ಹಾಡು ಹಕ್ಕಿಗೆ ಅಲ್ಲಮನ ಗೌರವ

ಹಾಡು ಹಕ್ಕಿಗೆ ಅಲ್ಲಮನ ಗೌರವ

ಬೀದರ ಜಲ್ಲೆಯ ಹುಲಸೂರಿನ “ಶ್ರೀ ಗುರುಬಸವೇಶ್ವರ ಸಂಸ್ಥಾನ ಮಠ, ಜಗದ್ಗುರು ಅಲ್ಲಮಪ್ರಭುದೇವರ ಶೂನ್ಯ ಪೀಠ” ಮೂವರು ಸಾಧಕರಿಗೆ ಈ ವರ್ಷದ ಪ್ರಶಸ್ತಿಯನ್ನು ನೀಡಿದೆ. ಇದೇ ಡಿಸೆಂಬರ್ ೧ ಮತ್ತು ೨ ರಂದು ಮಠದ ಆವರಣದಲ್ಲಿ ನಡೆಯಲಿರುವ, ಪೂಜ್ಯ ಶ್ರೀ ಡಾ.ಶಿವಾನಂದ ಮಹಾಸ್ವಾಮಿಗಳ ನೇತ್ರತ್ವದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು.

ವೈದ್ಯಕೀಯ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಡಾ.ವಿಜಯಲಕ್ಷ್ಮಿ ಬಾಳೆಕುಂದ್ರಿಯವರಿಗೆ ‘ವೈರಾಗ್ಯ ನಿಧಿ ಅಕ್ಕಮಹಾದೇವಿ’ ಪ್ರಶಸ್ತಿ, ಶರಣ ಸಾಹಿತ್ಯದಲ್ಲಿ ಇಡೀ ಜೀವಮಾನದ ಸಾಧನೆಯನ್ನು ಗಮನಾರ್ಹವಾಗಿ ಗುರುತಿಸಬಹುದಾದ ವ್ಯಕ್ತಿತ್ವ ಡಾ.ಜಯಶ್ರೀ ದಂಡೆ ಅವರಿಗೆ ‘ಗುರು ಬಸವ ಕಲ್ಯಾಣಶ್ರೀ’ ಪ್ರಶಸ್ತಿ ಮತ್ತು ಮಾಡರ್ನ್ ಜಂಗಮರೆನಿಸಿಕೊಂಡ ಪ್ರೊ.ಸಿದ್ದು ಯಾಪಲಪರವಿಯವರಿಗೆ ‘ವ್ಯೋಮಕಾಯ ಅಲ್ಲಮಪ್ರಭು ಪ್ರಶಸ್ತಿ’ ಸಂದಿವೆ.

ವ್ಯೋಮಕಾಯ ಅಲ್ಲಮಪ್ರಭು ಪ್ರಶಸ್ತಿಯನ್ನು ಪ್ರೊ.ಸಿದ್ದು ಯಾಪಲಪರವಿಯವರಿಗೆ ನೀಡಲಾಗಿದೆ ಎಂದು ತಿಳಿದಾಗ, ಥಟ್ಟನೆ ನೆನಪಾದದ್ದು ಜಿ.ಎಸ್.ಶಿವರುದ್ರಪ್ಪ ಈ ಕವನ,
“ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು
ಇಂದು ನಾ ಹಾಡಿದರೂ, ಅಂದಿನಂತೆಯೆ ಕುಳಿತು
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ
ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ?”
ನಿಜ, ಪ್ರತಿಭಾವಂತರಲ್ಲಿ ಅಡಗಿರುವ ಕ್ರಿಯಾಶೀಲತೆಗೆ ಬೆಲೆ ಕಟ್ಟಲಾದೀತೆ? ಆದರೂ ಅದನ್ನು ಗುರುತಿಸಿ ಗೌರವಿಸಿದಾಗ ಆ ವ್ಯಕ್ತಿಗಳು ಮಾಡುವ ಕಾರ್ಯಕ್ಕೆ ಇನ್ನೊಂದಿಷ್ಟು ಹುರುಪು, ಪ್ರೋತ್ಸಾಹ, ಸ್ಪೂರ್ತಿ… ಅವರ ಜೀವನ ಚರಿತ್ರೆ ‘ಬ್ಯಾಸರಿಲ್ಲದ ಜೀವ’ ಕ್ಕೆ ಅಕ್ಷರ ರೂಪ ಕೊಟ್ಟ ನನಗೆ ಈ ಸಂದರ್ಭದಲ್ಲಿ ತುಂಬಾ ಅಭಿಮಾನವೆನಿಸುತ್ತಿದೆ.

 

ಪ್ರೊ.ಸಿದ್ದು ಯಾಪಲಪರವಿ ಅಂದ ಕೂಡಲೆ ಸಾಮಾನ್ಯವಾಗಿ ಎಲ್ಲರಿಗೂ ನೆನಪಾಗುವುದು ಅವರ ಮಾತು, ಆಕರ್ಷಕ ಧ್ವನಿ ಮತ್ತು ಮಾತಿನಲ್ಲಿರುವ ಹೊಸತನ! ಅವರು ತಮ್ಮ ಮಾತುಗಳಿಂದಲೇ ಎಲ್ಲರ ಮನ ಸೂರೆಗೊಳ್ಳುವ ತಾಕತ್ತು ಹೊಂದಿದವರು. ಅಸಂಖ್ಯಾತ ಉಪನ್ಯಾಸಗಳ ನೀಡುತ್ತ ಬ್ಯಾಸರವಿಲ್ಲದೆ ನಿರಂತರ ತಿರುಗಾಡುವ ಜೀವ!

