ಬಿ.ವಿ.ಭೂಮರಡ್ಡಿಯವರ ಜೀವನ ಸಾಧನೆ.
(ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಮಹಾವಿದ್ಯಾಲಯಗಳಲ್ಲಿ ಒಂದಾದ bvb ಎಂಜಿನಿಯರಿಂಗ್ ಕಾಲೇಜ್ ಸ್ಥಾಪನೆಯಾಗಿ 75 ವರ್ಷ ಪೂರೈಸಿದ ಗಳಿಗೆಯಲ್ಲಿ BVB ಯವರ ಕುರಿತು ಸಮಗ್ರ ಲೇಖನ)
ಲೇಖಕರು_ಮಹೇಶ_ನೀಲಕಂಠ_ಚನ್ನಂಗಿ kes.
“ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಕೊಟ್ಟಿದ್ದು ಕೆಟ್ಟಿತೇನೆ ಬೇಡ ಸರ್ವಜ್ಞ ಎಂಬಂತೆ ಜೀವನದಲ್ಲಿ ಗಳಿಸಿದ ಸಿರಿ ಸಂಪತ್ತನ್ನು ಪರರ ಜೊತೆಗೆ ಹಂಚಿಕೊಂಡು ಉಣ್ಣುವ ಸಂಸ್ಕೃತಿ ಕನ್ನಡಿಗರದ್ದು.
ಈ ನಿಟ್ಟಿನಲ್ಲಿ ಬಿ.ವ್ಹಿ.ಭೂಮರಡ್ಡಿಯವರು ತಾವು ಗಳಿಸಿದ ಸಿರಿ ಸಂಪತ್ತನ್ನು ಸಮಾಜಮುಖಿಯಾಗಿ ಖರ್ಚು ಮಾಡಲು ಶಿಕ್ಷಣ ಸಂಸ್ಥೆಗಳಿಗೆ ದಾರೆಯೆರೆದು ಪೋಷಿಸಿದರು. ಅವರು ದಾರೆಯರೆದು ಪೋಷಿಸಿದ ಆ ಮಹಾವಿದ್ಯಾಲಯ ಗಳು ಇಂದು ಜಗತ್ತಿಗೆ ಶ್ರೇಷ್ಠ ವಿದ್ವನ್ಮನಿಗಳನ್ನು ,ತಂತ್ರಜ್ಞಾನವನ್ನು ಜಗತ್ತಿಗೆ ಪೂರೈಸಿವೆ. ಬಿ ವಿ ಭೂಮರೆಡ್ಡಿ ಅವರು 10 /5/ 1885 ರಂದು ಅಂದಿನ ರಾಯಚೂರು ಜಿಲ್ಲೆಯ ಇಂದಿನ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬನ್ನಿಕೊಪ್ಪದಲ್ಲಿ ಗ್ರಾಮದಲ್ಲಿ ಜನಿಸಿದರು .
ಕುಟುಂಬ:ತಂದೆ ವೆಂಕಪ್ಪ ,ತಾಯಿ ತಂಗ್ಯಮ್ಮ ,ಅಣ್ಣ ಮುದುಕಪ್ಪ ,ಅಕ್ಕ ಬಸ್ಸಮ್ಮ. ತಂದೆ ಅನಕ್ಷರಸ್ಥರಾಗಿರುವ ಕಾರಣ ಕುಟುಂಬಕ್ಕೆ ಪಿತ್ರಾರ್ಜಿತವಾಗಿ ಬಂದಿರುವ 18 ಎಕರೆ ಜಮೀನನ್ನು ಮೋಸದಿಂದ ಕಿತ್ತುಕೊಂಡಂತ ಸಂದರ್ಭದಲ್ಲಿ ಕುಟುಂಬದ ಒಡಲಾಳಕ್ಕೆ ಬೆಂಕಿ ಇಟ್ಟ ಅನುಭವವಾಗಿತ್ತ ಬಿ.ವಿ.ಭೂಮರಡ್ಡಿಯವರದ್ದು.
ಬಿವ್ಹಿಬಿ_ಅವರ_ಪ್ರಾಥಮಿಕ_ಶಿಕ್ಷಣ:
ಬನ್ನಿಕೊಪ್ಪ ಗ್ರಾಮದಲ್ಲಿ ಬಸಲಾಪುರದ ವೀರನಗೌಡರ ನಡೆಸುತ್ತಿದ್ದ ಖಾಸಗಿ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿಯವರೆಗೆ ಶಿಕ್ಷಣವನ್ನು ಪಡೆದರು .ಬಿವಿ ಬಿ ಅವರ ಬುದ್ಧಿಶಕ್ತಿ ,ಸ್ಮರಣೆಯನ್ನು ಗಮನಿಸಿದ ವೀರನಗೌಡರು ಭವಿಷ್ಯದಲ್ಲಿ ಬಿ ವಿ ಬಿ ಅವರು ದೈತ್ಯ ಶಕ್ತಿಯಾಗಿ ಬೆಳೆಯುವುದು ಖಂಡಿತ ಎಂದು ಬಾಲ್ಯದಲ್ಲಿಯೇ ನುಡಿದಿದ್ದರು .
ಬಾಲ್ಯ:
ಕುಟುಂಬ ಆರ್ಥಿಕವಾಗಿ ಅಶಕ್ತವಾಗಿರುವ ಕಾರಣಕ್ಕಾಗಿ ಶಿಕ್ಷಣವನ್ನು ಅಲ್ಲಿಗೆ ಮುಟುಕುಗೊಳಿಸಿ ಅಕ್ಕನಾದ ಬಸ್ಸಮ್ಮನನ್ನು ಕವಲೂರಿನ ವಿರೂಪಾಕ್ಷಿ ಗೌಡರಿಗೆ ವಿವಾಹ ಮಾಡಿಕೊಳ್ಳಲಾಗಿತ್ತು. 3200 ಖುರಗಿ ಜಮೀನಿನ ಒಡೆಯರಾದ ವಿರೂಪಾಕ್ಷಗೌಡ ವ್ಯವಹಾರ ಮತ್ತು ಗೌಡಕಿ ನೋಡಿಕೊಳ್ಳಲು ತನ್ನ ತಮ್ಮನನ್ನು ಅಕ್ಕ ಬಸ್ಸಮ್ಮ ಕವಲೂರಿಗೆ ಕರೆದುಕೊಂಡು ಹೋದಳು.
ಆದರೆ ಅಕ್ಕನ ಮನೆಯಲ್ಲಿ ಮಾವನ ಚಾಕ್ರಿಯೆಯನ್ನು ಮಾಡಿ ಬದುಕುವುದು ತಮಗೆ ಸರಿ ಎನಿಸಲಿಲ್ಲ. ಹಾಗಾಗಿ ಕವಲೂರನ್ನು ಬಿಟ್ಟು ಮತ್ತೆ ತನ್ನ ಹುಟ್ಟುವರಾದ ಬನ್ನಿಕೊಪ್ಪಕ್ಕೆ ಬಂದರು. ಅಲ್ಲಿಂದ ತಮ್ಮ ವೃತ್ತಿ ಬದುಕನ್ನು ಗದಗಿನ ಮಾನ್ವಿ ಮತ್ತು ಶಿವಪ್ಪನವರಮಠ ಅವರ ಎಣ್ಣೆಯ ಅಂಗಡಿಗಳು ಕೊಪ್ಪಳದಲ್ಲಿದ್ದವು. ಇಲ್ಲಿ ಚಿಮಣೆ ಎಣ್ಣೆ,ಶೇಂಗಾ ಎಣ್ಣೆ ಮಾರಿ ವ್ಯಾಪಾರದ ಅನುಭವವನ್ನು ಪಡೆದುಕೊಂಡರು .
ವ್ಯಾಪಾರದ_ಸೆಳೆತ:
ಎರಡು ವರ್ಷದ ನಂತರ ಮತ್ತೆ ಸ್ವಂತ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಹಪಾಹಪಿಯಿಂದ ಮಾನ್ವಿ ಅವರ ಅಂಗಡಿಯನ್ನು ತ್ಯಜಿಸಿ ಬನ್ನಿಕೊಪ್ಪಕ್ಕೆ ಬಿವಿಬಿಯವರು ಆಗಮನ.
