ಕುಷ್ಠರೋಗ ವಾಸಿಯಾಗುತ್ತದೆ ಆದರೆ ಕಳಂಕ…?
ಅಜಮಾಸು ಮೂರು ದಶಕಗಳಿಗೂ ಹೆಚ್ಚುಕಾಲ ನಾನು ಕುಷ್ಠರೋಗಿಗಳ ಒಡನಾಟದಲ್ಲಿದ್ದೆ. ಅಂದರೆ ಮನೆ, ಮನೆಗಳ ಭೇಟಿನೀಡಿ ಕುಷ್ಠರೋಗ ಸಮೀಕ್ಷೆ ಮಾಡುವುದು, ಕುಷ್ಠರೋಗ ಕುರಿತು ಆರೋಗ್ಯ ಶಿಕ್ಷಣ ನೀಡುವುದು ಮತ್ತು ಪತ್ತೆಯಾದ ಕುಷ್ಠರೋಗಿಗಳಿಗೆ ಚಿಕಿತ್ಸೆ ನೀಡುವುದು ಇವು ನನ್ನ ಆದ್ಯಕರ್ತವ್ಯ ಆಗಿದ್ದವು. ಆಗ ಅದು ನನ್ನ ಕಾಯಕ. ಅಷ್ಟಕ್ಕೂ ಅದು ಸರ್ಕಾರ ನೀಡಿದ ನನಗೆ ಅನ್ನ ನೀಡುವ ಉದ್ಯೋಗವೇ ಆಗಿತ್ತು. ಅದಕ್ಕೆಂದೇ ಅದನ್ನು ನಾನು ಸೇವೆ ಎಂದು ಕರೆಯಬಾರದು. ಏಕೆಂದರೆ ಪಗಾರ ಪಡೆಯುವ ಸರಕಾರಿ ಹುದ್ದೆಗಳನ್ನು ಕೆಲವರು ಸೇವೆಗಳೆಂಬ ಹೆಸರುಗಳಿಂದ ಕರೆಯುತ್ತಾರೆ. ವಾಸ್ತವವಾಗಿ ಅವು ಸರಕಾರಿ ನೌಕರಿಗಳು. ಅಂತೆಯೇ ಅದು ಸೇವೆಯೆಂಬ ಹೆಸರಿಗೆ ಬದಲು ನನ್ನ ನಿತ್ಯದ ಕರ್ತವ್ಯವೆಂದು ಕರೆಯುವುದು ಹೆಚ್ಚು ಸೂಕ್ತ. ಅದಕ್ಕಾಗಿ ಸರಕಾರ ನನಗೆ ತಿಂಗಳಿಗೆ ಮುನ್ನೂರು ರುಪಾಯಿ ಪಗಾರ ಕೊಡುತ್ತಿತ್ತು. ನಾಲ್ಕು ದಶಕಗಳಿಗೂ ಹಿಂದೆ, ಅಂದಿನ ಕಾಲಕ್ಕೆ ಅದು ದೊಡ್ಡ ಮೊತ್ತವೇ ಆಗಿದ್ದೀತು. ಅಲ್ಲದಿದ್ರೂ ಕಡಿಮೆಯಂತೂ ಖಂಡಿತಾ ಆಗಿರಲಿಲ್ಲ.