ಸಾಮಾಜಿಕ ಜಾಲತಾಣವನ್ನು ಅಷ್ಟೇ ಪ್ರಬುದ್ಧವಾಗಿ ಬಳಸಿದ ಮಾತುಗಾರ ಹಾಗೂ ಬರಹಗಾರ. ಯೂಟ್ಯೂಬ್ ಮೂಲಕ ‘ನಮ್ಮ ಕನ್ನಡ’ದಲ್ಲಿ ‘ಲೈಪ್ ಗುರು’ ಸರಣಿ, ‘ಉತ್ತರಪ್ರಭ’ ಹಾಗೂ ಅವರ ವೈಯಕ್ತಿಕ ಯ್ಯೂ ಟ್ಯೂಬ್ ‘ನೆಮ್ಮದಿಯ ಬದುಕು’, ಇತ್ತೀಚೆಗೆ ಓಶೋ ಕುರಿತಾದ ಕುತೂಹಲದ ಮಾತುಗಳು ಆಕರ್ಷಿಸುತ್ತಿವೆ. ಬುಕ್ ಬ್ರಹ್ಮ, ಬಸವ ಟಿವಿ, ದೂರದರ್ಶನ ಚಂದನ, ಮುಂತಾದವು ಮಾತಿಗೆ ಸಾಕ್ಷಿಯಾಗಿವೆ.

ಇತ್ತೀಚೆಗೆ ಬೀದರಿನಲ್ಲಿ ‘ನೆಮ್ಮದಿಯ ಬದುಕಿಗಾಗಿ ವಚನಾನುಸಂಧಾನ’ ಶೀರ್ಷಿಕೆ ಅಡಿಯಲ್ಲಿ ಹತ್ತು ದಿನಗಳ ಕಾಲ ನೀಡಿದ ಪ್ರವಚನ, ಇತಿಹಾಸ ಸೃಷ್ಟಿಸಿದೆ. ಬೀದರ ಜನತೆ ಆ ದಿನಗಳನ್ನು ಇನ್ನೂ ಮರೆತಿಲ್ಲ. ಅದನ್ನು ಹಚ್ಚ ಹಸಿರಾಗಿಯೇ ಕಾಪಿಟ್ಟುಕೊಂಡಿದ್ದಾರೆ. ಶರಣ ತತ್ವಗಳನ್ನು ನೇರ ಮತ್ತು ಸರಳವಾಗಿ ಹೇಳುತ್ತ, ಮಧ್ಯೆಮಧ್ಯೆ ಲಘು ಹಾಸ್ಯ, ನಗು, ತಮಾಷೆ ಮಾಡುತ್ತ ನಡೆಸಿ ಕೊಟ್ಟದ್ದು ಅಪ್ಯಾಯಮಾನದ ಸಂಗತಿ. ರಂಜಿಸುತ್ತ ರಂಜಿಸುತ್ತ ಗಂಭೀರ ಚಿಂತನೆಗೆ ಕೊಂಡೊಯ್ಯುವ ಮಾಂತ್ರಿಕತೆಯನ್ನು ಕೊನೆಯವರೆಗೂ ಕಾಪಾಡಿಕೊಂಡಿದ್ದು,
ವ್ಯಕ್ತಿತ್ವ ವಿಕಸನ ಮಾಲಿಕೆಯ ತರಬೇತಿಯನ್ನು ಆಧುನಿಕ ಮನಶಾಸ್ತ್ರದ ಜೊತೆಗೆ ವಚನಗಳನ್ನು ಬಳಸಿ ಮಾತನಾಡುವುದು ವಿಶೇಷ. ‌

ನಾಲ್ಕೈದು ವರ್ಷಗಳ ಹಿಂದೆ ‘ಶುಭೋದಯ ಕರ್ನಾಟಕ’ ದೂರದರ್ಶನ ಚಂದನದಲ್ಲಿ ಜರುಗಿದ ಪ್ರೊ.ಸಿದ್ದು ಯಾಪಲಪರವಿ ಅವರ ಸಂದರ್ಶನವನ್ನು ಜನ ಇನ್ನೂ ಮರೆತಿಲ್ಲ. ಆಗ ಸಂದರ್ಶಕರು ಮಾತಿನ ಮಧ್ಯೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸುತ್ತ, ಅವರು ಬುದ್ಧ,ಅಲ್ಲಮ ಹಾಗೂ ಓಶೋ ಹೆಸರುಗಳನ್ನು ಉಲ್ಲೇಖಿಸಿದ್ದರು. ಈ ಮೂವರು ಮಹಾಪುರುಷರ ಕುರಿತಾದ ಓದು, ಅಧ್ಯಯನ, ಬರಹ, ಮಾತುಗಳು ಅಪಾರ. ಈ ಎಲ್ಲ ಕಾರಣಕ್ಕಾಗಿ ಇಂದು ವ್ಯೋಮಕಾಯ ಅಲ್ಲಮಪ್ರಭು ಪ್ರಶಸ್ತಿ ಸಂದಿರುವುದು ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ.

ಇಂತಹ ಶುಭ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ತುಂಬು ಹೃದಯದ ಅಭಿನಂದನೆಗಳು.

ಸಿಕಾ

Don`t copy text!