ಬನ್ನಿಕೊಪ್ಪದಲ್ಲಿ ಸ್ವಂತ ಕಿರಾಣಿ ಅಂಗಡಿಯನ್ನು ತೆರೆದರು .ಹತ್ತಿ ಸುಗ್ಗಿಯ ಸಂದರ್ಭದಲ್ಲಿ ಮನೆಮನೆಗೆ ತಿರುಗಿ ಹತ್ತಿಯನ್ನು ತೂಗಿ ಅರೆದು ಜಿನ್ನ ತಯಾರಿಸಿ ಮಾರಾಟ ಮಾಡಿದರು. ಬೆಳ್ಳುಳ್ಳಿ ಜೀರಿಗಿಯ ಚೀಲಗಳನ್ನು ತೆಲೆ ಮೇಲೆ ಹೊತ್ತು ಮಾರಿದರು. ಬಸಪ್ಪನವರ ಉತ್ಸಾಹವನ್ನು ಕಂಡು ಗದಗಿನ ವ್ಯಾಪಾರಿಗಳಾದ ಯರಾಶಿಯವರು ದಲಾಲಿಯಲ್ಲಿ ಅಂಗಡಿಯಲ್ಲಿ ಖಜಾಂಚಿಯಾಗಿ ಬಿವ್ಹಿಬಿಯವರನ್ನು ಏಕೆ ನೇಮಕ ಮಾಡಿಕೊಳ್ಳಬಾರದೆಂದು ಆಲೋಚಿಸಿದರು.
ವಿವಾಹ:
ಸಂದರ್ಭದಲ್ಲಿ ತಿಪ್ಪಮ್ಮನೊಡನೆ ಬಿವ್ಹಿಬಿಯವರ ವಿವಾಹವಾಯಿತು. ಗದಗಿನಲ್ಲಿ ಗಣ್ಯ ವ್ಯಾಪಾರಿಗಳಾಗಿರುವ ಯರಾಷಿಯವರ ಹತ್ತಿ ಅಂಗಡಿಯಲ್ಲಿ ಹಣದ ನಿರ್ವಹಣೆ, ಹೂಡಿಕೆ ,ನಗದು ಪುಸ್ತಕ ನಿರ್ವಹಣೆ ,ವ್ಯಾಪಾರದ ಕೌಶಲ್ಯಗಳನ್ನು ಕರಗತ ಮಾಡಿಕೊಂಡರು.ಬಿ ವ್ಹಿ ಬಿ ಯವರ ಉದ್ಯಮ ಕೌಶಲ್ಯಗಳನ್ನು ಗಮನಿಸಿ ಯರಾಶಿಯವರು ಎರಡು ಆಣೆಯ ಪಾಲನ್ನು ಬಿ ವ್ಹಿ ಬಿ ಯವರಿಗೆ ತಮ್ಮ ವ್ಯಾಪಾರದಲ್ಲಿ ನೀಡಿದರು .
ಇದೆ ಸಂದರ್ಭದಲ್ಲಿ ಗದಗ್ ಬೆಟಗೇರಿ ಯ ಮುದಿಯಪ್ಪ ಭೂಮರೆಡ್ಡಿ ಮಾರನಬಸರಿಯವರ ಅಂಗಡಿಯಲ್ಲಿ ಸಹಿತ ಬಿವ್ಹಿಬಿಯವರಿಗೆ ಪಾಲುಸಿಕ್ಕಿತು.ಈ ಮೂಲಕ ಉತ್ತರ ಕರ್ನಾಟಕದ ಮತ್ತು ಮುಂಬೈ ಪ್ರಾಂತ್ಯದ ಗಣ್ಯ ಉದ್ದಿಮೆದಾರರ ಸಂಪರ್ಕ ಬಿವ್ಹಿಬಿಯವರಿಗಾಗಿ ಕೈಗಾರಿಕಾ ಲೋಕಕ್ಕೆ ತಮ್ಮನ್ನು ತೆರದುಕೊಂಡರು
ಉತ್ತರ_ಕರ್ನಾಟಕದಲ್ಲಿ_ಮೊದಲ_ಬಸ್_ಸೇವೆ:
ಉತ್ತರ ಕರ್ನಾಟಕದಲ್ಲಿ ಮೊದಲು ಬಸ್ ಓಡಿಸಿದ್ದು ಬಿ ವಿ ಭೂಮರೆಡ್ಡಿ ಅವರು. ಬಂಡವಾಳ ಹೂಡುವುದು ಬಿ ವ್ಹಿ ಬಿ ಯವರಿಗೆ ಅಸಾಧ್ಯವಾದಗ ಸ್ನೇಹಿತರಾದ ನಾಗರಾಳದ ಬಸವಂತರಾಯ್, ಗದಗಿನ ಅರಳಿ ಬಸವಣ್ಣೆಪ್ಪ, ವಿಠೋಬಸಾ ಕಲಬುರ್ಗಿ ಯವರ ಜೊತೆಗೆ ಸೇರಿ ಬಸ್ಸನ್ನು ಮದ್ರಾಸದಿಂದ ಖರೀದಿಸಿದರು
1917 ಬಸ ಸಂಚಾರಕ್ಕೆ ಪರವಾನಿಗೆ ಪಡೆದುಕೊಂಡರು ಗದಗಿನ ಬುಳ್ಳಾ ಅವರ ಎಣ್ಣೆ ಅಂಗಡಿಯಲ್ಲಿ ಮೇಲ್ವಿಚಾರಣೆಗೆ ಕಾರ್ಯ ನಿರ್ವಹಿಸುತ್ತಿದ್ದ ವೀರಪ್ಪ ಅಂಗಡಿಯವರನ್ನು ಬಸ್ ಡ್ರೈವರ್ ಆಗಿ ನೇಮಕ ಮಾಡಿಕೊಂಡರು.
ಬಸ್_ಸಂಚಾರ_ಮಾರ್ಗ:
ನಾಗರಾಳದ ಬಸ್ವಂತರಾಯರ ದಲಾಲಿ ಅಂಗಡಿಯೊಂದು ಬಾಗಲಕೋಟೆಯಲ್ಲಿತ್ತು .ಹೀಗಾಗಿ ಬಸ್ಸಿನ ಮಾರ್ಗವನ್ನು ಬಾಗಲಕೋಟೆ ಇಳಕಲ್ ಮಾರ್ಗವಾಗಿ ಬಸ್ ಓಡಿಸಿದರು .ಆಲಮಟ್ಟಿ ಮುದ್ದೆಬಿಹಾಳ ತಾಳಿಕೋಟೆ ಮಾರ್ಗವಾಗಿ ಎರಡೇ ಮಾರ್ಗದಲ್ಲಿ ಬಸ್ಸನ್ನು ಓಡಿಸಿದರು.
ಆದರೆ ಸರ್ಕಾರ ಬಸ ಸಂಚಾರದ ಪರವಾನಿಗೆಯನ್ನು ನಿಲ್ಲಿಸಿ ಬಿಟ್ಟಿತು .ಜೊತೆಗೆ ಬಸ್ಸಿನ ಟೈಯರ್ ಗಳು ಸಾಲಿಡ್ ಟೈರ್ ಗಳಾದ ಕಾರಣ ಸಂಚಾರ ಮಾಡುವ ಸಂದರ್ಭದಲ್ಲಿ ಹೆಚ್ಚಿನ ಸಪ್ಪಳವನ್ನುಂಟು ಮಾಡುತ್ತಿದ್ದವು ಇದರಿಂದ ಪ್ರಯಾಣಿಕರು ಟಿಕೆಟ್ ತೆಗೆದುಕೊಂಡರೂ ಹೆದರಿ ಮತ್ತೆ ಇಳಿದು ಬಸ್ಸಿನ ಹಿಂದಿನಿಂದ ನಡೆದುಕೊಂಡು ಹೋಗುತ್ತಿದ್ದರು .ಬಸ್ಸಿಗೆ ದ್ವೀಪಗಳನ್ನು ಕಾರ್ಬಾಯಿಡ್ ಬಳಸಿ ತಯಾರಿಸಿದ ಕಾರಣ ಪ್ರಖರತೆಯ ಕೊರತೆಯಾದ ಕಾರಣ ಪ್ರಯಾಣಿಕರು ಬಸ್ ನತ್ತ ಸುಳಿಯಲಿಲ್ಲ .