ಅಷ್ಟಲ್ಲದೇ ನಾನು ಕೆಲಸಕ್ಕೆ ಸೇರಿದ ಆರಂಭದಲ್ಲೇ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಸೆಂಟ್ರಲ್ ಲೆಪ್ರಸೊರಿಯಂ ಆಸ್ಪತ್ರೆಯಲ್ಲಿ ತರಬೇತಿ ಪಡೆದುಕೊಂಡೆ. ಅದು ಕುಷ್ಠ ರೋಗಿಗಳಿಗೆ ಚಿಕಿತ್ಸೆ ನೀಡುವ ದೊಡ್ಡ ಆಸ್ಪತ್ರೆ. ಆಸ್ಪತ್ರೆಯ ಹೊರಗೂ, ಒಳಗೂ ತರಹೇವಾರಿ ಅಂಗವೈಕಲ್ಯಗಳಿರುವ ಭಯಂಕರ ರೂಪಾಂತರದ ನೂರಾರು ಕುಷ್ಠರೋಗಿಗಳು. ಕುಷ್ಠರೋಗಿಗಳ ಸಮೂಹದಿಂದ ಒಂದು ಅಪ್ರಸ್ತುತ ಭಯ ಮತ್ತು ಹೇವರಿಕೆ. ಯಾಕಾದರೂ ಇಂಥ ಕೆಲಸಕ್ಕೆ ಸೇರಿಕೊಂಡೆನೆಂಬ ಮನದ ಒಳಗೊಳಗೇ ಪಶ್ಚಾತ್ತಾಪ. ಬಿಚ್ಚಿ ಹೇಳಲಾಗದ ಪರಿತಾಪ. ತರಬೇತಿಗೆ ಸೇರಿದ ವಾರವೊಪ್ಪತ್ತು ನನಗೆ ಊಟವೇ ಸೇರುತ್ತಿರಲಿಲ್ಲ. ಊಟಕ್ಕೆ ಕುಳಿತರೆ ಎರಡೂ ಕಣ್ಣುಗಳ ತುಂಬೆಲ್ಲಾ ತುಂಬಿಕೊಂಡ ಕುಷ್ಠರೋಗ ಎಂಬ ಭಯಾನಕ ಪದಗಳು ಮತ್ತು ಹೇಸಿಕೆ ಹುಟ್ಟಿಸುವ ಗದಗುಟ್ಟುವ ಸ್ಥಿತಿಯ ಕುಷ್ಠರೋಗಿಗಳು. ಅಷ್ಟೇಯಾಕೆ ನಮಗೆ ಪಾಠ ಮಾಡುವ ಬೋಧಕರು, ಪ್ರಾಚಾರ್ಯರಾದಿಯಾಗಿ ಎಲ್ಲರಲ್ಲೂ ನನಗೆ ವಿಕಲ್ಪ ಕುಷ್ಠದ ತದ್ರೂಪವೇ ಕಂಡು ಬರುವಂತಹ ಉಬ್ಬಳಿಕೆ. ಬರಬರುತ್ತಾ ವೈಜ್ಞಾನಿಕ ಸಂಗತಿಗಳಿಂದ ನನ್ನ ವೃತ್ತಿನಿಷ್ಠೆ ಬಲಗೊಂಡು ಕುಷ್ಠರೋಗ ನಿವಾರಣೆಗೆ ಪಣ ತೊಟ್ಟಂತೆ ತೀವ್ರವಾಗಿ ತೊಡಗಿಸಿಕೊಂಡೆ. ಆ ಕುರಿತು ಆಕಾಶವಾಣಿ ಮತ್ತು ಇತರೆ ಸಮೂಹ ಮಾಧ್ಯಮಗಳಲ್ಲಿ ಅನೇಕ ಲೇಖನ, ಕತೆಗಳನ್ನು ಬರೆದು ಪ್ರಕಟಿಸಿದೆ.
ಕುಷ್ಠರೋಗದ ಕ್ಲಿನಿಕಲ್ ಡೈಯಾಗ್ನೊಸಿಸ್, ರೋಗದ ಮತ್ತು ರೋಗ ಪ್ರತಿಕ್ರಿಯೆಯ ಪ್ರತಿರೋಧಕ ಹಂತದ ಉಲ್ಬಣಾವಸ್ಥೆ ಇತ್ಯಾದಿ ಕುರಿತು ವಿವರಿಸಿದರೆ ಅದೊಂದು ವೈದ್ಯಕೀಯ ವಿವರಗಳ ಕಥನವಾದೀತು. ಹೀಗಾಗಿ ಕುಷ್ಠರೋಗ ನಿದಾನ(diagnosis)ದ ಗೋಜಿಗೆ ಹೋಗದೇ, ಸಾಮಾಜಿಕ ಕಳಂಕ ಹಾಗೂ ಅದರ ಘೋರ ಪರಿಣಾಮದ ಸಂಗತಿಗಳ ಕುರಿತು ಒಂದಷ್ಟು ಹೇಳುವೆ. ಮನುಷ್ಯನ ಚರ್ಮ ಮತ್ತು ಕೈ ಕಾಲುಗಳಲ್ಲಿನ ಕೆಲವು ಮಹತ್ವದ ನರಗಳಿಗೆ ತಗುಲುವ ಕಾಯಿಲೆಯೇ ಕುಷ್ಠರೋಗ. ರೋಗಿಗಳ ನಿರ್ಲಕ್ಷ್ಯದಿಂದಾಗಿ ಕೈ, ಕಾಲು ಮತ್ತು ಇತರೆ ಭಾಗಗಳಲ್ಲಿ ಅಂಗವಿಕಲತೆ ಉಂಟಾಗಿ ಸಮಾಜದ ದೃಷ್ಟಿಯಲ್ಲಿ ಕಳಂಕದ ದೃಷ್ಟಿಕೋನಗಳಿಗೆ ಪುಷ್ಟಿ ಮಾಡಿ ಕೊಡುತ್ತದೆ.
