೆಯುವುದಾಗಲಿ ಖಂಡಿಸುವುದಾಗಿ ಸಲ್ಲದು, ತಾಳ್ಮೆಯಿಂದ ಆಲಿಸಿ , ಸಣ್ಣ ವಿಷಯಗಳನ್ನು ದೊಡ್ಡದು ಮಾಡದೆ ಎದುರಿನವರ ನಿರೀಕ್ಷಿಸುತ್ತಿರುವ ನಮ್ಮ ವರ್ತನೆ ಅಚ್ಚರಿ ಮತ್ತು ಗೊಂದಲ ಮೂಡಿಸುವಂತಿರಲಿ.
ಎಲ್ಲಕ್ಕಿಂತ ಮುಖ್ಯವಾಗಿ ಕ್ಷಮೆ ಯಾಚನೆಯನ್ನು ನಿರೀಕ್ಷಿಸಬಾರದು, ಕೆಲವರಿಗೆ ಅವರ ತಪ್ಪಿನ ಅರಿವಾದರೂ ಕ್ಷಮೆ ಯಾಚಿಸುವುದು ಕಷ್ಟವಾಗುತ್ತದೆ.
ಹಾಗಾಗಿ, ನಾವೆಂದು ವಾದಕ್ಕೆ ಶರಣಾಗದೆ ಚಿಂತನೆ ಚರ್ಚೆಯ ಜೊತೆಗೆ ನಮ್ಮ ಗೊಂದಲಗಳನ್ನು ನಿವಾರಿಸಿಕೊಳ್ಳೋಣ.
ಮುಂದುವರೆಯುವುದು…
_ ಮೇನಕಾ ಪಾಟೀಲ್