ಹೀಗಾಗಿ ಆರಂಭದಲ್ಲಿ ಸೋಲನ್ನುಂಡರು ಒಪ್ಪಿಕೊಳ್ಳದ ಮನಸ್ಥಿತಿ ಮತ್ತು ಹೊಸದೊಂದು ಅವಕಾಶದ ಸೃಷ್ಟಿಗಾಗಿ ಜಟ್ಟಿಯಂತೆ ಅದೇ ಕ್ಷೇತ್ರದಲ್ಲಿ ಮತ್ತೆ ಪ್ರಯತ್ನಿಸಿದರು.
ಸರ್ಕಾರ ಬಸ್ಸಿನ ಪರವಾನಿಗೆಯನ್ನು ರದ್ದುಪಡಿಸಿದ ಸಂದರ್ಭದಲ್ಲಿ ಬೇರೆ ಭಾಗದಲ್ಲಿ ಬಸ್ ಸೇವೆ ಒದಗಿಸಿ ಲಾಭ ಗಳಿಸಬಾರದೇಕೆ ಎಂಬ ವಿಚಾರ ಮಾಡಿದರು .ಈ ಸಂದರ್ಭದಲ್ಲಿ ಹೈದರಾಬಾದ್ ನಿಜಾಮನ ವ್ಯಾಪ್ತಿಗೆ ಒಳಪಟ್ಟಿರುವ ಕಲ್ಬುರ್ಗಿ ಮತ್ತು ಬೀದರ್ ಭಾಗದಲ್ಲಿ ಬಸ್ ಓಡಾಡಲು ಪ್ರಯತ್ನಿಸಿದರು ಹೈದರಾಬಾದಿನಾ ನಿಜಾಮನೊಂದಿಗೆ ಐದು ವರ್ಷಕ್ಕೆ ಒಪ್ಪಂದ ಮಾಡಿಕೊಂಡು ಬಸ್ ಸಂಚಾರ ಸೇವೆಯನ್ನು ಪ್ರಾರಂಭಿಸಿದರು ಈ ಸಂದರ್ಭದಲ್ಲಿ ಕಲ್ಬುರ್ಗಿ ಹುಮ್ನಾಬಾದ್ ಮತ್ತು ಬಸವಕಲ್ಯಾಣ ಮಾರ್ಗವಾಗಿ ಏರಡನೆಯ ಮಾರ್ಗವಾಗಿ ಬಸವಕಲ್ಯಾಣ ಬೀದರ್ ಮತ್ತು ಜಯರಾಬಾದ ಮಾರ್ಗವಾಗಿ, ಬಸ್ಸಗಳ ಓಡಾಟವನ್ನು ಪ್ರಾರಂಭಿಸಿದರು.
ಈ ಸಾರಿ ಏಕಾಂಗಿಯಾಗಿ ಬಸ್ ಉದ್ಯಮಕ್ಕೆ ಚಾಲನೆ ಕೊಟ್ಟ ಕಾರಣ ಚಾಲಕನಾಗಿ ಚನ್ನಪ್ಪ ಹಳ್ಳಿಕೇರಿ ಮತ್ತು ಪರಪ್ಪ ಮೆಣಸಿನಕಾಯಿ ಮೊದಲಾದವರನ್ನು ನೇಮಕ ಮಾಡಿಕೊಂಡರು
“1920 ರಲ್ಲಿ ಬಿ ವಿ ಭೂಮರಡ್ಡಿ ಗ್ಯಾರಂಟೆಡ್ ಮೋಟರ್ ಸರ್ವಿಸ್ “ಸ್ಥಾಪಿಸಿದರು ಕಲ್ಯಾಣದ ತ್ರಿಪುರಾಂಕೇಶ್ವರ ಕೆರೆಯ ದಂಡೆ ಮೇಲೆ ಬಸವ ಪುರಾಣ ನಡೆಯುತ್ತಿತ್ತು ಹುಬ್ಬಳ್ಳಿ ಧಾರವಾಡದಿಂದ ಪ್ರಯಾಣಿಕರು ಸಾಕಷ್ಟು ಜನ ತಂಡ ತಂಡವಾಗಿ ಬರಲು ಪ್ರಾರಂಭಿಸಿದರು .ಈ ಸಂದರ್ಭದಲ್ಲಿ ವಿರುಪಾಕ್ಷಪ್ಪ ಅಂಗಡಿ ಬಸ ಸಂಚಾರಕ್ಕೆ ಬೆನ್ನೆಲುಬಾಗಿ ನಿಂತರು .ಸಾರಿಗೆ ವ್ಯಾಪಾರ ಬಾರಿ ಪ್ರಮಾಣದ ಲಾಭವನ್ನು ಬಿವಿಬಿ ಯವರಿಗೆ ತಂದು ಕೊಟ್ಟಿತು.
ದುಡಿಯುವುರನ್ನು ಬಿ.ವ್ಹಿ.ಬಿ ಯವರು ಕೈ ಬಿಡಲಿಲ್ಲ ಊಟ ವಸತಿ ನೀಡಿ 1920ರ ಕಾಲದಲ್ಲಿ 50- 60 ರೂಪಾಯಿ ಸಂಬಳಗಳನ್ನು ಕೊಡುತ್ತಿದ್ದರು ಬಸವಪ್ಪನವರ ಏಳಿಗೆಯನ್ನು ಕಂಡು ಸಹಿಸದ ಕೆಲವರು ನಿಜಾಮನಿಗೆ ಆರೋಪ ಮಾಡಿದರು ಬಿವ್ಹಿಬಿಯವರು ಖುದ್ದಾಗಿ ನಿಜಾಮನನ್ನು ಭೇಟಿಯಾಗಿ ನಜರಾನ ನೀಡಿ 15 ವರ್ಷಕ್ಕೆ “ಮೋನೋಪಾಲಿಯ”ನ್ನು ಪಡೆದರು 1920 ರಲ್ಲಿ ಸ್ಥಾಪಿತ ಬಿ ವ್ಹಿ. ಭೂಮರೆಡ್ಡಿ ಗ್ಯಾರಂಟೆಡ್ ಸರ್ವಿಸ್ ಮೋಟರನ್ನು “ಉಸ್ಮಾನಿಯಾ ಗ್ಯಾರಂಟೆಡ್ ಮೋಟಾರ್ ಸರ್ವಿಸ್ “ಎಂದು ಬದಲಿಸಿ ನಿಜಾಮನನ್ನು ಖುಷಿ ಪಡಿಸಿ ತಮ್ಮ ವ್ಯಾಪಾರದ ಸಾಮ್ರಾಜ್ಯವನ್ನು ಬೆಳೆಸಿದವರು.
ಕೇವಲ ಎರಡು ಬಸ್ಸಿನಿಂದ ಪ್ರಾರಂಭವಾದ ಇವರ ಬಸ್ಸಿನ ಯಾತ್ರೆ 40 ರವರೆಗೂ ಪ್ರಾರಂಭವಾಯಿತು. 150ಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊಂದಿದ್ದರು. 1936 ರಲ್ಲಿ 15 ವರ್ಷಗಳ ಮೊನೋಪಾಲಿ ಅವಧಿ ಮುಗಿದ ಕಾರಣ ಬಿವಿಬಿಯವರು ನಿಜಾಮನಿಗೆ ಬಸ್ ಸೇವೆಯನ್ನು ಬಿಟ್ಟುಕೊಟ್ಟರು ಹೈದರಾಬಾದಿನ ನಿಜಾಮನ ಸರ್ಕಾರವೇ ಬಸ್ ಸಂಚಾರವನ್ನು ಓಡಿಸಲು ಪ್ರಾರಂಭಿಸಿತು .ಈ ಸಂದರ್ಭದಲ್ಲಿ ಪ್ರತಿಯಾಗಿ ಸಾಕಷ್ಟು ಹಣ ನಿಜಾಮನಿಂದ ಬಿ.ವ್ಹಿ.ಬಿ.ಯವರಿಗೆ ಲಭಿಸಿತು.