ವಿಶೇಷವಾಗಿ ಕುಷ್ಠರೋಗ ಕುರಿತು ಉತ್ತರ ಕರ್ನಾಟಕದ ಕಡೆ ಸಾಮಾಜಿಕ ಕಳಂಕ ತುಂಬಿ ತುಳುಕುತ್ತಿತ್ತು. ಬಹುತೇಕ ಕಡೆಗೆ ಅದನ್ನು ಮಹಾರೋಗ, ದೊಡ್ಡಬೇನೆ ಎಂತಲೇ ಕರೆಯುತ್ತಿದ್ದ ಕಾಲವದು. ಕುಷ್ಠರೋಗ ಎಂಬುದನ್ನು ಬಾಯಿಯಿಂದ ಉಚ್ಛರಿಸುವುದು ಕೂಡಾ ಯೋಗ್ಯವಾದುದಲ್ಲ, ಥೂ! ಥೂ!! ಬಿಟ್ತು ಅನ್ನು, ಎಂದೆನ್ನುವ ಗಾಢನಂಬಿಕೆಗಳೇ ಯಥೇಚ್ಛವಾಗಿರುವ ಸಾಮಾಜಿಕ ಸ್ಥಿತಿಗತಿಗಳ ಸಂದರ್ಭ ಅದಾಗಿತ್ತು. ಕುಷ್ಠರೋಗದಿಂದ ಮುಕ್ತಿಪಡೆದ ಮಂತ್ರಿಯೊಬ್ಬರು ಅಂಗವಿಕಲತೆಯುಳ್ಳ ತನ್ನ ಒಂದು ಕೈ (claw hand) ಮುಚ್ಚಿಡಲು ಸದಾ ಹೆಣಗಾಡುತ್ತಿದ್ದರು. ಅವರು ಸಭೆ ಸಮಾರಂಭಗಳಲ್ಲಿ ಮತ್ತು ಅಸೆಂಬ್ಲಿಯಲ್ಲಿ ಮಾತಾಡುವಾಗ ತಮ್ಮವಿಕಲ ಅಂಗೈಯನ್ನು ಗೊತ್ತಾಗದಂತೆ ಅಂಗಿಯ ಬಗಲು ಕಿಸೆಯಲ್ಲಿರಿಸಿಕೊಂಡಿರುತ್ತಿದ್ದರು. ಮುರುಟಿ ಹೋದ ಬೆರಳುಗಳ ಮೂಲಕ ತನ್ನ ಕುಷ್ಠರೋಗ ಬಹಿರಂಗಗೊಂಡರೆ ಪ್ರಸ್ತುತ ತನ್ನ ಸ್ಥಾನಮಾನಕ್ಕೆ ಧಕ್ಕೆ ಬರಬಹುದೆಂಬ ಅಪ್ರಸ್ತುತ ಭಯ ಮಂತ್ರಿಯನ್ನು ಕಾಡುತ್ತಿತ್ತು.