#ಎಣ್ಣೆ_ಉತ್ಪಾದಕರಾಗಿ (oil king of india)#ಬಿವ್ಹಿಬಿಯವರು
ಬಸ್ಸ ಸೇವೆಯಿಂದ ಬಂದಿರುವ ಆದಾಯವನ್ನು ಎಣ್ಣೆ ಉತ್ಪಾದನೆಯಲ್ಲಿ ತೊಡಗಿಸಲು ಪ್ರಾರಂಭಿಸಿದರು ಕಲಬುರ್ಗಿಯ ಶರಣಬಸವೇಶ್ವರ ಮನೆದೇವರು ತಮಗೆ ಕಲ್ಯಾಣದ ಬಸವೇಶ್ವರ ಮತ್ತು ಶರಣಬಸವೇಶ್ವರದಿಂದ ಲಾಭವಾಯಿತೆಂದು 1928 ರಲ್ಲಿ ಕಲ್ಬುರ್ಗಿಯಲ್ಲಿ ಶಿವಾನಂದ ಆಯಿಲ್ ಮಿಲ್ ಸ್ಥಾಪನೆ ಮಾಡಿದರು.
ಬಸ್ ಸರ್ವಿಸ್ ನಲ್ಲಿ ಬಂದ ಲಾಭದಲ್ಲಿ ಲಚಮಯ್ಯಾ ಜಾಜಿ ಅವರ ಆಯಿಲ್ ಮಿಲ್ ಬಾಡಿಗೆ ಪಡೆದು ಶಿವಾನಂದ ಆಯಿಲ್ ಮೇಲೆ ಎಂದು ಹೆಸರಿಟ್ಟರು. ಬಿವಿಬಿಯವರಿಗೆ ಹಣದ ಕೊರತೆಯಾದಾಗ ಸಾಲವಾಗಿ ಹಣ ನೀಡಿ ಬೆನ್ನಿಗೆ ನಿಂತವರು ಪೂನಾದ ಜೀವರಾಜ್ ಬಾಯಿ. ಹೀಗಾಗಿ ಅವರಿಗೆ ಶಿವಾನಂದ ಆಯಿಲ್ ಮಿಲ್ ನಲ್ಲಿ ಜಿವರಾಜ್ ಬಾಯಿಯವರಿಗೆ ನಾಲ್ಕಾನೆಯ ಪಾಲುಕೊಟ್ಟರು .
1930ರಲ್ಲಿ ಬಳ್ಳಾರಿಯಲಿ 1931ರಲ್ಲಿ ಯಾದಗಿರಿಯಲ್ಲಿ ಆಯಿಲ್ ಮಿಲ್ ಪ್ರಾರಂಭಿಸಿ “ಶಿವಾನಂದ ಆಯಿಲ್ ಮಿಲ್ “ಎಂದು ಹೆಸರಿಟ್ಟರು.1935 ರಲ್ಲಿ ಹೈದರಾಬಾದಿನ ನಿಜಾಮನ ವ್ಯಾಪ್ತಿಯ ನಾಂದೇಡ ,ಜೈರಾಬಾದ, ನಲ್ಲಿ ಅಯಿಲ್ ಮಿಲ್ ಪ್ರಾರಂಭಿಸಿ “ಶಿವಾನಂದ ಆಯಿಲ್” ಮಿಲ್ ಎಂದು ಹೆಸರಿಟ್ಟರು .
ನುರಿತ ಇಂಜಿನಿಯರ್ ಗಳು ಸಿಗದೇ ಇದ್ದಾಗ ತಾವೇ ಯಂತ್ರಗಳನ್ನು ಜೋಡಿಸಿದರು. 1930ರಲ್ಲಿ ಗದಗದ ನಲ್ಲಿ” ಶರಣಬಸವೇಶ್ವರ ಆಯಿಲ್ ಮಿಲ್,”ಮುಂಡರಗಿಯಲ್ಲಿ “ಶರಣಬಸವೇಶ್ವರ ಆಯಿಲ್ ಮಿಲ್” ಪ್ರಾರಂಭಿಸಿದರು. ಶೇಂಗಾ ಬೆಳೆಯುವ ಪ್ರದೇಶದಲ್ಲಿ ಎಣ್ಣೆ ಕಾರ್ಖಾನೆಗಳನ್ನು ವ್ಯಾಪಕವಾಗಿ ಪ್ರಾರಂಭಿಸುವ ಯೋಜನೆ ಹಾಕಿ ಅನುಷ್ಠಾನಗೊಳಿಸಿ ಯಶಸ್ವಿಯಾದರು .
ಪ್ರತಿನಿತ್ಯ ಉತ್ಪಾದಿಸಿದ ಎಣ್ಣೆಯನ್ನು ಮುಂಬೈಗೆ ಬ್ರಾಡ್ ಗೇಜ್ ಮೂಲಕ ಕಳಿಸುತ್ತಿದ್ದರು ಇವರ ಎಣ್ಣೆ ವ್ಯಾಪಾರವನ್ನು ಗುರುತಿಸಿ ರೈಲ್ವೆ ಇಲಾಖೆ ಪ್ರತ್ಯೇಕವಾದ ಲೈನ್ ಹಾಕಿ ಕೊಟ್ಟಿತ್ತು.ರೈಲ್ವೆ ಸ್ಟೇಷನ್ ನಲ್ಲಿ ಎಣ್ಣೆ ಸಂಗ್ರಹಿಸಲು ಇಲಾಖೆಯವರು ಸ್ಥಳಾವಕಾಶ ಮಾಡಿಕೊಟ್ಟಿದ್ದರು.
1935 ಮತ್ತು 36ರಲ್ಲಿ ಪುನಾದಲ್ಲಿ “ಭವಾನಿಪೇಟೆಯಲ್ಲಿ” ಆಯಿಲ್ ಮಿಲ್ ಪ್ರಾರಂಭಿಸಿದರು.
1938 ರಲ್ಲಿ ಗಜೇಂದ್ರಗಡದಲ್ಲಿ ಆಯಿಲ್ ಮಿಲ್ ಪ್ರಾರಂಭಿಸಿದರು ಇದಕ್ಕೆ” ಟಿ. ಎಂ .ಭೂಮರೆಡ್ಡಿ” ಎಂಬ ಹೆಸರನ್ನು ಇಟ್ಟರು. 1940 ರಲ್ಲಿ ಸೌರಾಷ್ಟ್ರದಲ್ಲಿ ಆಯಿಲ್ ಮಿಲ್ ಪ್ರಾರಂಭಿಸಿದರು. 1943-44 ರಲ್ಲಿ ಮಧ್ಯಪ್ರದೇಶದ ರಾಯಪುರದಲ್ಲಿ ಆಯಿಲ್ ಮಿಲ್ ಪ್ರಾರಂಭಿಸಿ.” ಬಿ. ವಿ .ಭೂಮರೆಡ್ಡಿ “ಎಂಬ ಹೆಸರಿಟ್ಟರು . 1939 ಬಾಂಬೆನಲ್ಲಿ “ಬಿ.ವಿ.ಭೂಮ ರೆಡ್ಡಿ” ಎಂಬ ದಲಾಲಿ ಅಂಗಡಿ ಪ್ರಾರಂಭಿಸಿದರು .
ಮುಂಬೈ ವಜೀರ ಆಯಿಲ್ ಮಿಲ್ ಖರೀದಿಸಿ “ಕರ್ನಾಟಕ ಆಯಿಲ್ ಮಿಲ್” ಎಂಬ ಹೆಸರಿಟ್ಟರು. 1940ರಲ್ಲಿ ಮುಂಬೈಯ ಡಂಕನ್ ರೋಡಿನಲ್ಲಿರುವ ಆರು ರೋಟರಿ ಗಾಣಗಳನ್ನು ಖರೀದಿಸಿದರು .ಮಧ್ಯಪ್ರದೇಶ ,ಕಾಠೇವಾಡ .ಪಂಜಾಬ್ ಗುಜರಾತ್ ಮೊದಲಾದ ಪ್ರದೇಶಗಳಲ್ಲಿ ತಮ್ಮ ವ್ಯಾಪಾರದ ಸಾಮ್ರಾಜ್ಯ ವಿಸ್ತರಿಸಿದ್ದರು.
1941 ರಲ್ಲಿ ಇಮಾಮ್ ವಾಡಾದಲ್ಲಿ ಇದ್ದ ಹಾಜಿ ದಾವೂದ್ ನಾಜರ ಪೇಪರ ಪ್ಯಕ್ಟರಿಯನ್ನ ತಾವು ಖರೀದಿಸಿಕೊಂಡು ಅದರ ಬಿಡಿಭಾಗಗಳನ್ನು ಹೆಚ್ಚಿನ ಬೆಲೆಗೆ ಮಾರಿ ಆಯಿಲ್ ಮಿಲ್ ಪ್ರಾರಂಭಿಸಿದರು.
1943 ರಲ್ಲಿ ಪಾರ್ಕ್ ಲ್ಯಾಂಡ್ ನ ರೋಡಿನಲ್ಲಿ ಎಂ.ವಿ .ಭೂಮರೆಡ್ಡಿ ಕಂಪನಿ ಸ್ಥಾಪಿಸಿದ್ದರು.
ಮಜಿದ್ ಬಂದರ್ ನಲ್ಲಿ ಗಾನ ಹಾಕಿ ಕೊಬ್ಬರಿ ಮತ್ತು ಶೇಂಗಾ ಎಣ್ಣೆ ಉತ್ಪಾದನೆ ಮಾಡಿದರು. 1945 ರಲ್ಲಿ ಆಂಧ್ರಪ್ರದೇಶದ ಅದವಾನಿಯಲ್ಲಿ” ಕೃಷ್ಣ ಆಯಿಲ್” ಮಿಲ್ ಪ್ರಾರಂಭಿಸಿದರು. 1946 ರಲ್ಲಿ “ಕರ್ನೂಲ್ ನಲ್ಲಿ ಬಿ.ವಿ.ಭೂಮರಡ್ಡಿ” ಅಯಿಲ್ ಮಿಲ್ಲ್ ಪ್ರಾರಂಭಿಸಿದರು.
ಮಷಿನರಿ_ತಯಾರಕರು.
ಗದಗಿನ “ಇಮಾಮ್ ಸಾಬ್ ಡಂಬಳ” ಅವರ ಜೊತೆಗೂಡಿ ಪುನಾದ ಡಂಕನ್ ರೋಡಿನಲ್ಲಿ ಪ್ರಾರಂಭಿಸಿದರು 1945-45ರಲ್ಲಿ ಪ್ರೀಮಿಯರ್ ಇಂಜಿನಿಯರಿಂಗ್ ಕಂಪನಿ ಎಂದು ಹೆಸರಿಟ್ಟರು .ಎಣ್ಣೆ ಉತ್ಪಾದಿಸುವ “ಎಕ್ಸ್ ಪಿಲ್ಲರ್ “ಗಳನ್ನು ತಯಾರಿಸಿ ಅದಕ್ಕೆ “ಆಯಿಲ್ ಕಿಂಗ್”ಎಂದು ಹೆಸರಿಟ್ಟರು. ರೈಲ್ವೆ ವರ್ಕ್ ಶಾಪ್ ದಷ್ಟು ತಮ್ಮ ಕಾರ್ಖಾನೆ ದೊಡ್ಡದಾಗಿರಬೇಕೆಂದು ಬಿ.ವಿ.ಬಿ ಅವರು “ವರ್ಲಿಯಲ್ಲಿ”ನಾಲ್ಕು ಎಕರೆ ಜಮೀನನ್ನು ಖರೀದಿಸಿದರು ಎಣ್ಣೆ ವ್ಯಾಪಾರ ಎಂದರೆ ಬಸಪ್ಪನವರು ಬಸಪ್ಪನವರು ಅಂದರೆ ಎಣ್ಣೆ ವ್ಯಾಪಾರ ಎನ್ನುವಷ್ಟರಮಟ್ಟಿಗೆ ಬಿವಿಬಿ ಯವರ ಹೆಸರು ಮುಂಬೈ ಪ್ರೆಸಿಡೆನ್ಸಿ ಮತ್ತು ಅಖಂಡ ಭಾರತದಲ್ಲಿ ಪ್ರವರ್ಧಮಾನಕ್ಕೆ ಬಂದಿತು.
#ವಿದೇಶ_ಪ್ರವಾಸ:
1936 ರಲ್ಲಿ ಬಿ.ವಿ.ಬಿಯವರು ಜರ್ಮನ್ ರಾಷ್ಟ್ರಕ್ಕೆ ತೆರಳಿ ಅಲ್ಲಿಯ ಯಂತ್ರ ವ್ಯವಹಾರ ಉತ್ಪಾದನೆ ಕುರಿತು ಅಧ್ಯಯನ ಮಾಡಲು ಡಾ!!ತಮ್ಮಿನ ಕಟ್ಟಿಯವರೊಂದಿಗೆ ಹೊರಟರು .ಆದರೆ ಎರಡನೇ ಮಹಾಯುದ್ಧ ಪ್ರಾರಂಭವಾದ ಕಾರಣ ಕೇವಲ ಏಡನ್ ವರೆಗೆ ಹೋಗಿ ಮರಳಿ ಬರಬೇಕಾಯಿತು. ಬಿ.ವ್ಹಿ.ಬಿಯವರಿಗೆ ಕನ್ನಡ ಮರಾಠಿ ಉರ್ದು ಹಿಂದಿ ಗುಜರಾತ್ ಭಾಷೆ ತಿಳಿದಿದ್ದರು. ವ್ಯಾಪಾರಕ್ಕೆ ಬೇಕಾಗುವಷ್ಟು ಇಂಗ್ಲೀಷನ್ನು ಬರುತ್ತಿತ್ತು ಹೀಗಾಗಿ ಆರು ಭಾಷೆಗಳ ಮೇಲೆ ಇರುವ ಇವರ ಹಿಡಿತ ವ್ಯಾಪಾರದ ಸಾಮ್ರಾಜ್ಯವನ್ನು ಕಟ್ಟಲು ಪೂರಕವಾಗಿ ನಿಂತಿತು
ಗೌರಿಶಂಕರ_ಖಾನಾವಳಿ:
ಬಿವಿಬಿ ಯವರುರು ವ್ಯಾಪಾರದ ನಿಮಿತ್ತ ಮುಂಬೈನಲ್ಲಿ ವಾಸವಿದ್ದಾಗ ಅವರ ಪತ್ನಿ ಗದಗದಲ್ಲಿ ಇದ್ದಾರು.ಆಗ ಪ್ರತಿನಿತ್ಯ ಬಾರ್ಸಿಯ ಬಾಬುರಾವ್ ಖಾನಾವಳಿಯಲ್ಲಿ ಊಟ ಮಾಡುತ್ತಿದ್ದರು. ಒಂದು ದಿನ ಬಿ.ವಿ.ಬಿಯವರು ಊಟ ಮಾಡುವ ಸಂದರ್ಭದಲ್ಲಿ ಕೆಮ್ಮು ಬಂದಿತು. ಆಗ ಹೋಟೆಲ್ ಮಾಲೀಕನದ ಬಾಬು ರಾವ್ ನಮ್ಮ ಅಂಗಡಿಗೆ ಊಟಕ್ಕೆ ಬರಬೇಡಿ ಎಂದು ಗರ್ವದ ಮಾತನ್ನು ಹೇಳಿದ ಈ ಸಂದರ್ಭದಲ್ಲಿ ಮುಂಬೈಗೆ ವ್ಯಾಪಾರಕ್ಕೆಂದು ಬರುವ ಕನ್ನಡಿಗರಿಗೆ ಮುಂಬೈಯಲ್ಲಿ ಗೌರಿಶಂಕರ ಖಾನಾವಳಿ ಪ್ರಾರಂಭಿಸಿದರು. ಅಲ್ಲಿ ಬ್ಯಾಡಿಗಿಯ ಸಿದ್ದಲಿಂಗಯ್ಯ ಅವರು ಅಡುಗೆಯ ಮುಖ್ಯಸ್ಥರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದರು ಇವರ ನಂತರ ಅಂಗಡಿ ವೀರಪ್ಪನವರೇ ಗೌರಿಶಂಕರ ಖಾನಾವಳಿಯನ್ನು ಮುನ್ನಡೆಸಿದರು
ಕರ್ನಾಟಕ_ಕೆಮಿಕಲ್_ವರ್ಕ್ಸ್:
1930ರಲ್ಲಿ ಡಾ. ತುಮ್ಮಿನ ಕಟ್ಟಿ ಅವರೊಡನೆ ಸೇರಿ ಔಷಧಿ ತಯಾರಿಸುವ ಉದ್ಯಮ ಪ್ರಾರಂಭಿಸಿದರು 1938 ರಲ್ಲಿ ಕರ್ನಾಟಕ ಕೆಮಿಕಲ್ ವರ್ಕ್ಸ್ ಕಂಪನಿ ಯನ್ನು ತುಮ್ಮಿನಕಟ್ಡಿಯವರಿಗೆ ಬಿಟ್ಟುಕೊಟ್ಟರು.