ಪ್ರತಿ ಹತ್ತುಸಾವಿರ ಜನಸಂಖ್ಯೆಗೆ ಓರ್ವ ಕುಷ್ಠರೋಗಿಯ ಅಸ್ತಿತ್ವ ಇರುವ ಸ್ಥಿತಿ ತಲುಪುವುದೇ ಕುಷ್ಠರೋಗ ನಿರ್ಮೂಲನೆಯ ವ್ಯಾಖ್ಯಾನ. ಇದು ಕುಷ್ಠರೋಗ ನಿರ್ಮೂಲನೆಯ ಸರಕಾರದ ಹಳೆಯ ಕಾರ್ಯಕ್ರಮ. ಈ ಅರ್ಥದಲ್ಲಿ ಭಾರತ ಕುಷ್ಠರೋಗ ನಿರ್ಮೂಲನೆ ಮಾಡಿದೆಯೆಂದೇ ಹೇಳಬೇಕು. ಆದರೆ ವಾಸ್ತವ ಅಷ್ಟು ಸುಲಭದ್ದಲ್ಲ. ಪ್ರಸ್ತುತ ಪತ್ತೆಯಾಗುತ್ತಿರುವ ಕುಷ್ಠರೋಗಿಗಳಲ್ಲಿ ಸಾಂಸರ್ಗಿಕ ಅಂದರೆ ಅಂಟು ಬಗೆಯ ರೋಗಿಗಳೇ ಅಧಿಕ. ಒಂದು ಅಂದಾಜಿನಂತೆ ಓರ್ವ ಸಾಂಸರ್ಗಿಕ ಕುಷ್ಠರೋಗಿ ಇರುವೆಡೆ ಕನಿಷ್ಠ ನಾಲ್ಕಾರು ಸಂಖ್ಯೆಯ ಅಸಾಂಸರ್ಗಿಕ ಬಗೆಯ ಕುಷ್ಠರೋಗಿಗಳಿರುತ್ತಾರೆ. ಅಂದಾಗ ಹಿಡನ್ ಕೇಸುಗಳು ಅಧಿಕ ಸಂಖ್ಯೆಯಲ್ಲಿರುವ ಸಾಧ್ಯತೆಗಳನ್ನು ನಿರಾಕರಿಸಲಾಗದು. ಅದೊತ್ತಟ್ಟಿಗಿರಲಿ,
ಕುಷ್ಠರೋಗ ನಿರ್ಮೂಲನೆ ಎಂದು ಘೋಷಿಸುವ ಪರಿಯಂತೆ ಕಳಂಕ ನಿವಾರಣೆಯನ್ನು ಘೋಷಿಸುವುದು ದುಸ್ತರ. ಪುರಾತನ ಕಾಲದ ಕುಷ್ಠರೋಗ ಕುರಿತು ನೂರಾರು ಕಥನಗಳ ಪುರಾಣೇತಿಹಾಸಗಳಿವೆ.
ವರ್ತಮಾನದಲ್ಲಿ ಸಾಮಾಜಿಕ ಕಳಂಕ ನಿರ್ಮೂಲನೆ ಆಗಿದೆಯೆಂದು ಹೇಳುವ ಸಂಪೂರ್ಣ ಮನೋಸ್ಥೈರ್ಯವೂ ನನಗಿಲ್ಲ. ಕುಷ್ಠರೋಗ ಖಂಡಿತಾ ವಾಸಿಯಾಗುವ ರೋಗ. ಆದರೆ ಕಳಂಕ ಅಷ್ಟು ಸುಲಭವಾಗಿ ವಾಸಿಯಾಗದ ಸಾಮಾಜಿಕ ಜಾಡ್ಯ. ಅಂತಹದ್ದೊಂದು ಮಹಾರೋಗವೆಂದೇ ಕರೆಯಲ್ಪಡುವ ಕುಷ್ಠರೋಗದ ಕುರಿತು, ರೋಗಿಯ ಕುರಿತು ಮಹಾತ್ಮಾಗಾಂಧಿ ಅನನ್ಯ ಕಳಕಳಿ ಹೊಂದಿದ್ದರು. ಅದು ಅಕ್ಷರಶಃ ಅವರ ಹೃತ್ಪೂರ್ವಕ ಕಾಳಜಿಯೇ ಆಗಿತ್ತು. ಅವರು ರೋಗಿಗಳ ಮೈ, ಕೈ ಮತ್ತು ಮನಸು ಮುಟ್ಟಿ ಉಪಚರಿಸುವ ಕೈಂಕರ್ಯದಲ್ಲಿ ತೊಡಗಿದ್ದರು. ಹಾಗಂತಲೇ ನಾವು ಮಾಡುವ ಕುಷ್ಠರೋಗ ಚಿಕಿತ್ಸೆ ಮತ್ತು ರೋಗಿಗಳ ಸೇವಾಕೈಂಕರ್ಯಕ್ಕೆ ಸಾಮಾಜಿಕವಾಗಿ ಇಂದಿಗೂ ಒಂದಷ್ಟು ಗೌರವ. ಅಂತೆಯೇ ಗಾಂಧಿಯವರ ಇವತ್ತಿನ ಪುಣ್ಯತಿಥಿಯ ಜನವರಿ ಮುವತ್ತರ ಈ ದಿನವನ್ನು ಕುಷ್ಠರೋಗ ವಿರೋಧಿ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ.