ನ್ಯೂ_ಕರ್ನಾಟಕ_ಪ್ರಿಂಟಿಂಗ್_ಅ್ಯಾಂಡ್_ಪ್ರೆಸ್ :
1942-43 ರಲ್ಲಿ ಕರ್ನಾಟಕ ಪ್ರಿಂಟಿಂಗ್ ಪ್ರೆಸ್ಸ್ ನ್ನು ಹಾರ್ನಬಿಲ್ ಕೋಡಕ ಹೌಸನಲ್ಲಿ ಪ್ರಾರಂಭಿಸಿದರು. ಪತ್ರಿಕೆಯೊಂದನ್ನು ಹೊರಡಿಸುವ ಉದ್ದೇಶವನ್ನು ಇಟ್ಟುಕೊಂಡಿದ್ದರು. ಆದರೆ ಇದು ಸಾಧ್ಯವಾಗಲಿಲ್ಲ ಇದನ್ನು ತಮ್ಮ ವೈಯಕ್ತಿಕ ವ್ಯವಹಾರದ ನಮೂನೆಗಳನ್ನು ತಯಾರಿಸಲು ಬಳಸಿಕೊಂಡರು. ಗಿನ ಶಾಂತಗಿರಿ ವಕೀಲರು ನಿರ್ದೇಶಕರಾಗಿದ್ದರು
ಪಂಪಾ_ಪಿಕ್ಚರ್ಸ್:
ಕರ್ನಾಟಕ ಮತ್ತು ಮಮಹಾರಾಷ್ಟ್ರದ ಜನರಲ್ಲರೂ ಸೇರಿ ಪಂಪಾ ಪಿಕ್ಚರ್ಸ್ ಎಂದು ಸಂಸ್ಥೆ ಕಟ್ಟಿದರು ಶಾಂತಾರಾಮ್ ಪಾಟೀಲ್ ಎಂಬರು ಸ್ನೇಹಕ್ಕೆ ಬಿದ್ದು 8 ಲಕ್ಷ ರೂಪಾಯಿಗಳ ಬಂಡವಾಳ ಹೊಡಿದರು.ಪಂಪಾ ಪಿಚ್ಚರ್ ಮೂಲಕ “ಮಂದಿರ” ಎಂಬ ಚಲನಚಿತ್ರ ಹೊರ ತಂದರು .ನಂತರ ಬಸವಣ್ಣನವರನ್ನು ಕುರಿತು ಚಲನಚಿತ್ರವನ್ನು ನಿರ್ಮಿಸುವ ಯೋಜನೆಯ ಸಂದರ್ಭದಲ್ಲಿ ಶಾಂತಾರಮರ ಸಹೋದರ ವಿನಾಯಕನಿಗೆ ಆರ್ಥಿಕ ಸಹಾಯಕ ಮಾಡಿದರು ಆದರೆ ಈ ವಿನಾಯಕ ಪಾಟೀಲ್ ರ ಅಕಾಲಿಕ ನಿಧನದಿಂದ ಬಸವಣ್ಣನವರ ಚಲನಚಿತ್ರದ ಕನಸು ನನಸಾಗದೆ ಹೋಯಿತು. ಚಿತ್ರರಂಗದ ಉದ್ಯಮದಲ್ಲಿ ನಷ್ಟವಾಯಿತೆಂದು ಮರುಗಲಿಲ್ಲ ಅಲ್ಲಿ ಕಳೆದುಕೊಂಡ ಅವಕಾಶವನ್ನು ಮತ್ತೊಂದು ಕಡೆ ಗಳಿಸಿಕೊಳ್ಳುವ ಜಾಯಮಾನ ಬಿ.ವ್ಹಿ.ಬಿಯವರದ್ದಾಗಿತ್ರು.
ಕಾಟನ್_ಪ್ರೇಸಿಂಗ್_ಅ್ಯಾಂಡ್_ಜಿನ್ನಿಂಗ್_ಮಿಲ್:
1952 ರಲ್ಲಿ ಗದಗ್ ನಲ್ಲಿ ಬಿವಿಬಿ ಅವರು ಪ್ರಾರಂಭಿಸಿದರು .
1956 ರಲ್ಲಿ ಗದಗ್ ನಲ್ಲಿ ಎಣ್ಣೆ ಮತ್ತು ಕಾಟನ್ ಮಿಲ್ ಗಳ ಜೊತೆಗೆ ರವಾ ಮಿಲ್ ಪ್ರಾರಂಭಿಸಿದರು.
ಕ್ರಷಿಂಗ್_ಉದ್ಯಮ:
ವ್ಯಾಪಾರ ಕಡಿಮೆಯಾದ ಸಂದರ್ಭದಲ್ಲಿ ಬಸಪ್ಪ ನವರಿಗೆ ಖಾಲಿ ಕೂಡಲು ಮನಸ್ಸಾಗಲಿಲ್ಲ .ಬಿಟ್ಟೆನೆಂದರೆ ಬಿಡದಿ ಮಾಯೆ ಎಂಬಂತೆ ಮುಂಬೈ ಮತ್ತು ಪುನಾದ ನಡುವೆ ಟಾಣಾ ದ ಹತ್ತಿರ ಗುಡ್ಡ ಒಂದನ್ನು ಖರೀದಿಸಿ ಕಲ್ಲು ಅಗಸಿ ಒಡೆಸಿ ಸಣ್ಣಗೆ ಯಂತ್ರದಿಂದ ಕಡಿ ಮಾಡಿ ಪಟ್ಟಣಕ್ಕೆ ಪೂರೈಸಿದರು 1959ರಲ್ಲಿ ಬಿ.ವಿ.ಭೂಮರೆಡ್ಡಿ ಯವರ ಹೆಸರಿನಲ್ಲಿ ಕ್ವಾರಿ ಉದ್ಯಮ ಆರಂಭಿಸಿದರು. ಇದರಲ್ಲಿ ಏನು ಲಾಭ ಎಂದು ವಿಚಾರಿಸುವವರಿಗೆ ಆಡಿಕೊಳ್ಳುವವರಿಗೆ ಬಾಯಿ ಮೇಲೆ ಬೆರಳು ಇಡುವಂತೆ ಲಾಭವನ್ನು ಗಳಿಸಿ ಯಶಸ್ವಿ ಉದ್ಯಮಿಯಾಗಿ ಮತ್ತಷ್ಟು ಉತ್ತಂಗಕ್ಕೆ ಏರಿದರು.