ಮಹಾತ್ಮಾ ಗಾಂಧೀಜಿಯವರು ಪಂಡಿತ ಪರಚುರೆ ಶಾಸ್ತ್ರೀ ಎಂಬ ಕುಷ್ಠರೋಗಿಯೊಬ್ಬರನ್ನು ವಾರ್ಧಾದ ತಮ್ಮ ಆಶ್ರಮದಲ್ಲಿರಿಸಿಕೊಂಡು ರೋಗಿಯ ಮೈ, ಕೈ ಮುಟ್ಟಿ ಆರೈಕೆ ಮಾಡುತ್ತಿದ್ದರು. ಅದೆಲ್ಲ ತೋರಿಕೆಗಾಗಿ ಇರಲಿಲ್ಲ. ಅವರು ಕುಷ್ಠರೋಗ ಮತ್ತು ಕುಷ್ಠರೋಗಿಗಳ ಕುರಿತು ಹೇಳುತ್ತಿದ್ದ ಮಾತುಗಳು ಹೀಗಿವೆ.
ನೀವು ವೈದ್ಯರಾದುದರಿಂದ ರೋಗಿಗಳಿಗೆ ಗುಳಿಗೆ, ಇಂಜೆಕ್ಷನ್ ಇತರೆ ಚಿಕಿತ್ಸೆ ನೀಡುತ್ತೀರಿ. ನಾನೊಬ್ಬ ಸಾಮಾಜಿಕ ಕಾರ್ಯಕರ್ತ. ನನಗೆ ರೋಗಿಗಳನ್ನು ಅಕ್ಷರಶಃ ಮುಟ್ಟಿ ಅವರಲ್ಲಿ ಆತ್ಮವಿಶ್ವಾಸ ವೃದ್ಧಿಗೊಳಿಸುವ ಕೆಲಸ ನನ್ನದು. ವೈದ್ಯಕೀಯ ಚಿಕಿತ್ಸೆಯಿಂದ ದೇಹಕ್ಕಂಟಿದ ಕುಷ್ಠ ನಿವಾರಣೆ. ನಾನು ಮಾಡುವ ಕೆಲಸದಿಂದ ಸಮಾಜದ ಮನಸಿಗಂಟಿದ ಕುಷ್ಠ ನಿವಾರಣೆ. ತನ್ಮೂಲಕ ಸಾಮಾಜಿಕ ಕಳಂಕ ಹೊಡೆದೋಡಿಸುವ ಕೆಲಸ ನೆರವೇರಿಸುವ ಸಂಪ್ರೀತಿ ನನ್ನದು.
ರೋಗವಾಸಿಯಾದ ನಂತರ ಅವರು ಇದೇ ಸಮಾಜದಲ್ಲಿ ನಮ್ಮೆಲ್ಲರೊಂದಿಗೆ ಬಾಳುವಂತಾಗಬೇಕು. ಕುಷ್ಠರೋಗ ವಾಸಿಯಾದವರಲ್ಲಿ ಯಾವುದೇ ಬಗೆಯ ಅಪ್ರಸ್ತುತ ಭಯಗಳು ಇರದಂತೆ ಆರೋಗ್ಯವಂತರು ಮತ್ತು ಮನೆಯಲ್ಲಿರುವ ರೋಗಿಯ ಆರೋಗ್ಯಸಂಪರ್ಕೀಯರು ಕುಷ್ಠರೋಗಿಯನ್ನು ನೋಡಿಕೊಳ್ಳುವ ಮತ್ತು ಸಹಜವಾಗಿ ನಡೆದುಕೊಳ್ಳುವ ಅಗತ್ಯವಿದೆ. ಆ ಕೆಲಸ ನನ್ನಿಂದಲೇ ಸಾಧ್ಯಮಾಡುವಂತಾಗಬೇಕು. ಹೀಗೆಂತಲೇ ನಾನು ಅವರ ಮೈ, ಮನಸುಗಳನ್ನು ಮುಟ್ಟಿ ಮಾತಾಡಿಸುವೆ. ಇದು ಗಾಂಧೀಜಿ ಉವಾಚವಾಗಿತ್ತು. ಅಂತೆಯೇ ಹಂತಕನ ಗುಂಡಿಗೆ ಬಲಿಯಾದ ಮಹಾತ್ಮಾ ಗಾಂಧೀಜಿಯ ಜನವರಿ 30 ರ ಹುತಾತ್ಮ ದಿನವನ್ನು ಜಗತ್ತಿನಾದ್ಯಂತ ಕುಷ್ಠರೋಗ ವಿರೋಧಿ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಪ್ರಧಾನ ಮಂತ್ರಿಯಾಗಿದ್ದಾಗ ಇಂದಿರಾಗಾಂಧಿ ಅವರು ತಮ್ಮ ಮಹತ್ವದ ಇಪ್ಪತ್ತು ಅಂಶ ಕಾರ್ಯಕ್ರಮಗಳಲ್ಲಿ ಕುಷ್ಠರೋಗ ನಿವಾರಣೆ ಕಾರ್ಯಕ್ರಮವೂ ಸೇರಿಕೊಂಡಿತ್ತು.
ಗಾಂಧೀಜಿಯವರಂತೆ ಮಹಾರಾಷ್ಟ್ರದ ಬಾಬಾ ಮುರಳೀಧರ ಆಮ್ಟೆ ಪ್ರತಿಷ್ಠಿತ ವಕೀಲ ವೃತ್ತಿಯನ್ನೇ ಬದಿಗೊತ್ತಿ ಕುಷ್ಠರೋಗಿಗಳ ಸೇವೆಗೆ ತಮ್ಮ ಬದುಕನ್ನೇ ಮುಡಿಪಾಗಿಸಿದ್ದರು. ತೀವ್ರವಾದ ಬೆನ್ನುಹುರಿ ನೋವಿನಿಂದ ನರಳುತ್ತಿದ್ದರೂ ಅದನ್ನು ಲೆಕ್ಕಿಸದೇ ಬಾಬಾ ಆಮ್ಟೆ ಭಾರತ ಜೋಡೋ ಯಾತ್ರೆ ಕೈಗೊಂಡಿದ್ದರು. ದೇಶಾದ್ಯಂತ ಕುಷ್ಠರೋಗಿಗಳ ಸೇವೆಯಲ್ಲಿ ತಮ್ಮನ್ನು ತೀವ್ರವಾಗಿ ತೊಡಗಿಸಿಕೊಂಡಿದ್ದರು.
ಮದರ್ ಥೆರೇಸಾ ಸೇರಿದಂತೆ ಅನೇಕರು ಕುಷ್ಠರೋಗದ ಬಗ್ಗೆ ಮತ್ತು ಕಳಂಕ ನಿವಾರಣೆ ಕುರಿತು ಗಂಭೀರವಾದ ಚಿಂತನೆ ಮಾಡಿದ್ದಾರೆ. ಅವರ ಚಿಂತನಾ ಸೇವೆಗಳು ಸರಕಾರದ ಕಾರ್ಯಕ್ರಮಗಳಲ್ಲ. ರೊಕ್ಕ ಹೊಡಕೊಳ್ಳುವ ಕೆಲವು ಸರಕಾರೇತರ ಸಂಘಟನೆಗಳಂತೆಯೂ ಅಲ್ಲ. ಅದು ಅಕ್ಷರಶಃ ಮಾನವೀಯತೆಯ ಅನಾವರಣ. ಅವು ಲೋಕಮಾನಸದ ಸಂವೇದನಾಶೀಲ ವಿವೇಚನೆಗಳು. ಇದು ಕೇವಲ ಕುಷ್ಠರೋಗಕ್ಕೆ ಸಂಬಂಧಿಸಿದ ಮಾತಲ್ಲ. ಸಾಮಾಜಿಕ ಆರೋಗ್ಯಕ್ಕೆ ಸಂಬಂಧಿಸಿದ ಸಂಗತಿ. ಸಮುದಾಯ ಆರೋಗ್ಯವೆಂದರೆ ಜನಾರೋಗ್ಯ ಸ್ವಾಸ್ಥ್ಯ ಸಂಬಂಧಿ ಆರೋಗ್ಯ. ಸರಕಾರದ ಬಹುಪಾಲು ಆರೋಗ್ಯ ಸಂಬಂಧಿ ಕಾರ್ಯಕ್ರಮಗಳು ರೋಗನಿವಾರಣೆ ಆಗಿದ್ದು ಕಳಂಕ ನಿವಾರಣೆ ಎಂಬುದು ಸಮಷ್ಟಿಯ ಸರ್ವರ ಆದ್ಯತೆಯಾಗಲಿ.
-ಮಲ್ಲಿಕಾರ್ಜುನ ಕಡಕೋಳ
9341010712