ಶೈಕ್ಷಣಿಕ_ಸೇವೆ:
೧)ಬಿವ್ಹಿಬಿ ಯವರು kle ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ 1948 ರಿಂದ 1968 ರ ವರೆಗೆ ಕಾರ್ಯ ನಿರ್ವಹಿಸಿದರು ೨)ಪುಣೆಯ ಡೆಕ್ಕನ್ ಎಜುಕೇಶನ್ ಸೊಸೈಟಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು .೩)ಧಾರವಾಡದ ಲಿಂಗಾಯತ್ ವಿದ್ಯಾ ಅಭಿವೃದ್ಧಿ ಸಂಸ್ಥೆ ಗೌರವಾನ್ವಿತ ಸದಸ್ಯರಾಗಿದ್ದರು
೪) 1945 ರಲ್ಲಿ ಮುಂಬೈ ಮರ್ಚಂಟ್ ಅಸೋಶಿಯೇಷನ್ ದವರು ಬಿ ವಿ ಭೂಮರೆಡ್ಡಿಯನ್ನು ಅತ್ಯಂತ ಗೌರವದಿಂದ ಗೌರವಿಸಿ oil king of india ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದರು
5) 1967ರಲ್ಲಿ ಬಸವೇಶ್ವರ ಫಿಲಾಸ ಸಿಕ್ಕಲ್ ಅಂಡ್ ಕಲ್ಚರಲ್ ಸೊಸೈಟಿ ಮುಂಬೈ bvb ಯವರನ್ನುಸತ್ಕರಿಸಿತು
ಬಿವಿಬಿಯವರ_ಧಾನ_ಗುಣ:
1946ರಲ್ಲಿ ಕೆಎಲ್ಇ ಯ ಲಿಂಗರಾಜ್ ಮಹಾವಿದ್ಯಾಲಯದಲ್ಲಿ ಲಿಂಗರಾಜ ಜಯಂತಿಗೆ ಮುಖ್ಯ ಅತಿಥಿಯಾಗಿ ಬಂದಂತಹ ಸಂದರ್ಭದಲ್ಲಿ kle ಸಂಸ್ಥೆಯ ಶೈಕ್ಷಣಿಕ ಸೇವೆಯನ್ನು ಗುರುತಿಸಿ ತಾಂತ್ರಿಕ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲು ಹವಣಿಸುತ್ತಿದ್ದ ಆಡಳಿತ ಮಂಡಳಿಗೆ 2 ಲಕ್ಷ ರೂಪಾಯಿಗಳ ದೇಣಿಗೆಯನ್ನು ನೀಡಿದರು .ಮುಂದೆ 1948 ರಲ್ಲಿ ಗದಗ ನ ಲ್ಲಿರುವ ಡಿಪ್ಲೋಮಾ ತಾಂತ್ರಿಕ ವಿದ್ಯಾಲಯ ವು ಗದಗನಿಂದ ಹುಬ್ಬಳ್ಳಿಗೆ ವರ್ಗಾವಣೆ ಆಯಿತು.
ಕಾರಣ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಮಹಾರಾಷ್ಟ್ರದ ಜನ ಹೆಚ್ಚಾಗಿ ಬರುತ್ತಿದ್ದ ಕಾರಣ ಗದಗ್ ನಿಂದ ಹುಬ್ಬಳ್ಳಿಗೆ ತಾಂತ್ರಿಕ ವಿದ್ಯಾಲಯವನ್ನು ವರ್ಗಾವಣೆ ಮಾಡಲಾಯಿತು. ಆ ಸಂದರ್ಭದಲ್ಲಿ ಬಿ.ವಿ.ಭೂಮಿ ರೆಡ್ಡಿ ಅವರು ಮತ್ತೆ ಎರಡು ಲಕ್ಷ ರೂಪಾಯಿಗಳನ್ನು ಪರಿಣಾಮ ತಾಂತ್ರಿಕ ವಿದ್ಯಾಲಯಕ್ಕೆ ನೀಡಿದರು.ಇದರ ಪರಿಣಾಮ ಪೂರ್ಣ ಪ್ರಮಾಣದ ಮಹಾವಿದ್ಯಾಲಯವಾಗಿ ಬೆಳವಣಿಗೆ ಹೊಂದಿತು, ಒಟ್ಟಿನಲ್ಲಿ ನಾಲ್ಕು ಲಕ್ಷ ರೂಪಾಯಿಗಳನ್ನು ಮಹಾ ತಾಂತ್ರಿಕ ಮಹಾವಿದ್ಯಾಲಯದ ಬೆಳವಣಿಗೆಗೆ ನೀಡಿರುವ ಕಾರಣಕ್ಕಾಗಿ ಕೆ.ಎಲ್.ಇ. ಸಂಸ್ಥೆಯವರು ಆ ವಿದ್ಯಾಲಯಕ್ಕೆ ಬಿ.ವಿ.ಭೂಮರಡ್ಡಿ ಅವರ ಹೆಸರನ್ನು ಇಟ್ಟು ಗೌರವಿಸಿದ್ದಾರೆ .ಹುಬ್ಬಳ್ಳಿಯ ಉಣಕಲ್ ದಿಂದ ಪ್ರಾರಂಭವಾಗಿ ವಿದ್ಯಾನಗರದವರೆಗೆ ಇರುವ ಬಿಜೆಪಿ ಇಂಜಿನಿಯರಿಂಗ್ ಕಾಲೇಜಿನ 98 ಎಕರೆ ಜಾಗವನ್ನು ಕೆ.ಎಲ್.ಇಆಡಳಿತ ಮಂಡಳಿಗೆ ಕೊಡಿಸುವಲ್ಲಿ ಪೂರ್ಣ ಪ್ರಮಾಣದ ಪಾತ್ರ ನಿರ್ವಹಿಸಿದವರು ಬಿ ವಿ ಭೂಮರೆಡ್ಡಿಯವರು. ಇಂಜಿನಿಯರಿಂಗ್ ಮಹಾವಿದ್ಯಾಲಯಕ್ಕೆ ಯುನಿವರ್ಸಲ್ ಟೆಸ್ಟಿಂಗ್ ಮಷೀನ್ ಅನ್ನು ಕೊಡಿಸಿ ತಾಂತ್ರಿಕ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತರು. ಈ ಮಹಾವಿದ್ಯಾಲಯ ಹಲವಾರು ದಿಗ್ಗಜರಿಗೆ ತಂತ್ರಜ್ನರಿಗೆ ಜನ್ಮ ನೀಡಿದೆ .ಅದರಲ್ಲಿ ಇನ್ಫೋಸಿಸ್ ನ ಸಂಸ್ಥಾಪಕರಾದ ಶ್ರೀಮತಿ ಸುಧಾ ಮೂರ್ತಿ ಗುರುರಾಜ್ ದೇಶಪಾಂಡೆ ಮುರುಗೇಶ್ ನಿರಾಣಿ ಹಲವಾರು ತಜ್ಞರಿಗೆ ಉದ್ಯಮಿದಾರರಿಗೆ ಜನ್ಮ ನೀಡಿ ನಾಡು ಕಟ್ಟುವಲ್ಲಿ ಬಿ.ವಿ.ಬಿ.ಮಹಾವಿದ್ಯಾಲಯ ದ ಪಾತ್ರ ಅನನ್ಯವಾದಾಗಿದೆ
ಅಂದು ಬಿ.ವಿ.ಬಿಯವರು ನೀಡಿದ ನಾಲ್ಕು ಲಕ್ಷ ರೂಪಾಯಿಗಳು ಪರಿಣಾಮದಿಂದ ಇವತ್ತು ಉತ್ತರ ಕರ್ನಾಟಕದಿಂದ ಜಗತ್ತಿಗೆ ಹೆಚ್ಚು ಇಂಜಿನಿಯರ್ ಮತ್ತು ವೈದ್ಯರನ್ನು ಪೂರೈಸಲು ಒಂದು ಬೀಜವನ್ನು ಬಿತ್ತಿದ ಮಹಾನ್ ಮಹೋನ್ನತ ಗಳಿಗೆ
ಜೆ.ಜಿ.ಕಾಮರ್ಸ ಮಹಾವಿದ್ಯಾಲಯ ಸ್ಥಾಪಕರು ಬಿ.ವ್ಹಿ.ಬಿಯವರು.ವ್ಯಾಪಾರ ಪ್ರಿಯರಾದ ಬಿವಿಬಿ ಅವರು ಹುಬ್ಬಳ್ಳಿಯಲ್ಲಿ kle ಸಂಸ್ಥೆಯ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯ ಸ್ಥಾಪನೆಗೆ ಕಾರಣೀಭೂತರು.
Kle ಸಂಸ್ಥೆಯು ಆರ್ಥಿಕ ಮುಗ್ಗಟ್ಟಿನಲ್ಲಿದ್ದಾಗ ತನಗಿಂತ ಯಾರಾದರೂ ಹೆಚ್ಚಿನ ದೇಣಿಗೆಯನ್ನು ಸಂಸ್ಥೆಗೆ ನೀಡಿದರೆ ನನ್ನ ಹೆಸರನ್ನು ಬದಲಾಯಿಸಿ, ಮತ್ತೋರ್ವ ಮಹಾದಾನಿ ಹೆಸರನ್ನು ಇಡಬಹುದೆಂದು ಆಡಳಿತ ಮಂಡಳಿಯವರಿಗೆ ತಿಳಿಸಿದ ಉದಾರಿ ಬಿ.ವಿ.ಬಿಯವರು.
ಬಿ.ವಿ.ಬಿಯವರ ಮಹಾದಾನಗಳು:
೧)ಬಿ.ವಿ.ಬಿ.ಇಂಜನಿಯರಿಂಗ್ ಕಾಲೇಜ್.-೪ಲಕ್ಷಗಳು.
೨)ಬಿ ವಿ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜ್ ಬೀದರ್ ೫೦೦೦೦
೩)ಮುಂಬೈ ಬಸವ ಸದನ -೩೫೦೦
೪)ಬಾಗಲಕೋಟೆಯ ಬಸವೇಶ್ವರ ಮಹಾವಿದ್ಯಾಲಯ
೫)ಹೈದರಾಬಾದ್ ಉಸ್ಮಾನಿಯ ವಿದ್ಯಾಲಯ ೬)ಯಾದಗಿರಿಯ ಸಂಸ್ಕೃತ ಶಾಲೆ,
೭)ಗದಗಿನ ಪಂಚಾಕ್ಷರಿ ಗವಾಯಿಗಳ ಆಶ್ರಮ ೮)ಮುಂಡರಗಿಯ ಪ್ರೌಢಶಾಲೆಯ
೯)ಮುಂಬೈಯ ದಂಡವರ್ತಿ ಮಠದ ಆರ್ಟ್ಸ್ ಸ್ಕೂಲ್ ೧೦)ಮಾತಂಗದ ಪೋತದಾರ್ ಕಾಲೇಜು
೧೧)ಮುಂಬೈ ಕನ್ನಡ ಸಂಘ
೧೨)ಮುಂಬೈ ಕಾಸರಗೋಡು ಮಗವೀರ ಸಂಘ ೧೩)ಮಹಾರಾಷ್ಟ್ರ ಲಿಂಗಾಯತ ಸಂಘ.
ಬಿವಿಬಿಯವರೂಳಗಿನ_ಅಕ್ಷರ_ಸಂತ
ಬಿ ವಿ ಭೂಮರೆಡ್ಡಿ ಅವರಿಗೆ ಮಕ್ಕಳಾಗಿರಲಿಲ್ಲ ಈ ಸಂದರ್ಭದಲ್ಲಿ ಇನ್ನೊಂದು ಮದುವೆಯಾಗುವಂತೆ ಸಂಬಂಧಿಕರು ಹಿತೈಷಿಗಳು ಒತ್ತಾಯಿಸಿದರು ಆ ಸಂದರ್ಭದಲ್ಲಿ ಶಾಲೆಯ ಮೈದಾನದಲ್ಲಿ ಆಟವಾಡುತ್ತಿದ್ದ ಮಕ್ಕಳನ್ನು ತೋರಿಸಿ ಇವೆಲ್ಲವೂ ನನ್ನ ಮಕ್ಕಳು ಇವುಗಳಿಗಾಗಿ ನಾನು ಏನನ್ನಾದರೂ ಮಾಡಬೇಕು ಎಂದು ಸಮಾಜದ ಮಕ್ಕಳಿಗೆ ಶಿಕ್ಷಣವನ್ನು ಕೊಡಬೇಕೆಂದು ತಾವು ದುಡಿದ ಸಂಪತ್ತಿನ ಬಹು ಭಾಗವನ್ನು ಶಿಕ್ಷಣ ಸಂಸ್ಥೆಗಳಿಗೆ ದಾನ ಮಾಡಿ ಅವುಗಳನ್ನು ಕಟ್ಟಿ ಬೆಳೆಸಲು ಹೆಗಲು ಕೊಟ್ಟರು.
ವ್ಯಾಪಾರಕ್ಕೆ_ವಿದಾಯ:
ಅದೊಂದು ದಿನ ಆದಾಯ ತೆರಿಗೆ ಮತ್ತು ಮಾರಾಟಕರ
ತೆರಿಗೆ ಇಲಾಖೆ ಅಧಿಕಾರಿಗಳು ಬೆಳಗ್ಗೆ ಎದ್ದ ತಕ್ಷಣ ಬಿ.ವ್ಹಿ.ಬಿಯವರ ಮನೆಗೆ ಆಗಮಿಸಿದರು. ಎಷ್ಟು ದುಡ್ಡಿದ್ದೀಯಾ, ಎಲ್ಲಿ ಹಣ ಇಟ್ಟಿದ್ದೀರಿ,? ಮಂಗಡ ತೆರಿಗೆಯಾಗಿ 20 ಲಕ್ಷವನ್ನು ಪಾವತಿಸಬೇಕೆಂದು ಮಾನಸಿಕ ಕಿರಿಕಿರಿ ಮಾಡಿದರು .ಶುದ್ಧ ಹಸ್ತವಾಗಿ ಕಾರ್ಯವನ್ನು ನಿರ್ವಹಿಸಿದ ಬಿ.ವಿ.ಬಿಯವರಿಗೆ ಇದೆಲ್ಲ ಮನಸ್ಸಿಗೆ ಬೇಸರವನ್ನು ತರಿಸಿತು. ಹಾಗಾಗಿ ದುಡಿದ ಗಳಿಸಿದ ಸಂಪತ್ತಿನ ಬಹು ಭಾಗವನ್ನು ತಮ್ಮ ಸಂಬಂಧಿಕರಿಗೆ ಉಳಿದ ಬಹು ಭಾಗವನ್ನು ಶಿಕ್ಷಣ ಸಂಸ್ಥೆಗಳಿಗೆ ದಾನವನ್ನಾಗಿ ನೀಡಿದರು..
ಬಿವ್ಹಿಬಿ_ಯವರ_ನಿಧನ..
ಶೂನ್ಯದಿಂದ ಪ್ರಾರಂಭಿಸಿ ಅಗಣಿತವನ್ನು ತಲುಪಿದ ಬಿ.ವ್ಹಿ.ಬೂಮರಡ್ಡಿ ಅವರು 24/8/ 1968 ರಲ್ಲಿ ತಮ್ಮ 86ನೇ ವಯಸ್ಸಿನಲ್ಲಿ ನಿಧನರಾದರು.
ಬಿವ್ಹಿಬಿ_ಯವರ_ಜೀವನ_ಸಂದೇಶ
ಬಿ ವಿ ಭೂಮರೆಡ್ಡಿ ಅವರ ಜೀವನದ ಸಂದೇಶ ವಿಜ್ಞಾನ ,ವ್ಯಾಪಾರ ,ಮತ್ತು ತಂತ್ರಜ್ಞಾನಕ್ಕೆ ಒತ್ತು ನೀಡುವುದು.
ವಿಜ್ಞಾನ ವ್ಯಾಪಾರ ತಂತ್ರಜ್ಞಾನಕ್ಕೆ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳನ್ನು ಮುಂದಿನ ಪೀಳಿಗೆಗೆ ಸ್ಥಾಪಿಸುವುದು .
ಕಾಯಕವೇ ಕೈಲಾಸ ಎಂಬಂತೆ ಪ್ರತಿನಿತ್ಯ ದುಡಿಯುವುದು
ತನ್ನ ವೃತ್ತಿಯಲ್ಲಿ ಇರುವ ಕಿರಿಯರನ್ನು ಪ್ರೋತ್ಸಾಹಿಸಿ ಬೆಳೆಸುವುದು
ದುಡಿದದ್ದರಲ್ಲಿ ಒಂದು ಪಾಲನ್ನು ಶಿಕ್ಷಣಕ್ಕೆ ಸಮಾಜಕ್ಕೆ ಧಾನವನ್ನಾಗಿ ನೀಡುವುದು
–ಲೇಖಕರ ವಿಳಾಸ
ಪ್ರೌಢ_ಶಾಲಾ_ಮುಖ್ಯಶಿಕ್ಷಕರು.
ಚನ್ನಮ್ಮನಕಿತ್ತೂರು.
೯೭೪೦೩೧೩೮೨೦.